Narayana Gowda Slams Trolls Over Sudeep Meeting & BBK12 Controversy ಬಿಗ್ ಬಾಸ್ ಸ್ಪರ್ಧಿ ಅಶ್ವಿನಿ ಗೌಡ ಪರ ಬ್ಯಾಟಿಂಗ್ ಹಾಗೂ ಕಿಚ್ಚ ಸುದೀಪ್ ಭೇಟಿ ಕುರಿತಾದ ವಿವಾದಕ್ಕೆ ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಟಿ.ಎ. ನಾರಾಯಣ ಗೌಡ ಅವರು ಖಡಕ್‌ ತಿರುಗೇಟು ನೀಡಿದ್ದಾರೆ. 

ಬೆಂಗಳೂರು (ಜ.15): ಬಿಗ್ ಬಾಸ್ ರಿಯಾಲಿಟಿ ಶೋ ಹಿನ್ನೆಲೆಯಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ವ್ಯಕ್ತವಾಗುತ್ತಿರುವ ಟೀಕೆ ಹಾಗೂ ವೈಯಕ್ತಿಕ ನಿಂದನೆಗಳ ವಿರುದ್ಧ ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷ ಟಿ.ಎ. ನಾರಾಯಣಗೌಡ ಅವರು ಗುಡುಗಿದ್ದಾರೆ. "ಯಾರನ್ನೋ ಹೊಗಳುವ ನೆಪದಲ್ಲಿ ಕನ್ನಡಿಗರನ್ನೇ ಅವಹೇಳನ ಮಾಡುವುದು ಸಂವಿಧಾನ ಕೊಟ್ಟ ಹಕ್ಕಲ್ಲ" ಎಂದು ಅವರು ಎಚ್ಚರಿಸಿದ್ದಾರೆ.

ಸಂಕ್ರಾಂತಿ ಹಬ್ಬದ ಶುಭಾಶಯ ಕೋರುತ್ತಲೇ ಮಾತನಾಡಿರುವ ಅವರು, "ಬಿಗ್ ಬಾಸ್ ಎಂಬುದು ಕೇವಲ ಒಂದು ಮನರಂಜನಾ ವೇದಿಕೆ. ಅಲ್ಲಿಗೆ ಹೋಗುವವರೆಲ್ಲರೂ ನಮ್ಮ ನಾಡಿನ ಪ್ರತಿಭೆಗಳೇ. ಪ್ರಜಾಪ್ರಭುತ್ವದಲ್ಲಿ ಒಬ್ಬರನ್ನು ಬೆಂಬಲಿಸುವ ಹಕ್ಕು ಎಲ್ಲರಿಗೂ ಇದೆ, ಆದರೆ ಆ ನೆಪದಲ್ಲಿ ಇನ್ನೊಬ್ಬರನ್ನು ತುಳಿಯುವುದು ಅಥವಾ ಅವಾಚ್ಯ ಶಬ್ದಗಳಿಂದ ನಿಂದಿಸುವುದು ಸರಿಯಲ್ಲ. ಇಂತಹ ಪ್ರವೃತ್ತಿಗೆ ಕಾನೂನಿನ ಅಡಿಯಲ್ಲಿ ಅಂತ್ಯ ಹಾಡಲಾಗುವುದು" ಎಂದಿದ್ದಾರೆ.

ನನ್ನ ಹೋರಾಟದ ಹಾದಿ ನಿಮಗೆ ಗೊತ್ತಿಲ್ಲ!

ತಮ್ಮ ವಿರುದ್ಧ ಮತ್ತು ಕರವೇ ವಿರುದ್ಧ ಮಾತನಾಡುತ್ತಿರುವವರಿಗೆ ತಿರುಗೇಟು ನೀಡಿದ ಅವರು, "ನಾನು ಕಳೆದ 40-42 ವರ್ಷಗಳಿಂದ ಕನ್ನಡ, ಕನ್ನಡಿಗ ಮತ್ತು ಕರ್ನಾಟಕಕ್ಕಾಗಿ ಹೋರಾಟ ಮಾಡುತ್ತಿದ್ದೇನೆ. ನನ್ನ ಹೋರಾಟದ ಅನುಭವ (ಸರ್ವಿಸ್) ಇವತ್ತಿನ ಹಲವು ಟೀಕಾಕಾರರ ವಯಸ್ಸಿನಷ್ಟಿದೆ. ಇಂತಹ ನಾಯಿ-ನರಿಗಳ ಟೀಕೆಗೆ ನಾನು ಎಂದೂ ಹೆದರಿಲ್ಲ, ಹೆದರುವುದೂ ಇಲ್ಲ" ಎಂದು ಕಟುವಾಗಿ ನುಡಿದಿದ್ದಾರೆ.

ವಿರೋಧಿಗಳ 'ಕ್ರಿಮಿನಲ್' ಹಿನ್ನೆಲೆ ಬಯಲು

ಕನ್ನಡದ ಪರವಾಗಿ ಹೋರಾಡುವವರನ್ನೇ ಗುರಿಯಾಗಿಸಿಕೊಂಡು ಟೀಕಿಸುವವರನ್ನು 'ವಂಚಕರು' ಎಂದು ಕರೆದಿರುವ ಅವರು, "ಇತರ ಭಾಷಿಕರನ್ನೋ ಅಥವಾ ಹೊರರಾಜ್ಯದವರನ್ನೋ ಪ್ರಶ್ನಿಸುವ ಧೈರ್ಯ ಇವರಿಗಿಲ್ಲ. ನಮ್ಮ ನಾಡು-ನುಡಿ ಎನ್ನುವವರನ್ನೇ ಇವರು ಟೀಕಿಸುತ್ತಾರೆ. ಇವರ ಹಿನ್ನೆಲೆ ಗಮನಿಸಿದರೆ ಅನೇಕ ಪೊಲೀಸ್ ಠಾಣೆಗಳಲ್ಲಿ ಕ್ರಿಮಿನಲ್ ಮೊಕದ್ದಮೆಗಳಿವೆ. ಮೋಸ, ವಂಚನೆ ಮಾಡಿ ಸಿಕ್ಕಿಬಿದ್ದಿರುವ ಇಂತಹ ವ್ಯಕ್ತಿಗಳು ಸಮಾಜಕ್ಕೆ ಯಾವ ಸಂದೇಶ ಕೊಡಲು ಸಾಧ್ಯ?" ಎಂದು ಪ್ರಶ್ನಿಸಿದ್ದಾರೆ.

ಕಾನೂನು ಮತ್ತು ಪೂಜೆ ಎರಡೂ ಗೊತ್ತು!

"ಯಾವ ದೇವರಿಗೆ ಯಾವ ಪೂಜೆ ಮಾಡಿದರೆ ತೃಪ್ತಿಯಾಗುತ್ತದೆಯೋ ಅಂತಹ ಪೂಜೆ ಮಾಡುವುದು ನಮಗೆ ಚೆನ್ನಾಗಿ ಗೊತ್ತು. ಕಾನೂನಿನ ಮೂಲಕ ಉತ್ತರ ನೀಡಲು ನಾವು ಸಿದ್ಧರಿದ್ದೇವೆ. ಅದನ್ನು ಮೀರಿ ವರ್ತಿಸುವವರಿಗೆ ಯಾವ ರೀತಿಯ ಉತ್ತರ ನೀಡಬೇಕೆಂಬುದೂ ನಮಗೆ ತಿಳಿದಿದೆ" ಎಂದು ಪರೋಕ್ಷವಾಗಿ ಎಚ್ಚರಿಕೆ ನೀಡಿದ್ದಾರೆ.

ಏನಿದು ಘಟನೆ?

ಬಿಗ್‌ಬಾಸ್‌ ಫೈನಲ್‌ ಹಂತಕ್ಕೆ ಬಂದಿದೆ. ಇದರ ನಡುವೆ ಬಿಗ್‌ಬಾಸ್‌ ಮನೆಯಲ್ಲಿ ಸ್ಪರ್ಧಿಗಳಿಗೆ ಅವರ ಮೂರು ವಿಶ್‌ಗಳನ್ನು ಬಿಗ್‌ಬಾಸ್‌ ಕೇಳಿದ್ದರು. ಈ ವೇಳೆ ಕನ್ನಡ ಪರ ಹೋರಾಟಗಾರ್ತಿಯಾಗಿ ಗುರುತಿಸಿಕೊಂಡಿರುವ ಅಶ್ವಿನಿ ಗೌಡ, ಕರವೇ ಅಧ್ಯಕ್ಷ ನಾರಾಯಣ ಗೌಡ ಅವರು ಬಿಗ್‌ಬಾಸ್‌ ಮನೆಗೆ ಬರಬೇಕು. ಅವರ ಕಾಲಿಗೆ ಬಿದ್ದು ಅಶೀರ್ವಾದ ಪಡೆಯಬೇಕು ಎಂದಿದ್ದರು. ಅಶ್ವಿನಿ ಗೌಡ ಹೀಗೆ ಹೇಳಿದ ಮರುದಿನವೇ ನಾರಾಯಣ ಗೌಡ ಅವರು ಕಿಚ್ಚ ಸುದೀಪ್‌ ಅವರನ್ನು ಭೇಟಿಯಾಗಿದ್ದು ಭಾರೀ ವಿವಾದಕ್ಕೆ ಕಾರಣವಾಗಿತ್ತು. ಇದು ಅಶ್ವಿನಿ ಗೌಡ ಅವರನ್ನು ಗೆಲ್ಲಿಸಲು ಮಾಡಿರುವ ತಂತ್ರ ಎಂದು ಟೀಕೆ ಮಾಡಲಾಗಿತ್ತು. ನಾರಾಯಣ ಗೌಡ ಅವರು ಅಶ್ವಿನಿ ಗೌಡ ಅವರನ್ನು ಗೆಲ್ಲಿಸಲು 25 ಲಕ್ಷ ಆಫರ್‌ ಮಾಡಿದ್ದಾರೆ ಅನ್ನೋ ಸುದ್ದಿಗಳು ವೈರಲ್‌ ಆಗಿದ್ದವು. ಟೀಕೆಗಳು ಹೆಚ್ಚಾದ ಹಿನ್ನಲೆಯಲ್ಲಿ ನಾರಾಯಣ ಗೌಡ ಈ ಪ್ರತಿಕ್ರಿಯೆ ನೀಡಿದ್ದಾರೆ.

View post on Instagram