ಮೈಸೂರಿನ ಕೋಟೆಹುಂಡಿ ಸರ್ಕಾರಿ ಶಾಲೆಯನ್ನು ₹31.72 ಲಕ್ಷ ಖರ್ಚು ಮಾಡಿ ಹೈಟೆಕ್ ಮಾಡಿದ ಟೆಕ್ಕಿ ರಮ್ಯಾ ಜಗತ್ ಅವರಿಗೆ, 8ನೇ ತರಗತಿ ಆರಂಭಿಸಲು ಅನುಮತಿ ಕೇಳಿದಾಗ ಅಧಿಕಾರಿಗಳು 'ನೀವ್ಯಾರು? ಶಾಲೆಯ ಮೇಲೆ ನಿಮಗೇನು ಹಕ್ಕಿದೆ?' ಎಂದು ಪ್ರಶ್ನಿಸಿ ಅವಮಾನಿಸಿದ್ದಾರೆ. ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಆದರೆ, ಹೀಗೆ ಪ್ರಶ್ನೆ ಮಾಡಿದ್ಯಾರು? ತಿಳಿಯಿರಿ.

ಮೈಸೂರು (ಸೆ.24): ಸರ್ಕಾರಿ ಶಾಲೆಗಳನ್ನು ಉಳಿಸಿ, ಬೆಳೆಸಲು ಸರ್ಕಾರಗಳು ಮತ್ತು ದಾನಿಗಳು ಹರಸಾಹಸ ಪಡುತ್ತಿದ್ದಾರೆ. ಆದರೆ, ಇಲ್ಲೊಬ್ಬ ಮಹಿಳಾ ಟೆಕ್ಕಿ ರಮ್ಯಾ ಜಗತ್ (Ramya Jagath Mysuru) ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಸರ್ಕಾರಿ ಶಾಲೆಯೊಂದನ್ನು ಹೈಟೆಕ್ ಶಾಲೆ ಮಾದರಿಗೆ ಅಭಿವೃದ್ಧಿಪಡಿಸಿದರೆ, ಕೊನೆಗೆ ಅಧಿಕಾರಿಗಳು ಹಾಗೂ ಸ್ಥಳೀಯ ಮಹನೀಯರು ’ಶಾಲೆಯ ಮೇಲಿರುವ ನಿಮಗೇನು ಹಕ್ಕಿದೆ?' ಎಂದು ಪ್ರಶ್ನಿಸಿರುವ ಘಟನೆ ಮೈಸೂರಿನಲ್ಲಿ ನಡೆದಿದೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದ್ದು, ಸಾರ್ವಜನಿಕರಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ.

ಈ ಸರ್ಕಾರಿ ಶಾಲೆ ಅಭಿವೃದ್ಧಿಗೆ ಮಹಿಳೆ ಖರ್ಚು ಮಾಡಿದ ಹಣ 31.72 ಲಕ್ಷ ರೂ. ಆಗಿದೆ. ನಿನ್ನೆ ಶಾಲೆಗೆ ಕೆಲವು ಮಹನೀಯರು ಬಂದಿದ್ದರು.ಈ ವೇಳೆ 7ನೇ ತರಗತಿ ಪಾಸಾದ ಮಕ್ಕಳು ಬೇರೆ ಊರಿಗೆ ಹೋಗಿ ಕಲಿಯೋದಕ್ಕಿಂತ ಇಲ್ಲಿಯೇ 8ನೇ ತರಗತಿ ತೆಗೆದುಕೊಂಡು ಬರೋಣ ಸರ್. ಶಾಲೆ ಕೊಠಡಿ ನಿರ್ಮಾಣ ಮತ್ತು ಶಿಕ್ಷಕರ ಬಗ್ಗೆ ನಾವೇ ವ್ಯವಸ್ಥೆ ಮಾಡುತ್ತೇನೆ.

ನೀವು ಶಿಕ್ಷಣ ಇಲಾಖೆ ಅಧಿಕಾರಿಗಳು ಹಾಗೂ ರಾಜಕೀಯ ಕ್ಷೇತ್ರದ ದೊಡ್ಡವರ ಬಳಿ ಮಾತನಾಡಿ ಎಂದು ರಮ್ಯಾ ಅವರು ಕೇಳಿದ್ದಾರೆ. ಆದರೆ, ಅಲ್ಲಿಗೆ ಬಂದಿದ್ದ ಮಹನೀಯರು ಶಾಲೆಯನ್ನು ದತ್ತು ಪಡೆದು ಹೈಟೆಕ್ ಆಗಿ ಅಭಿವೃದ್ಧಿ ಮಾಡಿದ ಮಹಿಳೆಗೆ 'ನಿನಗೆ ಶಾಲೆಯ ಮೇಲೆ ಯಾವ ಹಕ್ಕು ಇದೆ?' ಎಂದು ಪ್ರಶ್ನೆ ಮಾಡಿದ್ದಾರೆ.

ನಾಲ್ವಡಿ ಕೃಷ್ಣರಾಜ ಒಡೆಯರ್ ಸಭಾಂಗಣಕ್ಕೆ ವಿರೋಧ

ಶಾಲೆಯ ಅಭಿವೃದ್ಧಿ ಕಾರ್ಯಗಳಲ್ಲಿ ದೊಡ್ಡದಾದ ಸಭಾಂಗಣವೊಂದನ್ನು ನಿರ್ಮಾಣ ಮಾಡಿದ್ದು, ಅದಕ್ಕೆ ಮೈಸೂರು ಸಂಸ್ಥಾನದ ರಾಜಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಹೆಸರನ್ನಿಟ್ಟು ನಾಮಕರಣ ಮಾಡಲಾಗಿತ್ತು. ಇದನ್ನು ಪ್ರಶ್ನೆ ಮಾಡಿದ ಮಹನೀಯರು, ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ನಮಗೆ ಏನು ಕೊಡುಗೆ ಕೊಟ್ಟಿದ್ದಾರೆ ಎಂದೆಲ್ಲಾ ಕೇಳಿದ್ದಾರೆ. ನಿನ್ನೆಯೇ ಅವರಿಗೆ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಸಾಧನೆಗಳನ್ನು ಮನವರಿಕೆ ಮಾಡಿಕೊಡೋಣ ಎಂದರೂ ಅವರು ಮಾತನ್ನು ಕೇಳಿಸಿಕೊಳ್ಳುವ ವ್ಯವಧಾನವೂ ಇರಲಿಲ್ಲ ಎಂದು ಸ್ವತಃ ರಮ್ಯಾ ಹೇಳಿದ್ದಾರೆ.

ಈ ಕುರಿತು ಬೇಸರ ವ್ಯಕ್ತಪಡಿಸಿರುವ ರಮ್ಯಾ ಜಗತ್, 'ನಾನು ಶಾಲೆಗೆ ಕಾಂಪೌಂಡ್ ಕಟ್ಟುವಾಗ, ಓಪನ್ ಲೈಬ್ರರಿ ಮಾಡುವಾಗ, ಕಂಪ್ಯೂಟರ್ ಲ್ಯಾಬ್ ತೆರೆಯುವಾಗ, ಮಕ್ಕಳಿಗೆ ಸಮವಸ್ತ್ರ, ಬ್ಯಾಗ್, ತಟ್ಟೆ-ಲೋಟಗಳನ್ನು ಕೊಡುವಾಗ ನನ್ನ ಹಕ್ಕಿನ ಬಗ್ಗೆ ಯಾರೂ ಪ್ರಶ್ನೆ ಮಾಡಲಿಲ್ಲ. ಆದರೆ, ಮಕ್ಕಳ ಹಿತಾಸೆಗಾಗಿ 8ನೇ ತರಗತಿ ಆರಂಭಿಸಲು ಶಿಕ್ಷಣ ಇಲಾಖೆ ಬಳಿ ಅನುಮತಿ ಕೇಳುವಾಗ 'ನೀವ್ಯಾರು?' ಎಂದು ಪ್ರಶ್ನಿಸುತ್ತಿದ್ದಾರೆ ಎಂದು ನೋವು ತೋಡಿಕೊಂಡಿದ್ದಾರೆ.

View post on Instagram
 

ಹಕ್ಕಿಲ್ಲ ಎಂದು ಹೇಳಿದ್ಯಾರು?

ನಾನು ಅಭಿವೃದ್ಧಿ ಮಾಡಿದ ಶಾಲೆಗೆ 8ನೇ ತರಗತಿ ಆರಂಭಿಸುವುದಕ್ಕೆ ಪರ್ಮಿಷನ್ ತರಲು ಹಕ್ಕಿಲ್ಲ ಎಂದ ಮೇಲೆ ಇನ್ನುಮುಂದೆ ಶಾಲೆಗೆ ಹೋಗುವುದು ಬೇಡ ಎಂದು ಟೆಕ್ಕಿ ರಮ್ಯಾ ಜಗತ್ ನಿರ್ಧಾರ ಮಾಡಿದ್ದರು. ಕೋಟೆಹುಂಡಿ ಶಾಲೆ ಅಭಿವೃದ್ಧಿ ಮಾಡಿದ್ದಕ್ಕೆ ನನಗೆ ಹಕ್ಕಿಲ್ಲವೆಂದು ಹೇಳಿದ ಮಹನೀಯರಿಗೆ ಕೃತಜ್ಞತೆಯನ್ನು ತಿಳಿಸುತ್ತೇನೆ ಎಂದು ಮನನೊಂದು ಹೇಳಿದ್ದರು. ಆದರೆ, ಶಾಲೆಯ ಬಗ್ಗೆ ನಿಮಗೇನು ಹಕ್ಕಿದೆ ಎಂದು ಕೇಳಿದ ಅಧಿಕಾರಿ ಹಾಗೂ ಸ್ಥಳೀಯರ ಹೆಸರನ್ನು ರಮ್ಯಾ ಅವರು ಮುಚ್ಚಿಟ್ಟಿದ್ದಾರೆ. ಅವರು ಹೆಸರು ಹೇಳಿದರೆ, ಅವರ ಕೆಲಸಕ್ಕೆ ತೊಂದರೆಯಾಗಬಹುದು ಎಂದು ಈ ನಿರ್ಧಾರ ಕೈಗೊಂಡಿದ್ದಾರೆ.