- Home
- Karnataka Districts
- ಮೈಸೂರಿನ ಕೋಟೆಹುಂಡಿ ಸರ್ಕಾರಿ ಶಾಲೆಯನ್ನ ₹32 ಲಕ್ಷದಲ್ಲಿ ಹೈಟೆಕ್ ಮಾಡಿದ 'ರಮ್ಯಾ ಜಗತ್' ಯಾರು?
ಮೈಸೂರಿನ ಕೋಟೆಹುಂಡಿ ಸರ್ಕಾರಿ ಶಾಲೆಯನ್ನ ₹32 ಲಕ್ಷದಲ್ಲಿ ಹೈಟೆಕ್ ಮಾಡಿದ 'ರಮ್ಯಾ ಜಗತ್' ಯಾರು?
ಮೈಸೂರಿನ ಕೋಟೆಹುಂಡಿ ಸರ್ಕಾರಿ ಶಾಲೆಯನ್ನು ರಮ್ಯಾ ಜಗತ್ ಅವರು ದತ್ತು ಪಡೆದು 32 ಲಕ್ಷ ರೂ. ಸ್ವಂತ ಖರ್ಚಿನಲ್ಲಿ ಹೈಟೆಕ್ ಶಾಲೆಯಾಗಿ ಅಭಿವೃದ್ಧಿಪಡಿಸಿದ್ದಾರೆ. ತಮ್ಮ ಮಗನನ್ನೂ ಇದೇ ಶಾಲೆಗೆ ಸೇರಿಸಿರುವ ಇವರು, ಶಾಲೆಗೆ 8ನೇ ತರಗತಿ ತರಲು ಹೋದಾಗ ಸ್ಥಳೀಯರು ಪ್ರಶ್ನಿಸಿದ ವಿಡಿಯೋ ಪ್ರಸ್ತುತ ವೈರಲ್ ಆಗಿದೆ.

ಮೈಸೂರು ತಾಲ್ಲೂಕಿನ ಕೋಟೆಹುಂಡಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕೇವಲ 13 ವಿದ್ಯಾರ್ಥಿಗಳಿದ್ದು, ಈ ಶಾಲೆಯನ್ನು ಸರ್ಕಾರ ಮುಚ್ಚುವ ಹಂತಕ್ಕೆ ತಂದಿತ್ತು. ಆದರೆ, ಈ ಸರ್ಕಾರಿ ಶಾಲೆಯನ್ನು ದತ್ತು ಪಡೆದ ಮಹಿಳೆ ರಮ್ಯಾ ಜಗತ್ ಎನ್ನುವವರು ಬರೋಬ್ಬರಿ 32 ಲಕ್ಷ ರೂಪಾಯಿಗಳನ್ನು ಖರ್ಚು ಮಾಡಿ ಈಗ ಹೈಟೆಕ್ ಶಾಲೆ ಮಾಡಿದ್ದಾರೆ. ಆದರೆ, ಈ ಮಹಿಳೆಗೆ ಶಾಲೆ ಮೇಲೆ ನಿಮಗೇನು ಹಕ್ಕಿದೆ ಎಂದು ಕೇಳಿದ ವಿಡಿಯೋ ಭಾರೀ ವೈರಲ್ ಆಗಿತ್ತು. ಆದರೆ, ಈ ಮಹಿಳೆ ರಮ್ಯಾ ಜಗತ್ ಯಾರು? ಎಂಬ ಪ್ರಶ್ನೆಗೆ ಇಲ್ಲಿದೆ ಉತ್ತರ…
ಶಾಲೆಯನ್ನು ಅಭಿವೃದ್ಧಿ ಮಾಡಿದ ಮಹಿಳೆ ರಮ್ಯಾ ಜಗತ್ ಅವರು, ಕೋಟೆಹುಂಡಿ ಗ್ರಾಮದ ಪಕ್ಕದಲ್ಲಿರುವ ಪರಸಯ್ಯನಹುಂಡಿ ಗ್ರಾಮದವರು. ಇವರು ಇಂಜಿನಿಯರಿಂಗ್ ವಿದ್ಯಾಭ್ಯಾಸ ಮಾಡಿದ್ದಾರೆ. ಇವರು ಸಮಾಜಿಕ ಸೇವಾ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಕೆಲವು ದಿನ ಸ್ಥಳೀಯ ಮಾಧ್ಯಮಗಳಲ್ಲಿಯೂ ಕೆಲಸ ಮಾಡಿದ ಅನುಭವವಿದೆ. ಈಗ ತಮ್ಮದೇ ಒಂದು ಕಂಪನಿ ಸಹ ಮಾಡಿದ್ದಾರೆ. ಇತ್ತೀಚೆಗೆ ಯ್ಯೂಟೂಬ್, ಇನ್‌ಸ್ಟಾಗ್ರಾಂ ಸೇರಿದಂತೆ ವಿವಿಧ ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿದ್ದಾರೆ. ಇವರ ಗಂಡ ನಂದೀಶ್ ಎಂ. ಅವರು ಸರ್ಕಾರದ ಚೈಲ್ಡ್ ವೆಲ್ಫೇರ್ ಕಮಿಟಿ ಅಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ.
ರಮ್ಯ ಅವರಿಗೆ ಉಚಿತ ಶಿಕ್ಷಣ ಕೊಡುವಂತಹ ಒಂದು ಗುಣಮಟ್ಟದ ಶಾಲೆ ಮಾಡಬೇಕು ಎಂಬ ಆಸೆಯಿತ್ತಂತೆ. ಆದರೆ, ಶಾಲೆಗೆ ಸ್ಥಳಾವಕಾಶ, ಸರ್ಕಾರದಿಂದ ಅನುಮತಿ, ಕಟ್ಟಡಗಳ ನಿರ್ಮಾಣ, ಶಿಕ್ಷಕರ ನಿಯೋಜನೆ, ಮಕ್ಕಳನ್ನು ಕರೆತರಲು ಜಾಹೀರಾತು ಜೊತೆಗೆ ಶಾಲೆಯನ್ನು ನಿರ್ವಹಣೆ ಮಾಡುವುದು ತುಂಬ ಕಷ್ಟ ಎಂಬುದು ಅವರಿಗೆ ಅರಿವಾಗಿದೆ. ಆದರೆ, ತಮ್ಮ ಉಚಿತ ಶಿಕ್ಷಣ ನೀಡುವ ಕನಸನ್ನು ಈ ಸರ್ಕಾರಿ ಶಾಲೆ ದತ್ತು ತೆಗೆದುಕೊಂಡು, ಹೈಟೆಕ್ ಶಾಲೆ ಆಗಿ ಪರಿವರ್ತನೆ ಮಾಡುವ ಮೂಲಕ ನನಸಾಗಿಸಿಕೊಳ್ಳಲು ಮುಂದಾಗಿದ್ದಾರೆ. ಜೊತೆಗೆ, ಪ್ರತಿಷ್ಠಿತ ಖಾಸಗಿ ಶಾಲೆಯಲ್ಲಿ ಓದುತ್ತಿದ್ದ ಇವರ ಮಗನನ್ನು ಇದೇ ಸರ್ಕಾರಿ ಶಾಲೆಯಲ್ಲಿಯೇ 4ನೇ ತರಗತಿಗೆ ಸೇರಿಸಿದ್ದಾರೆ.
ಇನ್ನು ಇವರ ಮಗನನ್ನು ಸರ್ಕಾರಿ ಶಾಲೆಗೆ ಸೇರಿಸುವುದು ಬೇಡವೆಂದು ಮನೆಯವರೆಲ್ಲಾ ಹೇಳಿದ್ದರಂತೆ. ಆದ್ರೆ ಇವರು ಮನೆಯ ಎಲ್ಲರನ್ನೂ ಮನವೊಲಿಸಿ ಶಾಲೆಗೆ ಸೇರಿಸಿದ್ದಲ್ಲದೆ, ಅದೇ ಶಾಲೆಯನ್ನು ದತ್ತು ತೆಗೆದುಕೊಂಡು ತಮ್ಮ ಸ್ವಂತ ಖರ್ಚಿನಿಂದ ಬರೋಬ್ಬರಿ ₹32 ಲಕ್ಷ ರೂ. ಖರ್ಚು ಮಾಡಿ, ಹೈಟೆಕ್ ಶಾಲೆಯಂತೆ ಪರಿವರ್ತನೆ ಮಾಡಿದ್ದಾರೆ. ಇದನ್ನು ನೋಡಿದರೆ ಮಕ್ಕಳಿಂದ ಕೋಟ್ಯಾಂತರ ರೂ. ಶಾಲಾ ಶುಲ್ಕವನ್ನು ವಸೂಲಿ ಮಾಡಿ ಕಟ್ಟಿದ ಹೈಟೆಕ್ ಶಾಲೆಯಂತಿದೆ.
ವಿಡಿಯೋ ನೋಡಲು ಈ ಲಿಂಕ್ ಕ್ಲಿಕ್ ಮಾಡಿ
ಶಾಲೆಯಲ್ಲಿ ಮಾಡಿದ ಅಭಿವೃದ್ಧಿ ಕಾರ್ಯಗಳು
ಕೋಟೆಹುಂಡಿ ಸರ್ಕಾರಿ ಶಾಲೆಗೆ ಭೇಟಿ ನೀಡಿ, ಎಸ್‌ಡಿಎಂಸಿ ಸದಸ್ಯರೊಂದಿಗೆ ಚರ್ಚೆ ಮಾಡಿ ಶಾಲೆಯನ್ನು ಅಭಿವೃದ್ಧಿ ಮಾಡುವುದಕ್ಕೆ ದತ್ತು ತೆಗೆದುಕೊಂಡಿದ್ದಾರೆ. ನಂತರ, ಒಂದೊಂದೇ ಅಭಿವೃದ್ಧಿ ಕಾರ್ಯಗಳನ್ನು ಆರಂಭಿಸಿದ ರಮ್ಯಾ ಅವರು, ಶಾಲೆಯ ಮುಂದೆ ಆಕರ್ಷಣೀಯವಾಗಿ ದೊಡ್ಡ ಸ್ವಾಗತ ಕಮಾನು ಮಾಡಿಸಿದ್ದಾರೆ. ಹೊರ ಗ್ರಂಥಾಲಯ, ಉದ್ಯಾನವನ, ಕೈ ತೋಟ, ಸರಸ್ವತಿ ವಿಗ್ರಹ ಇಟ್ಟು ಜಲ ಕಾರಂಜಿ, 90 ಅಡಿಯ ಎತ್ತರದ ಮಂಟಪ, ದೊಡ್ಡ ಸಭಾಂಗಣ, ಕಂಪ್ಯೂಟರ್ ಲ್ಯಾಬ್, ಶೌಚಾಲಯ ಮಾಡಿದ್ದಾರೆ.
ಇಷ್ಟೇ ಅಲ್ಲದೆ ಮಕ್ಕಳಿಗಾಗಿ ಮಕ್ಕಳಿಗೆ ಉಚಿತ ಸಮವಸ್ತ್ರ ಕೊಟ್ಟಿದ್ದಾರೆ. ಖಾಸಗಿ ಶಾಲೆಯ ವಿದ್ಯಾರ್ಥಿಗಳಿಗೆ ಸೆಡ್ಡು ಹೊಡೆಯುವಂತೆ ಸೂಟು, ಬ್ಲೇಜರ್ ಹಾಗೂ ಬೂಟುಗಳನ್ನು ಕೊಡಿಸಿದ್ದಾರೆ. ಇದರ ಜೊತೆ ಯೋಗ, ಸ್ಪೋಕನ್ ಇಂಗ್ಲಿಷ್, ಕರಾಟೆ, ಡ್ಯಾನ್ಸ್, ಚಿತ್ರಕಲಾ ಶಿಕ್ಷಕರನ್ನು ಸ್ವಂತ ಖರ್ಚಿನಿಂದ ನೇಮಿಸಿದ್ದಾರೆ. ಇವರ ಈ ಕಾರ್ಯಕ್ಕೆ ಅವರ ಕುಟುಂಬ, ಶಿಕ್ಷಣ ಇಲಾಖೆ, ಶಾಲೆಯ ಶಿಕ್ಷಕರು, ಗ್ರಾಮಸ್ಥರು ಎಲ್ಲರೂ ಸಹಕರಿಸಿದ್ದಾರೆ. ಇವರ ಕಾರ್ಯಕ್ಕೆ ಸುತ್ತಲಿನ ಗ್ರಾಮಸ್ಥರಿಂದ ಶ್ಲಾಘನೆ ವ್ಯಕ್ತವಾಗುತ್ತಿತ್ತು.
ಹೀಗಿರುವಾಗ, ಈ ಶಾಲೆಗೆ 8ನೇ ತರಗತಿಯನ್ನು ತರಲು ಪರ್ಮಿಷನ್ ಕೇಳಿದರೆ ನಿಮಗೆ ಶಾಲೆಯ ಮೇಲೆ ಯಾವ ಹಕ್ಕಿದೆ ಎಂದು ಸ್ಥಳೀಯ ಮಹನೀಯರೊಬ್ಬರು ಕೇಳಿದರು. ಈ ಸಂಬಂಧ ಅವರು ನೋವು ತಡೆದುಕೊಳ್ಳಲಾಗದೇ ವಿಡಿಯೋ ಮಾಡಿದ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ನಂತರ ಇಡೀ ರಾಜ್ಯದಲ್ಲಿ ಕೋಟೆಹುಂಡಿ ಸರ್ಕಾರಿ ಶಾಲೆ ಭರ್ಜರಿ ಸದ್ದು ಮಾಡುತ್ತಿದೆ.

