ವೈಟ್ ಟಾಪಿಂಗ್ ಕಾಮಗಾರಿಯ ಹಿನ್ನೆಲೆಯಲ್ಲಿ, ಮೆಜೆಸ್ಟಿಕ್‌ನಿಂದ ಮಲ್ಲೇಶ್ವರಕ್ಕೆ ಸಂಪರ್ಕಿಸುವ ಪ್ರಮುಖ ರಸ್ತೆಯನ್ನು ಮುಂದಿನ ಮೂರು ತಿಂಗಳ ಕಾಲ ಸಂಪೂರ್ಣವಾಗಿ ಬಂದ್ ಮಾಡಲಾಗಿದೆ. ಈ ನಿರ್ಧಾರದಿಂದಾಗಿ ಪರ್ಯಾಯ ಮಾರ್ಗಗಳಲ್ಲಿ ತೀವ್ರ ಸಂಚಾರ ದಟ್ಟಣೆ ಉಂಟಾಗಿದೆ.
ಬೆಂಗಳೂರು: ಮಲ್ಲೇಶ್ವರ ಹಾಗೂ ಅದರ ಸುತ್ತಮುತ್ತ ಓಡಾಟ ನಡೆಸುವ ಸಾರ್ವಜನಿಕರ ಗಮನಕ್ಕೆ – ಮೆಜೆಸ್ಟಿಕ್‌ನಿಂದ ಮಲ್ಲೇಶ್ವರಕ್ಕೆ ಸಂಪರ್ಕಿಸುವ ಪ್ರಮುಖ ರಸ್ತೆಯನ್ನು ವೈಟ್ ಟಾಪಿಂಗ್ ಕಾಮಗಾರಿ ಹಿನ್ನೆಲೆಯಲ್ಲಿ ಮುಂದಿನ ಮೂರು ತಿಂಗಳುಗಳ ಕಾಲ ಸಂಪೂರ್ಣವಾಗಿ ಬಂದ್ ಮಾಡಲಾಗಿದೆ. ಈ ನಿರ್ಧಾರದಿಂದ ಪ್ರತಿದಿನ ಸಾವಿರಾರು ವಾಹನ ಸವಾರರಿಗೆ ಭಾರೀ ಸಮಸ್ಯೆ ಎದುರಾಗಿದೆ.
ಇದುವರೆಗೆ ಮೆಜೆಸ್ಟಿಕ್‌ನಿಂದ ಮಲ್ಲೇಶ್ವರಂ ತಲುಪಲು ಸಾಮಾನ್ಯವಾಗಿ 10 ನಿಮಿಷ ಮಾತ್ರ ಬೇಕಾಗುತ್ತಿತ್ತು. ಆದರೆ ರಸ್ತೆ ಬಂದ್ ಆದ ನಂತರ, ಪೀಕ್ ಅವಧಿಯಲ್ಲಿ ಮಲ್ಲೇಶ್ವರಕ್ಕೆ ತಲುಪಲು ಕನಿಷ್ಠ 30 ನಿಮಿಷದಿಂದ ಒಂದು ಗಂಟೆವರೆಗೆ ಸಮಯ ತೆಗೆದುಕೊಳ್ಳುತ್ತಿದೆ. ಇದರಿಂದ ಕಚೇರಿ ಸಿಬ್ಬಂದಿ, ವಿದ್ಯಾರ್ಥಿಗಳು ಹಾಗೂ ವ್ಯಾಪಾರಸ್ಥರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಪರ್ಯಾಯ ಮಾರ್ಗ ಸಂಕುಚಿತ
ಜಿಬಿಎ ವತಿಯಿಂದ ಕೈಗೊಂಡಿರುವ ವೈಟ್ ಟಾಪಿಂಗ್ ಕಾಮಗಾರಿ ಹಿನ್ನೆಲೆಯಲ್ಲಿ ಮೆಜೆಸ್ಟಿಕ್‌ನಿಂದ ಬರುವ ಎಲ್ಲಾ ವಾಹನಗಳನ್ನು ಓಕುಳಿಪುರಂ ಅಂಡರ್ ಪಾಸ್ ಮೂಲಕ ಸುಜಾತ್ ಸರ್ಕಲ್ ಮಾರ್ಗವಾಗಿ ಮಲ್ಲೇಶ್ವರ ಪ್ರವೇಶಿಸುವಂತೆ ಸೂಚಿಸಲಾಗಿದೆ. ಆದರೆ ಈ ಪರ್ಯಾಯ ಮಾರ್ಗಗಳು ಸಂಕುಚಿತ, ಮತ್ತು ಕಿರಿದಾಗಿರುವುದರಿಂದ, ಮೆಜೆಸ್ಟಿಕ್ ಹಾಗೂ ಅದರ ಸುತ್ತಮುತ್ತ ಟ್ರಾಫಿಕ್ ಸಂಪೂರ್ಣವಾಗಿ ಅಸ್ತವ್ಯಸ್ತವಾಗಿದೆ.
ಇನ್ನು ಸಂಪಿಗೆಹಳ್ಳಿ ರಸ್ತೆಯನ್ನು ಒಂದು ಕಡೆ ತಾತ್ಕಾಲಿಕವಾಗಿ ಬಂದ್ ಮಾಡಿರುವುದರಿಂದ, ವಾಹನ ಸಂಚಾರ ಮತ್ತಷ್ಟು ಗೊಂದಲಕ್ಕೆ ತುತ್ತಾಗಿದೆ. ಇದೇ ವೇಳೆ ಹಲವು ರಸ್ತೆಗಳು ಬಂದ್ ಆಗಿರುವುದಕ್ಕೆ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಕೆಲವೆಡೆ ಟ್ರಾಫಿಕ್ ಪೊಲೀಸರೊಂದಿಗೆ ಜನರು ಕಿರಿಕಿರಿ ಮಾಡುವ ದೃಶ್ಯಗಳು ಕಂಡುಬಂದಿವೆ.
ಸಾರ್ವಜನಿಕ ಜೀವನಕ್ಕೆ ದೊಡ್ಡ ಹೊಡೆತ
ಸ್ಥಳೀಯ ನಿವಾಸಿಗಳು ಹಾಗೂ ವಾಹನ ಸವಾರರು, ಕಾಮಗಾರಿಯನ್ನು ಆಮೆಗತಿಯಲ್ಲಿ ನಡೆಸದೇ, ಸಾಧ್ಯವಾದಷ್ಟು ಶೀಘ್ರದಲ್ಲಿ ಪೂರ್ಣಗೊಳಿಸಬೇಕು ಎಂದು ಜಿಬಿಎ ಹಾಗೂ ಸಂಬಂಧಪಟ್ಟ ಅಧಿಕಾರಿಗಳನ್ನು ಒತ್ತಾಯಿಸಿದ್ದಾರೆ. ಮೂರು ತಿಂಗಳುಗಳ ಕಾಲ ಪ್ರಮುಖ ರಸ್ತೆ ಬಂದ್ ಮಾಡಿರುವುದು ಸಾರ್ವಜನಿಕ ಜೀವನಕ್ಕೆ ದೊಡ್ಡ ಹೊಡೆತವಾಗಿದೆ ಎಂಬ ಅಭಿಪ್ರಾಯ ವ್ಯಕ್ತವಾಗುತ್ತಿದೆ.
ಒಟ್ಟಾರೆ, ಮೆಜೆಸ್ಟಿಕ್–ಮಲ್ಲೇಶ್ವರ ರಸ್ತೆಯ ವೈಟ್ ಟಾಪಿಂಗ್ ಕಾಮಗಾರಿ ಸಾರ್ವಜನಿಕರ ದಿನನಿತ್ಯದ ಸಂಚಾರಕ್ಕೆ ಭಾರೀ ತೊಂದರೆ ಉಂಟುಮಾಡಿದ್ದು, ಪರ್ಯಾಯ ಮಾರ್ಗಗಳ ಸಮರ್ಪಕ ವ್ಯವಸ್ಥೆ ಹಾಗೂ ಕಾಮಗಾರಿಯ ವೇಗ ಹೆಚ್ಚಿಸುವ ಅಗತ್ಯತೆ ತುರ್ತಾಗಿ ಎದುರಾಗಿದೆ.

