ದೇವಸ್ಥಾನದ ಹಿಂಭಾಗ ಐದು ಹೆಡೆ ನಾಗಮೂರ್ತಿ, ಶಿವಲಿಂಗ, ಶಾಸನ, ಸರ್ಪ ರೂಪದ ಶಿಲ್ಪ ಪತ್ತೆ
ಬೀದರ್ ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ನಾರಾಯಣಪುರ ಗ್ರಾಮದ ಭವಾನಿ ದೇಗುಲದ ಹಿಂಭಾಗದಲ್ಲಿ ಐದು ಹೆಡೆಯ ನಾಗಮೂರ್ತಿ, ಶಿವಲಿಂಗ, ಶಿಲಾ ಶಾಸನ ಹಾಗೂ ಸರ್ಪ ರೂಪದ ಶಿಲ್ಪ ಪತ್ತೆಯಾಗಿವೆ. ಈ ಹಿಂದೆ ಕೂಡ ಇಲ್ಲಿ ವಿಗ್ರಹಗಳು ಸಿಕ್ಕಿವೆ.

ಐದು ಹೆಡೆ ನಾಗಮೂರ್ತಿ
ಗದಗ ಜಿಲ್ಲೆಯ ಲಕ್ಕುಂಡಿ ಗ್ರಾಮದಲ್ಲಿ ಉತ್ಖನನ ನಡೆಯುತ್ತಿದ್ರೆ, ಬಳ್ಳಾರಿಯ ತೆಕ್ಕಲಕೋಟೆ ಬಳಿ 5 ಸಾವಿರ ವರ್ಷ ಹಿಂದಿನ ಮಾನವನ ಪಳೆಯುಳಿಕೆ ಪತ್ತೆಯಾಗಿದೆ. ಈಗ ಗಡಿಜಿಲ್ಲೆಯಲ್ಲಿ ಐದು ಹೆಡೆ ನಾಗಮೂರ್ತಿ, ಶಿವಲಿಂಗ, ಶಿಲಾ ಶಾಸನ, ಸರ್ಪ ರೂಪದ ಶಿಲ್ಪ ಪತ್ತೆಯಾಗಿದೆ.
ದೇಗುಲದ ಹಿಂಭಾಗದಲ್ಲಿ ವಿಶೇಷ ಅವಶೇಷಗಳು ಪತ್ತೆ
ಬೀದರ್ ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ನಾರಾಯಣಪುರ ಗ್ರಾಮದಲ್ಲಿ ಅಚ್ಚರಿ ಅವಶೇಷಗಳು ಸಿಗಲಾರಂಭಿಸಿವೆ. ನಾರಾಯಣಪುರ ಗ್ರಾಮದ ಭವಾನಿ ದೇಗುಲದ ಹಿಂಭಾಗದಲ್ಲಿ ವಿಶೇಷ ಅವಶೇಷಗಳು ಪತ್ತೆಯಾಗಿವೆ.
ಗ್ರಾಮಸ್ಥರಿಂದ ರಕ್ಷಣೆ
ಭವಾನಿ ದೇವಸ್ಥಾನದ ಹಿಂಭಾಗದಲ್ಲಿ ಅಡುಗೆ ಕಾರ್ಯಕ್ಕಾಗಿ ಜಾಗವನ್ನು ಸ್ವಚ್ಛಗೊಳಿಸಲಾಗುತ್ತಿತ್ತು. ಈ ಸಂದರ್ಭದಲ್ಲಿ ಐದು ಹೆಡೆಯ ನಾಗಮೂರ್ತಿ, ಶಿವಲಿಂಗ, ಶಿಲಾ ಶಾಸನ ಹಾಗೂ ಸರ್ಪ ರೂಪದ ಶಿಲ್ಪ ಪತ್ತೆಯಾಗಿವೆ. ಇದರ ಜೊತೆಯಲ್ಲಿಯೇ ವಿವಿಧ ವಿನ್ಯಾಸದ ಕೆತ್ತನೆಯುಳ್ಳ ಶಿಲೆಗಳು ಲಭ್ಯವಾಗಿವೆ. ಗ್ರಾಮಸ್ಥರು ಎಲ್ಲಾ ಶಿಲೆಗಳನ್ನು ರಕ್ಷಣೆ ಮಾಡಿದ್ದಾರೆ.
ಉತ್ಖನನಕ್ಕೆ ಆಗ್ರಹ
ಈ ಹಿಂದೆ ಸುಮಾರು ಏಳೆಂಟು ವರ್ಷಗಳ ಹಿಂದೆ ನಾರಾಯಣಪುರ ಗ್ರಾಮದ ವ್ಯಾಪ್ತಿಯಲ್ಲಿ ವಿಷ್ಣು ಮತ್ತು ಕಾಳಿಕಾ ದೇವಿಯ ವಿಗ್ರಹಗಳು ಪತ್ತೆಯಾಗಿದ್ದವು. ಇದೀಗ ಮತ್ತೆ ಶಿಲೆಗಳು ಸಿಕ್ಕಿದ್ದು, ಗ್ರಾಮಸ್ಥರಲ್ಲಿ ಅಚ್ಚರಿಯನ್ನುಂಟು ಮಾಡಿದೆ. ಪುರುತಾತ್ವ ಇಲಾಖೆ ಸರಿಯಾಗಿ ಉತ್ಖನನ ನಡೆಸಿದ್ರೆ ಮತ್ತಷ್ಟು ಐತಿಹಾಸಿಕ ಅವಶೇಷಗಳು ಸಿಗುತ್ತವೆ ಎಂದು ಗ್ರಾಮಸ್ಥರು ಹೇಳುತ್ತಾರೆ.
108 ದೇವಸ್ಥಾನಗಳು ಹೊಂದಿರುವ ಗ್ರಾಮ!
ಕಲ್ಯಾಣಿ ಚಾಳುಕ್ಯರ ನಿರ್ಮಿಸಿದ ಐತಿಹಾಸಿಕ ಶಿವನ ದೇವಸ್ಥಾನ ಈ ಗ್ರಾಮದಲ್ಲಿದೆ. 108 ದೇವಸ್ಥಾನಗಳು ಹೊಂದಿರುವ ಗ್ರಾಮ ಪ್ರತೀತಿಯನ್ನು ಈ ಗ್ರಾಮ ಹೊಂದಿದೆ. ನೂತನ ಕಟ್ಟಡ, ಮನೆ ನಿರ್ಮಾಣ ಸಮಯದಲ್ಲಿ ಶಿಲೆಗಳು ಪತ್ತೆಯಾಗುತ್ತಿರುತ್ತವೆ. ಗ್ರಾಮದ ವ್ಯಾಪ್ತಿಯ ಪ್ರದೇಶದಲ್ಲಿ ಪುರಾತನ ಶಿಲ್ಪಕಲೆಗಳು, ವಿಗ್ರಹಗಳಿವೆ. ಆದ್ದರಿಂದ ವೈಜ್ಞಾನಿಕವಾಗಿ ಉತ್ಖನನ ನಡೆಯಬೇಕಿದೆ ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ. ಸಿಕ್ಕಿರುವ ಅವಶೇಷಗಳನ್ನು ನೋಡಲು ಜನರು ಆಗಮಿಸುತ್ತಿದ್ದಾರೆ.
ಇದನ್ನೂ ಓದಿ: ಲಕ್ಕುಂಡಿ ಉತ್ಖನನ: ಕಲ್ಯಾಣಿ ಚಾಲುಕ್ಯರ ಕಾಲದ ಮಹತ್ವದ ಕುರುಹುಗಳು ಪತ್ತೆ, ಭಾನುವಾರ ಪದೇ ಪದೇ ಕಾಣಿಸಿಕೊಂಡ ಹಾವು!
ಮಾನವನ ಪಳೆಯುಳಿಕೆ ಪತ್ತೆ
ಸಿರುಗುಪ್ಪ ತಾಲೂಕಿನ ತೆಕ್ಕಲಕೋಟೆ ಪಟ್ಟಣದ ಪಶ್ಚಿಮ ನೈರುತ್ಯ ಭಾಗದಲ್ಲಿ ವಿಸ್ತಾರವಾಗಿ ಆವೃತವಾಗಿರುವ ಬೆಟ್ಟ ಗುಡ್ಡಗಳ 'ಗೌಡ್ರ ಮೂಲೆ'ಯಲ್ಲಿ ಸುಮಾರು 5 ಸಾವಿರ ವರ್ಷಗಳ ಹಿಂದಿನ ಮಾನವನ ಪಳೆಯುಳಿಕೆ, ಮಡಿಕೆಗಳು ಹಾಗೂ ಇತರೆ ವಸ್ತುಗಳು ಪತ್ತೆಯಾಗಿವೆ ಎಂದು ಅಮೆರಿಕದ ಹಾರ್ಟ್‌ವಿಕ್ ವಿಶ್ವವಿದ್ಯಾಲಯದ ಪ್ರಾಧ್ಯಾಪಕಿ ನಮಿತಾ ಎಸ್. ಸುಗಂಧಿ ತಿಳಿಸಿದ್ದಾರೆ.
ಇದನ್ನೂ ಓದಿ: 16ನೇ ದಿನದ ಲಕ್ಕುಂಡಿ ಉತ್ಖನನ ವರದಿ: ವೀರಭದ್ರೇಶ್ವರ ದೇವಸ್ಥಾನದ ಐತಿಹಾಸಿಕ ರಹಸ್ಯ!

