- Home
- Karnataka Districts
- ಪುತ್ರನ ಹಿಟ್ & ರನ್ ಕೇಸ್, ಪರಿಹಾರ ಕೊಡುವ ನೆಪದಲ್ಲಿ ಕರೆದು ಸಂತ್ರಸ್ತ ಕುಟುಂಬಕ್ಕೆ ಅವಮಾನ, ಪ್ರತಿಕ್ರಿಯೆಗೆ ನಿರಾಕರಿಸಿದ ರೇವಣ್ಣ
ಪುತ್ರನ ಹಿಟ್ & ರನ್ ಕೇಸ್, ಪರಿಹಾರ ಕೊಡುವ ನೆಪದಲ್ಲಿ ಕರೆದು ಸಂತ್ರಸ್ತ ಕುಟುಂಬಕ್ಕೆ ಅವಮಾನ, ಪ್ರತಿಕ್ರಿಯೆಗೆ ನಿರಾಕರಿಸಿದ ರೇವಣ್ಣ
ಮಾಜಿ ಸಚಿವ ಹೆಚ್.ಎಂ.ರೇವಣ್ಣ ಪುತ್ರನ ಹಿಟ್ & ರನ್ ಪ್ರಕರಣ ಹೊಸ ತಿರುವು ಪಡೆದಿದೆ. ಪರಿಹಾರ ನೀಡುವ ಬದಲು, 'ನಮ್ಮ ಕಾರೇ ಬೇಕಿತ್ತಾ ಸಾಯೋಕೆ' ಎಂದು ಅವಮಾನಿಸಿ ದರ್ಪ ತೋರಿದ್ದಾರೆಂದು ಮೃತನ ಕುಟುಂಬ ಗಂಭೀರ ಆರೋಪ ಮಾಡಿದೆ. ಹಣ ಬೇಡ, ನ್ಯಾಯ ಬೇಕು ಎಂದು ಕುಟುಂಬಸ್ಥರು ಪಟ್ಟು ಹಿಡಿದಿದೆ.

ಹಣದ ವಿಚಾರದಲ್ಲಿ ಅವಮಾನಿಸಿ ದರ್ಪ
ಬೆಂಗಳೂರು / ಮಾಗಡಿ: ಮಾಜಿ ಸಚಿವ ಹೆಚ್.ಎಂ.ರೇವಣ್ಣ ಅವರ ಪುತ್ರ ಶಶಾಂಕ್ ಸಂಬಂಧಿಸಿದ ಹಿಟ್ ಅಂಡ್ ರನ್ ಪ್ರಕರಣ ಇದೀಗ ಹೊಸ ತಿರುವು ಪಡೆದುಕೊಂಡಿದ್ದು, ಅಪಘಾತದಲ್ಲಿ ಮೃತಪಟ್ಟ ಯುವಕನ ಪೋಷಕರು ಹೆಚ್.ಎಂ.ರೇವಣ್ಣ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದಾರೆ. ಪರಿಹಾರ ನೀಡುವುದಾಗಿ ಕರೆಸಿ, ಹಣದ ವಿಚಾರದಲ್ಲಿ ಅವಮಾನಿಸಿ ದರ್ಪ ತೋರಲಾಗಿದೆ ಎಂದು ಮೃತ ಯುವಕ ರಾಜೇಶ್ ಅವರ ಕುಟುಂಬ ಕಣ್ಣೀರಿಟ್ಟಿದೆ.
ಕುಟುಂಬಸ್ಥರ ನೋವು
ಕಳೆದ ಡಿಸೆಂಬರ್ 11ರ ತಡರಾತ್ರಿ ರಾಮನಗರ ಜಿಲ್ಲೆಯ ಮಾಗಡಿ ತಾಲೂಕಿನ ಗುಡೇಮಾರನಹಳ್ಳಿ ಸಮೀಪ ನಡೆದ ರಸ್ತೆ ಅಪಘಾತದಲ್ಲಿ, ರೇವಣ್ಣ ಪುತ್ರ ಶಶಾಂಕ್ ಚಾಲನೆ ಮಾಡುತ್ತಿದ್ದ ಕಾರು ಡಿಕ್ಕಿ ಹೊಡೆದು ಬಿಳಗುಂಬ ಗ್ರಾಮದ 23 ವರ್ಷದ ರಾಜೇಶ್ ಸ್ಥಳದಲ್ಲೇ ಮೃತಪಟ್ಟಿದ್ದರು. ಈ ಅಪಘಾತ ಒಂದು ಕುಟುಂಬವನ್ನು ಸಂಪೂರ್ಣವಾಗಿ ಸಂಕಷ್ಟಕ್ಕೆ ತಳ್ಳಿದೆ ಎಂದು ಕುಟುಂಬಸ್ಥರು ನೋವು ವ್ಯಕ್ತಪಡಿಸಿದ್ದಾರೆ.
ನಿಮ್ಮ ಮಗ ಸಾಯಲು ನಮ್ಮ ಕಾರೇ ಬೇಕಿತ್ತಾ? ಕುಟುಂಬಕ್ಕೆ ಅವಮಾನ ಆರೋಪ
ಮೃತ ರಾಜೇಶ್ ಅವರ ಪೋಷಕರು ಮಾಧ್ಯಮಗಳ ಮುಂದೆ ಮಾತನಾಡಿ, ಅಪಘಾತದ ನಂತರ ನಮ್ಮನ್ನು ಕರೆಸಿ, ನಿಮ್ಮ ಮಗ ಸಾಯಲು ನಮ್ಮ ಕಾರೇ ಬೇಕಿತ್ತಾ?’ ಎಂದು ಅವಮಾನಿಸಲಾಗಿದೆ. ಎರಡು ಲಕ್ಷ ರೂಪಾಯಿ ಕೊಡ್ತೀವಿ, ತೆಗೆದುಕೊಂಡು ಹೋಗಿ ಎಂದು ದರ್ಪ ತೋರಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ. ನಮ್ಮ ಕಾರಿಗೆ ಇನ್ಸೂರೆನ್ಸ್ ಇದೆ, ನ್ಯಾಯಾಲಯದಲ್ಲಿ ನೋಡಿಕೊಳ್ಳೋಣ. ಮಾಧ್ಯಮಗಳ ಮುಂದೆ ಹೋಗಿ ನಮ್ಮ ಮರ್ಯಾದೆ ಹಾಳು ಮಾಡಿದ್ದೀರಿ. ಬೇಕಿದ್ದರೆ ಹಣ ತೆಗೆದುಕೊಳ್ಳಿ, ಇಲ್ಲದಿದ್ದರೆ ಹೋಗಿ ಎಂದು ಹೇಳಿ ನಮಗೆ ಬೆದರಿಕೆ ಹಾಕಲಾಗಿದೆ ಎಂದು ಕುಟುಂಬಸ್ಥರು ದೂರಿದ್ದಾರೆ. ಈ ಅವಮಾನದಿಂದ ಮನನೊಂದ ಕುಟುಂಬಸ್ಥರು ಯಾವುದೇ ಹಣ ಸ್ವೀಕರಿಸದೇ ವಾಪಸ್ ಬಂದಿದ್ದಾರೆ.
ಅವರಿಗೆ ಒಂದು ಕುಟುಂಬ ಹಾಳಾದರೂ ಪಶ್ಚಾತ್ತಾಪವೇ ಇಲ್ಲ
ಒಂದು ಕುಟುಂಬ ಹಾಳಾದರೂ ಪಶ್ಚಾತ್ತಾಪವೇ ಇಲ್ಲ ಎಂದು ಯುವಕನ ಕುಟುಂಬ ಬೇಸರ ವ್ಯಕ್ತಪಡಿಸಿದೆ. ಅಪಘಾತದಿಂದ ನಮ್ಮ ಜೀವನವೇ ನಾಶವಾಗಿದೆ. ಆದರೆ, ಯಾವುದೇ ಪಶ್ಚಾತ್ತಾಪವಿಲ್ಲದೇ ನಮ್ಮನ್ನು ಅವಮಾನಿಸಲಾಗಿದೆ. ಮಾಧ್ಯಮಗಳ ಮುಂದೆ ಪರಿಹಾರ ಕೊಡುತ್ತೇನೆ ಎಂದು ಹೇಳಿ, ಈಗ ನಮ್ಮ ಮೇಲೆ ಒತ್ತಡ ಮತ್ತು ಧಮ್ಕಿ ಹಾಕುತ್ತಿದ್ದಾರೆ ಎಂದು ಕಣ್ಣೀರಿಟ್ಟಿದ್ದಾರೆ. ನಮ್ಮ ಮಗನ ಸಾವಿಗೆ ನ್ಯಾಯ ಸಿಗಬೇಕು. ಹಣ ಬೇಕಿಲ್ಲ, ನ್ಯಾಯ ಬೇಕು ಎಂದು ಕುಟುಂಬಸ್ಥರು ಮನವಿ ಮಾಡಿದ್ದಾರೆ.
ಹೆಚ್.ಎಂ.ರೇವಣ್ಣ ಪ್ರತಿಕ್ರಿಯೆ ನೀಡಲು ನಿರಾಕರಣೆ
ಈ ಗಂಭೀರ ಆರೋಪಗಳ ಕುರಿತು ಪ್ರತಿಕ್ರಿಯೆ ಕೇಳಿದಾಗ, ಮಾಜಿ ಸಚಿವ ಹೆಚ್.ಎಂ.ರೇವಣ್ಣ ಮಾತನಾಡಲು ನಿರಾಕರಿಸಿದ್ದಾರೆ. ಅವರು ಏನು ಬೇಕಾದರೂ ಹೇಳಿಕೆ ಕೊಡಲಿ. ನಾನು ಈ ವಿಚಾರದಲ್ಲಿ ಮಾತನಾಡಲ್ಲ. ಯಾಕೆ ಮಾತನಾಡಬೇಕು? ಎಂದು ಹೇಳಿದ್ದಾರೆ. ಬಳಿಕ ಮಾತನಾಡಿದ ಅವರು, ಕಾರಿಗೆ ಇನ್ಸೂರೆನ್ಸ್ ಇದೆ, ಕ್ಲೇಮ್ ಆಗುತ್ತದೆ. ಆದರೂ ಮಾನವೀಯ ದೃಷ್ಟಿಯಿಂದ ಎರಡು ಲಕ್ಷ ಅಥವಾ ಐದು ಲಕ್ಷ ರೂಪಾಯಿ ಸಹಾಯ ಮಾಡಲು ಹೋಗಿದ್ದೆವು. ಆದರೆ ಅವರು 25 ಲಕ್ಷ ರೂಪಾಯಿ ಕೊಡಬೇಕು ಎಂದು ಬೇಡಿಕೆ ಇಟ್ಟರೆ ನಾವು ಏನು ಮಾಡಬೇಕು? ಎಂದು ತಮ್ಮ ವಾದವನ್ನು ಮಂಡಿಸಿದ್ದಾರೆ.
ಪ್ರಕರಣ ಇನ್ನಷ್ಟು ತೀವ್ರ
ಒಟ್ಟಾರೆ, ಮಾಜಿ ಸಚಿವರ ಪುತ್ರ ಸಂಬಂಧಿಸಿದ ಹಿಟ್ & ರನ್ ಪ್ರಕರಣದಲ್ಲಿ ಇದೀಗ ಪರಿಹಾರ, ಅವಮಾನ ಹಾಗೂ ದರ್ಪದ ಆರೋಪಗಳು ಕೇಳಿಬಂದಿದ್ದು, ವಿಷಯ ರಾಜಕೀಯ ಹಾಗೂ ಸಾಮಾಜಿಕ ವಲಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ. ಮೃತ ಯುವಕನ ಕುಟುಂಬ ನ್ಯಾಯಕ್ಕಾಗಿ ಹೋರಾಟ ಮುಂದುವರಿಸುವುದಾಗಿ ಸ್ಪಷ್ಟಪಡಿಸಿದ್ದು, ಮುಂದಿನ ದಿನಗಳಲ್ಲಿ ಪ್ರಕರಣ ಯಾವ ದಿಕ್ಕಿನತ್ತ ಸಾಗಲಿದೆ ಎಂಬ ಕುತೂಹಲ ಮೂಡಿಸಿದೆ.

