- Home
- Karnataka Districts
- ಈರುಳ್ಳಿ ಬೆಳೆದ ರೈತರಿಗೆ ಸಿಕ್ಕಿದ್ದು ಬರೀ ಕಣ್ಣೀರು: ಬರಗಾಲದಲ್ಲಿಯೂ ಬೆಳೆದ ಉಳ್ಳಾಗಡ್ಡಿ ಹಾಳು ಮಾಡಿದ ಮಳೆ!
ಈರುಳ್ಳಿ ಬೆಳೆದ ರೈತರಿಗೆ ಸಿಕ್ಕಿದ್ದು ಬರೀ ಕಣ್ಣೀರು: ಬರಗಾಲದಲ್ಲಿಯೂ ಬೆಳೆದ ಉಳ್ಳಾಗಡ್ಡಿ ಹಾಳು ಮಾಡಿದ ಮಳೆ!
ವಿಜಯನಗರ ಜಿಲ್ಲೆಯ ಹೂವಿನಹಡಗಲಿ ತಾಲೂಕಿನಲ್ಲಿ ಸುರಿದ ಭಾರಿ ಮಳೆಯಿಂದಾಗಿ ಕಟಾವಿಗೆ ಬಂದಿದ್ದ ನೂರಾರು ಎಕರೆ ಈರುಳ್ಳಿ ಬೆಳೆ ಜಲಾವೃತವಾಗಿದೆ. ಆರಂಭದಲ್ಲಿ ಮಳೆಯಿಲ್ಲದೆ ಕಷ್ಟಪಟ್ಟಿದ್ದ ರೈತರು, ಇದೀಗ ಅತಿಯಾದ ಮಳೆಯಿಂದ ಬೆಳೆ ಕೊಳೆಯುವ ಆತಂಕದಲ್ಲಿದ್ದಾರೆ.

ವಿಜಯನಗರ (ಸೆ.30): ಅನ್ನದಾತನ ಬದುಕು ಅಕ್ಷರಶಃ ತ್ರಿಶಂಕು ಸ್ಥಿತಿಯಲ್ಲಿದೆ. ಮಳೆ ಬಾರದಿದ್ದರೆ ಬೆಳೆ ಒಣಗಿ ಹೋಗುವ ಭೀತಿ, ಮಳೆ ಬಂದರೆ ಕೊಳೆತು ಹೋಗುವ ಆತಂಕ. ಇದೇ ಪರಿಸ್ಥಿತಿ ಇದೀಗ ವಿಜಯನಗರ ಜಿಲ್ಲೆಯ ಹೂವಿನಹಡಗಲಿ ತಾಲೂಕಿನ ರೈತರಿಗೆ ಎದುರಾಗಿದೆ. ಭಾರಿ ಮಳೆಗೆ ಈರುಳ್ಳಿ ಬೆಳೆ ನೀರುಪಾಲಾಗಿದ್ದು, ರೈತರು ಕಣ್ಣೀರು ಹಾಕುವಂತಾಗಿದೆ.
ಹೂವಿನಹಡಗಲಿ ತಾಲೂಕಿನ ಉತ್ತಂಗಿ ಗ್ರಾಮದಲ್ಲಿ ಈರುಳ್ಳಿ ಬೆಳೆದ ರೈತರ ಪಾಡು ಹೇಳತೀರದಾಗಿದೆ. ಆರಂಭದಲ್ಲಿ ಮುಂಗಾರು ಕೈಕೊಟ್ಟಿದ್ದರಿಂದ ಮಳೆಯಿಲ್ಲದೆ ಈರುಳ್ಳಿ ಬೆಳೆ ಒಣಗಲಾರಂಭಿಸಿತ್ತು. ಸಾಲ ಶೂಲ ಮಾಡಿ ಬೋರ್‌ವೆಲ್, ಟ್ಯಾಂಕರ್ ಮೂಲಕ ನೀರುಣಿಸಿ, ಕಷ್ಟಪಟ್ಟು ರೈತರು ಬೆಳೆಯನ್ನು ಉಳಿಸಿಕೊಂಡಿದ್ದರು. ಆದರೆ, 'ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ' ಎಂಬಂತೆ, ಕಟಾವಿಗೆ ಬಂದಿದ್ದ ಬೆಳೆ ಈಗ ವರುಣನ ಅಬ್ಬರಕ್ಕೆ ಕೊಚ್ಚಿ ಹೋಗುತ್ತಿದೆ.
ಕಳೆದೊಂದು ವಾರದಿಂದ ಬಿಡದ ಮಳೆ!
ಕಳೆದೊಂದು ವಾರದಿಂದ ಹೂವಿನಹಡಗಲಿ ಭಾಗದಲ್ಲಿ ನಿರಂತರವಾಗಿ ಮಳೆಯಾಗುತ್ತಿದ್ದು, ಈರುಳ್ಳಿ ಬೆಳೆಗಾರರು ದಿಕ್ಕು ತೋಚದಂತಾಗಿದ್ದಾರೆ. ಅದರಲ್ಲೂ ಇಂದು (ಸೋಮವಾರ) ಬೆಳಗಿನ ಜಾವ ಉತ್ತಂಗಿ ಗ್ರಾಮದಲ್ಲಿ ಸುರಿದ ಭಾರಿ ಮಳೆಯಿಂದಾಗಿ ನೂರಾರು ಎಕರೆ ಈರುಳ್ಳಿ ಬೆಳೆ ಜಲಾವೃತವಾಗಿದೆ.
ಭೂಮಿಯೊಳಗೆಯೇ ಈರುಳ್ಳಿ ಕೊಳೆಯುವ ಹಂತಕ್ಕೆ ತಲುಪಿದ್ದು, ಮಳೆಯಿಂದಾಗಿ ಬೆಳೆಗೆ ತೀವ್ರ ಹಾನಿಯಾಗುವ ಆತಂಕ ಎದುರಾಗಿದೆ. ಸಾವಿರಾರು ರೂಪಾಯಿ ಬಂಡವಾಳ ಹಾಕಿ, ಹಗಲಿರುಳು ಕಷ್ಟಪಟ್ಟು ಬೆಳೆದ ಬೆಳೆ ಕಣ್ಣೆದುರೇ ಮಳೆಪಾಲಾಗುತ್ತಿರುವುದನ್ನು ಕಂಡು ರೈತರು ಕಂಗಾಲಾಗಿದ್ದಾರೆ.
ಪರಿಹಾರಕ್ಕಾಗಿ ರೈತರ ಆಗ್ರಹ:
'ಮೊದಲು ಮಳೆಯಿಲ್ಲದೆ ನಮ್ಮ ಬೆಳೆ ಹಾಳಾಗುವ ಹಂತಕ್ಕೆ ತಲುಪಿತ್ತು. ಈಗ ಬೆಳೆ ಕಟಾವಿಗೆ ಬಂದಿರುವ ಹೊತ್ತಿನಲ್ಲೇ ಭಾರಿ ಮಳೆ ಸುರಿದು, ಬೆಳೆ ಭೂಮಿಯಲ್ಲೇ ಕೊಳೆಯುತ್ತಿದೆ. ಮಳೆ ಬಂದ್ರೂ ಕಷ್ಟ, ಬಾರದಿದ್ರೂ ಕಷ್ಟ ಎಂಬಂತಾಗಿದೆ ನಮ್ಮ ಬದುಕು. ಸರ್ಕಾರ ಕೂಡಲೇ ಎಚ್ಚೆತ್ತುಕೊಂಡು ಬೆಳೆ ಹಾನಿ ಸಮೀಕ್ಷೆ ನಡೆಸಬೇಕು' ಎಂದು ಉತ್ತಂಗಿ ಗ್ರಾಮದ ರೈತರು ತಮ್ಮ ಅಳಲು ತೋಡಿಕೊಂಡಿದ್ದಾರೆ.
ಸಂಬಂಧಪಟ್ಟ ಕಂದಾಯ ಹಾಗೂ ಕೃಷಿ ಇಲಾಖೆ ಅಧಿಕಾರಿಗಳು ತಕ್ಷಣವೇ ಜಮೀನುಗಳಿಗೆ ಭೇಟಿ ನೀಡಿ, ಮಳೆಯಿಂದಾಗಿರುವ ಬೆಳೆ ಹಾನಿಯ ವರದಿಯನ್ನು ಸಿದ್ಧಪಡಿಸಿ, ಸರ್ಕಾರದಿಂದ ಸೂಕ್ತ ಪರಿಹಾರ ಒದಗಿಸಿಕೊಡಬೇಕು ಎಂದು ಸ್ಥಳೀಯ ರೈತರು ಒಕ್ಕೊರಲಿನಿಂದ ಆಗ್ರಹಿಸಿದ್ದಾರೆ.

