- Home
- Karnataka Districts
- ಬೆಂಗಳೂರಷ್ಟೇ ಅಲ್ಲ, ಶಿವಮೊಗ್ಗದಲ್ಲೂ ರಸ್ತೆಗುಂಡಿ ಹಾವಳಿ; ಗುಂಡಿ ತಪ್ಪಿಸಲು ಹೋಗಿ ಡಿವೈಡರ್‌ಗೆ ಡಿಕ್ಕಿಯಾಗಿ ಬೈಕ್ ಸವಾರ ಸಾವು!
ಬೆಂಗಳೂರಷ್ಟೇ ಅಲ್ಲ, ಶಿವಮೊಗ್ಗದಲ್ಲೂ ರಸ್ತೆಗುಂಡಿ ಹಾವಳಿ; ಗುಂಡಿ ತಪ್ಪಿಸಲು ಹೋಗಿ ಡಿವೈಡರ್‌ಗೆ ಡಿಕ್ಕಿಯಾಗಿ ಬೈಕ್ ಸವಾರ ಸಾವು!
ಶಿವಮೊಗ್ಗದಲ್ಲಿ ರಸ್ತೆ ಗುಂಡಿ ತಪ್ಪಿಸಲು ಹೋಗಿ ಮೆಡಿಕಲ್ ರೆಪ್ ಮಹೇಶ್ (34) ಬೈಕ್ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಘಟನೆಯಿಂದ ಸಾರ್ವಜನಿಕರಲ್ಲಿ ಆಕ್ರೋಶ ವ್ಯಕ್ತವಾಗಿದ್ದು, ರಸ್ತೆ ದುರಸ್ತಿಗೆ ಆಗ್ರಹಿಸಿದ್ದಾರೆ.

ಶಿವಮೊಗ್ಗ (ಸೆ. 15): ರಸ್ತೆ ಗುಂಡಿಗಳು ಶಿವಮೊಗ್ಗದಲ್ಲಿ ಮತ್ತೊಂದು ಅಮೂಲ್ಯ ಜೀವ ಬಲಿ ಪಡೆದಿವೆ. ರಸ್ತೆ ಗುಂಡಿ ತಪ್ಪಿಸಲು ಯತ್ನಿಸಿದಾಗ ಸಂಭವಿಸಿದ ಭೀಕರ ಅಪಘಾತದಲ್ಲಿ ಮೆಡಿಕಲ್ ರೆಪ್ ಆಗಿ ಕೆಲಸ ಮಾಡುತ್ತಿದ್ದ ಯುವಕ ಸಾವನ್ನಪ್ಪಿದ ದಾರುಣ ಘಟನೆ ನಗರದ ಹೊರವಲಯದಲ್ಲಿ ನಡೆದಿದೆ.
ಮೃತ ಯುವಕನನ್ನು ವಿನೋಬನಗರ ನಿವಾಸಿ ಮಹೇಶ್ (34) ಎಂದು ಗುರುತಿಸಲಾಗಿದೆ. ವೃತ್ತಿಯಲ್ಲಿ ಮೆಡಿಕಲ್ ರೆಪ್ ಆಗಿದ್ದ ಮಹೇಶ್, ನಿನ್ನೆ ರಾತ್ರಿ ತಮ್ಮ ಎಥರ್ ಎಲೆಕ್ಟ್ರಿಕ್ ಬೈಕ್‌ನಲ್ಲಿ ಮಲವಗೊಪ್ಪದ ರಸ್ತೆಯಲ್ಲಿ ಪ್ರಯಾಣಿಸುತ್ತಿದ್ದರು. ಈ ವೇಳೆ, ಆಳವಾದ ರಸ್ತೆ ಗುಂಡಿಯನ್ನು ತಪ್ಪಿಸಲು ಪ್ರಯತ್ನಿಸಿದಾಗ ಅವರ ಬೈಕ್ ನಿಯಂತ್ರಣ ತಪ್ಪಿ, ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಮಹೇಶ್ ಬೈಕ್‌ನಿಂದ ರಸ್ತೆಗೆ ಬಿದ್ದು ತೀವ್ರವಾಗಿ ಗಾಯಗೊಂಡಿದ್ದರು.
ಘಟನೆ ನಡೆದ ತಕ್ಷಣವೇ ಸ್ಥಳೀಯರು ತೀವ್ರ ರಕ್ತಸ್ರಾವದಿಂದ ಒದ್ದಾಡುತ್ತಿದ್ದ ಮಹೇಶ್ ಅವರನ್ನು ಸ್ಥಳೀಯ ದಾರಿಹೋಕರು ಆಸ್ಪತ್ರೆಗೆ ದಾಖಲಿಸಿದರು. ಆದರೆ, ತಲೆಗೆ ಗಂಭೀರ ಪೆಟ್ಟಾಗಿದ್ದ ಕಾರಣ ಚಿಕಿತ್ಸೆ ಫಲಕಾರಿಯಾಗದೆ ಅವರು ಕೊನೆಯುಸಿರೆಳೆದಿದ್ದಾರೆ.
ಇದನ್ನೂ ಓದಿ: ಗಂಟಲಿನಲ್ಲಿ ಸಿಲುಕಿದ ಕೋಳಿ ಮೂಳೆ, ಶಸ್ತ್ರಚಿಕಿತ್ಸೆಯಿಲ್ಲದೆ ಹೊರ ತೆಗೆದ ವೈದ್ಯರು
ಹದಗೆಟ್ಟ ರಸ್ತೆಗಳು ನಾಗರಿಕರ ಜೀವಕ್ಕೆ ಕುತ್ತು:
ಈ ಘಟನೆಯು ಸಾರ್ವಜನಿಕರಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಹಲವು ವರ್ಷಗಳಿಂದ ನಗರದ ರಸ್ತೆಗಳು ಹದಗೆಟ್ಟಿದ್ದು, ಸಾಕಷ್ಟು ಅಪಘಾತಗಳಿಗೆ ಕಾರಣವಾಗಿವೆ ಎಂದು ನಾಗರಿಕರು ದೂರಿದ್ದಾರೆ. ರಸ್ತೆ ದುರಸ್ತಿ ಕಾರ್ಯ ಕೈಗೊಳ್ಳುವಂತೆ ಹಲವಾರು ಬಾರಿ ಒತ್ತಾಯಿಸಿದ್ದರೂ ಪಾಲಿಕೆ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹದಗೆಟ್ಟ ರಸ್ತೆಗಳು ನಾಗರಿಕರ ಜೀವಕ್ಕೆ ಕುತ್ತು ತರುತ್ತಿದ್ದರೂ ಸಂಬಂಧಪಟ್ಟವರು ಕಣ್ಣುಮುಚ್ಚಿ ಕುಳಿತಿದ್ದಾರೆ ಎಂದು ಸಾರ್ವಜನಿಕರು ಆಕ್ರೋಶ ಹೊರಹಾಕಿದ್ದಾರೆ.
ಈ ದುರ್ಘಟನೆಗೆ ಕಾರಣರಾದವರ ವಿರುದ್ಧ ಕ್ರಮ ಜರುಗಿಸಬೇಕು ಮತ್ತು ನಗರದ ರಸ್ತೆಗಳನ್ನು ಕೂಡಲೇ ದುರಸ್ತಿ ಮಾಡಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ. ಪೂರ್ವ ಸಂಚಾರಿ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.