ಬೆಂಗಳೂರಿನಲ್ಲಿ ಭಾರಿ ಮಳೆಯಾಗುವ ಮುನ್ಸೂಚನೆ ಇರುವುದರಿಂದ ವಾಹನ ಸವಾರರಿಗೆ ಸಂಚಾರಿ ಪೊಲೀಸರು ಮಹತ್ವದ ಸಲಹೆ ನೀಡಿದ್ದಾರೆ. ಅನಗತ್ಯ ಪ್ರಯಾಣ ಮಾಡದಂತೆ ಹಾಗೂ ಅಂಡರ್‌ಪಾಸ್‌ಗಳಲ್ಲಿ ನಿಲ್ಲದಂತೆ ಕಟ್ಟುನಿಟ್ಟಾಗಿ ಸೂಚಿಸಲಾಗಿದೆ. ಟ್ರಾಫಿಕ್ ಮಾಹಿತಿಗಾಗಿ 'ಬಿಟಿಪಿ ಅಸ್ತ್ರಂ' ಆ್ಯಪ್ ಬಳಸಲು ಸಾರ್ವಜನಿಕರಲ್ಲಿ ಮನವಿ ಮಾಡಲಾಗಿದೆ.
ಬೆಂಗಳೂರು (ಸೆ.30): ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಬುಧವಾರ ಸಂಜೆಯಿಂದ ತಡರಾತ್ರಿವರೆಗೆ ಭಾರಿ ಮಳೆಯಾಗುವ ಮುನ್ಸೂಚನೆ ಇರುವ ಹಿನ್ನೆಲೆಯಲ್ಲಿ, ವಾಹನ ಸವಾರರ ಸುರಕ್ಷತೆ ಹಾಗೂ ಸುಗಮ ಸಂಚಾರಕ್ಕಾಗಿ ಅನಗತ್ಯವಾಗಿ ಸಂಚಾರ ಮಾಡದಂತೆ ಬೆಂಗಳೂರು ಸಂಚಾರಿ ಪೊಲೀಸ್ (Bengaluru Traffic Police) ವಿಭಾಗವು ಮಹತ್ವದ 'ಸಂಚಾರ ಸಲಹೆ' (Traffic Advisory) ಪ್ರಕಟಿಸಿದೆ.
ಮಳೆಯಿಂದಾಗಿ ನಗರದ ಹಲವೆಡೆ ಟ್ರಾಫಿಕ್ ಜಾಮ್ ಉಂಟಾಗುವ ಸಾಧ್ಯತೆಗಳಿದ್ದು, ಸಾರ್ವಜನಿಕರು ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವಂತೆ ಸಂಚಾರಿ ಪೊಲೀಸರು ಮನವಿ ಮಾಡಿದ್ದಾರೆ. ಟ್ರಾಫಿಕ್ ಪೊಲೀಸರು ಬಿಡುಗಡೆ ಮಾಡಿರುವ ಪ್ರಕಟಣೆಯಲ್ಲಿ ವಾಹನ ಸವಾರರಿಗೆ ಪ್ರಮುಖವಾಗಿ ೪ ಸೂಚನೆಗಳನ್ನು ನೀಡಲಾಗಿದೆ.
ಸಂಚಾರಿ ಪೊಲೀಸರ ಪ್ರಮುಖ ಸೂಚನೆಗಳು ಹೀಗಿವೆ:
ನೀರು ನಿಂತ ಜಾಗದಲ್ಲಿ ಎಚ್ಚರ: ರಸ್ತೆಗಳಲ್ಲಿ ಮಳೆ ನೀರು ಸಂಗ್ರಹವಾಗುವ (Waterlogging) ಸ್ಥಳಗಳಲ್ಲಿ ವಾಹನ ಸವಾರರು ಅತ್ಯಂತ ಎಚ್ಚರಿಕೆಯಿಂದ ವಾಹನಗಳನ್ನು ಚಲಾಯಿಸಬೇಕು. ಗುಂಡಿಗಳು ಕಾಣದಿರುವ ಸಾಧ್ಯತೆ ಇರುವುದರಿಂದ ವೇಗಮಿತಿ ಕಾಯ್ದುಕೊಳ್ಳುವುದು ಸೂಕ್ತ.
ಅನಗತ್ಯ ಪ್ರಯಾಣ ಬೇಡ: ಭಾರಿ ಮಳೆಯಾಗುವ ಸಂದರ್ಭದಲ್ಲಿ ಟ್ರಾಫಿಕ್ ದಟ್ಟಣೆ ಹೆಚ್ಚಾಗುವುದರಿಂದ, ಅತ್ಯಗತ್ಯವಿದ್ದರೆ ಮಾತ್ರ ಮನೆಯಿಂದ ಹೊರಬನ್ನಿ. ಅನಗತ್ಯ ಪ್ರಯಾಣವನ್ನು ತಪ್ಪಿಸುವುದು ಒಳಿತು.
ಅಂಡರ್‌ಪಾಸ್‌ಗಳಲ್ಲಿ ನಿಲ್ಲಬೇಡಿ: ಮಳೆಯಿಂದ ರಕ್ಷಣೆ ಪಡೆಯಲು ದ್ವಿಚಕ್ರ ವಾಹನ ಸವಾರರು ಅಂಡರ್‌ಪಾಸ್‌ಗಳಲ್ಲಿ (Underpasses) ಆಶ್ರಯ ಪಡೆಯುವುದು ಸಾಮಾನ್ಯ. ಆದರೆ, ಹೀಗೆ ಮಾಡುವುದರಿಂದ ಇತರೆ ವಾಹನಗಳ ಸುಗಮ ಸಂಚಾರಕ್ಕೆ ಭಾರಿ ಅಡಚಣೆಯಾಗುತ್ತದೆ. ಅಲ್ಲದೆ ಇದು ಅಪಾಯಕಾರಿಯೂ ಹೌದು. ಹೀಗಾಗಿ ಅಂಡರ್‌ಪಾಸ್‌ಗಳಲ್ಲಿ ನಿಲ್ಲದೆ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡುವಂತೆ ಕಟ್ಟುನಿಟ್ಟಾಗಿ ಸೂಚಿಸಲಾಗಿದೆ.
ರಿಯಲ್ ಟೈಮ್ ಮಾಹಿತಿಗಾಗಿ 'ಬಿಟಿಪಿ ಅಸ್ತ್ರಂ' ಬಳಸಿ:
ನಗರದಲ್ಲಿ ಎಲ್ಲೆಲ್ಲಿ ಟ್ರಾಫಿಕ್ ಜಾಮ್ ಆಗಿದೆ? ಎಲ್ಲೆಲ್ಲಿ ರಸ್ತೆಗಳು ಜಲಾವೃತವಾಗಿವೆ? ಎಂಬ ನೈಜ ಮತ್ತು ನಿಖರ ಮಾಹಿತಿಯನ್ನು (Real-time updates) ಸಾರ್ವಜನಿಕರು ಕುಳಿತಲ್ಲೇ ಪಡೆಯಲು ಸಂಚಾರಿ ಇಲಾಖೆಯ 'ಬಿಟಿಪಿ ಅಸ್ತ್ರಂ ಆ್ಯಪ್' (BTP Astram App) ಅನ್ನು ಬಳಸುವಂತೆ ಪೊಲೀಸರು ಸಲಹೆ ನೀಡಿದ್ದಾರೆ. ಜೊತೆಗೆ ಬೆಂಗಳೂರು ಟ್ರಾಫಿಕ್ ಪೊಲೀಸರ ಅಧಿಕೃತ ಸಾಮಾಜಿಕ ಜಾಲತಾಣಗಳ (Twitter/X, Facebook) ಮೂಲಕವೂ ಸಂಚಾರ ದಟ್ಟಣೆಯ ಮಾಹಿತಿ ಪಡೆಯಬಹುದು ಎಂದು ತಿಳಿಸಿದ್ದಾರೆ.
ಮಳೆಯಿಂದ ಉಂಟಾಗಬಹುದಾದ ಸಂಚಾರ ಅಡಚಣೆಗಳನ್ನು ನಿವಾರಿಸಲು ಎಲ್ಲ ರೀತಿಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಈ ನಿಟ್ಟಿನಲ್ಲಿ ಸಾರ್ವಜನಿಕರು ಟ್ರಾಫಿಕ್ ಪೊಲೀಸರೊಂದಿಗೆ ಕೈಜೋಡಿಸಿ ಸಹಕರಿಸಬೇಕು ಎಂದು ಇಲಾಖೆ ಕೋರಿದೆ.



