ಕೇಂದ್ರ ಸರ್ಕಾರವು 2027-28ರ ರಬಿ ಹಂಗಾಮಿಗೆ ಗೋಧಿ ಸೇರಿದಂತೆ ಪ್ರಮುಖ 6 ಬೆಳೆಗಳ ಕನಿಷ್ಠ ಬೆಂಬಲ ಬೆಲೆಯನ್ನು (MSP) ಹೆಚ್ಚಿಸಿದೆ. ಗೋಧಿ ಬೆಂಬಲ ಬೆಲೆಯನ್ನು ಕ್ವಿಂಟಾಲ್‌ಗೆ 25 ರೂ. ಹೆಚ್ಚಿಸಲಾಗಿದ್ದು, ಇದರಿಂದ ರೈತರಿಗೆ ಒಟ್ಟು 90,962 ಕೋಟಿ ರೂ. ಲಾಭವಾಗಲಿದೆ.

ನವದೆಹಲಿ: ದೇಶದ ರೈತರಿಗೆ ಕೇಂದ್ರ ಸರ್ಕಾರ ಸಿಹಿ ಸುದ್ದಿ ನೀಡಿದೆ. 2027-28ರ ರಬಿ ಮಾರುಕಟ್ಟೆ ಋತುವಿಗಾಗಿ ಗೋಧಿ ಸೇರಿದಂತೆ ಪ್ರಮುಖ 6 ರಬಿ ಬೆಳೆಗಳ ಕನಿಷ್ಠ ಬೆಂಬಲ ಬೆಲೆಯನ್ನು (MSP) ಹೆಚ್ಚಿಸಲು ನಿರ್ಧರಿಸಲಾಗಿದೆ. ಇವತ್ತು ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ಸಚಿವ ಸಂಪುಟ ಸಭೆ ನಡೆಯಿತು, ಈ ಸಭೆಯಲ್ಲಿ ಅನುಮೋದನೆ ನೀಡಲಾಗಿದೆ.

ಸಚಿವ ಸಂಪುಟ ಸಭೆ ಬಳಿಕ ಸುದ್ದಿಗೋಷ್ಠಿ ನಡೆಸಿದ ಮಾಹಿತಿ ನೀಡಿದ ಸಚಿವ ಅಶ್ವಿನಿ ವೈಷ್ಣವ್.. ಗೋಧಿ ಮೇಲಿನ ಎಂಎಸ್‌ಪಿಯನ್ನು ಕ್ವಿಂಟಾಲ್‌ಗೆ 25 ರೂ. ಹೆಚ್ಚಿಸಲಾಗಿದ್ದು, ಹೊಸ ದರ 2,610 ರೂ.ಗೆ ತಲುಪಿದೆ. ಪರಿಷ್ಕೃತ ಎಂಎಸ್‌ಪಿ ಮೂಲಕ ರೈತರಿಗೆ ಒಟ್ಟು 90,962 ಕೋಟಿ ರೂಪಾಯಿ ಜಮೆ ಆಗಲಿದೆ ಎಂದು ತಿಳಿಸಿದ್ದಾರೆ.

ಪ್ರತಿ ಕ್ವಿಂಟಾಲ್‌ಗೆ ಎಷ್ಟು ಬೆಂಬಲ ಬೆಲೆ?

ಕ್ರ. ಸಂಬೆಳೆಹಿಂದಿನ ದರಹೆಚ್ಚಳಹೊಸ ಬೆಂಬಲ ಬೆಲೆ
1ಗೋಧಿ₹2,585+₹25₹2,610
2ಬಾರ್ಲಿ / ಜವೆಗೋಧಿ₹2,150+₹136₹2,286
3ಕಡಲೆ₹5,875+₹83₹5,958
4ಮಸೂರ್ ಬೇಳೆ₹7,000+₹390₹7,390
5ಸಾಸಿವೆ₹6,200+₹413₹6,613
6ಕುಸುಬೆ₹6,540+₹675₹7,215

ಉತ್ಪಾದನಾ ವೆಚ್ಚಕ್ಕಿಂತ ದುಪ್ಪಟ್ಟು ಬೆಲೆ

ಗೋಧಿ ಬೆಳೆಯ ಉತ್ಪಾದನಾ ವೆಚ್ಚ ಮತ್ತು ನಿಗದಿತ ಬೆಂಬಲ ಬೆಲೆಯ ಬಗ್ಗೆ ಮಾತನಾಡಿದ ಸಚಿವ ಅಶ್ವಿನಿ ವೈಷ್ಣವ್, ಪ್ರಸ್ತುತ ಗೋಧಿಯ ಅಂದಾಜು ಉತ್ಪಾದನಾ ವೆಚ್ಚ ಪ್ರತಿ ಕ್ವಿಂಟಾಲ್‌ಗೆ 1,264 ರೂ. ಆಗಿದೆ. ಸರ್ಕಾರ ನಿಗದಿಪಡಿಸಿರುವ 2,610 ರೂ. ಬೆಂಬಲ ಬೆಲೆಯು ಉತ್ಪಾದನಾ ವೆಚ್ಚಕ್ಕಿಂತ ದುಪ್ಪಟ್ಟಿಗಿಂತಲೂ ಹೆಚ್ಚಾಗಿದೆ. ಇದು ರೈತರಿಗೆ ಉತ್ತಮ ಲಾಭ ತಂದುಕೊಡಲಿದೆ ಎಂದು ಸ್ಪಷ್ಟಪಡಿಸಿದ್ದಾರೆ.

ಕೃಷಿ ವೆಚ್ಚ ಮತ್ತು ಬೆಲೆಗಳ ಆಯೋಗದ (CACP) ಶಿಫಾರಸುಗಳ ಆಧಾರದ ಮೇಲೆ ಕೃಷಿ ಸಚಿವಾಲಯ ನೀಡಿದ ಪ್ರಸ್ತಾವನೆಗೆ ಸಂಪುಟ ಸಭೆ ಅನುಮೋದನೆ ನೀಡಿದೆ. ಎಲ್ ನಿನೋ ಪರಿಣಾಮಗಳು ಹಾಗೂ ದೇಶೀಯ ಮತ್ತು ಅಂತಾರಾಷ್ಟ್ರೀಯ ಮಾರುಕಟ್ಟೆಯ ಬೆಲೆ ಪ್ರವೃತ್ತಿಗಳನ್ನು ಪರಿಗಣಿಸಿ ಈ ದರಗಳನ್ನು ನಿಗದಿಪಡಿಸಲಾಗಿದೆ. ರಬಿ ಹಂಗಾಮಿನ ಪ್ರಮುಖ ಬೆಳೆಯಾದ ಗೋಧಿ ಬಿತ್ತನೆ ಅಕ್ಟೋಬರ್‌ನಲ್ಲಿ ಆರಂಭವಾಗಿ ಏಪ್ರಿಲ್‌ನಲ್ಲಿ ಕೊಯ್ಲು ನಡೆಯುತ್ತದೆ. ಬಿತ್ತನೆ ಅವಧಿಗೆ ಮುನ್ನವೇ ಬೆಲೆ ಪ್ರಕಟಿಸಿರುವುದರಿಂದ ರೈತರಿಗೆ ಅನುಕೂಲವಾಗಲಿದೆ. 2026-27ರ ಬೆಳೆ ವರ್ಷಕ್ಕೆ ಸರ್ಕಾರವು 121 ಮಿಲಿಯನ್ ಟನ್ ಗೋಧಿ ಉತ್ಪಾದನೆಯ ಗುರಿಯನ್ನು ನಿಗದಿಪಡಿಸಿದೆ.

ಇನ್ನು ಬಿತ್ತನೆಗೂ ಮುನ್ನವೇ ದರ ಪ್ರಕಟಿಸಿದ್ದರ ಲಾಭ ಏನು ಅಂತಾ ನೋಡೋದಾದ್ರೆ.. ಸಾಮಾನ್ಯವಾಗಿ ರಬಿ ಬೆಳೆಗಳ ಬಿತ್ತನೆ ಕಾರ್ಯ ಅಕ್ಟೋಬರ್-ನವೆಂಬರ್ ತಿಂಗಳಲ್ಲಿ ಆರಂಭವಾಗಿ, ಮಾರ್ಚ್-ಏಪ್ರಿಲ್‌ನಲ್ಲಿ ಕೊಯ್ಲು ನಡೆಯುತ್ತದೆ. ಬಿತ್ತನೆ ಆರಂಭವಾಗುವ ಮುನ್ನವೇ ಸರ್ಕಾರ ಬೆಂಬಲ ಬೆಲೆ ಪ್ರಕಟಿಸುವುದರಿಂದ, ರೈತರಿಗೆ ಯಾವ ಬೆಳೆಗೆ ಮಾರುಕಟ್ಟೆಯಲ್ಲಿ ಉತ್ತಮ ಖಾತರಿ ಬೆಲೆ ಸಿಗುತ್ತದೆ ಎಂಬ ಸ್ಪಷ್ಟತೆ ಸಿಗುತ್ತದೆ. ಮಾರುಕಟ್ಟೆಯ ಏರಿಳಿತದ ಭೀತಿಯಿಲ್ಲದೆ ರೈತರು ಹೆಚ್ಚು ಲಾಭದಾಯಕ ಬೆಳೆಗಳನ್ನು ಆಯ್ಕೆ ಮಾಡಿಕೊಳ್ಳಲು ಸಾಧ್ಯವಾಗುತ್ತದೆ.