ಹಳೆಯ ಬ್ಯಾಂಕ್ ಖಾತೆಯಲ್ಲಿನ ಹಣ ಮರೆತಿದ್ದೀರಾ? ಅದನ್ನು ಮರಳಿ ಪಡೆಯೋದು ಹೇಗೆ?
ಅನೇಕರು ತಮ್ಮ ಹಳೆಯ ಅಥವಾ ನಿಷ್ಕ್ರಿಯ ಬ್ಯಾಂಕ್ ಖಾತೆಗಳಲ್ಲಿ ಹಣವನ್ನು ಮರೆತಿರುತ್ತಾರೆ. 10 ವರ್ಷಗಳಿಗಿಂತ ಹೆಚ್ಚು ಕಾಲ ಕ್ಲೈಮ್ ಮಾಡದ ಠೇವಣಿಗಳನ್ನು ಮರಳಿ ಪಡೆಯಲು RBI UDGAM ಪೋರ್ಟಲ್ ಮತ್ತು ಸರಳ ಪ್ರಕ್ರಿಯೆಯನ್ನು ಜಾರಿಗೆ ತಂದಿದೆ. ಈ ಕುರಿತ ಕಂಪ್ಲೀಟ್ ಮಾಹಿತಿ ಇಲ್ಲಿದೆ.

ನಿಮಗಾಗಿ ಇದೆ ವಿಶೇಷ ಯೋಜನೆ
ಇವತ್ತಿನ ದಿನಗಳಲ್ಲಿ ಅನೇಕರು ಒಂದಕ್ಕಿಂತ ಹೆಚ್ಚು ಬ್ಯಾಂಕ್ ಖಾತೆಗಳನ್ನು ಹೊಂದಿರುತ್ತಾರೆ. ಕೆಲಸ ಬದಲಾದಾಗ ಅಥವಾ ಊರು ಬದಲಾದಾಗ ಹಳೆಯ ಖಾತೆಗಳನ್ನು ನಿರ್ವಹಿಸುವುದು ಕಷ್ಟವಾಗಿ ಕಾಲಕ್ರಮೇಣ ಅವುಗಳನ್ನು ಬಳಸುವುದನ್ನೇ ನಿಲ್ಲಿಸುತ್ತಾರೆ. ಇನ್ನು ಕೆಲವರು ತಮ್ಮ ಹಳೆಯ ಖಾತೆಗಳಲ್ಲಿರುವ ಹಣ ಅಥವಾ ಫಿಕ್ಸೆಡ್ ಡಿಪಾಸಿಟ್‌ಗಳನ್ನು (FD) ಸಂಪೂರ್ಣವಾಗಿ ಮರೆತುಬಿಟ್ಟಿರುತ್ತಾರೆ. ಹೀಗೆ ಬ್ಯಾಂಕುಗಳಲ್ಲಿ ಕ್ಲೈಮ್ ಮಾಡದೆಯೇ ಉಳಿದಿರುವ ನಿಮ್ಮ ಹಣವನ್ನು ಸುರಕ್ಷಿತವಾಗಿ ನಿಮಗೆ ತಲುಪಿಸಲು ಭಾರತೀಯ ರಿಸರ್ವ್ ಬ್ಯಾಂಕ್ (RBI) ವಿಶೇಷ ಯೋಜನೆ ರೂಪಿಸಿದೆ.
Unclaimed Deposits ಎಂದರೆ ಏನು?
ನಿಯಮಗಳ ಪ್ರಕಾರ ಯಾವುದೇ ಉಳಿತಾಯ ಅಥವಾ ಚಾಲ್ತಿ ಖಾತೆಯಲ್ಲಿ 2 ವರ್ಷಗಳಿಗಿಂತ ಹೆಚ್ಚು ಕಾಲ ಯಾವುದೇ ವಹಿವಾಟು ನಡೆಯದಿದ್ದರೆ ಅದನ್ನು 'ನಿಷ್ಕ್ರಿಯ' (Inactive) ಖಾತೆ ಎಂದು ಪರಿಗಣಿಸಲಾಗುತ್ತದೆ. ಒಂದು ವೇಳೆ 10 ವರ್ಷಗಳವರೆಗೆ ಅಂತಹ ಖಾತೆಯಲ್ಲಿರುವ ಹಣವನ್ನು ಯಾರೂ ಪಡೆಯದಿದ್ದರೆ ಅಥವಾ ಯಾವುದೇ ವಹಿವಾಟು ನಡೆಸದಿದ್ದರೆ ಅದನ್ನು ಕ್ಲೈಮ್ ಮಾಡದ ಡೆಪಾಸಿಟ್ ಎಂದು ಕರೆಯಲಾಗುತ್ತದೆ.
ಯಾವಾಗ ಬೇಕಾದರೂ ತಗೋಬಹುದು
ಹೀಗೆ 10 ವರ್ಷಗಳ ಕಾಲ ಉಳಿದ ಹಣವನ್ನು ಆರ್‌ಬಿಐನ ಡಿಇಎ (DEA – Depositor Education and Awareness) ನಿಧಿಗೆ ವರ್ಗಾಯಿಸಲಾಗುತ್ತದೆ. ಆದರೆ ನೆನಪಿಡಿ, ಈ ಹಣವು ಪೂರ್ತಿಯಾಗಿ ನಷ್ಟವಾಗುವುದಿಲ್ಲ. ಖಾತೆದಾರರು ಅಥವಾ ಅವರ ಕಾನೂನುಬದ್ಧ ವಾರಸುದಾರರು (Legal Heirs) ಯಾವಾಗ ಬೇಕಾದರೂ ದಾಖಲೆಗಳನ್ನು ನೀಡಿ ಹಣವನ್ನು ಮರಳಿ ಪಡೆಯಬಹುದು.
ಹಣ ಮರಳಿ ಪಡೆಯೋದು ಹೇಗೆ?
ಹಳೆಯ ಖಾತೆಯಲ್ಲಿರುವ ಹಣವನ್ನು ಮರಳಿ ಪಡೆಯಲು ಆರ್‌ಬಿಐ ಈ ಕೆಳಗಿನ ಮೂರು ಸರಳ ಮಾರ್ಗಗಳನ್ನು ತಿಳಿಸಿದೆ.
- ಬ್ಯಾಂಕ್ ಶಾಖೆಯನ್ನು ಸಂಪರ್ಕಿಸಿ: ನಿಮ್ಮ ಹಣ ಯಾವ ಬ್ಯಾಂಕಿನಲ್ಲಿದೆಯೋ, ಆ ಬ್ಯಾಂಕಿನ ಯಾವುದೇ ಹತ್ತಿರದ ಶಾಖೆಗೆ ನೀವು ಭೇಟಿ ನೀಡಬಹುದು. ಅದು ನಿಮ್ಮ ಮೂಲ ಶಾಖೆಯೇ (Home Branch) ಆಗಿರಬೇಕೆಂದಿಲ್ಲ.
- ಕೆವೈಸಿ (KYC) ದಾಖಲೆಗಳನ್ನು ಸಲ್ಲಿಸಿ: ನಿಮ್ಮ ಗುರುತಿನ ದೃಢೀಕರಣಕ್ಕಾಗಿ ಆಧಾರ್ ಕಾರ್ಡ್, ಪಾನ್ ಕಾರ್ಡ್, ವೋಟರ್ ಐಡಿ ಅಥವಾ ಚಾಲನಾ ಪರವಾನಗಿಯಂತಹ ಕೆವೈಸಿ ದಾಖಲೆಗಳನ್ನು ಸಂಬಂಧಿತ ಫಾರ್ಮ್‌ನೊಂದಿಗೆ ಬ್ಯಾಂಕಿಗೆ ಸಲ್ಲಿಸಬೇಕು.
- ಬಡ್ಡಿ ಸಮೇತ ಹಣ ಪಡೆಯಿರಿ: ಬ್ಯಾಂಕ್ ಅಧಿಕಾರಿಗಳು ನಿಮ್ಮ ವಿವರಗಳನ್ನು ಪರಿಶೀಲಿಸಿದ ನಂತರ, ನಿಮ್ಮ ಖಾತೆಯಲ್ಲಿದ್ದ ಹಣವನ್ನು ಅನ್ವಯವಾಗುವ ಬಡ್ಡಿಯೊಂದಿಗೆ ನಿಮಗೆ ಹಿಂತಿರುಗಿಸುತ್ತಾರೆ.
ಆನ್‌ಲೈನ್‌ನಲ್ಲಿ ಹಣ ಪತ್ತೆಹಚ್ಚುವುದು ಹೇಗೆ?
ನಿಮಗೆ ಯಾವ ಬ್ಯಾಂಕಿನಲ್ಲಿ ಎಷ್ಟು ಹಣ ಇದೆ ಎಂಬ ಗೊಂದಲವಿದ್ದರೆ, ಅದನ್ನು ಸುಲಭವಾಗಿ ಪತ್ತೆಹಚ್ಚಲು ಆರ್‌ಬಿಐ ಕೇಂದ್ರೀಕೃತ ವೆಬ್ ಪೋರ್ಟಲ್ ಅನ್ನು ಬಿಡುಗಡೆ ಮಾಡಿದೆ.
ಉದ್ಗಮ್ (UDGAM) ಪೋರ್ಟಲ್: ನೇರವಾಗಿ ಆಯಾ ಬ್ಯಾಂಕ್ ವೆಬ್‌ಸೈಟ್‌ನಲ್ಲಿ ಹುಡುಕಬಹುದು ಅಥವಾ ಆರ್‌ಬಿಐನ ಅಧಿಕೃತ UDGAM ಪೋರ್ಟಲ್ (https://udgam.rbi.org.in) ಗೆ ಭೇಟಿ ನೀಡಿ ಲಾಗಿನ್ ಆಗುವ ಮೂಲಕ ನಿಮ್ಮ ವಿವರಗಳನ್ನು ಪರಿಶೀಲಿಸಬಹುದು. ಪ್ರಸ್ತುತ ಈ ಪೋರ್ಟಲ್‌ನಲ್ಲಿ 30ಕ್ಕೂ ಹೆಚ್ಚು ಪ್ರಮುಖ ಬ್ಯಾಂಕುಗಳ ಮಾಹಿತಿ ಲಭ್ಯವಿದೆ.
ಇರಲಿ ಎಚ್ಚರ
ಬ್ಯಾಂಕ್ ಹಣಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಬರುವ ನಕಲಿ ಲಿಂಕ್‌ಗಳು ಅಥವಾ ಸುದ್ದಿಗಳನ್ನು ನಂಬಬೇಡಿ. ಆರ್‌ಬಿಐ ಅಧಿಕೃತ ವೆಬ್‌ಸೈಟ್ ಮಾಹಿತಿಯನ್ನು ಮಾತ್ರ ಪ್ರಮಾಣೀಕೃತ ಎಂದು ಪರಿಗಣಿಸಿ. ನಿಮ್ಮ ಹಳೆಯ ಹಣವನ್ನು ಮರಳಿ ಪಡೆಯಲು ಇದು ಸರಿಯಾದ ಸಮಯ!

