Chikkamagaluru: ಸಚಿವ ಜಾರ್ಜ್ ತೋಟದಲ್ಲಿ ಅಪರಿಚಿತ ಬಂದೂಕುಧಾರಿಗಳ ಓಡಾಟ!
ಕಾಫಿನಾಡಲ್ಲಿ ಮತ್ತೆ ಬಂದೂಕುಧಾರಿಗಳ ಓಡಾಟ ಸದ್ದು ಮಾಡಿದೆ. ಸಚಿವ ಕೆಜೆ ಜಾರ್ಜ್ ಅವರ ಕಾಫಿ ತೋಟದಲ್ಲಿ ಅಪರಿಚಿತ ಬಂದೂಕುಧಾರಿಗಳು ಹೆಗಲ ಮೇಲೆ ಗನ್ ಹೊತ್ತು ಓಡಾಡಿರುವ ದೃಶ್ಯ ಸಿಸಿಟಿವಿಯಲ್ಲಿ ದಾಖಲಾಗಿದ್ದು, ಪ್ರಕರಣ ಸಂಬಂಧ ಮಲ್ಲಂದೂರು ಪೊಲೀಸರು ಮೂವರನ್ನ ವಶಕ್ಕೆ ಪಡೆದಿದ್ದಾರೆ.

ಸಚಿವ ಜಾರ್ಜ್ ತೋಟದಲ್ಲಿ ಅಪರಿಚಿತ ಬಂದೂಕುಧಾರಿಗಳು!
ಕಾಫಿ ನಾಡು ಚಿಕ್ಕಮಗಳೂರಿನ ಮಲ್ಲಂದೂರು ಸಮೀಪದ ಸಚಿವ ಕೆ.ಜೆ.ಜಾರ್ಜ್(KJ George) ಒಡೆತನದ ಏಳುನೂರುಖಾನ್ ಕಾಫಿ ತೋಟಕ್ಕೆ ಮಾರಕಾಸ್ತ್ರ ಹಾಗೂ ಬಂದೂಕುಧಾರಿಗಳ ತಂಡ ಅಕ್ರಮವಾಗಿ ಓಡಾಟ ನಡೆಸುತ್ತಿರುವುದು ಕಂಡು ಬಂದಿದ್ದು, ಈ ಪೈಕಿ ಮೂವರನ್ನು ಮಲ್ಲಂದೂರು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಮೂವರು ಪೊಲೀಸರ ವಶಕ್ಕೆ, ಇನ್ನಿಬ್ಬರು ಪರಾರಿ
ಪುಟ್ಟಸ್ವಾಮಿ, ಗಿರೀಶ್, ರಮೇಶ್ ವಶಕ್ಕೆ ಪಡೆದಿದ್ದು, ಇನ್ನೂ ಇಬ್ಬರು ಪರಾರಿಯಾಗಿದ್ದಾರೆ. ಮುತ್ತೋಡಿ ಅಭಯಾರಣ್ಯಕ್ಕೆ ಹೊಂದಿಕೊಂಡ ಪ್ರದೇಶದಲ್ಲಿ ಶಿಕಾರಿಗೆ ತೆರಳಿದ್ದರು ಎನ್ನಲಾಗಿದೆ.
ಸಿಸಿ ಕ್ಯಾಮೆರಾದಲ್ಲಿ ಬಂದೂಕುಧಾರಿಗಳ ದೃಶ್ಯ ಸೆರೆ
ಮುತ್ತೋಡಿ ವನ್ಯಜೀವಿ ಅಭಯಾರಣ್ಯದ ತಪ್ಪಲಿಗೆ ಹೊಂದಿಕೊಂಡಿರುವ ಈ ಕಾಫಿ ಎಸ್ಟೇಟ್‌ನಲ್ಲಿ ಕಳೆದ ಒಂದು ವಾರದಲ್ಲಿ ಮೂರು ದಿನ ಓಡಾಟ ನಡೆಸಿರುವುದು ಸಿಸಿಟಿವಿ ಕ್ಯಾಮೆರಾದಲ್ಲಿ ದಾಖಲಾಗಿದೆ. ಜೂ.17, ಜೂ.21 ಹಾಗೂ ಜೂ.22ರ ಮಧ್ಯರಾತ್ರಿ ಅಪರಿಚಿತ ಶಸ್ತ್ರಸಜ್ಜಿತ ವ್ಯಕ್ತಿಗಳು ಓಡಾಡಿರುವುದು ಪತ್ತೆಯಾಗಿದೆ.
ಹೆಗಲಮೇಲೆ ಬಂದೂಕು ಹೊತ್ತು ತಿರುಗಾಟ
ಹೆಗಲಿಗೆ ಬಂದೂಕು ಹಾಗೂ ಕೈಯಲ್ಲಿ ಮಾರಕಾಸ್ತ್ರಗಳನ್ನು ಹಿಡಿದು ಅನುಮಾನಾಸ್ಪದವಾಗಿ ತಿರುಗಾಡುತ್ತಿದ್ದ ದೃಶ್ಯಗಳು ತೋಟದ ಸಿಸಿಟಿವಿ ಕ್ಯಾಮೆರಾಗಳಲ್ಲಿ ಸ್ಪಷ್ಟವಾಗಿ ಸೆರೆಯಾಗಿದ್ದವು.
ಮಲ್ಲಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರನ ದಾಖಲು
ಅಪರಿಚಿತರ ಈ ಅಕ್ರಮ ಪ್ರವೇಶ ಮತ್ತು ಚಲನವಲನಗಳು ತೋಟದ ಸಿಬ್ಬಂದಿ ಹಾಗೂ ವ್ಯವಸ್ಥಾಪಕರಲ್ಲಿ ತೀವ್ರ ಆತಂಕ ಮೂಡಿಸಿತ್ತು. ಈ ಬಗ್ಗೆ ಎಸ್ಟೇಟ್‌ನ ಹಿರಿಯ ವ್ಯವಸ್ಥಾಪಕಿ ದಿವ್ಯಾ, ಮಲ್ಲಂದೂರು ಪೊಲೀಸ್ ಠಾಣೆಗೆ ದೂರು ನೀಡಿದ ಬೆನ್ನಲ್ಲೇ ಪೊಲೀಸರು ಮೂವರನ್ನು ವಶಕ್ಕೆ ಪಡೆದಿದ್ದಾರೆ.

