ಹೀಗೊಂದು ಪ್ರಕರಣ, ಸರಳ ದೈನಂದಿನದ ಊಟವೊಂದು ವ್ಯಕ್ತಿಯೊಬ್ಬರಿಗೆ ಸಾವಿನ ಬಾಗಿಲವರೆಗೆ ಕರೆದುಕೊಂಡು ಹೋಗಿ ಬಂದಿದೆ. ಶಿವಮೊಗ್ಗ ವೈದ್ಯರು ತುರ್ತು ಚಿಕಿತ್ಸೆಯಿಂದ ರೋಗಿ ಸಾವಿನ ದವಡೆಯಿಂದ ಪಾರಾಗಿದ್ದಾರೆ.
ಶಿವಮೊಗ್ಗ (ಸೆ.13): ಹೀಗೊಂದು ಪ್ರಕರಣ, ಸರಳ ದೈನಂದಿನದ ಊಟವೊಂದು ವ್ಯಕ್ತಿಯೊಬ್ಬರಿಗೆ ಸಾವಿನ ಬಾಗಿಲವರೆಗೆ ಕರೆದುಕೊಂಡು ಹೋಗಿ ಬಂದಿದೆ. ವೈದ್ಯರ ತುರ್ತು ಚಿಕಿತ್ಸೆಯಿಂದ ರೋಗಿ ಸಾವಿನ ದವಡೆಯಿಂದ ಪಾರಾಗಿದ್ದಾರೆ. ಸುಮಾರು 70 ವರ್ಷದ ವ್ಯಕ್ತಿಯೊಬ್ಬರು ಕೋಳಿ ಮೂಳೆ ಆಸ್ವಾದಿಸಲು ಹೋಗಿ ಅದು ಅನ್ನನಾಳದಲ್ಲಿ ಸಿಲುಕಿಹಾಕಿಕೊಂಡಿತ್ತು. ಮೂಳೆ ಅನ್ನನಾಳದಲ್ಲಿ ಸಿಲುಕಿಹಾಕಿಕೊಳ್ಳುವ ಮುಂಚೆ ಅದನ್ನು ಚುಚ್ಚಿ ರಕ್ತಸ್ರಾವವಾಗಿಸಿತ್ತು. ರೋಗಿ ಉಸಿರಾಡಲು ಸಹ ಕಷ್ಟ ಪಡುತ್ತಿರುವಾಗ ರೋಗಿಯ ಸಂಬಂಧಿಕರು ಅವರನ್ನು ಸಹ್ಯಾದ್ರಿ ನಾರಾಯಣ ಆಸ್ಪತ್ರೆಗೆ ಕರೆ ತಂದಿದ್ದಾರೆ.
ಹಿರಿಯ ಗ್ಯಾಸ್ಟ್ರೋಎಂಟರಾಲಜಿಸ್ಟ್ ಡಾ.ಶಿವಕುಮಾರ್.ವಿ ಅವರ ತಂಡ ತುರ್ತಾಗಿ ರೋಗಿಯನ್ನು ಪರೀಕ್ಷಿಸಿ ಸಿಟಿ ಇಮೇಜಿಂಗ್ ಪರೀಕ್ಷೆಗೆ ಒಳಪಡಿಸಿದ್ದಾರೆ. ಇದರಲ್ಲಿ ಹರಿತವಾದ ಎಲುಬೊಂದು ಅನ್ನನಾಳವನ್ನು ಹರಿದು ಅಪಾಯಕಾರಿ ರಂಧ್ರ ಉಂಟುಮಾಡಿ, ಗಾಳಿ, ಹಾಗೂ ದ್ರವವು ಎದೆಗೂಡು ಹಾಗೂ ಮೀಡಿಯಾಸ್ಷೀನಮ್‌ಗೆ ಸೋರಿಕೆಯಾಗುತ್ತಿರುವುದು ಕಂಡು ಬಂದಿದೆ. ತಕ್ಷಣವೇ ಕಾರ್ಯಪ್ರವೃತ್ತರಾದ ಡಾ.ಶಿವಕುಮಾರ್, ಗ್ಯಾಸ್ಟ್ರೋಎಂಟರಾಲಜಿಸ್ಟ್ ಡಾ.ಸುಮೇಶ ನಾಯರ್, ಡಾ ಪೂಜಾ ಕೃಷ್ಣಪ್ಪ ಅವರಿದ್ದ ತಂಡ, ಮೂಳೆ ಹೊರತಗೆಯಲು ಶಸ್ತ್ರಚಿಕಿತ್ಸೆಯ ಮೊರೆಹೋಗದೆ, ಕೇವಲ ಲೇಸರ್ ಹಾಗೂ ಅತ್ಯಾಧುನಿಕ ಎಂಡೋಸ್ಕೋಪಿಕ್ ತಂತ್ರಜ್ಞಾನವನ್ನು ಬಳಸಿಕೊಂಡು ಮೂಳೆಯನ್ನು ಹೊರತೆಗೆದಿದ್ದಾರೆ.
ಎಂಡೋಸ್ಕೋಪಿಕ್ ವಿಧಾನವನ್ನು ಆಯ್ಕೆ ಮಾಡಿದೆವು
ಚಿಕಿತ್ಸೆಯ ಬಗ್ಗೆ ಮಾತನಾಡಿದ ಡಾ.ಶಿವಕುಮಾರ್ ಅವರು, “ರೋಗಿ ತೀವ್ರ ಎದೆನೋವು ಮತ್ತು ಉಸಿರಾಟದ ತೊಂದರೆಯೊಂದಿಗೆ ಆಸ್ಪತ್ರೆಗೆ ಬಂದಿದ್ದರು. ಈ ರಂಧ್ರವನ್ನು ಗಮನಿಸಿದರೆ ಶಸ್ತ್ರಚಿಕಿತ್ಸೆ ಅನಿವಾರ್ಯವಾಗಬಹುದಿತ್ತು, ಆದರೆ ರೋಗಿಗೆ ಶಸ್ತ್ರಚಿಕಿತ್ಸೆಯ ಅಪಾಯ ಹೆಚ್ಚು ಇದ್ದುದರಿಂದ ನಾವು ಆಧುನಿಕ ಎಂಡೋಸ್ಕೋಪಿಕ್ ವಿಧಾನವನ್ನು ಆಯ್ಕೆ ಮಾಡಿದೆವು, ಸಾಮಾನ್ಯ ಅನಸ್ತೇಷಿಯಾ ಅಡಿಯಲ್ಲಿ, ತಂಡ ಎಲುಬನ್ನು ಸಣ್ಣ ತುಂಡುಗಳಾಗಿ ಮಾಡಿ ಎಂಡೋಸ್ಕೋಪ್ ತಂತ್ರಜ್ಞಾನದಿಂದ ತೆಗೆದುಹಾಕಿತು. ನಂತರ ರಂಧ್ರವನ್ನು ಲೋಹದ ಕ್ಲಿಪ್‌ಗಳ ಮೂಲಕ ಮುಚ್ಚಲಾಯಿತು.
ಈ ರೀತಿಯ ಪ್ರಕರಣಗಳು ಅತ್ಯಂತ ಸವಾಲಿನವು, ಏಕೆಂದರೆ ಸೋಂಕು ಮತ್ತು ಉಸಿರಾಟ ವೈಫಲ್ಯದ ಅಪಾಯ ಅತ್ಯಂತ ಹೆಚ್ಚಾಗಿರುತ್ತದೆ. ಆದರೆ ತುರ್ತು ಚಿಕಿತ್ಸೆಯಿಂದ ರೋಗಿ ಕೇವಲ ನಾಲ್ಕು ದಿನಗಳಲ್ಲಿ ಸಂಪೂರ್ಣ ಗುಣಮುಖರಾದರು ಎಂದು ಡಾ.ಶಿವಕುಮಾರ್ ಹೇಳಿದರು. ಊಟ ಮಾಡುವಾಗ ಯಾವತ್ತೂ ಗಮನ ಬೇರೆಡೆ ಇರಬಾರದು. ಟಿವಿ ಅಥವಾ ಸ್ಮಾರ್ಟ್‌ಫೋನ್‌ಗೆ ನೋಡುತ್ತ ಊಟ ಮಾಡುವುದರಿಂದ ಒಂದು ಸಣ್ಣ ತಪ್ಪು ವೈದ್ಯಕೀಯ ತುರ್ತು ಪರಿಸ್ಥಿತಿಯನ್ನೇ ಉಂಟುಮಾಡಬಹುದು ಎಂದು ಎಚ್ಚರಿಸಿದರು.
ಈ ಪ್ರಕರಣವು ನಮ್ಮ ಆಸ್ಪತ್ರೆಯು ಅಪರೂಪದ, ತುರ್ತು ಪ್ರಕರಣಗಳನ್ನು ತಂತ್ರಜ್ಞಾನ, ನಿಪುಣತೆ, ಹಾಗೂ ವಿವಿಧ ವಿಭಾಗಗಳ ಸಮನ್ವಯತೆಯಿಂದ ತುಂಬಾ ಸುಲಲಿತವಾಗಿ ಮಾಡುತ್ತದೆ ಎನ್ನುವುದನ್ನು ಜಗತ್ತಿಗೆ ತೋರಿಸಿದೆ ಎಂದು ಸಹ್ಯಾದ್ರಿ ನಾರಾಯಣ ಮಲ್ಟಿ-ಸ್ಪೆಷಾಲಿಟಿ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ವರ್ಗೀಸ್ ಪಿ ಜಾನ್ ತಿಳಿಸಿದರು.
