- Home
- Karnataka Districts
- ಲಕ್ಕುಂಡಿಯಲ್ಲಿ ಅಗೆದಷ್ಟು ಇತಿಹಾಸ ಬಯಲು; ₹80 ಲಕ್ಷದಿಂದ ₹1 ಕೋಟಿಯವರೆಗೆ ಏರಿಕೆಯಾದ ಭೂಮಿ ಬೆಲೆ
ಲಕ್ಕುಂಡಿಯಲ್ಲಿ ಅಗೆದಷ್ಟು ಇತಿಹಾಸ ಬಯಲು; ₹80 ಲಕ್ಷದಿಂದ ₹1 ಕೋಟಿಯವರೆಗೆ ಏರಿಕೆಯಾದ ಭೂಮಿ ಬೆಲೆ
ಲಕ್ಕುಂಡಿಯಲ್ಲಿ ಪುರಾತತ್ವ ಇಲಾಖೆ ನಡೆಸುತ್ತಿರುವ ಉತ್ಖನನದಲ್ಲಿ ಪ್ರಾಚೀನ ವಸ್ತುಗಳು ಪತ್ತೆಯಾಗುತ್ತಿವೆ. ಈ ನಿಧಿ ಶೋಧದ ಸುದ್ದಿಯಿಂದಾಗಿ ಗ್ರಾಮದ ಜಮೀನಿನ ಬೆಲೆ ಗಗನಕ್ಕೇರಿದ್ದು, ಹೂಡಿಕೆದಾರರು ಆಸಕ್ತಿ ತೋರುತ್ತಿದ್ದಾರೆ. ಪತ್ತೆಯಾದ ವಸ್ತುಗಳು ಕಲ್ಯಾಣ ಚಾಲುಕ್ಯರ ಕಾಲದ್ದೇ ಎಂಬ ಕುತೂಹಲ ಹೆಚ್ಚಾಗಿದೆ.

ಐತಿಹಾಸಿಕ ಲಕ್ಕುಂಡಿ
ಐತಿಹಾಸಿಕ ಲಕ್ಕುಂಡಿಯಲ್ಲಿ ಪುರಾತತ್ವ ಇಲಾಖೆ ವತಿಯಿಂದ ಉತ್ಖನನ ಕಾರ್ಯ ಮುಂದುವರೆದಿದ್ದು, ಭೂಮಿಯನ್ನು ಅಗೆದಂತೆಲ್ಲ ಪ್ರಾಚಿನ ವಸ್ತುಗಳು ಪತ್ತೆಯಾಗುತ್ತಿವೆ. ಅಲ್ಲದೇ ಲಕ್ಕುಂಡಿಯಲ್ಲಿ ನಿಧಿ ಸಿಕ್ಕ ಸುದ್ದಿ ಹರಡುತ್ತಿದ್ದಂತೆಯೇ ಇಡೀ ಗ್ರಾಮದ ಭೂಮಿಯ ಬೆಲೆ ಗಗನಕ್ಕೇರಿದೆ.
ಜಮೀನಿನ ಬೆಲೆ ಏರಿಕೆ
ಕಳೆದ 8 ದಿನದಿಂದ ನಡೆಯುತ್ತಿರುವ ಉತ್ಖನನ ಕಾರ್ಯದಲ್ಲಿ ಹಲವು ಕಾರ್ಮಿಕರು ಭಾಗಿಯಾಗಿದ್ದಾರೆ. ಈ ಹಿಂದೆ ಲಕ್ಕುಂಡಿ ಗ್ರಾಮದಲ್ಲಿ ಎಕರೆಗೆ 30 ರಿಂದ 40 ಲಕ್ಷ ರು.ನಷ್ಟಿದ್ದ ಜಮೀನಿನ ಬೆಲೆ ನಿಧಿ ಪತ್ತೆಯಾದ ಬೆನ್ನಲ್ಲೇ ಏಕಾಏಕಿ ₹80 ಲಕ್ಷದಿಂದ ₹1 ಕೋಟಿಯವರೆಗೆ ಏರಿಕೆಯಾಗಿದೆ ಎನ್ನುತ್ತಾರೆ ರಿಯಲ್ ಎಸ್ಟೇಟ್ ಉದ್ಯಮಿಗಳು.
ಲಕ್ಕುಂಡಿಯತ್ತ ಉದ್ಯಮಿಗಳ ಆಗಮನ
ಲಕ್ಕುಂಡಿ ವಿಶ್ವ ಪಾರಂಪರಿಕ ಪಟ್ಟಿಗೆ ಸೇರ್ಪಡೆಯಾಗುವ ಸಾಧ್ಯತೆ ದಟ್ಟವಾಗಿರುವುದರಿಂದ ಹೂಡಿಕೆದಾರರು ಆಸಕ್ತಿ ತೋರುತ್ತಿದ್ದು, ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿರುವ ಜಮೀನುಗಳಿಗಾಗಿ ಗದಗ, ಹುಬ್ಬಳ್ಳಿ ಸೇರಿದಂತೆ ಹೊರ ಜಿಲ್ಲೆಗಳ ಉದ್ಯಮಿಗಳು ಈಗಿನಿಂದಲೇ ಮುಗಿಬೀಳುತ್ತಿದ್ದಾರೆ.
ರಹಸ್ಯ
ಉತ್ಖನನ ಜಾಗದಲ್ಲಿ ಲೋಹದ ಉಂಡೆಯಾಕಾರದ ವಸ್ತು ಪತ್ತೆಯಾಗಿದ್ದು ಎಲ್ಲರ ಕುತೂಹಲಕ್ಕೆ ಕಾರಣವಾಗಿದೆ. ಅಂದಾಜು ಅರ್ಧ ಕೇಜಿಯಷ್ಟು ತೂಕ ಹೊಂದಿರುವ ಲೋಹದ ವಸ್ತುವಾಗಿದ್ದು, ಇದನ್ನು ಸಂಗ್ರಹಿಸಿ ಪರಿಶೀಲನೆ ರವಾನಿಸಲಾಗಿದೆ. ಆಳಕ್ಕೆ ಇಳಿದಂತೆಲ್ಲ ಈ ಮಣ್ಣಿನಡಿ ಇನ್ನು ಯಾವುದೋ ದೊಡ್ಡ ರಹಸ್ಯ ಅಡಗಿದೆ ಎಂಬ ಕುತೂಹಲ ಹೆಚ್ಚುತ್ತಿದೆ.
ವಿದ್ಯಾರ್ಥಿಗಳ ಭೇಟಿ:
ಉತ್ಖನನ ನಡೆಯುವ ಜಾಗಕ್ಕೆ ಧಾರವಾಡ ಕೃಷಿ ವಿಶ್ವವಿದ್ಯಾಲಯ ವಿದ್ಯಾರ್ಥಿಗಳ ಭೇಟಿ ನೀಡಿ, ಉತ್ಖನನ ನಡೆಯು ಸ್ಥಳ ವೀಕ್ಷಿಸಿ, ಉತ್ಖನನ ನಿಯಮಗಳು ಅವುಗಳನ್ನು ಸಂಗ್ರಹಿಸುವ ರೀತಿ ಸೇರಿದಂತೆ ವಿವಿಧ ವಿಷಯ ಕುರಿತು ಮಾಹಿತಿ ಪಡೆದುಕೊಂಡರು.
ಯುವಕನ ಪ್ರಾಮಾಣಿಕತೆಗೆ ಫ್ರಾನ್ಸ್ ಪ್ರಜೆಗಳ ಮೆಚ್ಚುಗೆ
ಅರ್ಧ ಕೇಜಿ ಚಿನ್ನ ಸಿಕ್ಕರೂ ಅದನ್ನು ಆಸೆ ಪಡದೇ ಇಲಾಖೆಗೆ ಒಪ್ಪಿಸಿದ ಯುವಕ ಪ್ರಜ್ವಲ್ ರಿತ್ತಿ ಅವರ ಪ್ರಾಮಾಣಿಕತೆ ವಿದೇಶಿಗರಿಗೂ ಮಾದರಿಯಾಗಿದೆ. ಫ್ರಾನ್ಸ್ ದೇಶದ 15 ಪ್ರವಾಸಿಗರ ತಂಡವು ಶುಕ್ರವಾರ ಉತ್ಖನನ ನಡೆಯುತ್ತಿರುವ ಸ್ಥಳಕ್ಕೆ ಭೇಟಿ ನೀಡಿತು. ಆಗ ಪ್ರಜ್ವಲ್ ಅವರ ಪ್ರಾಮಾಣಿಕತೆಯನ್ನು ಮಿರಾಕಲ್ ಎಂದು ಬಣ್ಣಿಸಿದ ವಿದೇಶಿ ಪ್ರವಾಸಿಗರು, ಐತಿಹಾಸಿಕ ತಾಣದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಇದನ್ನೂ ಓದಿ: ಕರ್ನಾಟಕಕ್ಕೆ ಲಕ್ಕಿಯಾದ ಲಕ್ಕುಂಡಿ, 7ನೇ ದಿನ ಉತ್ಖನನದಲ್ಲಿ ಲೋಹದ ಹಣತೆ,ಮೂಳೆ ಪತ್ತೆ
ಕಲ್ಯಾಣ ಚಾಲುಕ್ಯರ ಕಾಲದ್ದೇ?
ಪುರಾತತ್ವ ಇಲಾಖೆಯ ತಜ್ಞರು ಮಣ್ಣಿನ ಬಿಲ್ಲೆಗಳು ಮತ್ತು ಮೂಳೆಗಳನ್ನು ಹೆಚ್ಚಿನ ಸಂಶೋಧನೆಗೆ ಒಳಪಡಿಸಲಿದ್ದಾರೆ. ಇವುಗಳು ಕಲ್ಯಾಣ ಚಾಲುಕ್ಯರ ಕಾಲದ್ದೇ ಅಥವಾ ಅದಕ್ಕಿಂತಲೂ ಪುರಾತನವಾದುದ್ದೇ ಎಂಬುದು ವರದಿಯ ನಂತರ ತಿಳಿಯಲಿದೆ. ಒಟ್ಟಿನಲ್ಲಿ ಲಕ್ಕುಂಡಿಯ ನೆಲದಲ್ಲಿ ಈಗ ಚರಿತ್ರೆ ಮತ್ತು ಭವಿಷ್ಯ ಎರಡೂ ಮಿನುಗುತ್ತಿವೆ ಎಂದು ಲಕ್ಕುಂಡಿ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಸಿದ್ಧಲಿಂಗೇಶ್ವರ ಪಾಟೀಲ ಹೇಳಿದ್ದಾರೆ.
ಇದನ್ನೂ ಓದಿ: ಲಕ್ಕುಂಡಿ ಉತ್ಖನನ ಕೆಲಸಕ್ಕೆ ಅಡ್ಡಪಡಿಸಿದ ಕಾರ್ಮಿಕ ಮುಖಂಡ ಅಶ್ವಥ್: ಸ್ಥಳೀಯರ ತರಾಟೆ, ಎತ್ತಾಕೊಂಡೋದ ಪೊಲೀಸರು!

