ದೀಪಾವಳಿಯಂದು ಪಟಾಕಿ ಸಿಡಿಸುವಾಗ ಈ ತಪ್ಪುಗಳನ್ನು ಮಾಡಿದ್ರೆ ಕಣ್ಣಿನ ದೃಷ್ಟಿಗೆ ಅಪಾಯ ಗ್ಯಾರಂಟಿ!
ದೀಪಾವಳಿ ಸಂಭ್ರಮದಲ್ಲಿ ಪಟಾಕಿ ಸಿಡಿಸುವುದು ಖುಷಿಯ ವಿಚಾರವೇ ಆದರೂ, ಸಣ್ಣ ನಿರ್ಲಕ್ಷ್ಯವೂ ಕಣ್ಣಿಗೆ ಅಪಾಯ ತರಬಹುದು. ಕಣ್ಣಿನ ದೃಷ್ಟಿಯನ್ನು ಕಾಪಾಡಿಕೊಳ್ಳಲು ಪಾಲಿಸಬೇಕಾದ ಕೆಲವು ಮುಖ್ಯ ಸುರಕ್ಷತಾ ಕ್ರಮಗಳನ್ನು ನೋಡೋಣ.

ದೀಪಾವಳಿ ಪಟಾಕಿಗಳಿಂದ ಕಣ್ಣಿಗೆ ಆಗುವ ಅಪಾಯಗಳು
ದೀಪಾವಳಿ ಹಬ್ಬ ಬಂತು ಅಂದರೆ ಸಾಕು, ಚಿಕ್ಕವರಿಂದ ಹಿಡಿದು ದೊಡ್ಡವರವರೆಗೆ ಎಲ್ಲರೂ ಪಟಾಕಿ ಸಿಡಿಸಿ ಸಂಭ್ರಮಿಸುತ್ತಾರೆ. ಬಣ್ಣ ಬಣ್ಣದ ಸುರುಬರು, ಬೆಳಕು ಚೆಲ್ಲುವ ಪಟಾಕಿಗಳು ಹಬ್ಬದ ಪ್ರಮುಖ ಆಕರ್ಷಣೆ. ಆದರೆ, ಪಟಾಕಿಯಿಂದ ಬರುವ ಕಿಡಿ, ಹೊಗೆ ಮತ್ತು ರಾಸಾಯನಿಕ ವಸ್ತುಗಳು ಕಣ್ಣಿನ ಆರೋಗ್ಯವನ್ನು ಹಾಳು ಮಾಡಬಹುದು. ಅದರಲ್ಲೂ ಹುಷಾರಿಲ್ಲದೆ ಪಟಾಕಿ ಸಿಡಿಸಿದರೆ ಕಣ್ಣಿಗೆ ಪೆಟ್ಟು, ಸುಟ್ಟ ಗಾಯ, ಮತ್ತು ದೃಷ್ಟಿ ದೋಷದಂತಹ ಸಮಸ್ಯೆಗಳು ಬರುವ ಸಾಧ್ಯತೆ ಇದೆ. ಹಾಗಾಗಿ, ಸಂಭ್ರಮದ ಜೊತೆಗೆ ಕಣ್ಣಿನ ಸುರಕ್ಷತೆಗೂ ಗಮನ ಕೊಡಬೇಕು.
ಪಟಾಕಿ ಸಿಡಿಸುವಾಗ ಸುರಕ್ಷತಾ ಕನ್ನಡಕ ಕಡ್ಡಾಯ
ಪಟಾಕಿ ಸಿಡಿಸುವಾಗ ಅದರಿಂದ ಸಿಡಿಯುವ ಸಣ್ಣ ಕಣಗಳು ಹಾಗೂ ಕಿಡಿಗಳು ನೇರವಾಗಿ ಕಣ್ಣಿಗೆ ತಗುಲಬಹುದು. ಇದನ್ನು ತಪ್ಪಿಸಲು ಪಟಾಕಿ ಸಿಡಿಸುವವರು ಸುರಕ್ಷತೆಗಾಗಿ ಕನ್ನಡಕ ಹಾಕುವುದು ಒಳ್ಳೆಯದು. ಸಾಮಾನ್ಯ ಕನ್ನಡಕ ಅಥವಾ ಬಿಸಿಲಿಗೆ ಹಾಕುವ ಕನ್ನಡಕ ಸಂಪೂರ್ಣ ರಕ್ಷಣೆ ನೀಡುವುದಿಲ್ಲ. ಜೊತೆಗೆ ಪಟಾಕಿ ಸಿಡಿಸುವಾಗ ಸ್ವಲ್ಪ ದೂರದಲ್ಲಿ ನಿಲ್ಲಬೇಕು. ಸಿಡಿಯದ ಪಟಾಕಿಗಳ ಹತ್ತಿರ ಹೋಗಿ ನೋಡುವುದು, ಮತ್ತೆ ಬೆಂಕಿ ಹಚ್ಚಲು ಹೋಗುವುದು ಬೇಡ. ರಾಕೆಟ್‌ನಂತಹ ಪಟಾಕಿಗಳನ್ನು ಹಚ್ಚುವಾಗ ಇನ್ನು ಹೆಚ್ಚು ಹುಷಾರಾಗಿರಬೇಕು.
ಮಕ್ಕಳ ಮೇಲೆ ಕಣ್ಣಿಡುವುದು ಬಹಳ ಮುಖ್ಯ
ಮಕ್ಕಳು ಪಟಾಕಿ ಸಿಡಿಸುವಾಗ ದೊಡ್ಡವರು ಜೊತೆಯಲ್ಲೇ ಇದ್ದು ನೋಡಿಕೊಳ್ಳಬೇಕು. ಮಕ್ಕಳಿಗೆ ಒಬ್ಬಂಟಿಯಾಗಿ ಪಟಾಕಿ ಹಚ್ಚಲು ಬಿಡಬಾರದು. ಅದರಲ್ಲೂ ರಾಕೆಟ್, ಚಕ್ರ, ಸುರುಸುರು ಕಡ್ಡಿಯಂತಹ ಪಟಾಕಿಗಳನ್ನು ಹಚ್ಚುವಾಗ ಸುರಕ್ಷತಾ ನಿಯಮಗಳನ್ನು ಪಾಲಿಸಬೇಕು. ಪಟಾಕಿ ಹೊಗೆ ಜಾಸ್ತಿ ಇರುವ ಕಡೆ ತುಂಬಾ ಹೊತ್ತು ನಿಲ್ಲಬಾರದು. ಹೊಗೆ, ದೂಳು ಮತ್ತು ರಾಸಾಯನಿಕ ಕಣಗಳು ಕಣ್ಣಿಗೆ ಬಿದ್ದರೆ ಉರಿ, ಕೆಂಪಾಗುವುದು, ತುರಿಕೆ ಮತ್ತು ಕಣ್ಣೀರು ಬರುವಂತಹ ಸಮಸ್ಯೆಗಳು ಆಗಬಹುದು. ಇಂಥ ಟೈಮಲ್ಲಿ ಕಣ್ಣನ್ನು ಕೈಯಿಂದ ಉಜ್ಜಿಕೊಳ್ಳಬಾರದು.
ಕಣ್ಣಿಗೆ ಪಟಾಕಿ ಕಣ ಬಿದ್ದರೆ ತಕ್ಷಣ ಏನು ಮಾಡಬೇಕು?
ಪಟಾಕಿ ಕಣಗಳು ಅಥವಾ ರಾಸಾಯನಿಕ ಕಣ್ಣಿಗೆ ಬಿದ್ದರೆ ನಿರ್ಲಕ್ಷ್ಯ ಮಾಡಬಾರದು. ಕಣ್ಣನ್ನು ಉಜ್ಜುವುದು, ಕಣ್ಣಿನೊಳಗೆ ಸಿಕ್ಕಿಹಾಕಿಕೊಂಡಿರುವ ವಸ್ತುವನ್ನು ತಾನೇ ತೆಗೆಯಲು ಪ್ರಯತ್ನಿಸುವುದು, ಕಣ್ಣಿಗೆ ಒತ್ತಡ ಹಾಕುವುದು ಮಾಡಬಾರದು. ರಾಸಾಯನಿಕ ಕಣ್ಣಿಗೆ ಬಿದ್ದಿದ್ದರೆ ತಕ್ಷಣವೇ ಶುದ್ಧವಾದ ನೀರಿನಿಂದ ಕನಿಷ್ಠ 20 ನಿಮಿಷ ಕಣ್ಣನ್ನು ತೊಳೆಯಬೇಕು. ಕಣ್ಣಿನಲ್ಲಿ ತೀವ್ರವಾದ ನೋವು, ದೃಷ್ಟಿ ಮಂಜಾಗುವುದು, ರಕ್ತಸ್ರಾವ ಅಥವಾ ಸುಟ್ಟ ಗಾಯ ಆದರೆ ಕೂಡಲೇ ಕಣ್ಣಿನ ವೈದ್ಯರನ್ನು ಭೇಟಿಯಾಗಬೇಕು ಅಥವಾ ತುರ್ತು ವೈದ್ಯಕೀಯ ಸಹಾಯ ಪಡೆಯಬೇಕು. ಹೊಗೆಯಿಂದ ಸಣ್ಣಪುಟ್ಟ ಉರಿ ಶುರುವಾದರೆ ಹೊಗೆ ಇರುವ ಜಾಗದಿಂದ ದೂರ ಹೋಗಿ, ಶುದ್ಧ ನೀರಿನಿಂದ ನಿಧಾನವಾಗಿ ಕಣ್ಣನ್ನು ತೊಳೆಯಬಹುದು. ಸಮಸ್ಯೆ ಮುಂದುವರಿದರೆ ವೈದ್ಯರನ್ನು ಕೇಳಬೇಕು. ವೈದ್ಯರ ಸಲಹೆ ಇಲ್ಲದೆ ಕಣ್ಣಿನ ಡ್ರಾಪ್ಸ್ ಬಳಸಬಾರದು.
ಮನೆಯಲ್ಲೂ ಪಾಲಿಸಬೇಕಾದ ಸುರಕ್ಷತಾ ಕ್ರಮಗಳು
ಮನೆಯ ಹತ್ತಿರ ಪಟಾಕಿ ಸಿಡಿಸುವಾಗ ಕಿಟಕಿ, ಬಾಗಿಲು ಮತ್ತು ಜನ ಓಡಾಡುವ ಜಾಗದಲ್ಲಿ ಸಿಡಿಸುವುದನ್ನು ತಪ್ಪಿಸಬೇಕು. ಪಟಾಕಿ ಹೊಗೆ ಮನೆಗೆ ಬರದಂತೆ ನೋಡಿಕೊಳ್ಳಬೇಕು. ಮೊದಲೇ ಕಣ್ಣಿನ ಸಮಸ್ಯೆ ಇರುವವರು, ಸಣ್ಣ ಮಕ್ಕಳು ಮತ್ತು ವಯಸ್ಸಾದವರು ಹೊಗೆ ಹೆಚ್ಚಿರುವ ಕಡೆಯಿಂದ ದೂರ ಇರುವುದು ಒಳ್ಳೆಯದು. ದೀಪಾವಳಿಯನ್ನು ಸಂಭ್ರಮದಿಂದ ಆಚರಿಸುವುದು ಎಷ್ಟು ಮುಖ್ಯವೋ, ಅದೇ ರೀತಿ ಆರೋಗ್ಯ ಕಾಪಾಡಿಕೊಳ್ಳುವುದೂ ಮುಖ್ಯ. ಸಣ್ಣ ನಿರ್ಲಕ್ಷ್ಯ ಕೂಡ ಕಣ್ಣಿಗೆ ದೊಡ್ಡ ತೊಂದರೆ ಮಾಡಬಹುದು. ಹಾಗಾಗಿ, ಸುರಕ್ಷತಾ ಕನ್ನಡಕ ಹಾಕುವುದು, ಸ್ವಲ್ಪ ದೂರ ನಿಲ್ಲುವುದು, ಮಕ್ಕಳನ್ನು ನೋಡಿಕೊಳ್ಳುವುದು ಮುಂತಾದ ಮುನ್ನೆಚ್ಚರಿಕೆಗಳನ್ನು ಪಾಲಿಸಿ ಸುರಕ್ಷಿತ ದೀಪಾವಳಿ ಆಚರಿಸಿ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.













