- Home
- News
- Politics
- ಸುಹಾಸ್ ಸುಧಾಕರ್ ರಾಜಕೀಯ ಅಖಾಡ ಪ್ರವೇಶಿಸುವುದು ಖಚಿತ, ಕೈ ಶಾಸಕರ ಬಾಯಿಂದಲೇ ಸುಧಾಕರ್ ಕುಟುಂಬಕ್ಕೆ ಟಿಕೇಟ್ ಸಂದೇಶ
ಸುಹಾಸ್ ಸುಧಾಕರ್ ರಾಜಕೀಯ ಅಖಾಡ ಪ್ರವೇಶಿಸುವುದು ಖಚಿತ, ಕೈ ಶಾಸಕರ ಬಾಯಿಂದಲೇ ಸುಧಾಕರ್ ಕುಟುಂಬಕ್ಕೆ ಟಿಕೇಟ್ ಸಂದೇಶ
ವರದಿ: ಜಡೇಕುಂಟೆ ಮಂಜುನಾಥ್ದಿವಂಗತ ಸಚಿವ ಡಿ. ಸುಧಾಕರ್ ಅವರ ನಿಧನದ ನಂತರ ಪುತ್ರ ಸುಹಾಸ್ ರಾಜಕೀಯ ಅಖಾಡಕ್ಕೆ ಧುಮುಕುವುದು ನಿಶ್ಚಿತವಾಗಿದೆ. ಅಪ್ಪನ ಉತ್ತರಾಧಿಕಾರಿಯಾಗಿ ಹಿರಿಯೂರಿನಲ್ಲಿ ಬೆಂಬಲಿಗರನ್ನು ಭೇಟಿಯಾಗಿರುವ ಸುಹಾಸ್ ಅವರ ರಾಜಕೀಯ ಭವಿಷ್ಯವು ಇದೀಗ ಮತದಾರರು ಮತ್ತು ಪಕ್ಷದ ನಾಯಕರ ಕೈಯಲ್ಲಿದೆ.

ಸುಹಾಸ್ ರಾಜಕೀಯ ಅಖಾಡ
ಚಳ್ಳಕೆರೆ: ಚಳ್ಳಕೆರೆ ಗೊಮ್ಮಟ ನಿಲಯದಿಂದ ಬೆಂಗಳೂರಿನ ವಿಧಾನಸೌಧದವರೆಗೂ ಸುಮಾರು ನಾಲ್ಕು ಬಾರಿ ಶಾಸಕರಾಗಿ ಎರಡು ಬಾರಿ ಮಂತ್ರಿಯಾಗಿ ಹೋಗಿ ಬಂದಿದ್ದ ಡಿ.ಸುಧಾಕರ್ ಅವರು ಅನಾರೋಗ್ಯದಿಂದ ಈಚೆಗೆ ನಿಧನರಾದ ಮೇಲೆ ಅವರ ಪುತ್ರ ಸುಹಾಸ್ ರಾಜಕೀಯ ಅಖಾಡ ಪ್ರವೇಶಿಸುವುದು ನಿಕ್ಕಿಯಾಗಿದೆ.

ಅಪ್ಪನ ಉತ್ತರಾಧಿಕಾರಿಯಾಗಲು ಮಗನ ಹೆಜ್ಜೆ
ಇದಕ್ಕೆ ಪುಷ್ಟೀಕರಿಸುವ ಬೆಳೆವಣಿಗೆಗಳು ಈಗಾಗಲೇ ಹಿರಿಯೂರು ಚಳ್ಳಕೆರೆಯಲ್ಲಿ ಜರುಗಿವೆ. ಅಪ್ಪನ ಉತ್ತರಾಧಿಕಾರಿಯಾಗಲು ಇದೀಗ ಸುಹಾಸ್ ಒಂದು ಹೆಜ್ಜೆ ಮುಂದಡಿ ಇಟ್ಟಿದ್ದಾರೆ. ಹಿರಿಯೂರಿನ ಕಾಂಗ್ರೆಸ್ ಕಚೇರಿಗೆ ತೆರಳಿ ಅಪ್ಪನ ಅನುಯಾಯಿಗಳನ್ನು ಭೇಟಿ ಮಾಡಿ ಚರ್ಚೆ ನಡೆಸಿ ಬಂದಿರುವ ಸುಧಾಕರ್ ಪುತ್ರ ಸುಹಾಸ್ ಅವರಲ್ಲಿ ಸುಧಾಕರ್ ಪ್ರತಿಬಿಂಬವನ್ನು ಕಾಣುತ್ತಿರುವ ಹಿರಿಯೂರಿನ ಕಾಂಗ್ರೆಸ್ ಕಾರ್ಯಕರ್ತರಿಗೆ ಜಿಲ್ಲೆಯ ಅಭಿಮಾನಿಗಳಿಗೆ ಕೊಂಚ ನಿಟ್ಟುಸಿರು ಬಿಟ್ಟಂತಾಗಿರುವುದು ನಿಜ. ಏಕೆಂದರೆ ಮೂರು ಅವಧಿಗೆ ಸುಧಾಕರ್ ಅವರನ್ನು ಶಾಸನ ಸಭೆಗೆ ಆರಿಸಿ ಕಳುಹಿಸಲು ಹಿರಿಯೂರಿನ ಜನತೆಯ ಆರ್ಶೀವಾದವೇ ಕಾರಣ. ಜನನಾಯಕನಾಗಿ ಜನರ ಕಷ್ಟ ಸುಖಗಳಿಗೆ ಸ್ಪಂದಿಸುತ್ತಾ ಎಲ್ಲರ ಪ್ರೀತಿಯ ಸುಧಣ್ಣ ದೀಢೀರನೆ ಎದ್ದು ಹೋಗಿದ್ದು ಮಾತ್ರ ಯಾರಿಗೂ ಜೀರ್ಣಿಸಿಕೊಳ್ಳಲು ಆಗಲಿಲ್ಲ.
ಇವರ ನಂತರ ಯಾರು ಎಂಬ ಪ್ರಶ್ನೆಗೆ ಉತ್ತರ ಹುಡುಕಲು ಹೈಕಮಾಂಡ್ ಅವಕಾಶವೇ ಕೊಡಲಿಲ್ಲ. ಜಿಲ್ಲೆಯ ಕಾಂಗ್ರೆಸ್ ಶಾಸಕರ ಬಾಯಿಂದಲೇ ಸುಧಾಕರ್ ಕುಟುಂಬಕ್ಕೆ ಟಿಕೇಟ್ ಎಂಬ ಸಂದೇಶವನ್ನು ಹೇಳಿಸುವ ಮೂಲಕ ಹೈಕಮಾಂಡ್ ಗ್ರೀನ್ ಸಿಗ್ನಲ್ ಕೊಟ್ಟೇ ಬಿಟ್ಟಿತು. ಆಗ ಸುಧಾಕರ್ ಪುತ್ರ ಸುಹಾಸ್ ಹಿರಿಯೂರಿನ ಅಖಾಡಕ್ಕೆ ಇಳಿದರು.
ಸುಹಾಸ್ ಜೊತೆ ಕಾಂಗ್ರೆಸ್ ಕಚೇರಿಯಲ್ಲಿ ಸಮಾಲೋಚನ ಸಭೆ
ಇತ್ತ ಚಳ್ಳಕೆರೆಯಲ್ಲಿ ಪ್ರಥಮವಾಗಿ ನುಡಿನಮನ ಕಾರ್ಯಕ್ರಮ ಮಾಡಿದ ಶಾಸಕ ರಘುಮೂರ್ತಿ ಅವರು ಸುಧಾಕರ್ ಕುಟುಂಬದ ಜೊತೆ ಇರುತ್ತೇವೆ ಎಂಬ ಸಂದೇಶವನ್ನು ರವಾನಿಸಿಬಿಟ್ಟರು. ಚಳ್ಳಕೆರೆಯಲ್ಲಿ ಮೊದಲ ಬಾರಿಗೆ ಶಾಸಕರಾಗಿದ್ದ ಸುಧಾಕರ್ ಸಾಧನೆಗಳನ್ನು ಹಾಗೂ ಅವರ ಸಮಾಜ ಸೇವೆಯನ್ನು ಸೇರಿದಂತೆ ಇನ್ನಿತರೆ ಗುಣಾವಗುಣಗಳನ್ನು ಅವಲೋಕನ ಮಾಡಿದ ಎನ್.ವೈ.ಗೋಪಾಲಕೃಷ್ಣ, ಮಾಜಿ ಸಚಿವ ಎಚ್.ಆಂಜನೇಯ, ಚಿತ್ರದುರ್ಗ ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ ಅವರೂ ಕೂಡ ಇದೇ ಅರ್ಥ ಬರುವ ಮಾತುಗಳನ್ನಾಡಿದ್ದರು.
ಕೆ.ಸಿ.ವೀರೇಂದ್ರ ಪಪ್ಪಿ ಹಿರಿಯೂರಿಗೆ ತೆರಳಿ ಸುಹಾಸ್ ಜೊತೆ ಕಾಂಗ್ರೆಸ್ ಕಚೇರಿಯಲ್ಲಿ ಸಮಾಲೋಚನ ಸಭೆ ನಡೆಸಿ ಬಂದಿದ್ದಾರೆ. ಹಿರಿಯೂರು ತಾಲೂಕಿನ ಮುಖಂಡರು ಸುಹಾಸ್ ಆಗಮನವನ್ನು ಎದುರು ನೋಡುತ್ತಿದ್ದಾರೆ. ಹೇಗೋ ದೊಡ್ಡವರು ಹೋದ್ರು. ಅವರ ಪುತ್ರ ಬಂದರು ಎಂಬ ಸಮಾಧಾನಕ್ಕೆ ಮೊರೆಹೋಗಿದ್ದಾರೆ.
ಸುಹಾಸ್ ಕೈ ಹಿಡಿತಾರಾ
ಅಪ್ಪನಷ್ಟು ಅನುಭವವಿಲ್ಲದಿದ್ದರೂ ಅಪ್ಪನ ಒಳಗಿದ್ದ ಮಾನವೀಯ ಸೆಲೆಗಳಿವೆ ಎಂಬುದನ್ನು ಸುಹಾಸ್ ಮೊದಲ ಯತ್ನದಲ್ಲೇ ಅನಾವರಣಗೊಳಿಸಿದ್ದಾರೆ. ಇಂತಹ ಯುವಕ ರಾಜಕೀಯ ಅಖಾಡದಲ್ಲಿ ಇಳಿಯುತ್ತಿದ್ದಾರೆ. ಇಂತಹ ವ್ಯಕ್ತಿಯನ್ನು ಮತದಾರ ಸೇರಿದಂತೆ ಕಾಂಗ್ರೆಸ್ ಧುರೀಣರು ಕೈ ಹಿಡಿಯುತ್ತಾರಾ ಎಂಬ ಪ್ರಶ್ನೆಗಳು ಎದುರಾಗಿವೆ. ಜಿಲ್ಲೆಯಲ್ಲಿ ಬಹುತೇಕ ಜನರಿಗೆ ಸಹಾಯದ ಹಸ್ತ ಚಾಚಿರುವ ಸುಧಾಕರ್ ಅವರು ರಾಜಕೀಯವಾಗಿಯೂ ಅನೇಕರನ್ನು ಬೆಳೆಸಿದ್ದಾರೆ. ಇದೀಗ ಅವರ ಮಗನನ್ನು ಮತದಾರ, ಕಾಂಗ್ರೆಸ್ ಮುಖಂಡರು ಹೈಕಮಾಂಡ್ ಕೈಹಿಡಿಯಬೇಕಿದೆ. ಸುಧಾಕರ್ ಬದುಕಿದ್ದಾಗ ಯಾವುದೇ ಚುನಾವಣೆಯಾಗಲಿ ಸುಧಾಕರ್ ಹೇಳಿದವರೇ ಚುನಾಯಿತರಾಗುತ್ತಿದ್ದ ಕಾಲವೊಂದಿತ್ತು. ಆದರೆ, ಇದೀಗ ಅವರ ಕುಟುಂಬದ ಕುಡಿಯನ್ನು ಹಿರಿಯೂರಿನ ಜನತೆ ಪೊರೆಯಬೇಕಿದೆ.
ಸುಧಾಕರ್ ಕುಟುಂಬದ ಕುಡಿ ಬರುತ್ತಾರಾ?
ಚಳ್ಳಕೆರೆಯವರೇ ಆದ ಸುಧಾಕರ್ ಅವರ ಪುತ್ರ ಸುಹಾಸ್ ಅವರನ್ನು ಚಳ್ಳಕೆರೆ ಕ್ಷೇತ್ರದ ಶಾಸಕ ರಘುಮೂರ್ತಿ, ಚಿತ್ರದುರ್ಗ ಕ್ಷೇತ್ರದ ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ ಕೈ ಹಿಡಿಯಲೇ ಬೇಕಿದೆ. ಏಕೆಂದರೆ, ಸಣ್ಣಪುಟ್ಟ ಭಿನ್ನಾಭಿಪ್ರಾಯ ಇದ್ದರೂ ಸುಧಾಕರ್ ಇವರೆಲ್ಲರಿಗೂ ಬೆನ್ನೆಲುಬಾಗಿದ್ದವರು. ಅಂತಹ ರಾಜಕೀಯ ಋಣಸಂದಾಯಕ್ಕಾಗಿ ಸುಧಾಕರ್ ಕುಟುಂಬದ ಕುಡಿಯನ್ನು ರಾಜಕೀಯ ಪಡಸಾಲೆಗೆ ಕರೆತರುತ್ತಾರಾ? ಇಂತಹ ಚರ್ಚೆಗಳು ಇದೀಗ ಜಿಲ್ಲೆಯಲ್ಲಿ ಗರಿಗೆದರಿವೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

