- Home
- Technology
- Mobiles
- ಈ ವರ್ಷದ ಅಂತ್ಯಕ್ಕೆ ಸ್ಮಾರ್ಟ್ಫೋನ್ ಬೆಲೆ ಶೇ.30 ದಿಢೀರ್ ಏರಿಕೆ, ಸಂಶೋಧನಾ ಸಂಸ್ಥೆ ಬಿಚ್ಚಿಟ್ಟ ಶಾಕಿಂಗ್ ವರದಿ
ಈ ವರ್ಷದ ಅಂತ್ಯಕ್ಕೆ ಸ್ಮಾರ್ಟ್ಫೋನ್ ಬೆಲೆ ಶೇ.30 ದಿಢೀರ್ ಏರಿಕೆ, ಸಂಶೋಧನಾ ಸಂಸ್ಥೆ ಬಿಚ್ಚಿಟ್ಟ ಶಾಕಿಂಗ್ ವರದಿ
ಗ್ರಾಹಕರಿಗೆ ಬೆಲೆ ಏರಿಕೆಯ ಬಿಸಿ ತಟ್ಟುವ ಸಾಧ್ಯತೆಯಿದೆ. ಜಾಗತಿಕ ಮಾರುಕಟ್ಟೆಯಲ್ಲಿ ಮೆಮೊರಿ ಚಿಪ್ಗಳ ಬೆಲೆ ಗಣನೀಯವಾಗಿ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ, ಭಾರತದಲ್ಲಿ ಪ್ರೀಮಿಯಂ ಫ್ಲ್ಯಾಗ್ಶಿಪ್ ಸ್ಮಾರ್ಟ್ಫೋನ್ಗಳ ಬೆಲೆ 2026ರ ಅಂತ್ಯದ ವೇಳೆಗೆ ಶೇ.30ಕ್ಕೂ ಹೆಚ್ಚು ಹೆಚ್ಚಾಗಬಹುದು ವರದಿ ಹೇಳಿದೆ.

ವರ್ಷಾಂತ್ಯಕ್ಕೆ ಸ್ಮಾರ್ಟ್ ಫೋನ್ ದರ ಶೇ.30ರಷ್ಟು ಹೆಚ್ಚಳ?
ನವದೆಹಲಿ: ಮೆಮೊರಿ ಚಿಪ್ ಕಾರ್ಡ್ಗಳ ಬೆಲೆ ಏರಿಕೆ ಕಾರಣದಿಂದಾಗಿ ಜಗತ್ತಿನಾದ್ಯಂತ ಡಿಸೆಂಬರ್ ಅಂತ್ಯದ ವೇಳೆಗೆ ಸ್ಮಾರ್ಟ್ ಫೋನ್ಗಳ ದರ ಶೇ.30ರಷ್ಟು ಹೆಚ್ಚಳವಾಗಿ ತಲಾ 1 ಲಕ್ಷ ರು.ಗೆ ಏರಿಕೆಯಾಗಬಹುದು ಎಂದು ಮಾರುಕಟ್ಟೆ ಸಂಶೋಧನಾ ಸಂಸ್ಥೆ ಕೌಂಟರ್ಪ್ರಿಂಟ್ ವರದಿ ಮಾಡಿದೆ. ಸಾಧನಗಳ ಬೆಲೆಗಳ ಹೆಚ್ಚಳದ ಜೊತೆಗೆ, ಕ್ಯಾಮೆರಾ, ಬ್ಯಾಟರಿ ಬಾಳಿಕೆ ಬಗ್ಗೆ ಗ್ರಾಹಕರ ನಿರೀಕ್ಷೆಗಳು ಹೆಚ್ಚಿರುವುದು ಬೆಲೆ ಹೆಚ್ಚಳಕ್ಕೆ ಕಾರಣ ಎಂದು ಅದು ಹೇಳಿದೆ,
ಸಾಮಾನ್ಯವಾಗುತ್ತಿದೆ ₹1 ಲಕ್ಷದ ಸ್ಮಾರ್ಟ್ಫೋನ್!
‘ಕೆಲವು ವರ್ಷಗಳ ಹಿಂದೆ, ಭಾರತದಲ್ಲಿ 1 ಲಕ್ಷ ರು.ನ ಸ್ಮಾರ್ಟ್ಫೋನ್ ಅಪರೂಪವಾಗಿತ್ತು. ಇಂದು, ಉತ್ಪನ್ನಗಳ ಬೆಲೆಗಳು ಏರುತ್ತಲೇ ಇರುವುದರಿಂದ ಪ್ರೀಮಿಯಂ ಫ್ಲ್ಯಾಗ್ಶಿಪ್ ಸಾಧನಗಳ ಬೆಲೆಗಳು 2026 ರ ಅಂತ್ಯದ ವೇಳೆ ಶೇ. 30 ಕ್ಕಿಂತ ಹೆಚ್ಚು ಏರಿಕೆಯಾಗುವ ನಿರೀಕ್ಷೆಯಿದೆ’ ಕೌಂಟರ್ಪ್ರಿಂಟ್ ಹೇಳಿದೆ. ಇತ್ತೀಚೆಗಷ್ಟೇ ಸ್ಯಾಮ್ಸಾಂಗ್ ಸ್ಮಾರ್ಟ್ಫೋನ್ಗಳ ಬೆಲೆಯನ್ನು 2,000 ರಿಂದ 4,000 ರು.ಗಳವರೆಗೆ ಹೆಚ್ಚಿಸಿತ್ತು. ಬೆಲೆ ಏರಿಕೆಯ ಜೊತೆಜೊತೆಗೆ ಗ್ರಾಹಕರ ನಿರೀಕ್ಷೆಗಳೂ ಹೆಚ್ಚಾಗಿದ್ದು, ಅತ್ಯುತ್ತಮ ಪ್ರೊಸೆಸರ್ ವೇಗ, ಸುಧಾರಿತ ಕ್ಯಾಮೆರಾ, ದೀರ್ಘಕಾಲ ಬಾಳಿಕೆ ಬರುವ ಬ್ಯಾಟರಿ ಹಾಗೂ ಮಾರಾಟದ ನಂತರದ ಗುಣಮಟ್ಟದ ಸೇವೆಯನ್ನು ಗ್ರಾಹಕರು ಬಯಸುತ್ತಿದ್ದಾರೆ.
ಬೆಲೆ ಏರಿಕೆಗೆ AI ಡೇಟಾ ಸೆಂಟರ್ಗಳೇ ಕಾರಣ
ಸ್ಮಾರ್ಟ್ಫೋನ್ ತಯಾರಿಕಾ ವೆಚ್ಚದಲ್ಲಿ (BOM - Bill of Materials) ಮೆಮೊರಿ ಚಿಪ್ಗಳ ಪಾಲು ಗಣನೀಯವಾಗಿ ಹೆಚ್ಚಾಗಿದೆ. 2025ರ ಮೊದಲ ತ್ರೈಮಾಸಿಕದಲ್ಲಿ ಫೋನ್ ಒಂದರ ಒಟ್ಟು ತಯಾರಿಕಾ ವೆಚ್ಚದಲ್ಲಿ ಮೆಮೊರಿ ಚಿಪ್ಗಳ ಪಾಲು ಕೇವಲ ಶೇ. 13 ರಷ್ಟಿತ್ತು. ಆದರೆ 2026ರ ವರ್ಷಾಂತ್ಯದ ವೇಳೆಗೆ ಈ ಪಾಲು ಬರೋಬ್ಬರಿ ಶೇ. 43 ಕ್ಕೆ ಏರಿಕೆಯಾಗುವ ಅಂದಾಜಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ಕೌಂಟರ್ಪಾಯಿಂಟ್ ರಿಸರ್ಚ್ನ ಸಂಶೋಧನಾ ನಿರ್ದೇಶಕ ತರುಣ್ ಪಾಠಕ್, "ಕೃತಕ ಬುದ್ಧಿಮತ್ತೆ (AI) ಡೇಟಾ ಸೆಂಟರ್ಗಳಿಂದ DRAM ಮತ್ತು NAND ಮೆಮೊರಿ ಚಿಪ್ಗಳಿಗೆ ಭಾರಿ ಬೇಡಿಕೆ ಸೃಷ್ಟಿಯಾಗಿದೆ. ಇದರಿಂದ ಮೆಮೊರಿ ವೆಚ್ಚವು ಫೋನ್ ತಯಾರಿಕಾ ವೆಚ್ಚದ ಶೇ. 40 ಕ್ಕಿಂತ ಹೆಚ್ಚಾಗಿದೆ. ಪರಿಣಾಮವಾಗಿ, ವೆಚ್ಚವನ್ನು ಸರಿದೂಗಿಸಲು ಸ್ಮಾರ್ಟ್ಫೋನ್ ಕಂಪನಿಗಳು ತಮ್ಮ ಉತ್ಪನ್ನಗಳ ತಂತ್ರಗಾರಿಕೆ ಮತ್ತು ಬಿಡಿಭಾಗಗಳ ಆಯ್ಕೆಯನ್ನು ಮರುಪರಿಶೀಲಿಸುವ ಅನಿವಾರ್ಯತೆ ಎದುರಾಗಿದೆ" ಎಂದು ವಿವರಿಸಿದ್ದಾರೆ.
ಯಾವ ಬ್ರಾಂಡ್ಗಳ ಬೆಲೆ ಎಷ್ಟು ಏರಿಕೆಯಾಗಿದೆ?
ಒಪ್ಪೋ ಮತ್ತು ಆಪಲ್: ವರದಿಯ ಅಂಕಿಅಂಶಗಳ ಪ್ರಕಾರ, ವಾರ್ಷಿಕ ಆಧಾರದ ಮೇಲೆ (YoY) ಒಪ್ಪೋ (Oppo) ಕಂಪನಿಯ ಫ್ಲ್ಯಾಗ್ಶಿಪ್ ಸಾಧನಗಳ ಬೆಲೆಯಲ್ಲಿ ಶೇ. 82 ರಿಂದ 87 ರಷ್ಟು ಅತ್ಯಧಿಕ ಏರಿಕೆ ಕಂಡುಬಂದಿದೆ. ಇನ್ನು ಅಲ್ಟ್ರಾ-ಪ್ರೀಮಿಯಂ ವಿಭಾಗದ ಮುಂಚೂಣಿಯಲ್ಲಿರುವ ಐಫೋನ್ಗಳ (iPhone) ಬೆಲೆ ಕೂಡ ವಾರ್ಷಿಕವಾಗಿ ಶೇ. 20 ರಿಂದ 22 ರಷ್ಟು ಹೆಚ್ಚಾಗಿದೆ.
ಸ್ಯಾಮ್ಸಂಗ್ ಮತ್ತು ಶಿಯೋಮಿ: ಮಾರುಕಟ್ಟೆಯ ಅಗ್ರಗಣ್ಯ ಸಂಸ್ಥೆ ಸ್ಯಾಮ್ಸಂಗ್ (Samsung) ದೀಪಾವಳಿಗೂ ಮುನ್ನ ತನ್ನ ಪ್ರಮುಖ 'ಗ್ಯಾಲಕ್ಸಿ ಎಸ್ 26' (Galaxy S26) ಸರಣಿಯ ಬೆಲೆಯನ್ನು ಶೇ. 17 ರಷ್ಟು ಹೆಚ್ಚಿಸಿತ್ತು. ಅಲ್ಲದೆ, ದೀಪಾವಳಿಯ ನಂತರವೂ ತನ್ನ ಇತರ ಸ್ಮಾರ್ಟ್ಫೋನ್ಗಳ ದರವನ್ನು ತಲಾ 2,000 ದಿಂದ 4,000 ರೂಪಾಯಿಗಳವರೆಗೆ ಏರಿಸಿದೆ. ಇದರ ಬೆನ್ನಲ್ಲೇ ಚೀನಾ ಮೂಲದ ಶಿಯೋಮಿ (Xiaomi) ಕೂಡ ತನ್ನ ಸ್ಮಾರ್ಟ್ಫೋನ್ಗಳ ಬೆಲೆಯನ್ನು ಇದೇ ಶ್ರೇಣಿಯಲ್ಲಿ ಹೆಚ್ಚಳ ಮಾಡಿದೆ.
ಸ್ಪರ್ಧಾತ್ಮಕ ಬೆಲೆಯತ್ತ ಗ್ರಾಹಕರ ಚಿತ್ತ
ಆಪಲ್ ಮತ್ತು ಸ್ಯಾಮ್ಸಂಗ್ನಂತಹ ದೈತ್ಯ ಕಂಪನಿಗಳ ಫ್ಲ್ಯಾಗ್ಶಿಪ್ ಫೋನ್ಗಳ ಬೆಲೆ 2 ಲಕ್ಷ ರೂಪಾಯಿಯತ್ತ ಮುಖ ಮಾಡುತ್ತಿದ್ದಂತೆ, ಗ್ರಾಹಕರ ಆದ್ಯತೆಗಳೂ ಬದಲಾಗುತ್ತಿವೆ. ಐಕ್ಯೂಒಒ (iQOO) ಮತ್ತು ಗೂಗಲ್ (Google) ನಂತಹ ತಂತ್ರಜ್ಞಾನ ಕೇಂದ್ರಿತ ಬ್ರಾಂಡ್ಗಳು ಇದಕ್ಕೆ ಸರಿಸಮನಾದ ಫೀಚರ್ಗಳನ್ನು ಹೆಚ್ಚು ಸ್ಪರ್ಧಾತ್ಮಕ ಬೆಲೆಗೆ ನೀಡುವ ಮೂಲಕ ಗ್ರಾಹಕರನ್ನು ಸೆಳೆಯುತ್ತಿವೆ. ಕೇವಲ ಹಾರ್ಡ್ವೇರ್ ಮಾತ್ರವಲ್ಲದೆ, ಲ್ಯಾಪ್ಟಾಪ್ ಜೊತೆಗೆ ಒಂದಕ್ಕಿಂತ ಹೆಚ್ಚು ಫೋನ್ಗಳನ್ನು ಬಳಸುವ ವೃತ್ತಿಪರರಿಗೆ ಅನುಕೂಲವಾಗುವ 'ಇಕೋಸಿಸ್ಟಮ್' (ಪರಿಸರ ವ್ಯವಸ್ಥೆ) ಸೌಲಭ್ಯಗಳೇ ಇಂದಿನ ಮಾರುಕಟ್ಟೆಯಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತಿವೆ ಎಂದು ವರದಿ ಅಭಿಪ್ರಾಯಪಟ್ಟಿದೆ.
ಸ್ಮಾರ್ಟ್ಫೋನ್ಗಳು ಮತ್ತು AI ನಿಂದ ಸೈಬರ್ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್ಡೇಟ್. ಡಿಜಿಟಲ್ ಟ್ರೆಂಡ್ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್ ಸಿಗುವ ಏಕೈಕ ತಾಣ ಏಷ್ಯಾನೆಟ್ ಸುವರ್ಣ ನ್ಯೂಸ್. ಹೊಸ ಗ್ಯಾಜೆಟ್ ರಿಲೀಸ್ ಆಯ್ತಾ? ಹೊಸ ಸ್ಟಾರ್ಟ್ಅಪ್ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್ ಎಕ್ಸ್ಪ್ಲೇನರ್ಸ್ ಹಾಗೂ ಗ್ಯಾಜೆಟ್ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.















