ಗದಗದ ಲಕ್ಕುಂಡಿಯಲ್ಲಿ ನಡೆಯುತ್ತಿರುವ ಉತ್ಖನನದಲ್ಲಿ ಕಲ್ಯಾಣಿ ಚಾಲುಕ್ಯರ ಕಾಲದ ಮಹತ್ವದ ಕುರುಹುಗಳು ಪತ್ತೆಯಾಗಿವೆ. ಇತ್ತೀಚೆಗೆ ಲೋಹದ ಗಂಟೆ, ವಿಶಿಷ್ಟ ಶಿವಲಿಂಗ ಹಾಗೂ ನಾಗಮುದ್ರೆಯ ಶಿಲಾಕೃತಿ ದೊರೆತಿದ್ದು, ಈ ಐತಿಹಾಸಿಕ ಸಂಶೋಧನೆಯು ಇತಿಹಾಸಕಾರರಲ್ಲಿ ಕುತೂಹಲ ಮೂಡಿಸಿದೆ.
ಗದಗ: ಮಣ್ಣಿನ ಪದರಗಳ ಅಡಿಯಲ್ಲಿ ಶತಮಾನಗಳ ಕಾಲ ಅಡಗಿದ್ದ ಕಲ್ಯಾಣಿ ಚಾಲುಕ್ಯರ ಕಾಲದ ಅಪರೂಪದ ಹಾಗೂ ಅದ್ಭುತ ಇತಿಹಾಸಿಕ ಕುರುಹುಗಳು ಇದೀಗ ಒಂದೊಂದಾಗಿ ಬೆಳಕಿಗೆ ಬರುತ್ತಿದ್ದು, ಇತಿಹಾಸ ಪ್ರೇಮಿಗಳು, ಸಂಶೋಧಕರು ಮತ್ತು ಪುರಾತತ್ವ ತಜ್ಞರಲ್ಲಿ ಭಾರೀ ಸಂಚಲನ ಮೂಡಿಸುತ್ತಿವೆ. ಭಾನುವಾರ ಸಂಜೆ ನಡೆದ ಉತ್ಖನನ ಕಾರ್ಯಾಚರಣೆಯ ವೇಳೆ ಮಹತ್ವದ ಪುರಾತತ್ವ ವಸ್ತುವೊಂದು ಪತ್ತೆಯಾಗಿದ್ದು, ಸುಮಾರು ಒಂದುವರೆ ಅಡಿ ಆಳಕ್ಕೆ ಅಗೆಯುವ ಸಂದರ್ಭದಲ್ಲಿ ಲೋಹದಿಂದ ನಿರ್ಮಿತವಾದ ಅಪರೂಪದ ಗಂಟೆ ದೊರೆತಿದೆ. ಈ ಪತ್ತೆಯು ಉತ್ಖನನ ಕಾರ್ಯಕ್ಕೆ ಮತ್ತಷ್ಟು ಮಹತ್ವವನ್ನು ತಂದಿದೆ.
ಈ ಉತ್ಖನನ ಯೋಜನೆಗೆ 2025ರ ಮೇ 15ರಂದು ಅಧಿಕೃತ ಅನುಮತಿ ಲಭಿಸಿದ್ದು, ಜೂನ್ 3ರಂದು ರಾಜ್ಯದ ಮುಖ್ಯಮಂತ್ರಿಗಳಿಂದ ಭೂಮಿಪೂಜೆ ನೆರವೇರಿಸಲಾಗಿತ್ತು. ಮಳೆಗಾಲದ ಕಾರಣ ಕೆಲಕಾಲ ವಿರಾಮ ಪಡೆದಿದ್ದ ಈ ಕಾರ್ಯಾಚರಣೆ ಇದೀಗ ಮಳೆಗಾಲದ ನಂತರ ಮತ್ತೆ ಚುರುಕುಗೊಂಡಿದೆ. ಪುರಾತತ್ವ ಇಲಾಖೆ, ಪ್ರವಾಸೋದ್ಯಮ ಇಲಾಖೆ ಹಾಗೂ ಲಕ್ಕುಂಡಿ ಅಭಿವೃದ್ಧಿ ಪ್ರಾಧಿಕಾರದ ಜಂಟಿ ನೇತೃತ್ವದಲ್ಲಿ ಸಂಶೋಧನಾ ಕಾರ್ಯವನ್ನು ವ್ಯವಸ್ಥಿತವಾಗಿ ಮುಂದುವರೆಸಲಾಗುತ್ತಿದೆ.
ಲಕ್ಕುಂಡಿ ಗ್ರಾಮದ ಕೋಟೆ ವೀರಭದ್ರೇಶ್ವರ ದೇವಸ್ಥಾನದ ಆವರಣದಲ್ಲಿ ನಡೆಯುತ್ತಿರುವ ಉತ್ಖನನದಲ್ಲಿ ಹಲವು ಮಹತ್ವದ ಪ್ರಾಚ್ಯಾವಶೇಷಗಳು ಲಭ್ಯವಾಗುತ್ತಿವೆ. ಅದರಲ್ಲಿಯೂ ಭಾನುವಾರ ಕೋಟೆಯ ಗೋಡೆಯ ಒಳಭಾಗದಲ್ಲಿ ವಿಶಿಷ್ಟ ವಿನ್ಯಾಸದ ಶಿವಲಿಂಗ ಮತ್ತು ಅದರ ಪೀಠ ಪತ್ತೆಯಾಗಿರುವುದು ವಿಶೇಷ ಗಮನ ಸೆಳೆದಿದೆ. ಪುರಾತತ್ವ ಇಲಾಖೆಯ ಅಧಿಕಾರಿಗಳು ಪತ್ತೆಯಾದ ಪೀಠದ ನಿಖರ ಅಳತೆಗಳನ್ನು ದಾಖಲಿಸಿ, ಫೋಟೋಗ್ರಫಿ ಮೂಲಕ ಇತಿಹಾಸ ಅಧ್ಯಯನಕ್ಕೆ ಅಗತ್ಯವಾದ ದಾಖಲೆಗಳನ್ನು ಸಂಗ್ರಹಿಸುತ್ತಿದ್ದಾರೆ.
ಇನ್ನು ಪತ್ತೆಯಾದ ಪುಟ್ಟ ಶಿವಲಿಂಗವು ಕಂಚು ಅಥವಾ ತಾಮ್ರದಿಂದ ನಿರ್ಮಿತವಾಗಿರಬಹುದೇ ಎಂಬ ಕುತೂಹಲ ಜನರಲ್ಲಿ ಮೂಡಿದ್ದು, ಇದರ ಲೋಹ ಸಂಯೋಜನೆ ಮತ್ತು ಕಾಲಘಟ್ಟವನ್ನು ನಿರ್ಧರಿಸಲು ಅಧಿಕಾರಿಗಳ ತಾಂತ್ರಿಕ ಹಾಗೂ ವೈಜ್ಞಾನಿಕ ತಪಾಸಣೆ ಅಗತ್ಯವಾಗಿದೆ. ಪರಿಶೀಲನೆಯ ನಂತರವೇ ಇದರ ನಿಖರ ಮಾಹಿತಿಯನ್ನು ದೃಢಪಡಿಸಲಾಗುವುದು ಎಂದು ಪುರಾತತ್ವ ಇಲಾಖೆ ತಿಳಿಸಿದೆ.
ನಾಗಮುದ್ರೆ ಪತ್ತೆ
ಉತ್ಖನನ ವೇಳೆ ನಾಗಮಣಿಯೊಂದಿಗೆ ಸರ್ಪದ ಹೆಡೆಯ ಆಕೃತಿಯನ್ನು ಒಳಗೊಂಡ ಶಿಲಾಕೃತಿ ಪತ್ತೆಯಾಗಿರುವುದು ಕಲ್ಯಾಣಿ ಚಾಲುಕ್ಯರ ಕಾಲದ ಧಾರ್ಮಿಕ ನಂಬಿಕೆಗಳು, ಸಾಂಸ್ಕೃತಿಕ ಆಚರಣೆಗಳು ಮತ್ತು ಶಿಲ್ಪಕಲೆಯ ವೈಭವಕ್ಕೆ ಮಹತ್ವದ ಸಾಕ್ಷಿಯಾಗಿದೆ. ಈ ನಾಗಮುದ್ರೆಯ ಹಿನ್ನೆಲೆ, ಅದರ ಉಪಯೋಗ ಮತ್ತು ಕಾಲಘಟ್ಟದ ಕುರಿತು ಇನ್ನಷ್ಟು ಆಳವಾದ ಅಧ್ಯಯನ ನಡೆಸಬೇಕಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಸರ್ಪದ ಆತಂಕ
ಉತ್ಖನನ ನಡೆಯುತ್ತಿರುವ ಸ್ಥಳದ ಸಮೀಪದಲ್ಲೇ ಭಾನುವಾರದ ಅಮಾವಾಸ್ಯೆಯಂದು ಸುಮಾರು ಎಂಟು ಮೀಟರ್ ಉದ್ದದ ಬೃಹತ್ ನಾಗರಹಾವು ಕಾಣಿಸಿಕೊಂಡಿರುವುದು ಗ್ರಾಮಸ್ಥರಲ್ಲಿ ದೈವಿಕ ಭಯ ಹಾಗೂ ಆತಂಕವನ್ನು ಮೂಡಿಸಿದೆ. ನಿಧಿ ಅಥವಾ ಅಮೂಲ್ಯ ವಸ್ತುಗಳಿರುವ ಜಾಗಗಳಲ್ಲಿ ನಾಗರಹಾವು ಕಾಣಿಸಿಕೊಳ್ಳುತ್ತದೆ ಎಂಬ ಹಳೆಯ ನಂಬಿಕೆ ಗ್ರಾಮದಲ್ಲಿ ಬಲವಾಗಿದ್ದು, ಹಾವಿನ ಕಾಣಿಕೆಯ ಹಿನ್ನೆಲೆಯಲ್ಲಿ ಕಾರ್ಮಿಕರು ಅರ್ಧ ಗಂಟೆಗೂ ಹೆಚ್ಚು ಕಾಲ ಕೆಲಸವನ್ನು ತಾತ್ಕಾಲಿಕವಾಗಿ ನಿಲ್ಲಿಸಬೇಕಾದ ಪರಿಸ್ಥಿತಿ ನಿರ್ಮಾಣವಾಯಿತು.
ಒಟ್ಟಿನಲ್ಲಿ, ಲಕ್ಕುಂಡಿಯಲ್ಲಿ ನಡೆಯುತ್ತಿರುವ ಈ ಉತ್ಖನನ ಕಾರ್ಯಾಚರಣೆ ಕಲ್ಯಾಣಿ ಚಾಲುಕ್ಯರ ಕಾಲದ ಇತಿಹಾಸ, ಧರ್ಮ, ಸಂಸ್ಕೃತಿ ಮತ್ತು ಶಿಲ್ಪಕಲೆಯ ಅನನ್ಯ ಅಧ್ಯಾಯಗಳನ್ನು ಮತ್ತೆ ಜೀವಂತಗೊಳಿಸುತ್ತಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ಅಪರೂಪದ ಅವಶೇಷಗಳು ಪತ್ತೆಯಾಗುವ ನಿರೀಕ್ಷೆಯನ್ನು ಮೂಡಿಸಿದೆ.


