ಎಷ್ಟೇ ದಿನವಾದ್ರೂ ಮಸಾಲೆಯ ಸುವಾಸನೆ, ರುಚಿ ಫ್ರೆಶ್ ಆಗಿರಬೇಕೆಂದ್ರೆ ಹೀಗೆ ಬಳಸಿ
How to Store Whole Spices: ಕೆಲವರು ಎಲ್ಲಾ ತರಹದ ಮಸಾಲೆ ಹಾಕಿದರೂ ಅಡುಗೆ ರುಚಿಯೇ ಬರುವುದಿಲ್ಲ ಎಂದು ಹೇಳುತ್ತಾರೆ. ಅದು ನಿಮ್ಮ ತಪ್ಪಲ್ಲ, ಅದಕ್ಕೂ ಕಾರಣವಿದೆ. ಅದೇನೆಂದರೆ ಮಸಾಲೆಯ ಸಂಗ್ರಹಣೆ.

ತಿಂಗಳುಗಟ್ಟಲೆ ಫ್ರೆಶ್ ಆಗಿ ಪರಿಮಳಯುಕ್ತವಾಗಿರಲು
ಅಡುಗೆಯ ರುಚಿ ಮತ್ತು ಪರಿಮಳ ಹೆಚ್ಚಿಸುವಲ್ಲಿ ಮಸಾಲೆಗಳು ಪ್ರಮುಖ ಪಾತ್ರವಹಿಸುತ್ತವೆ. ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ದಾಲ್ಚಿನ್ನಿ, ಲವಂಗ, ಏಲಕ್ಕಿ, ಕರಿಮೆಣಸು, ಪಲಾವ್ ಎಲೆ, ಕಸೂರಿ ಮೇಥಿ ಮುಂತಾದ ಮಸಾಲೆಗಳು ಆಹಾರದ ರುಚಿಯನ್ನು ಹೆಚ್ಚಿಸುವುದು ಮಾತ್ರವಲ್ಲ, ಔಷಧೀಯ ಗುಣಗಳನ್ನು ಸಹ ಹೊಂದಿವೆ. ಈ ಮಸಾಲೆಗಳ ಸಹಾಯದಿಂದ ಯಾವುದೇ ರೆಸಿಪಿಯ ರುಚಿ ಹಲವು ಪಟ್ಟು ಹೆಚ್ಚಾಗುತ್ತದೆ. "ನಮಗೆಲ್ಲಾ ಗೊತ್ತಿರುವುದೇ, ಇದನ್ನೆಲ್ಲಾ ಹೇಳುತ್ತಿರುವುದೇಕೆ"? ಎಂದು ನೀವಂದುಕೊಳ್ಳುತ್ತಿರಬಹುದು. ಆದರೆ ಕೆಲವರು ಎಲ್ಲಾ ತರಹದ ಮಸಾಲೆ ಹಾಕಿದರೂ ಅಡುಗೆ ರುಚಿಯೇ ಬರುವುದಿಲ್ಲ ಎಂದು ಹೇಳುತ್ತಾರೆ. ಅದು ನಿಮ್ಮ ತಪ್ಪಲ್ಲ, ಅದಕ್ಕೂ ಕಾರಣವಿದೆ. ಅದೇನೆಂದರೆ ಮಸಾಲೆಯ ಸಂಗ್ರಹಣೆ. ಹೌದು ಸಂಗ್ರಹಣೆಯಲ್ಲಿ ಸ್ವಲ್ಪ ತಪ್ಪಾದರೂ ಮಸಾಲೆಗಳ ಸುವಾಸನೆಯ ಮೇಲೆ ಪರಿಣಾಮ ಬೀರುತ್ತದೆ. ಅಷ್ಟೇ ಅಲ್ಲ, ಕೆಲವೊಮ್ಮೆ ಅವು ಹಾಳಾಗುತ್ತವೆ. ನಿಮ್ಮ ಮನೆಯಲ್ಲಿರುವ ಮಸಾಲೆಯು ತಿಂಗಳುಗಟ್ಟಲೆ ಫ್ರೆಶ್ ಆಗಿ ಮತ್ತು ಪರಿಮಳಯುಕ್ತವಾಗಿರಲು ಬಯಸಿದರೆ ಈ ಸುಲಭವಾದ ಕಿಚನ್ ಟಿಪ್ಸ್ ಅಳವಡಿಸಿಕೊಳ್ಳಬಹುದು.
ಗಾಳಿಯಾಡದ ಡಬ್ಬಿ ಬಳಸಿ
ಮಸಾಲೆಗಳನ್ನು ಸಂಗ್ರಹಿಸುವಾಗ ಸರಿಯಾದ ಡಬ್ಬಿ ಬಳಸುವುದು ಮುಖ್ಯ. ಯಾವಾಗಲೂ ಮಸಾಲೆಯನ್ನು ಗಾಳಿಯಾಡದ ಜಾರ್ ಅಥವಾ ಡಬ್ಬಿಯಲ್ಲಿ ಇರಿಸಿ. ಗಾಳಿಯಾಡದ ಜಾರ್‌ನಿಂದಾಗಿ ತೇವಾಂಶ ಮತ್ತು ಗಾಳಿಯು ಮಸಾಲೆಗಳನ್ನು ತಲುಪಲು ಸಾಧ್ಯವಾಗುವುದಿಲ್ಲ ಮತ್ತು ಮಸಾಲೆಗಳು ದೀರ್ಘಕಾಲದವರೆಗೆ ಫ್ರೆಶ್ ಆಗಿರ್ತವೆ.
ಗಾಜು ಅಥವಾ ಸ್ಟೀಲ್ ಜಾಡಿ ಉತ್ತಮ
ನೀವು ಮಸಾಲೆಗಳನ್ನು ದೀರ್ಘಕಾಲದವರೆಗೆ ತಾಜಾವಾಗಿಡಲು ಬಯಸಿದರೆ ಸರಿಯಾದ ಡಬ್ಬಿ ಬಳಸುವುದು ಮುಖ್ಯ. ಪ್ಲಾಸ್ಟಿಕ್ ಬದಲಿಗೆ ಗಾಜಿನ ಅಥವಾ ಸ್ಟೀಲ್ ಜಾಡಿಗಳಲ್ಲಿ ಮಸಾಲೆಗಳನ್ನು ಸಂಗ್ರಹಿಸಿ. ಈ ಡಬ್ಬಿಗಳು ಮಸಾಲೆಗಳ ಪರಿಮಳವನ್ನು ದೀರ್ಘಕಾಲದವರೆಗೆ ಉಳಿಸಿಕೊಳ್ಳುತ್ತವೆ ಮತ್ತು ಆರೋಗ್ಯಕರವಾಗಿರುತ್ತವೆ.
ಸರಿಯಾದ ಸ್ಥಳದಲ್ಲಿ ಇರಿಸಿ
ಮಸಾಲೆಗಳ ಸಂಪೂರ್ಣ ತಾಜಾತನ ಕಾಪಾಡಿಕೊಳ್ಳಲು ಅವುಗಳನ್ನು ಸರಿಯಾದ ಸ್ಥಳದಲ್ಲಿ ಸಂಗ್ರಹಿಸುವುದು ಮುಖ್ಯ. ಮಸಾಲೆಗಳು ನೇರ ಸೂರ್ಯನ ಬೆಳಕಿಗೆ ಒಡ್ಡಿಕೊಳ್ಳದ ಸ್ಥಳದಲ್ಲಿ ಅವುಗಳನ್ನು ಸಂಗ್ರಹಿಸಿ. ಗ್ಯಾಸ್ ಸ್ಟೌವ್ ಬಳಿ ಅವುಗಳನ್ನು ಇಡುವುದನ್ನು ತಪ್ಪಿಸಿ. ಶಾಖ ಮತ್ತು ತೇವಾಂಶವು ಮಸಾಲೆಗಳ ಸುವಾಸನೆ ಮತ್ತು ಬಣ್ಣವನ್ನು ಹಾಳು ಮಾಡುತ್ತದೆ. ಯಾವಾಗಲೂ ಮಸಾಲೆಗಳನ್ನು ತಂಪಾದ ಮತ್ತು ಒಣ ಸ್ಥಳದಲ್ಲಿ ಇರಿಸಿ.
ಪದೇ ಪದೇ ತೆರೆಯುವುದನ್ನು ತಪ್ಪಿಸಿ
ನೀವು ಜಾಡಿಯನ್ನು ಅಥವಾ ಡಬ್ಬಿಯನ್ನ ಪದೇ ಪದೇ ತೆರೆದರೆ ತೇವಾಂಶ ಮತ್ತು ಗಾಳಿಯು ಮಸಾಲೆಗಳೊಳಗೆ ಪ್ರವೇಶಿಸುತ್ತದೆ. ಆದ್ದರಿಂದಲೇ ನೀವು ದೈನಂದಿನ ಬಳಕೆಗಾಗಿ ಪ್ರತ್ಯೇಕ ಸಣ್ಣ ಪೆಟ್ಟಿಗೆಗಳನ್ನು ಮತ್ತು ಶೇಖರಣೆಗಾಗಿ ದೊಡ್ಡ ಪೆಟ್ಟಿಗೆಗಳನ್ನು ಬಳಸುವುದು ಬೆಸ್ಟ್.