ಚಿಕ್ಕಮಗಳೂರಿನಲ್ಲಿ ರಸ್ತೆ ಕಾಮಗಾರಿ ವೀಕ್ಷಣೆ ವೇಳೆ ಬಿಜೆಪಿ ಮತ್ತು ಕಾಂಗ್ರೆಸ್ ಕಾರ್ಯಕರ್ತರ ನಡುವೆ ಗಲಾಟೆ ನಡೆದಿದೆ. ಈ ಘಟನೆಗೆ ಸಂಬಂಧಿಸಿದಂತೆ, ಪೊಲೀಸರು ಎರಡೂ ಪಕ್ಷಗಳ ನಾಲ್ವರು ಕಾರ್ಯಕರ್ತರ ವಿರುದ್ಧ ಸುಮೋಟೋ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇದು ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ.

ವರದಿ : ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್

Add Asianetnews Kannada as a Preferred SourcegooglePreferred

ಚಿಕ್ಕಮಗಳೂರು (ಮೇ 22): ಚಿಕ್ಕಮಗಳೂರು ನಗರದಲ್ಲಿ ರಸ್ತೆ ಕಾಮಗಾರಿ ವೀಕ್ಷಣೆ ವೇಳೆ ಬಿಜೆಪಿ ಮತ್ತು ಕಾಂಗ್ರೆಸ್ ಕಾರ್ಯಕರ್ತರ ನಡುವೆ ನಡೆದ ಗಲಾಟೆ ಪ್ರಕರಣಕ್ಕೆ ಇದೀಗ ಹೊಸ ತಿರುವು ಸಿಕ್ಕಿದ್ದು, ಎರಡೂ ಪಕ್ಷಗಳ ನಾಲ್ವರು ಕಾರ್ಯಕರ್ತರ ವಿರುದ್ಧ ಪೊಲೀಸರು ಸುಮೋಟೋ ಪ್ರಕರಣ ದಾಖಲಿಸಿದ್ದಾರೆ.

ಎರಡು ಪಕ್ಷದ ನಾಲ್ವರು ಕಾರ್ಯಕರ್ತರ ಮೇಲೆ‌ ಕೇಸ್ :

ನಿನ್ನೆ ಬೆಳಿಗ್ಗೆ ಚಿಕ್ಕಮಗಳೂರು ನಗರದ ರಾಂಪುರ ರಸ್ತೆಯಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿ ವೀಕ್ಷಣೆಗೆ ಮಾಜಿ ಸಚಿವ ಸಿ.ಟಿ‌ ರವಿತೆರಳಿದ್ದ ವೇಳೆ ಬಿಜೆಪಿ ಹಾಗೂ ಕಾಂಗ್ರೆಸ್ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ಉಂಟಾಗಿ, ಬಳಿಕ ಅದು ತಳ್ಳಾಟ-ಹೊಡೆದಾಟದ ಮಟ್ಟಿಗೆ ಏರಿಕೆಯಾದ ಘಟನೆ ನಡೆದಿದೆ. ಘಟನೆಗೆ ಸಂಬಂಧಿಸಿದಂತೆ ಚಿಕ್ಕಮಗಳೂರು ನಗರ ಪೊಲೀಸ್ ಠಾಣೆ ಪೊಲೀಸರು ಸಾರ್ವಜನಿಕ ಶಾಂತಿಗೆ ಭಂಗ ಉಂಟು ಮಾಡಿದ ಆರೋಪದಡಿ ಸುಮೋಟೋ ಎಫ್‌ಐಆರ್ ದಾಖಲಿಸಿದ್ದಾರೆ. ಪ್ರಕರಣದಲ್ಲಿ ಬಿಜೆಪಿ ಯುವ ಮೋರ್ಚಾ ಜಿಲ್ಲಾಧ್ಯಕ್ಷ ಸಂತೋಷ್ ಕೋಟ್ಯಾನ್ ಹಾಗೂ ರಾಜೇಶ್ ವಿರುದ್ಧ ಪ್ರಕರಣ ದಾಖಲಾಗಿದ್ದು, ಕಾಂಗ್ರೆಸ್ ಕಾರ್ಯಕರ್ತರಾದ ಹೇಮಂತ್ ಮತ್ತು ಕೌಶಿಕ್ ಮೇಲೂ ಕೇಸ್ ದಾಖಲಾಗಿದೆ.

ಕ್ಷೇತ್ರ ತೀವ್ರ ಚರ್ಚೆಗೆ ಗ್ರಾಸವಾದ ಘಟನೆ :

ಪೊಲೀಸರು ಎರಡೂ ಪಕ್ಷಗಳ ಕಾರ್ಯಕರ್ತರ ವಿರುದ್ಧ ಸಮಾನ ರೀತಿಯಲ್ಲಿ ಕ್ರಮ ಕೈಗೊಂಡಿದ್ದು, ಪ್ರಕರಣದ ತನಿಖೆ ಮುಂದುವರಿದಿದೆ. ಗಲಾಟೆ ನಡೆದ ವೇಳೆ ಸ್ಥಳದಲ್ಲಿ ಕೆಲಕಾಲ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿತ್ತು ಎಂದು ತಿಳಿದುಬಂದಿದೆ.ಈ ಘಟನೆಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ತೀವ್ರ ಖಂಡನೆ ವ್ಯಕ್ತಪಡಿಸಿದ್ದಾರೆ.

ರಸ್ತೆ ಕಾಮಗಾರಿ ವೀಕ್ಷಣೆಗೆ ತೆರಳಿದ್ದ ಸಿ.ಟಿ ರವಿ ಹಾಗೂ ಬಿಜೆಪಿ ಕಾರ್ಯಕರ್ತರ ಮೇಲೆ ಕಾಂಗ್ರೆಸ್ ಕಾರ್ಯಕರ್ತರು ಹಲ್ಲೆ ಯತ್ನ ನಡೆಸಿದ್ದಾರೆ ಎಂದು ಆರೋಪಿಸಿರುವ ಅವರು, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿರುವುದಕ್ಕೆ ಇದೇ ಸಾಕ್ಷಿಯಾಗಿದೆ ಎಂದು ಹೇಳಿದ್ದಾರೆ.ಮಾಜಿ ಸಚಿವರಿಗೆಲೇ ರಕ್ಷಣೆ ಇಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಘಟನೆ ಕುರಿತು ಮುಖ್ಯಮಂತ್ರಿ ಉತ್ತರ ನೀಡಬೇಕು ಎಂದು ವಿಜಯೇಂದ್ರ ಆಗ್ರಹಿಸಿದ್ದಾರೆ.ಘಟನೆ ಸಂಬಂಧ ರಾಜಕೀಯ ವಲಯದಲ್ಲಿ ತೀವ್ರ ಚರ್ಚೆ ನಡೆಯುತ್ತಿದ್ದು, ಮುಂದಿನ ದಿನಗಳಲ್ಲಿ ಪ್ರಕರಣ ಮತ್ತಷ್ಟು ರಾಜಕೀಯ ಸ್ವರೂಪ ಪಡೆಯುವ ಸಾಧ್ಯತೆ ಇದೆ.