ಬೆಂಗಳೂರಿನ ಚಿತ್ರಮಂದಿರದಲ್ಲಿ ಸಿನಿಮಾ ವೀಕ್ಷಿಸುತ್ತಿದ್ದಾಗ ಏಕಾಏಕಿ ಮೇಲ್ಛಾವಣಿ ಕುಸಿದು ಬಿದ್ದಿದೆ. ಘಟನೆಯಲ್ಲಿ ಓರ್ವ ಪ್ರೇಕ್ಷಕನ ತಲೆಗೆ ಪೆಟ್ಟಾಗಿದ್ದು, ಉಳಿದವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ತಕ್ಷಣವೇ ಸಿನಿಮಾ ಪ್ರದರ್ಶನ ನಿಲ್ಲಿಸಿ, ಉಳಿದ ಪ್ರೇಕ್ಷಕರನ್ನು ಹೊರ ಕಳುಹಿಸಲಾಗಿದೆ.

ಬೆಂಗಳೂರು (ಸೆ.30): ಬೆಂಗಳೂರಿನ ಚಿತ್ರಮಂದಿರದಲ್ಲಿ ಆರಾಮಾಗಿ ಕುಳಿತು ಸಿನಿಮಾ ವೀಕ್ಷಿಸುತ್ತಿದ್ದ ಪ್ರೇಕ್ಷಕರಿಗೆ ದಿಢೀರ್ ಆಘಾತ ಎದುರಾಗಿದೆ. ಹಠಾತ್ತಾಗಿ ಚಿತ್ರಮಂದಿರದ ಮೇಲ್ಛಾವಣಿ (Roof) ಕುಸಿದು ಬಿದ್ದ ಪರಿಣಾಮ ಪ್ರೇಕ್ಷಕನೋರ್ವ ಗಾಯಗೊಂಡಿರುವ ಘಟನೆ ನಡೆದಿದೆ.

ಪೀಣ್ಯ ದಾಸರಹಳ್ಳಿ ಸಮೀಪದಲ್ಲಿರುವ 'ಭಾರತಿ ಚಿತ್ರಮಂದಿರ'ದಲ್ಲಿ (Bharathi Theatre) ಈ ಆತಂಕಕಾರಿ ಅವಘಡ ಸಂಭವಿಸಿದೆ. ಎಂದಿನಂತೆ ಪ್ರೇಕ್ಷಕರು ಚಿತ್ರಮಂದಿರದ ಒಳಗೆ ಕುಳಿತು ಸಿನಿಮಾ ವೀಕ್ಷಿಸುತ್ತಿದ್ದರು. ಈ ವೇಳೆ ಏಕಾಏಕಿ ಮೇಲ್ಛಾವಣಿಯ ದೊಡ್ಡ ಭಾಗವೊಂದು ಕಳಚಿ, ಕೆಳಗೆ ಕುಳಿತಿದ್ದ ಪ್ರೇಕ್ಷಕರ ಮೇಲೆಯೇ ಬಿದ್ದಿದೆ.

ತಲೆಗೆ ಪೆಟ್ಟು, ಆಸ್ಪತ್ರೆಗೆ ರವಾನೆ:

ಮೇಲ್ಛಾವಣಿಯ ಅವಶೇಷಗಳು ನೇರವಾಗಿ ಬಿದ್ದ ಪರಿಣಾಮ ಸಿನಿಮಾ ನೋಡುತ್ತಿದ್ದ ವ್ಯಕ್ತಿಯೊಬ್ಬರ ತಲೆಗೆ ಭಾರೀ ಪೆಟ್ಟಾಗಿದೆ. ಘಟನೆ ನಡೆಯುತ್ತಿದ್ದಂತೆ ಚಿತ್ರಮಂದಿರದೊಳಗೆ ಆತಂಕ ಮತ್ತು ಗೊಂದಲದ ವಾತಾವರಣ ನಿರ್ಮಾಣವಾಯಿತು. ಗಾಯಗೊಂಡ ವ್ಯಕ್ತಿಯನ್ನು ತಕ್ಷಣವೇ ರಕ್ಷಿಸಿದ ಸ್ಥಳೀಯರು ಹಾಗೂ ಸಿಬ್ಬಂದಿ, ಸಮೀಪದ ಆಸ್ಪತ್ರೆಗೆ ರವಾನಿಸಿದ್ದಾರೆ. ಸದ್ಯ ಗಾಯಾಳುವಿಗೆ ಚಿಕಿತ್ಸೆ ಮುಂದುವರಿದಿದೆ.

ಅರ್ಧಕ್ಕೆ ನಿಂತ ಸಿನಿಮಾ ಪ್ರದರ್ಶನ:

ಅವಘಡ ಸಂಭವಿಸಿದ ತಕ್ಷಣವೇ ಎಚ್ಚೆತ್ತ ಚಿತ್ರಮಂದಿರದ ಆಡಳಿತ ಮಂಡಳಿ ಮತ್ತು ಸಿಬ್ಬಂದಿ, ಸಿನಿಮಾ ಪ್ರದರ್ಶನವನ್ನು ಅರ್ಧಕ್ಕೆ ನಿಲ್ಲಿಸಿದ್ದಾರೆ. ಮುನ್ನೆಚ್ಚರಿಕಾ ಕ್ರಮವಾಗಿ ಚಿತ್ರಮಂದಿರದಲ್ಲಿದ್ದ ಉಳಿದ ಎಲ್ಲಾ ಪ್ರೇಕ್ಷಕರನ್ನು ಸುರಕ್ಷಿತವಾಗಿ ಹೊರಗಡೆ ಕಳುಹಿಸಲಾಗಿದೆ. ಅದೃಷ್ಟವಶಾತ್ ದೊಡ್ಡ ಮಟ್ಟದ ಪ್ರಾಣಾಪಾಯ ತಪ್ಪಿದೆ.

ಸಿನಿಮಾ ಮಂದಿರಗಳ ನಿರ್ವಹಣೆ ಕೊರತೆಯೇ ಈ ಘಟನೆಗೆ ಕಾರಣ ಎನ್ನಲಾಗುತ್ತಿದ್ದು, ಸಾರ್ವಜನಿಕರ ಸುರಕ್ಷತೆಯ ಬಗ್ಗೆ ತೀವ್ರ ಕಳವಳ ವ್ಯಕ್ತವಾಗಿದೆ. ಘಟನೆಗೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿ ಇನ್ನಷ್ಟೇ ಲಭ್ಯವಾಗಬೇಕಿದೆ.