- Home
- Karnataka Districts
- ಗದಗ: ಜಮೀನಿನಿಂದ ಬೆಳ್ಳಂಬೆಳಗ್ಗೆ ಬೆಳೆ ಕಳ್ಳತನ ಮಾಡಿ ಸಿಕ್ಕಿಬಿದ್ದ ಆಸಾಮಿಗೆ ಕಡಲೆ ಹಾರ ಹಾಕಿ ಶಾಸ್ತಿ!
ಗದಗ: ಜಮೀನಿನಿಂದ ಬೆಳ್ಳಂಬೆಳಗ್ಗೆ ಬೆಳೆ ಕಳ್ಳತನ ಮಾಡಿ ಸಿಕ್ಕಿಬಿದ್ದ ಆಸಾಮಿಗೆ ಕಡಲೆ ಹಾರ ಹಾಕಿ ಶಾಸ್ತಿ!
ಗದಗ ನಗರದ ಹೊರವಲಯದಲ್ಲಿ ರೈತರ ಜಮೀನಿನಲ್ಲಿ ಕಡಲೆಕಾಯಿ ಕಳ್ಳತನ ಮಾಡಲು ಯತ್ನಿಸಿದ ವ್ಯಕ್ತಿಯನ್ನು ಸಾರ್ವಜನಿಕರು ಹಿಡಿದು, ರೈತರು ಆತನಿಗೆ ಕಡಲೆಕಾಯಿ ಹಾರ ಹಾಕಿ ಕಂಬಕ್ಕೆ ಕಟ್ಟಿಹಾಕಿ ಶಿಕ್ಷೆ ನೀಡಿದ್ದಾರೆ. ಕುಡಿಯಲು ಹಣವಿಲ್ಲದ ಕಾರಣ ಕೃತ್ಯ ಎಸಗಿದ್ದಾಗಿ ಒಪ್ಪಿಕೊಂಡ ಕಳ್ಳತನ

ಕಡಲೆಕಾಯಿ ಕಳ್ಳತನ
ಗದಗ: ರೈತರ ಜಮೀನಿನಲ್ಲಿ ಕಡಲೆಕಾಯಿ ಕಳ್ಳತನಕ್ಕೆ ಯತ್ನಿಸಿ ಸಿಕ್ಕಿಬಿದ್ದ ವ್ಯಕ್ತಿಗೆ ರೈತರು ಸಾರ್ವಜನಿಕವಾಗಿ ಶಾಸ್ತಿ ನೀಡಿದ ಘಟನೆ ಗದಗ ನಗರ ಹೊರವಲಯದಲ್ಲಿ ಭಾನುವಾರ ಬೆಳಗಿನ ಜಾವ ನಡೆದಿದೆ. ಗದಗದ ಸರ್ವಜ್ಞ ಸರ್ಕಲ್ ಸಮೀಪ ಈ ಘಟನೆ ನಡೆದಿದ್ದು, ವಾಯುವಿಹಾರಕ್ಕೆ ಬಂದಿದ್ದ ಸಾರ್ವಜನಿಕರ ಕೈಗೆ ಕಳ್ಳ ಸಿಕ್ಕಿಬಿದ್ದಿದ್ದಾನೆ.
ವಾಯುವಿಹಾರಕ್ಕೆ ಬಂದ ಜನರ ಬಳಿ ಸಿಕ್ಕಿಬಿದ್ದ
ಪೊಲೀಸರ ಹಾಗೂ ಸ್ಥಳೀಯರ ಮಾಹಿತಿಯಂತೆ, ಬೆಳಗಿನ ಜಾವವೇ ರೈತರ ಜಮೀನಿಗೆ ನುಗ್ಗಿದ ಖದೀಮನು ಕಡಲೆ ಗಿಡಗಳನ್ನು ಕಿತ್ತುಕೊಂಡು ಎರಡು ಚೀಲದಷ್ಟು ಕಡಲೆಕಾಯಿ ಗಿಡಗಳನ್ನು ದೊಡ್ಡ ಚೀಲದಲ್ಲಿ ತುಂಬಿಕೊಂಡು ಸಾಗಾಟ ಮಾಡುತ್ತಿದ್ದ. ಈ ವೇಳೆ ವಾಯುವಿಹಾರಕ್ಕೆ ಬಂದ ಜನರಿಗೆ ಅನುಮಾನ ಮೂಡಿದ್ದು, ತಕ್ಷಣವೇ ಅವರು ಈ ವಿಷಯವನ್ನು ಜಮೀನಿನ ಮಾಲೀಕರಿಗೆ ತಿಳಿಸಿದ್ದಾರೆ.
ಕಳ್ಳನಿಗೆ ಧರ್ಮದೇಟು
ಮಾಹಿತಿ ಪಡೆದ ರೈತರು ಸ್ಥಳಕ್ಕೆ ಧಾವಿಸಿ ಕಳ್ಳನನ್ನು ಹಿಡಿದು ಧರ್ಮದೇಟು ನೀಡಿದ್ದಾರೆ. ಬಳಿಕ ಆತನಿಗೆ ಕಡಲೆಕಾಯಿ ಹಾರ ಹಾಕಿ, ಸರ್ವಜ್ಞ ಸರ್ಕಲ್ ಬಳಿಯ ಕಂಬಕ್ಕೆ ಕಟ್ಟಿಹಾಕಿ ಶಾಸ್ತಿ ಮಾಡಿರುವುದು ಕಂಡುಬಂದಿತು. ಈ ದೃಶ್ಯ ಕೆಲಕಾಲ ಸಾರ್ವಜನಿಕರಲ್ಲಿ ಕುತೂಹಲ ಹಾಗೂ ಗೊಂದಲಕ್ಕೆ ಕಾರಣವಾಯಿತು.
ಕುಡಿಯಲು ಹಣ ಇರಲಿಲ್ಲ, ಅದಕ್ಕಾಗಿ ಕಳ್ಳತನ
ನಂತರ ರೈತರು ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಆಗಮಿಸಿದ ಪೊಲೀಸರು ಕಳ್ಳನನ್ನು ವಶಕ್ಕೆ ಪಡೆದಿದ್ದಾರೆ. ವಿಚಾರಣೆ ವೇಳೆ, “ಕುಡಿಯಲು ಹಣ ಇರಲಿಲ್ಲ, ಅದಕ್ಕಾಗಿ ಕಳ್ಳತನ ಮಾಡಿದೆ” ಎಂದು ಕಳ್ಳ ರೈತರ ಎದುರು ತಪ್ಪೊಪ್ಪಿಕೊಂಡಿದ್ದಾನೆ. ಬಂಧಿತನನ್ನು ಚಿದಾನಂದ ಎಂದು ಗುರುತಿಸಲಾಗಿದ್ದು, ಆತ ಗಂಗಾವತಿಯಿಂದ ರೈಲ್ವೆ ಮೂಲಕ ಗದಗಕ್ಕೆ ಬಂದು ಕಳ್ಳತನ ನಡೆಸಿದ್ದಾನೆ ಎಂಬುದು ತಿಳಿದುಬಂದಿದೆ.
ರೈತರ ಶ್ರಮದ ಬೆಳೆ ಕಳ್ಳತನ
ರೈತರ ಶ್ರಮದ ಬೆಳೆಗಳನ್ನು ಕದ್ದ ಘಟನೆಗೆ ಸ್ಥಳೀಯ ರೈತರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಇಂತಹ ಕಳ್ಳತನಗಳು ಮರುಕಳಿಸದಂತೆ ಕಠಿಣ ಕ್ರಮ ಕೈಗೊಳ್ಳಬೇಕೆಂದು ಪೊಲೀಸರನ್ನು ಆಗ್ರಹಿಸಿದ್ದಾರೆ. ಈ ಘಟನೆ ಗದಗ ನಗರ ಹಾಗೂ ಸುತ್ತಮುತ್ತಲ ಗ್ರಾಮಗಳಲ್ಲಿ ಚರ್ಚೆಗೆ ಕಾರಣವಾಗಿದ್ದು, ರೈತರ ಬೆಳೆ ರಕ್ಷಣೆಗೆ ಹೆಚ್ಚಿನ ಭದ್ರತೆ ಅಗತ್ಯವಿದೆ ಎಂಬ ಅಭಿಪ್ರಾಯ ವ್ಯಕ್ತವಾಗುತ್ತಿದೆ.

