Hassan: ಕಾಂಪೌಂಡ್ ತೆರವು ಪ್ರಕರಣ: ಪುಷ್ಪಾ ಅರುಣ್‌ಕುಮಾರ್‌ಗೆ ಸವಾಲು ಹಾಕಿದ ದೇವರಾಜು
ವಿವಾದಿತ ನಿವೇಶನದ ಜಿಪಿಎ ಹೊಂದಿರುವ ದೇವರಾಜು, ನಟ ಯಶ್ ತಾಯಿ ಪುಷ್ಪಾ ಅವರಿಗೆ ಕಾನೂನುಬದ್ಧ ದಾಖಲೆಗಳನ್ನು ಬಹಿರಂಗಪಡಿಸುವಂತೆ ಸವಾಲು ಹಾಕಿದ್ದಾರೆ. ನ್ಯಾಯಾಲಯದ ಆದೇಶದಂತೆ ಕಾಂಪೌಂಡ್ ತೆರವುಗೊಳಿಸಲಾಗಿದೆ ಎಂದು ಹೇಳಿದ ಅವರು, ಪುಷ್ಪಾ ಅವರು ಸುಳ್ಳು ಆರೋಪಗಳನ್ನು ಮಾಡುತ್ತಿದ್ದಾರೆ ಎಂದಿದ್ದಾರೆ.

ಪುಷ್ಪಾ ಅರುಣ್‌ಕುಮಾರ್‌ಗೆ ಸವಾಲು
ನಾನು ಕೂಡ ನಟ ಯಶ್ ಅವರ ಅಭಿಮಾನಿ. ಆದರೆ ಯಶ್ ತಾಯಿ ಪುಷ್ಪ ಅವರ ಬಳಿ ನಿವೇಶನಕ್ಕೆ ಸಂಬಂಧಿಸಿದಂತೆ ಕಾನೂನು ಬದ್ಧ ದಾಖಲೆಗಳಿದ್ದರೆ ಅವುಗಳನ್ನು ಕೂಡಲೇ ಬಹಿರಂಗಪಡಿಸಲಿ. ಅದುಬಿಟ್ಟು ಇಲ್ಲಸಲ್ಲದ ಆರೋಪ ಮಾಡಬಾರದು. ಬೇಕಾದರೆ ಈ ಬಗ್ಗೆ ಧರ್ಮಸ್ಥಳದ ಮಂಜುನಾಥ ಸ್ವಾಮಿ ಆಣೆ ಮಾಡಲು ಸಿದ್ದರಿದ್ದೇವೆ ಎಂದು ನಿವೇಶನದ ಜಿಪಿಎ ಹೊಂದಿರುವ ದೇವರಾಜು ಸವಾಲು ಹಾಕಿದ್ದಾರೆ.
ಸಾಮಾನ್ಯ ಅಧಿಕಾರ ಪತ್ರ
ಪತ್ರಿಕಾಗೋಷ್ಠಿಯಲ್ಲಿ ಮಂಗಳವಾರ ಮಾತನಾಡಿ, ವಿವಾದಿತ ನಿವೇಶನವು 1965ರಿಂದಲೂ ಮೂಲ ಮಾಲೀಕರಾಗಿರುವ ಕರೀಗೌಡ ಸಿದ್ದೇಗೌಡ ಎಂಬುವರು 5 ಗುಂಟೆ ಜಾಗವನ್ನು ಇಬ್ಬರಿಗೆ ಮಾರಾಟ ಮಾಡುತ್ತಾರೆ. ಒಬ್ಬರು ರಾಮಕೃಷ್ಣ, ಮತ್ತೊಬ್ಬರು ನಮ್ಮ ಮಾಲೀಕರಾದ ಲಕ್ಷ್ಮಮ್ಮ. ಹಾಗಾಗಿ ಅವರೇ ನನಗೆ ಸಾಮಾನ್ಯ ಅಧಿಕಾರ ಪತ್ರ (ಜಿಪಿಎ) ಬರೆದುಕೊಟ್ಟಿದ್ದಾರೆ ಎಂದು ತಿಳಿಸಿದರು.
ನಿಯಮ ಉಲ್ಲಂಘಿಸಿ ಕಾಂಪೌಂಡ್ ನಿರ್ಮಾಣ
ಈ ಜಿಪಿಎಗೆ ಲಕ್ಷ್ಮಮ್ಮ ಅವರ ಮಕ್ಕಳ ಸಹಿ ಸಹ ಇದ್ದು, ಪ್ರಕ್ರಿಯೆ ಸಂಪೂರ್ಣ ಕಾನೂನುಬದ್ಧವಾಗಿದೆ. 2025ರ ನ.11 ರಂದು ನಿವೇಶನದಲ್ಲಿ ಕಾಂಪೌಂಡ್ ನಿರ್ಮಾಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದಿಂದ ತಡೆಯಾಜ್ಞೆ ತರಲಾಗಿತ್ತು. ಆದರೂ ನಿಯಮ ಉಲ್ಲಂಘಿಸಿ ಕಾಂಪೌಂಡ್ ನಿರ್ಮಿಸಲಾಗಿದೆ. ಈ ಹಿನ್ನೆಲೆಯಲ್ಲಿ ಇತ್ತೀಚೆಗೆ ನ್ಯಾಯಾಲಯದ ಆದೇಶದಂತೆ ಕಾಂಪೌಂಡ್ ತೆರವುಗೊಳಿಸಲಾಗಿದೆ ಎಂದು ದೇವರಾಜು ಹೇಳಿದರು.
ತೆರಿಗೆ ಅಧಿಕಾರಿ ಕುಮ್ಮಕ್ಕು
ವಿವಾದಕ್ಕೆ ಮತ್ತಷ್ಟು ಗೊಂದಲ ಉಂಟಾಗಲು ತೆರಿಗೆ ಇಲಾಖೆಯಲ್ಲಿ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿರುವ ನಟರಾಜ ಅವರು ಯಶ್ ಅವರ ತಾಯಿಗೆ ಕುಮಕ್ಕು ನೀಡುತ್ತಿರುವುದೇ ಕಾರಣ ಎಂದು ಆರೋಪಿಸಿದರು. ಯಶ್ ಅವರ ತಾಯಿ ನಿರ್ಮಿಸಿರುವ ಮನೆ ಕೂಡ ಕಾಲುದಾರಿಯನ್ನು ಒತ್ತುವರಿ ಮಾಡಿಕೊಂಡು ನಿರ್ಮಿಸಲಾಗಿದೆ.
ಇದಕ್ಕೆ ಸಂಬಂಧಿಸಿದ ದಾಖಲೆಗಳು ನಮ್ಮ ಬಳಿ ಇವೆ. ನನಗೆ ಜಿಪಿಎ ನೀಡಿರುವ 95 ವರ್ಷದ ಲಕ್ಷ್ಮಮ್ಮ ಅವರು ಇಂದಿಗೂ ಬದುಕಿದ್ದು, ಮೈಸೂರಿನಲ್ಲಿ ವಾಸವಾಗಿದ್ದಾರೆ. ಬೇಕಿದ್ದರೆ ಯಾರೂ ಬೇಕಾದರೂ ಅವರನ್ನು ಪ್ರಶ್ನಿಸಬಹುದು.
ನಮ್ಮ ವಿರುದ್ಧ ಸುಳ್ಳು ಆರೋಪ
ಈ ಪ್ರಕರಣ ಸಂಬಂಧ ನಮ್ಮ ವಿರುದ್ಧ ಸುಳ್ಳು ಆರೋಪಗಳೊಂದಿಗೆ ಎಫ್‌ಐಆರ್ ದಾಖಲಿಸಲಾಗಿದೆ. ಪ್ರತಿಯಾಗಿ ಯಶ್ ಅವರ ತಾಯಿ ಪುಷ್ಪ ಅವರಿಗೆ ನಿವೇಶನ ಮಾರಾಟ ಮಾಡಿರುವ ದುರ್ಗಾಪ್ರಸಾದ್ ಹಾಗೂ ನಟರಾಜ ವಿರುದ್ಧ ಬಡಾವಣೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗುವುದು ಎಂದು ದೇವರಾಜು ತಿಳಿಸಿದರು.
ದಾಖಲೆಗಳಿಲ್ಲದೆ ಇಲ್ಲಸಲ್ಲದ ಆರೋಪ
ಲಕ್ಷ್ಮಮ್ಮ ಅವರೇ ಈ ನಿವೇಶನದ ಮೂಲ ಮಾಲೀಕರಾಗಿದ್ದು, ಯಶ್ ಅವರ ತಾಯಿ ವೀಣಾ ಎಂಬುವರಿಂದ ನಿವೇಶನ ರಿಜಿಸ್ಟರ್ ಮಾಡಿಕೊಂಡಿದ್ದಾರೆ. ಆದರೆ ನಿವೇಶನ ಇನ್ನೂ ಲಕ್ಷ್ಮಮ್ಮ ಅವರ ಹೆಸರಿನಲ್ಲಿಯೇ ಉಳಿದಿದ್ದು, ಅನ್ಯಸಂಕ್ರಮಣ ಸೇರಿದಂತೆ ಎಲ್ಲಾ ಅಗತ್ಯ ಕಾನೂನು ದಾಖಲೆಗಳು ನಮ್ಮ ವಶದಲ್ಲಿವೆ. ಪುಷ್ಪ ಅವರ ಬಳಿ ನಿವೇಶನಕ್ಕೆ ಸಂಬಂಧಿಸಿದಂತೆ ಕಾನೂನು ಬದ್ಧ ದಾಖಲೆಗಳಿದ್ದರೆ ಅವುಗಳನ್ನು ಬಹಿರಂಗವಾಗಿ ತೋರಿಸಬೇಕು.
ದಾಖಲೆಗಳಿಲ್ಲದೆ ಇಲ್ಲಸಲ್ಲದ ಆರೋಪ ಮಾಡಿ ಪೊಲೀಸ್ ಠಾಣೆಗೆ ದೂರು ನೀಡುವುದು ಸರಿಯಲ್ಲ ಎಂದು ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ದೇವರಾಜೇಗೌಡ ಸಂಬಂಧಿಕಾರ ದಿಲೀಪ್, ಕುಮಾರ್, ಸುಶೀಲೇಗೌಡ, ಶೇಖರ್ ಇತರರು ಇದ್ದರು.

