- Home
- Life
- Kitchen
- ನೀವು ಎಸೆಯಲು ಇಟ್ಟಿರೋ ಬೆಳ್ಳುಳ್ಳಿ ಸಿಪ್ಪೆಯನ್ನು ಹೀಗೆ ಬಳಸಿ; ತರಕಾರಿ-ಹೂ ಗಿಡಗಳು ಚೆನ್ನಾಗಿ ಬೆಳೆಯುತ್ತೆ
ನೀವು ಎಸೆಯಲು ಇಟ್ಟಿರೋ ಬೆಳ್ಳುಳ್ಳಿ ಸಿಪ್ಪೆಯನ್ನು ಹೀಗೆ ಬಳಸಿ; ತರಕಾರಿ-ಹೂ ಗಿಡಗಳು ಚೆನ್ನಾಗಿ ಬೆಳೆಯುತ್ತೆ
ಬೆಳ್ಳುಳ್ಳಿ ಸಿಪ್ಪೆಗಳನ್ನು ಕಸ ಎಂದು ಬಿಸಾಡುತ್ತಿದ್ದೀರಾ? ಇದೇ ಸಿಪ್ಪೆಗಳು ನಿಮ್ಮ ಗಿಡಗಳಿಗೆ ನ್ಯಾಚುರಲ್ ಗೊಬ್ಬರವಾಗಿ, ಕೀಟಗಳಿಂದ ರಕ್ಷಣೆ ನೀಡುವ ಸುಲಭ ಉಪಾಯವಾಗಿ ಕೆಲಸ ಮಾಡುತ್ತವೆ. ಗಾರ್ಡನ್‌ನಲ್ಲಿ ಬೆಳ್ಳುಳ್ಳಿ ಸಿಪ್ಪೆಗಳನ್ನು ಸ್ಮಾರ್ಟ್ ಆಗಿ ಬಳಸುವುದು ಹೇಗೆ ಮತ್ತು ಅದರ ಲಾಭಗಳೇನು?

ಕೈತೋಟದ ಗಿಡಗಳಿಗೆ ಬಹಳ ಪ್ರಯೋಜನಕಾರಿ
ಬೆಳ್ಳುಳ್ಳಿ ಸಿಪ್ಪೆಗಳನ್ನು ವೇಸ್ಟ್ ಅಂತ ಕಸದ ಬುಟ್ಟಿಗೆ ಎಸೆಯುತ್ತೇವೆ. ಆದರೆ, ಇದೇ ಸಿಪ್ಪೆಗಳು ನಿಮ್ಮ ಕೈತೋಟದ ಗಿಡಗಳಿಗೆ ಬಹಳ ಪ್ರಯೋಜನಕಾರಿ ಅನ್ನೋದು ನಿಮಗೆ ಗೊತ್ತಾ? ಇದರಲ್ಲಿರುವ ಸಲ್ಫರ್, ಪೊಟ್ಯಾಶಿಯಂ ಮತ್ತು ಇತರ ಸೂಕ್ಷ್ಮ ಪೋಷಕಾಂಶಗಳು ಮಣ್ಣಿನ ಗುಣಮಟ್ಟವನ್ನು ಸುಧಾರಿಸಲು ಸಹಾಯ ಮಾಡುತ್ತವೆ. ಅಷ್ಟೇ ಅಲ್ಲ, ಬೆಳ್ಳುಳ್ಳಿಯ ನೈಸರ್ಗಿಕ ವಾಸನೆಯು ಅನೇಕ ಹಾನಿಕಾರಕ ಕೀಟಗಳನ್ನು ಗಿಡಗಳಿಂದ ದೂರವಿಡುತ್ತದೆ. ನೀವು ಸರಿಯಾದ ರೀತಿಯಲ್ಲಿ ಬಳಸಿದರೆ, ಬೆಳ್ಳುಳ್ಳಿ ಸಿಪ್ಪೆಗಳು ಗಿಡಗಳ ಬೆಳವಣಿಗೆ ಮತ್ತು ಆರೋಗ್ಯ ಎರಡನ್ನೂ ವೃದ್ಧಿಸುತ್ತವೆ.
ಕಾಂಪೋಸ್ಟ್ ಗುಂಡಿಗೆ ಸೇರಿಸಬಹುದು.
ಒಣಗಿದ ಬೆಳ್ಳುಳ್ಳಿ ಸಿಪ್ಪೆಗಳನ್ನು ಸಂಗ್ರಹಿಸಿ ನಿಮ್ಮ ಕಾಂಪೋಸ್ಟ್ ಗುಂಡಿಗೆ ಸೇರಿಸಬಹುದು. ಇವು ನಿಧಾನವಾಗಿ ಕೊಳೆತು ಮಣ್ಣಿನಲ್ಲಿ ಪೋಷಕಾಂಶಗಳನ್ನು ಬಿಡುಗಡೆ ಮಾಡುತ್ತವೆ. ಇದರಿಂದ ಗಿಡಗಳಿಗೆ ನೈಸರ್ಗಿಕ ಪೋಷಣೆ ಸಿಗುತ್ತದೆ. ನಿಯಮಿತವಾಗಿ ಕಾಂಪೋಸ್ಟ್‌ಗೆ ಬೆಳ್ಳುಳ್ಳಿ ಸಿಪ್ಪೆಗಳನ್ನು ಸೇರಿಸುವುದರಿಂದ ಮಣ್ಣು ಹೆಚ್ಚು ಫಲವತ್ತಾಗುತ್ತದೆ ಮತ್ತು ಗಿಡಗಳ ಬೇರುಗಳು ಗಟ್ಟಿಯಾಗುತ್ತವೆ.
ದ್ರವರೂಪದ ಗೊಬ್ಬರವಾಗಿಯೂ ಬಳಸಬಹುದು
ಬೆಳ್ಳುಳ್ಳಿ ಸಿಪ್ಪೆಗಳನ್ನು 24 ರಿಂದ 48 ಗಂಟೆಗಳ ಕಾಲ ನೀರಿನಲ್ಲಿ ನೆನೆಸಿಡಿ. ನಂತರ, ಈ ನೀರನ್ನು ಸೋಸಿ ಗಿಡಗಳ ಬೇರುಗಳಿಗೆ ಹಾಕಿ. ಇದು ನೈಸರ್ಗಿಕ ದ್ರವರೂಪದ ಗೊಬ್ಬರವಾಗಿ ಕೆಲಸ ಮಾಡುತ್ತದೆ ಮತ್ತು ಗಿಡಗಳಿಗೆ ಬೇಕಾದ ಸೂಕ್ಷ್ಮ ಪೋಷಕಾಂಶಗಳನ್ನು ಒದಗಿಸುತ್ತದೆ. ಇದರಿಂದ ಗಿಡಗಳ ಬೆಳವಣಿಗೆ ಚೆನ್ನಾಗಿ ಆಗುತ್ತದೆ ಮತ್ತು ಎಲೆಗಳು ಹೆಚ್ಚು ಹಸಿರಾಗಿ ಕಾಣಿಸುತ್ತವೆ.
ಕೀಟಗಳಿಗೆ ಬೆಳ್ಳುಳ್ಳಿ ವಾಸನೆ ಇಷ್ಟ ಆಗಲ್ಲ
ಬೆಳ್ಳುಳ್ಳಿಯ ತೀಕ್ಷ್ಣವಾದ ವಾಸನೆ ಅನೇಕ ಬಗೆಯ ಕೀಟಗಳು ಮತ್ತು ಸಣ್ಣ ಹುಳುಗಳಿಗೆ ಇಷ್ಟವಾಗುವುದಿಲ್ಲ. ಗಿಡಗಳ ಸುತ್ತ ಮಣ್ಣಿನ ಮೇಲೆ ಈ ಸಿಪ್ಪೆಗಳನ್ನು ಹರಡಿದರೆ, ಕೀಟಗಳ ಹಾವಳಿ ಕಡಿಮೆಯಾಗಬಹುದು. ರಾಸಾಯನಿಕ ಕೀಟನಾಶಕಗಳನ್ನು ಬಳಸಲು ಇಷ್ಟಪಡದ ಮತ್ತು ನೈಸರ್ಗಿಕ ವಿಧಾನಗಳನ್ನು ಇಷ್ಟಪಡುವವರಿಗೆ ಈ ಉಪಾಯ ಬಹಳ ಉಪಯುಕ್ತ.
ಮಲ್ಚಿಂಗ್‌ಗೂ ಇದು ಉಪಯುಕ್ತ
ಬೆಳ್ಳುಳ್ಳಿ ಸಿಪ್ಪೆಗಳನ್ನು ಗಿಡಗಳ ಬುಡದ ಸುತ್ತ ಹರಡಿ ಮಲ್ಚಿಂಗ್‌ನಂತೆ ಬಳಸಬಹುದು. ಇದರಿಂದ ಮಣ್ಣಿನಲ್ಲಿ ತೇವಾಂಶ ಹೆಚ್ಚು ಕಾಲ ಉಳಿಯುತ್ತದೆ ಮತ್ತು ಕಳೆಗಳು ಬೆಳೆಯುವುದು ಕೂಡ ಕಡಿಮೆಯಾಗುತ್ತದೆ. ನಿಧಾನವಾಗಿ ಈ ಸಿಪ್ಪೆಗಳು ಮಣ್ಣಿನಲ್ಲಿ ಕರಗಿ ಹೆಚ್ಚುವರಿ ಪೋಷಣೆಯನ್ನೂ ನೀಡುತ್ತವೆ. ಇದರಿಂದ ಗಿಡಗಳಿಗೆ ಡಬಲ್ ಲಾಭ ಸಿಗುತ್ತದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

