- Home
- Karnataka Districts
- ರಾಯಚೂರಲ್ಲಿ ಭಾರೀ ಅನಾಹುತ: ಎಲ್ಲೋ ಹಚ್ಚಿದ ಬೆಂಕಿಯ ಕಿಡಿಗೆ, 10 ಮೇಕೆ, 20 ಕೋಳಿ ಸಜೀವ ದಹನ, 2 ಲಕ್ಷ ರೂ. ನಗದು ಹಣ ಸುಟ್ಟು ಬೂದಿ!
ರಾಯಚೂರಲ್ಲಿ ಭಾರೀ ಅನಾಹುತ: ಎಲ್ಲೋ ಹಚ್ಚಿದ ಬೆಂಕಿಯ ಕಿಡಿಗೆ, 10 ಮೇಕೆ, 20 ಕೋಳಿ ಸಜೀವ ದಹನ, 2 ಲಕ್ಷ ರೂ. ನಗದು ಹಣ ಸುಟ್ಟು ಬೂದಿ!
ವಿಧಿಯಾಟವೋ ಅಥವಾ ಅಜಾಗರೂಕತೆಯೋ ಒಟ್ಟಿನಲ್ಲಿ ಗ್ರಹಚಾರ ಕೆಟ್ಟು ಎಲ್ಲೋ ಹೊತ್ತಿಸಿದ ಕಿಡಿ ಇನ್ನೊಬ್ಬರ ಬದುಕನ್ನೇ ಸುಟ್ಟು ಭಸ್ಮ ಮಾಡಿರುವ ಘೋರ ದುರಂತವೊಂದು ರಾಯಚೂರು ತಾಲೂಕಿನ ಬುರ್ದಿಪಾಡ ಗ್ರಾಮದಲ್ಲಿ ನಡೆದಿದೆ.

ರಾಯಚೂರು: ಪಕ್ಕದ ಹೊಲದಲ್ಲಿ ಕಸಕ್ಕೆ ಹಚ್ಚಿದ್ದ ಬೆಂಕಿಯಿಂದ ದುರಂತ
ಗ್ರಾಮದ ನಿವಾಸಿ ನಾಗಮ್ಮ ಎಂಬುವವರಿಗೆ ಸೇರಿದ ಕುರಿ ಶೆಡ್ ಹಾಗೂ ಮನೆ ಬೆಂಕಿಯ ಕೆನ್ನಾಲಿಗೆಗೆ ಸಂಪೂರ್ಣವಾಗಿ ಸುಟ್ಟು ಭಸ್ಮವಾಗಿದೆ. ನಾಗಮ್ಮ ಅವರ ಹೊಲದ ಪಕ್ಕದ ಜಮೀನಿನಲ್ಲಿ ಕಸಕ್ಕೆ ಬೆಂಕಿ ಹಚ್ಚಿದ್ದರು, ಅದೇ ಬೆಂಕಿಯ ಕಿಡಿಗಳು ಗಾಳಿಯ ವೇಗಕ್ಕೆ ಹಾರಿ ಬಂದು ಕುರಿಗಳಿದ್ದ ಶೆಡ್‌ಗೆ ತಗುಲಿದೆ. ಹೇಳಿಕೇಳಿ ರಾಯಚೂರಲ್ಲಿ ಬೆಂಕಿಯಂತಹ ಬಿಸಿಲು ಹೀಗಿರುವಾಗ ಕ್ಷಣಾರ್ಧದಲ್ಲಿ ಬೆಂಕಿ ಹೊತ್ತಿಕೊಳ್ಳಲು ಒಂದು ಕಿಡಿ ಸಾಕು ಎಂಬಂತೆ ನೋಡನೋಡುತ್ತಿದ್ದಂತೆ ಇಡೀ ಶೆಡ್‌ಗೆ ಬೆಂಕಿ ಆವರಿಸಿದೆ. ಅಲ್ಲದೆ ಮನೆಗೂ ಬೆಂಕಿ ತಗುಲಿ ಹೊತ್ತಿ ಉರಿದಿದೆ.
10 ಮೇಕೆ, 20 ಕೋಳಿ ಸಜೀವ ದಹನ!
ಈ ದುರ್ಘಟನೆಯಲ್ಲಿ ಅಸಹಾಯಕ ಮೂಕಪ್ರಾಣಿಗಳು ಬೆಂಕಿಯಿಂದ ತಪ್ಪಿಸಿಕೊಳ್ಳಲಾಗದೆ ಪ್ರಾಣಬಿಟ್ಟಿವೆ. ಶೆಡ್‌ನಲ್ಲಿದ್ದ 10 ಮೇಕೆಗಳು ಹಾಗೂ 20 ಕೋಳಿಗಳು ಬೆಂಕಿಯ ಕನ್ನಾಲಗೆಗೆ ಸಜೀವವಾಗಿ ದಹನವಾಗಿದ್ದು, ಕಷ್ಟಪಟ್ಟು ಸಾಕಿ ಸಲುಹಿದ್ದ ನಾಗಮ್ಮಳ ಆಕ್ರಂದನ ಮುಗಿಲು ಮುಟ್ಟಿದೆ.
ಸುಟ್ಟು ಬೂದಿಯಾಯ್ತು ಹತ್ತಿ ಮಾರಿದ ನಗದು ಹಣ
ಬರೀ ಪ್ರಾಣಿಗಳಷ್ಟೇ ಅಲ್ಲದೆ, ನಾಗಮ್ಮ ಅವರು ಕಷ್ಟಪಟ್ಟು ಬೆಳೆದು ಮಾರಾಟ ಮಾಡಿದ್ದ 2 ಲಕ್ಷ ರೂಪಾಯಿ ಹತ್ತಿ ಹಣ ಕೂಡ ಬೆಂಕಿಯಲ್ಲಿ ಸುಟ್ಟು ಬೂದಿಯಾಗಿದೆ. ಪ್ರಾಣಿಗಳು ಹಾಗೂ ಮನೆ ಹಾನಿ ಸೇರಿ ಸುಮಾರು 3 ಲಕ್ಷ ರೂಪಾಯಿಗೂ ಅಧಿಕ ನಷ್ಟ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ.
ಸ್ಥಳಕ್ಕೆ ಅಗ್ನಿಶಾಮಕ ದಳ ಭೇಟಿ:
ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ ಅಷ್ಟೊತ್ತಿಗಾಗಲೇ ಮೂಕ ಪ್ರಾಣಿಗಳು ಸಜೀವ ದಹನಗೊಂಡಿವೆ.
ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ
ಯಾಪಲದಿನ್ನಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪೊಲೀಸರು ಸ್ಥಳ ಪರಿಶೀಲನೆ ನಡೆಸಿದ್ದಾರೆ. ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಎನ್ನುವಂತೆ, ಹತ್ತಿ ಮಾರಿ ತಂದಿದ್ದ ಹಣ ಹಾಗೂ ಸಾಕಿದ ಪ್ರಾಣಿಗಳನ್ನು ಕಳೆದುಕೊಂಡ ನಾಗಮ್ಮ ಅವರ ಕುಟುಂಬ ಈಗ ಕಣ್ಣೀರಲ್ಲಿ ಕೈ ತೊಳೆಯುತ್ತಿದೆ.

