ಮಾಗಳ-ವಿಠ್ಠಲಾಪುರ ಮಧ್ಯೆ ತುಂಗಭದ್ರಾ ನದಿಯಲ್ಲಿ ಸಂಚರಿಸುತ್ತಿದ್ದ ನಾಡದೋಣಿ 15 ದಿನಗಳಿಂದ ಸ್ಥಗಿತಗೊಂಡಿದೆ. ದೋಣಿಯ ತಳದಲ್ಲಿ ರಂಧ್ರ ಬಿದ್ದಿರುವುದರಿಂದ ಪ್ರಯಾಣಿಕರು 30-40 ಕಿ.ಮೀ. ಸುತ್ತುವರಿದು ಪ್ರಯಾಣಿಸುವಂತಾಗಿದ್ದು, ಇಲಾಖೆ ದುರಸ್ತಿಗೆ ಮುಂದಾಗಿಲ್ಲವೆಂದು ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವರದಿ: ಚಂದ್ರು ಕೊಂಚಿಗೇರಿ
ಹೂವಿನಹಡಗಲಿ: ತಾಲೂಕಿನ ಮಾಗಳ-ವಿಠ್ಠಲಾಪುರ ಮಧ್ಯೆ ತುಂಗಭದ್ರಾ ನದಿಯಲ್ಲಿ ಸಂಚರಿಸುತ್ತಿದ್ದ ನಾಡದೋಣಿ ಸ್ಥಗಿತಗೊಂಡು 15 ದಿನಗಳಾದರೂ ಬಂದರು ಮತ್ತು ಒಳನಾಡು ಮತ್ತು ಜಲಸಾರಿಗೆ ಇಲಾಖೆ ದುರಸ್ತಿ ಮಾಡಿಲ್ಲ. ಇದರಿಂದ ಪ್ರಯಾಣಿಕರು ಪರದಾಡುತ್ತಿದ್ದಾರೆ. ವಿಜಯನಗರ, ಗದಗ ಮತ್ತು ಹಾವೇರಿ ಜಿಲ್ಲೆಗಳ ಪ್ರಯಾಣಿಕರಿಗೆ ಸಂಪರ್ಕ ಕೊಂಡಿಯಂತಿದ್ದ ತಾಲೂಕಿನ ಮಾಗಳ ಹಾಗೂ ಮುಂಡರಗಿ ತಾಲೂಕಿನ ವಿಠ್ಠಲಾಪುರ ಮಧ್ಯೆ ತುಂಗಭದ್ರಾ ನದಿಯಲ್ಲಿ ನಾಡದೋಣಿ ಸಂಚರಿಸುತ್ತಿದೆ. ನಿತ್ಯ ನೂರಾರು ಪ್ರಯಾಣಿಕರು ಲಕ್ಷ್ಮೇಶ್ವರ, ಹೊಳೆ ಇಟಿಗಿ, ಶಿರಹಟ್ಟಿ, ಬೆಳ್ಳಟ್ಟಿ, ಬಾಗೇವಾಡಿ, ಕಪ್ಪತ್ತಗುಡ್ಡ ಸೇರಿದಂತೆ ಇತರೆ ಕಡೆಗಳಿಗೆ ಮಾಗಳದಿಂದ ನಾಡದೋಣಿ ಮೂಲಕ ಪ್ರಯಾಣಿಸುತ್ತಾರೆ. ಹೂವಿನಹಡಗಲಿ ತಾಲೂಕಿನ ಹಿರೇಹಡಗಲಿ, ಹರಪನಹಳ್ಳಿ ಸೇರಿದಂತೆ ಇತರೆ ಹತ್ತಾರು ಗ್ರಾಮಗಳಿಗೆ ಜನ ಪ್ರಯಾಣಿಸುತ್ತಾರೆ.
ಕಬ್ಬಿಣದ ತಳಪಾಯದಲ್ಲಿ ಸಾಕಷ್ಟು ರಂಧ್ರ
ಈ ನಾಡದೋಣಿಯ ಕಬ್ಬಿಣದ ತಳಪಾಯದಲ್ಲಿ ಸಾಕಷ್ಟು ರಂಧ್ರಗಳು ಬಿದ್ದಿವೆ. ಇದರಿಂದ ದೋಣಿಯೊಳಗೆ ನೀರು ನುಗ್ಗುತ್ತಿದ್ದು, ಸಂಚಾರ ಸ್ಥಗಿತಗೊಂಡಿದೆ. ಕಳೆದ 15 ದಿನಗಳಿಂದ ನಾಡದೋಣಿ ಸಂಚರಿಸುತ್ತಿಲ್ಲ. ದುರಸ್ತಿ ಮಾಡುವಂತೆ ಇಲಾಖೆಗೆ ಕಳೆದ ಅಕ್ಟೋಬರ್ ತಿಂಗಳಿನಲ್ಲೇ ವರದಿ ನೀಡಿದ್ದರೂ ಈ ವರೆಗೂ ಇಲಾಖೆ ಕ್ರಮಕ್ಕೆ ಮುಂದಾಗಿಲ್ಲ. ಇದರಿಂದ ನಿತ್ಯ ಪ್ರಯಾಣಿಕರು ಮದಲಗಟ್ಟಿಯ ಸೇತುವೆ ಮೂಲಕ ಹೋಗಬೇಕಿದೆ. ಇಲ್ಲವೇ ಮೈಲಾರಕ್ಕೆ ಹೋಗಿ ಅಲ್ಲಿಂದ ಸೇತುವೆ ದಾಟಿ ಹೋಗಬೇಕಿದೆ. ಸರಿಸುಮಾರು 30ರಿಂದ 40 ಕಿ.ಮೀ. ಸುತ್ತುವರೆದು ಬೇರೆ ಕಡೆಗಳಿಗೆ ಹೋಗುವ ಸ್ಥಿತಿ ಇದೆ. ಕೂಡಲೇ ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆ ಇತ್ತ ಗಮನ ಹರಿಸಿ ನಾಡದೋಣಿಯನ್ನು ದುರಸ್ತಿ ಮಾಡಬೇಕು ಎಂದು ಜನ ಒತ್ತಾಯಿಸಿದ್ದಾರೆ.
ನಾಡದೋಣಿ ಬದಲು ಮಾಡಲು ಒತ್ತಾಯ
ಈ ನಾಡದೋಣಿ ಬದಲಾಗಿ ದೊಡ್ಡ ಪ್ರಮಾಣ ಲಾಂಚ್ ರೀತಿಯಲ್ಲಿರುವ ಬೋಟ್ ವ್ಯವಸ್ಥೆ ಮಾಡಬೇಕು. ಇದರಲ್ಲಿ ಕಾರು ಹಾಗೂ ಬೈಕ್‌ಗಳನ್ನು ದಾಟಿಸುವ ವ್ಯವಸ್ಥೆಯಾಗಬೇಕಿದೆ. ಈ ವರೆಗೂ ಕೇವಲ ಬೈಕ್‌ಗಳು ಮಾತ್ರ ಹಾಕಲಾಗುತ್ತಿದೆ. ಈ ಭಾಗದ ಜನರ ಅನುಕೂಲಕ್ಕಾಗಿ, ದೊಡ್ಡ ಲಾಂಚ್ ವ್ಯವಸ್ಥೆ ಕಲ್ಪಿಸಲು ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆ ಗಮನ ಹರಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸುತ್ತಿದ್ದಾರೆ.
ಮಾಗಳ-ವಿಠ್ಠಲಾಪುರ ಮಧ್ಯೆ ಸಂಚರಿಸುವ ನಾಡದೋಣಿ ದುರಸ್ತಿಗೆ ಬಂದಿದೆ. ಈ ಕುರಿತು ಕಾರವಾರದ ಬಂದರು ಮತ್ತು ಒಳನಾಡು ಜಲ ಸಾರಿಗೆ ಇಲಾಖೆ ನಿರ್ದೇಶಕರಿಗೆ ಪತ್ರ ಬರೆಯಲಾಗಿದೆ. ಅವರು ಅನುಮತಿ ನೀಡಿದ ಕೂಡಲೇ ದುರಸ್ತಿ ಮಾಡುತ್ತೇವೆ.
-ಸವಿತಾ ನಾಯ್ಕ, ಪ್ರಾಂತೀಯ ಕಾರ್ಯನಿರ್ವಾಹಣಾಧಿಕಾರಿ, ಬಂದರು ಮತ್ತು ಒಳನಾಡು ಜಲ ಸಾರಿಗೆ ಇಲಾಖೆ, ಬೆಂಗಳೂರು.
ಕೂಲಿ ಅರಸಿ ನಾವು ನಿತ್ಯ ಬೇರೆ ಪ್ರದೇಶಗಳಿಗೆ ನಾಡದೋಣಿ ಮೂಲಕ ಹೋಗುತ್ತೇವೆ. ಆದರೆ, ಬೋಟ್ ದುರಸ್ತಿ ಮಾಡಿಲ್ಲ. ಇದರಿಂದ 25 ರಿಂದ 30 ಕಿ.ಮೀ ನದಿ ಸುತ್ತುವರೆದೂ ಮಾಗಳ ಸೇರಿದಂತೆ ಇತರೆ ಕಡೆಗಳಿಗೆ ಹೋಗುತ್ತೇವೆ.
-ಕೂಲಿ ಕಾರ್ಮಿಕರು, ಬಿದರಹಳ್ಳಿ


