ಹಾವನ್ನು ಆಕರ್ಷಿಸುವ ಪವರ್‌ಫುಲ್ ಸ್ಮೆಲ್.. ನಿಮ್ಮ ಮನೆಯಿಂದ ಈ ವಾಸನೆ ಬಂದ್ರೆ ಖಂಡಿತ ಹಾವುಗಳು ಬರ್ತವೆ!
Snake prevention tips: ನಮಗೆ ತಿಳಿಯದಂತೆ ಮನೆಯಲ್ಲಿರೊ ಕೆಲವು ವಾಸನೆ ಹಾವುಗಳನ್ನ ಅಯಸ್ಕಾಂತದಂತೆ ಆಕರ್ಷಿಸುತ್ತವೆ ಎಂಬುದು ನಿಮಗೆ ತಿಳಿದಿದೆಯೇ?. ನಿಮ್ಮ ಸುರಕ್ಷತೆಗಾಗಿ, ಹಾವುಗಳನ್ನು ಆಕರ್ಷಿಸುವ ಆ ಪವರ್‌ಫುಲ್ ವಾಸನೆ ಯಾವುದು, ಅವುಗಳನ್ನು ತಡೆಯುವುದು ಹೇಗೆ ಎಂಬ ಉಪಯುಕ್ತ ಮಾಹಿತಿ ಇಲ್ಲಿದೆ.
ಎಂಥ ವಾಸನೆಗೆ ಆಕರ್ಷಿತವಾಗುತ್ತವೆ?
ಸಾಮಾನ್ಯವಾಗಿ ಮಳೆಗಾಲದಲ್ಲಿ ವಾಸಸ್ಥಳವನ್ನು ಕಳೆದುಕೊಂಡು ಅಥವಾ ಬೇಸಿಗೆಯಲ್ಲಿ ತಂಪಾದ ವಾತಾವರಣಕ್ಕಾಗಿ ಹಾವುಗಳು ಜನವಸತಿ ಪ್ರದೇಶಗಳಿಗೆ ಬರುತ್ತವೆ. ನಿಜ ಹೇಳಬೇಕೆಂದರೆ ಹಾವುಗಳಿಗೆ ಮನುಷ್ಯರೆಂದರೆ ಭಯ. ಆದರೆ, ನಮ್ಮ ಮನೆಯ ಸುತ್ತಮುತ್ತಲಿರುವ ಅವ್ಯವಸ್ಥೆ, ಕಸದ ರಾಶಿ ಮತ್ತು ಅವುಗಳಿಗೆ ಪೂರಕವಾಗಿರುವ ವಾತಾವರಣದಿಂದಾಗಿ ಅವು ಹೆಚ್ಚಾಗಿ ನಮ್ಮ ಮನೆಯತ್ತ ಬರುತ್ತವೆ. ಮುಖ್ಯವಾಗಿ ಆಹಾರ ಅಥವಾ ಆಶ್ರಯ ಸಿಗುತ್ತದೆ ಎಂಬ ನಂಬಿಕೆಯಿಂದ ಕೆಲವು ವಾಸನೆಗಳನ್ನು ಪತ್ತೆಹಚ್ಚಿ ಹಾವುಗಳು ಮನೆಗೆ ಬರುತ್ತವೆ. ಹಾಗಾದರೆ ಹಾವುಗಳು ಎಂತಹ ವಾಸನೆಗಳಿಗೆ ಆಕರ್ಷಿತವಾಗುತ್ತವೆ ಎಂಬುದನ್ನು ನಾವು ತಿಳಿದುಕೊಳ್ಳೋಣ.
ನಮ್ಮ ಆಹಾರದ ವಾಸನೆ ಇಷ್ಟವಾಗುತ್ತಾ?
ನಮ್ಮ ಮನೆಯಲ್ಲಿರುವ ಕೆಲವು ವಾಸನೆ ಹಾವುಗಳನ್ನು ಅಯಸ್ಕಾಂತದಂತೆ ಆಕರ್ಷಿಸುತ್ತವೆ. ಅವುಗಳಲ್ಲಿ ಮುಖ್ಯವಾಗಿ ಹಾವುಗಳನ್ನು ಆಕರ್ಷಿಸುವ ಪ್ರಮುಖ ಅಂಶವೆಂದರೆ ಆಹಾರ. ನೈಸರ್ಗಿಕವಾಗಿ ಹಾವುಗಳು ಮನುಷ್ಯರು ತಿನ್ನುವ ಆಹಾರವನ್ನು ತಿನ್ನುವುದಿಲ್ಲ. ಆದರೆ ಮನುಷ್ಯರು ತಯಾರಿಸುವ ಆಹಾರಕ್ಕಾಗಿ ಬರುವ ಸಣ್ಣ ಕೀಟಗಳ ವಾಸನೆಯನ್ನು ಪತ್ತೆಹಚ್ಚಿ ಅವು ಮನೆಗೆ ಬರುತ್ತವೆ. ಒಂದು ವೇಳೆ ನಿಮ್ಮ ಮನೆಯಲ್ಲಿ ಇಲಿಗಳು ಅಥವಾ ಹೆಗ್ಗಣಗಳು ಹೆಚ್ಚಾಗಿದ್ದರೆ ಹಾವುಗಳು ಬರುವ ಸಾಧ್ಯತೆಯಿದೆ. ಇಲಿಗಳ ಮೂತ್ರ ಮತ್ತು ಮಲದಿಂದ ಬರುವ ವಾಸನೆಯನ್ನು ಹಿಡಿದು ಹಾವುಗಳು ಮನೆಗೆ ಬರುತ್ತವೆ ಎಂದು ತಜ್ಞರು ಹೇಳುತ್ತಾರೆ.
ಪಕ್ಷಿಗಳಿಗೆ ಆಹಾರ ಹಾಕುವ ಅಭ್ಯಾಸ ಇದೆಯಾ?
ಕೇವಲ ಇಲಿಗಳಷ್ಟೇ ಅಲ್ಲದೆ, ಪಕ್ಷಿಗಳು ಮತ್ತು ಅವುಗಳ ಮೊಟ್ಟೆಗಳೆಂದರೆ ಕೂಡ ಹಾವುಗಳಿಗೆ ಬಹಳ ಇಷ್ಟ. ನಿಮ್ಮ ಮನೆಯ ಮೇಲ್ಛಾವಣಿಯ ಮೇಲೆ ಅಥವಾ ಕಿಟಕಿಗಳ ಹತ್ತಿರ ಪಕ್ಷಿಗಳು ಗೂಡು ಕಟ್ಟಿಕೊಂಡಿದ್ದರೆ ಅಥವಾ ಹಕ್ಕಿಗಳ ಮಲದ ವಾಸನೆ ಹೆಚ್ಚಾಗಿದ್ದರೆ ಹಾವುಗಳು ಅಲ್ಲಿಗೆ ಬರುವ ಸಾಧ್ಯತೆಯಿದೆ. ಆದ್ದರಿಂದ ಪಕ್ಷಿಗಳಿಗೆ ಆಹಾರ ಹಾಕುವ ಅಭ್ಯಾಸ ಇರುವವರು ಈ ವಿಷಯದಲ್ಲಿ ಜಾಗರೂಕರಾಗಿರಬೇಕು. ಹಾಗೆಯೇ ಮನೆಯ ಸುತ್ತಲೂ ದಟ್ಟವಾದ ಪೊದೆಗಳು ಮತ್ತು ಗಿಡಗಂಟಿಗಳು ಇಲ್ಲದಂತೆ ನೋಡಿಕೊಳ್ಳಬೇಕು.
ಜಲಚರಗಳೆಂದರೆ ಪ್ರಿಯವಾದ ಆಹಾರ
ನಿಮ್ಮ ಮನೆಯ ಸುತ್ತಮುತ್ತ ನೀರಿನ ಹೊಂಡಗಳು, ಸಣ್ಣ ಕೆರೆಗಳು ಅಥವಾ ಮೀನಿನ ಕುಂಟೆಗಳು ಇದ್ದರೂ ಸಹ ಹಾವುಗಳು ಬರುವ ಸಾಧ್ಯತೆ ಹೆಚ್ಚಾಗಿರುತ್ತದೆ. ಮೀನು ಮತ್ತು ಕಪ್ಪೆಗಳಂತಹ ಜಲಚರಗಳೆಂದರೆ ಹಾವುಗಳಿಗೆ ಅತ್ಯಂತ ಪ್ರಿಯವಾದ ಆಹಾರ. ಹಾಗೆಯೇ, ಹಾವುಗಳು ಇತರ ಹಾವುಗಳನ್ನು ಆಕರ್ಷಿಸಲು 'ಫೆರೋಮೋನ್ಸ್' ಎಂಬ ರಾಸಾಯನಿಕಗಳನ್ನು ಬಿಡುಗಡೆ ಮಾಡುತ್ತವೆ. ಅಂದರೆ, ನಿಮ್ಮ ಮನೆಗೆ ಒಂದು ಬಾರಿ ಹಾವು ಬಂತೆಂದರೆ, ಅದು ಬಿಟ್ಟು ಹೋದ ವಾಸನೆಯಿಂದಾಗಿ ಇನ್ನಷ್ಟು ಹಾವುಗಳು ಬರುವ ಅಪಾಯವಿರುತ್ತದೆ.
ಮಾಂಸದ ತ್ಯಾಜ್ಯ ಮತ್ತು ಮೊಟ್ಟೆಯ ಸಿಪ್ಪೆ
ನಾವು ಮನೆಯಲ್ಲಿ ಸಾಕುವ ಸಾಕುಪ್ರಾಣಿಗಳಿಗೆ ನೀಡುವ ಆಹಾರ, ಹೊರಗೆ ಎಸೆಯುವ ಮಾಂಸದ ತ್ಯಾಜ್ಯ ಮತ್ತು ಮೊಟ್ಟೆಯ ಚಿಪ್ಪುಗಳ ವಾಸನೆ ಕೂಡ ಹಾವುಗಳನ್ನು ಆಕರ್ಷಿಸುತ್ತದೆ ಎಂದು ತಜ್ಞರು ಹೇಳುತ್ತಾರೆ. ಈ ವಾಸನೆಗಳಿಂದಾಗಿ ಮೊದಲು ಇಲಿಗಳು ಮತ್ತು ಇತರ ಕೀಟಗಳು ಬರುತ್ತವೆ, ಅವುಗಳನ್ನು ಬೇಟೆಯಾಡುತ್ತಾ ಹಾವುಗಳು ಕೂಡ ಬರುವ ಸಾಧ್ಯತೆಯಿದೆ ಎಂದು ತಜ್ಞರು ಅಭಿಪ್ರಾಯಪಡುತ್ತಾರೆ. ಆದ್ದರಿಂದ, ಆಹಾರದ ತ್ಯಾಜ್ಯವನ್ನು ಯಾವಾಗಲೂ ಮುಚ್ಚಳವಿರುವ ಡಬ್ಬಗಳಲ್ಲಿಯೇ ಇಡಬೇಕು. ನಿಮ್ಮ ಸಾಕುಪ್ರಾಣಿಗಳ ಆಹಾರವನ್ನು ಎಲ್ಲೆಂದರಲ್ಲಿ ಚೆಲ್ಲದಂತೆ ಜಾಗ್ರತೆ ವಹಿಸಿದರೆ ಹಾವುಗಳು ಮನೆಗೆ ಬರದಂತೆ ನೋಡಿಕೊಳ್ಳಬಹುದು.
ಹಾಗಾದ್ರೆ ಏನ್ ಮಾಡ್ಬೋದು?
ಹಾವುಗಳು ನಿಮ್ಮ ಮನೆಗೆ ಬರದಂತೆ ತಡೆಯಬೇಕಾದರೆ ಮನೆಯ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳುವುದು ಬಹಳ ಮುಖ್ಯ. ಗೋಡೆಗಳಲ್ಲಿರುವ ಬಿರುಕುಗಳನ್ನು ಮುಚ್ಚಬೇಕು ಮತ್ತು ತೇವಾಂಶವನ್ನು ಕಡಿಮೆ ಮಾಡಬೇಕು. ಹಾಗೆಯೇ ಹಾವುಗಳಿಗೆ ಇಷ್ಟವಾಗದ ತೀಕ್ಷ್ಣವಾದ ವಾಸನೆಗಳಾದ ಬೆಳ್ಳುಳ್ಳಿ, ದಾಲ್ಚಿನ್ನಿ, ಲವಂಗ ಮತ್ತು ನಿಂಬೆಹಣ್ಣು ಮುಂತಾದವುಗಳನ್ನು ಬಳಸಿ ಹಾವುಗಳು ಮನೆಗೆ ಬರದಂತೆ ತಡೆಯಬಹುದು. ಹಾವು ಕಂಡುಬಂದಾಗ ಭಯದಿಂದ ಅದನ್ನು ಕೊಲ್ಲದೆ, ತಕ್ಷಣವೇ 'ಸ್ನೇಕ್ ಕ್ಯಾಚರ್ಸ್' (ಹಾವು ಹಿಡಿಯುವವರು) ಗೆ ಮಾಹಿತಿ ನೀಡಿ. ಏಕೆಂದರೆ ಅವು ಕೂಡ ಈ ಭೂಮಿಯ ಮೇಲೆ ನಮ್ಮಂತೆಯೇ ಬದುಕುವ ಜೀವಿಗಳು!
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.
