ಬೆಳಗಾವಿಯ ಶಿವಂ ಅಸೋಸಿಯೇಟ್ ಹೂಡಿಕೆ ವಂಚನೆ ಪ್ರಕರಣದ ತನಿಖೆಯು ಹೊಸ ತಿರುವು ಪಡೆದುಕೊಂಡಿದ್ದು, ಹೂಡಿಕೆಗಿಂತ ಹೆಚ್ಚು ಲಾಭ ಪಡೆದವರಿಂದ ಹಣ ವಸೂಲಿ ಮಾಡಲು ಅಧಿಕಾರಿಗಳು ಮುಂದಾಗಿದ್ದಾರೆ. ಆರೋಪಿ ಶಿವಾನಂದ ನೀಲಣ್ಣವರ, ಷೇರು ಮಾರುಕಟ್ಟೆಯಲ್ಲಿ ಹಣ ಕಳೆದುಕೊಂಡಿರುವುದಾಗಿ ಒಪ್ಪಿಕೊಂಡಿದ್ದು, ಈ ಬೆಳವಣಿಗೆಯು ಲಾಭ ಪಡೆದ ಹೂಡಿಕೆದಾರರಲ್ಲಿ ಆತಂಕ ಸೃಷ್ಟಿಸಿದೆ.

ಬೆಳಗಾವಿ: ಶಿವಂ ಅಸೋಸಿಯೇಟ್ 4500 ರೂ ಬಹುಕೋಟಿ ಹೂಡಿಕೆ ವಂಚನೆ ಪ್ರಕರಣದ ತನಿಖೆ ಹೊಸ ತಿರುವು ಪಡೆದುಕೊಂಡಿದೆ. ಹೂಡಿಕೆ ಮಾಡಿದ ಹಣಕ್ಕಿಂತ ಹೆಚ್ಚಿನ ಲಾಭ ಪಡೆದ ಹೂಡಿಕೆದಾರರಿಗೂ ಅಧಿಕಾರಿಗಳ ತನಿಖೆ ಬಿಸಿ ತಟ್ಟಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಆರೋಪಿ ಶಿವಾನಂದ ನೀಲಣ್ಣವರ ಹೂಡಿಕೆದಾರರನ್ನು ಆಕರ್ಷಿಸಲು ಸಿದ್ಧಪಡಿಸಿದ್ದ ‘ಅಕ್ಯೂಮನ್ ಆ್ಯಪ್’ನಲ್ಲಿನ ಹೂಡಿಕೆ ಮತ್ತು ಸಂದಾಯದ ಸಂಪೂರ್ಣ ಶೀಟ್ ಪರಿಶೀಲನೆ ಕಾರ್ಯವನ್ನು ತನಿಖಾಧಿಕಾರಿಗಳು ಚುರುಕುಗೊಳಿಸಿದ್ದಾರೆ. ಯಾವ ಹೂಡಿಕೆದಾರರು ಎಷ್ಟು ಹಣ ಹಾಕಿದರು, ಎಷ್ಟು ಲಾಭ ಪಡೆದರು ಎಂಬ ಸಂಪೂರ್ಣ ಮಾಹಿತಿ ಆ್ಯಪ್‌ನಿಂದ ಹೊರಬರುತ್ತಿದೆ ಎಂದು ಮೂಲಗಳು ತಿಳಿಸಿವೆ.

ಹೆಚ್ಚು ಹಣ ವಾಪಸ್ ಪಡೆದಿರುವವರ ಮಾಹಿತಿ

ಹೂಡಿಕೆ ಮಾಡಿದ ಮೂಲ ಮೊತ್ತಕ್ಕಿಂತ ಒಂದು ರೂಪಾಯಿ ಹೆಚ್ಚು ಹಣ ವಾಪಸ್ ಪಡೆದಿರುವ ಎಲ್ಲಾ ಹೂಡಿಕೆದಾರರ ಮಾಹಿತಿ ಕಲೆ ಹಾಕಲಾಗುತ್ತಿದೆ. ಅಂತಹವರಿಂದ ಹೆಚ್ಚುವರಿ ಹಣ ವಸೂಲಿ ಮಾಡಿ, ನಷ್ಟ ಅನುಭವಿಸಿದ ಮೂಲ ಹೂಡಿಕೆದಾರರಿಗೆ ಮರಳಿ ಹಂಚುವ ಕಾರ್ಯತಂತ್ರವನ್ನು ಅಧಿಕಾರಿಗಳು ರೂಪಿಸಿದ್ದಾರೆ ಎನ್ನಲಾಗಿದೆ.

ತನಿಖಾಧಿಕಾರಿಗಳ ಎದುರು ಶಿವಾನಂದ ನೀಲಣ್ಣವರ ಸ್ಫೋಟಕ ಹೇಳಿಕೆ ನೀಡಿದ್ದಾರೆ. ಹೂಡಿಕೆದಾರರಿಂದ ಸಂಗ್ರಹಿಸಿದ ಹಣವನ್ನು ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿ ಭಾರಿ ನಷ್ಟ ಅನುಭವಿಸಿರುವುದಾಗಿ ಒಪ್ಪಿಕೊಂಡಿದ್ದಾರೆ. ಜೊತೆಗೆ ರಿಯಲ್ ಎಸ್ಟೇಟ್ ವ್ಯವಹಾರದಲ್ಲೂ ಹಣ ತೊಡಗಿಸಿರುವುದು ತನಿಖೆಯಿಂದ ಬೆಳಕಿಗೆ ಬಂದಿದೆ.

35 ಸಾವಿರ ಜನರಿಂದ ₹2125 ಕೋಟಿ ಹೂಡಿಕೆ ಸಂಗ್ರಹ

ಹಗರಣ ₹4500 ಕೋಟಿ ಎಂದು ಇದುವರೆಗೆ ಚರ್ಚೆಯಾಗುತ್ತಿತ್ತು. ಆದರೆ ತನಿಖೆಯಿಂದ ಸುಮಾರು 35 ಸಾವಿರ ಜನರಿಂದ ₹2125 ಕೋಟಿ ಹೂಡಿಕೆ ಸಂಗ್ರಹವಾಗಿರುವುದು ಮಾತ್ರ ಸಾಬೀತಾಗಿದೆ. ಯಾವ ಪ್ರದೇಶದಲ್ಲಿ ಜಾಗ, ಜಮೀನು ಖರೀದಿಸಲಾಗಿದೆ ಎಂಬ ಆಸ್ತಿಗಳ ಜಾಡು ಹುಡುಕುವ ಕಾರ್ಯವೂ ಅಧಿಕಾರಿಗಳಿಂದ ಈಗ ಜೋರಾಗಿದೆ. ಅಕ್ಯೂಮನ್ ಆ್ಯಪ್ ಡೇಟಾ ಆಧಾರದ ಮೇಲೆ ‘ಲಾಭ ಪಡೆದವರ ಪಟ್ಟಿ’ ತಯಾರಿಸಲಾಗುತ್ತಿದೆ. ಅವರಿಂದ ವಸೂಲಿ ಮಾಡಿದ ಹಣವನ್ನು ಸಂತ್ರಸ್ತ ಹೂಡಿಕೆದಾರರಿಗೆ ವಿತರಿಸುವ ಪ್ರಕ್ರಿಯೆ ಆರಂಭಿಸಲು ಅಧಿಕಾರಿಗಳು ಸಜ್ಜಾಗಿದ್ದಾರೆ. ಈ ಬೆಳವಣಿಗೆಯಿಂದ ಲಾಭದ ಆಸೆಗೆ ಶಿವಂ ಅಸೋಶಿಯೇಟ್‌ನಲ್ಲಿ ಹೂಡಿಕೆ ಮಾಡಿದ್ದವರಲ್ಲಿ ಆತಂಕ ಮನೆಮಾಡಿದೆ.