- Home
- Karnataka Districts
- ಮಾದಪ್ಪನ ಬೆಟ್ಟದಲ್ಲಿ ನರಬೇಟೆಗೆ ಕಾದು ಕುಳಿತ ಚಿರತೆ ವಿಡಿಯೋ ವೈರಲ್, ದಾಳಿಯ ವೇಳೆ ಸ್ನೇಹಿತರ ಕರೆ, ನರಳುತ್ತಾ ಕೇಳಿದ ಸಾವಿನ ಕೂಗು!
ಮಾದಪ್ಪನ ಬೆಟ್ಟದಲ್ಲಿ ನರಬೇಟೆಗೆ ಕಾದು ಕುಳಿತ ಚಿರತೆ ವಿಡಿಯೋ ವೈರಲ್, ದಾಳಿಯ ವೇಳೆ ಸ್ನೇಹಿತರ ಕರೆ, ನರಳುತ್ತಾ ಕೇಳಿದ ಸಾವಿನ ಕೂಗು!
ಮಲೆಮಹದೇಶ್ವರ ಬೆಟ್ಟಕ್ಕೆ ಪಾದಯಾತ್ರೆ ಹೊರಟಿದ್ದ ಮಂಡ್ಯದ ಯುವಕ ಪ್ರವೀಣ್ ಚಿರತೆ ದಾಳಿಗೆ ಬಲಿಯಾಗಿದ್ದಾನೆ. ದಾಳಿಯ ವೇಳೆ ಸ್ನೇಹಿತರು ಕರೆ ಮಾಡಿದಾಗ ಆತನ ನರಳಾಟ ಕೇಳಿಬಂದಿದ್ದು, ನಂತರ ಆತನ ಶವ ಪತ್ತೆಯಾಗಿದೆ. ಈ ಘಟನೆಯಿಂದಾಗಿ, ಜಿಲ್ಲಾಡಳಿತವು ಪಾದಯಾತ್ರೆ ಮತ್ತು ದ್ವಿಚಕ್ರ ವಾಹನ ಸಂಚಾರ ನಿಷೇಧಿಸಿದೆ.

ದಾಳಿಯ ವೇಳೆ ಸ್ನೇಹಿತರ ಕರೆ, ನರಳುತ್ತಾ ಮಾತಾಡಿದವನ ಶವ ಪತ್ತೆ!
ಹನೂರು: ಪ್ರಸಿದ್ಧ ಯಾತ್ರಾಸ್ಥಳ ಮಲೆಮಹದೇಶ್ವರ ಬೆಟ್ಟಕ್ಕೆ ಕಾಲ್ನಡಿಗೆಯಲ್ಲಿ ತೆರಳುತ್ತಿದ್ದ ಯುವಕ ಚಿರತೆ ದಾಳಿಗೆ ಬಲಿಯಾದ ಘಟನೆ ಚಾಮರಾಜನಗರ ಜಿಲ್ಲೆ ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟದ ತಪ್ಪಲು ಪ್ರದೇಶ ತಾಳುಬೆಟ್ಟದಲ್ಲಿ ಬುಧವಾರ ಮುಂಜಾನೆ ನಡೆದಿದೆ. ಚಿರತೆ ದಾಳಿಯ ವೇಳೆ ಆತನಿಗೆ ಸ್ನೇಹಿತರು ಕರೆ ಮಾಡಿದ್ದು, ಆತ ನರಳಾಡುವ ಶಬ್ದ ಕೇಳಿಸಿದೆ. ಈ ಘಟನೆ ಇಡೀ ಪ್ರದೇಶದಲ್ಲಿ ಆತಂಕಕ್ಕೆ ಕಾರಣವಾಗಿದೆ. ಜನ ಮನೆಯಿಂದ ಹೊರಬರಲು ಕೂಡ ಭಯಪಡುವ ಸ್ಥಿತಿ ನಿರ್ಮಾಣವಾಗಿದೆ.
ಮೃತ ಬೆಟ್ಟದ ಕಡೆಗೆ ಓಡಿದರೆ, ಉಳಿದವರು ತಾಳಬೆಟ್ಟದ ಕಡೆ ಓಟ
ಮಂಡ್ಯ ಜಿಲ್ಲೆಯ ಚೀರನಹಳ್ಳಿ ಗ್ರಾಮದ ಪ್ರವೀಣ್ (30) ಚಿರತೆ ದಾಳಿಗೆ ಮೃತಪಟ್ಟಿರುವ ಪಾದಯಾತ್ರಿಕ. ಕ್ಷೇತ್ರಕ್ಕೆ ಚೀರನಹಳ್ಳಿ ಹಾಗೂ ಸುತ್ತಮುತ್ತಲಿನ ಗ್ರಾಮಗಳಿಂದ ನೂರಾರು ಪಾದಯಾತ್ರಿಗಳು ತೆರಳಿದ್ದರು. ಮಂಗಳವಾರ ರಾತ್ರಿ ಕೆಲವು ಭಕ್ತರು ತಾಳುಬೆಟ್ಟದಲ್ಲಿ ವಾಸ್ತವ್ಯ ಹೂಡಿ ಬುಧವಾರ ಬೆಳಗಿನ ಜಾವ ಟಾರ್ಚ್ ಹಿಡಿದು ಮಲೆ ಮಹದೇಶ್ವರ ಬೆಟ್ಟಕ್ಕೆ ಹೊರಟಿದ್ದರು. ಈ ವೇಳೆ, ರಂಗಸ್ವಾಮಿ ಒಡ್ಡಿನ ಸಮೀಪದ ಪಾದಯಾತ್ರಿಕರ ಮಾರ್ಗದಲ್ಲಿ ಕುಳಿತಿದ್ದ ಚಿರತೆ, ಏಕಾಏಕಿ ಪ್ರವೀಣ್‌ನನ್ನು ಅಟ್ಟಾಡಿಸಿಕೊಂಡು ಬಂದಿದೆ. ಚಿರತೆ ನೋಡಿ ಪ್ರವೀಣ್ ಬೆಟ್ಟದ ಕಡೆಗೆ ಓಡಿದರೆ, ಉಳಿದವರು ತಾಳಬೆಟ್ಟದ ಕಡೆ ಓಡಿ ಹೋದರು.
ಕರೆ ಮಾಡಿದಾಗ ಅಯ್ಯೋ ಅಪ್ಪ ಚೀರಾಟ, ಮತ್ತೆ ಸಿಕ್ಕಿದ್ದು ಹೆಣ!
ಸುಮಾರು 1 ಕಿ.ಮೀ. ಓಡಿ ಬಂದ ಬಳಿಕ ಉಳಿದವರು ಪ್ರವೀಣ್‌ನಿಗೆ ಮೊಬೈಲ್‌ನಲ್ಲಿ ಕರೆ ಮಾಡಿದರೆ, ‘ಅಯ್ಯೋ ಅಪ್ಪ’ ಅಂತಾ ಚೀರಾಟ ಕೇಳಿ ಬಂತು. ನಂತರ ಆತನ ಸಂಪರ್ಕ ಕಡಿತವಾಯಿತು. ಭಯಭೀತರಾದ ಸ್ನೇಹಿತರು ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿದ್ದರಿಂದ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿ ಶವ ಪತ್ತೆ ಹಚ್ಚಿದ್ದಾರೆ. ಬೆಳಗ್ಗೆ 11 ಗಂಟೆ ವೇಳೆಗೆ ಶವ ಪತ್ತೆಯಾಗಿದೆ. ಚಿರತೆಯು ಹಳ್ಳಕ್ಕೆ ಪ್ರವೀಣ್ ಮೃತದೇಹ ಎಳೆದೊಯ್ದಿತ್ತು. ಹಗ್ಗ ಕಟ್ಟಿಕೊಂಡು ಪ್ರವೀಣ್ ಮೃತದೇಹವನ್ನು ಸಿಬ್ಬಂದಿ ಎತ್ತಿಕೊಂಡು ಬಂದಿದ್ದಾರೆ.
ತಾತ್ಕಾಲಿಕ ನಿರ್ಬಂಧ
ಚಿರತೆ ದಾಳಿ ಹಿನ್ನೆಲೆಯಲ್ಲಿ ಮಹದೇಶ್ವರ ಬೆಟ್ಟಕ್ಕೆ ಹೋಗುವ ಪಾದಯಾತ್ರೆಗೆ ತಾತ್ಕಾಲಿಕ ನಿರ್ಬಂಧ ಹೇರಲಾಗಿದೆ. ಬೆಳಗಿನ ಜಾವ ಹಾಗೂ ಸಂಜೆ ವೇಳೆ ವನ್ಯಪ್ರಾಣಿಗಳ ಸಂಚಾರ ಹೆಚ್ಚಾಗಿರುತ್ತದೆ. ಹೀಗಾಗಿ, ಬೆಳಗ್ಗೆ 6 ರಿಂದ ಸಂಜೆ 6 ರವರೆಗೆ ಮಾತ್ರ ಪಾದಯಾತ್ರೆಗೆ ಅವಕಾಶ ನೀಡಲು ಹಾಗೂ ಚಿರತೆ ಸೆರೆ ಹಿಡಿಯಲು ಅರಣ್ಯ ಇಲಾಖೆಯಿಂದ ಬೋನು ಅಳವಡಿಕೆಗೆ ಕ್ರಮ ಕೈಗೊಳ್ಳುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ಮರದ ಮರೆಯಲ್ಲಿ ನಿಂತು ಹೊಂಚು ಹಾಕುವ ಚಿರತೆ ವಿಡಿಯೋ ವೈರಲ್
ಈ ಘಟನೆ ಬಳಿಕ ತಾಳುಬೆಟ್ಟ ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿ ಚಿರತೆ ಮರುಮರು ಕಾಣಿಸಿಕೊಳ್ಳುತ್ತಿರುವುದು ಭಕ್ತರು ಮತ್ತು ಸ್ಥಳೀಯರಲ್ಲಿ ಭಯದ ವಾತಾವರಣವನ್ನು ನಿರ್ಮಿಸಿದೆ. ಇದರ ಜೊತೆಗೆ ತಾಳುಬೆಟ್ಟದ ಅರಣ್ಯ ಪ್ರದೇಶದಲ್ಲಿ ಮರದ ಮರೆಯಲ್ಲಿ ನಿಂತು ಚಿರತೆ ಹೊಂಚು ಹಾಕುತ್ತಿರುವ ದೃಶ್ಯಗಳು ಮೊಬೈಲ್ ವಿಡಿಯೋದಲ್ಲಿ ಸೆರೆಹಿಡಿಯಲ್ಪಟ್ಟಿದ್ದು, ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ವೈರಲ್ ಆಗಿದೆ. ಈ ದೃಶ್ಯಗಳು ಸಾರ್ವಜನಿಕರಲ್ಲಿ ಮತ್ತಷ್ಟು ಆತಂಕ ಮೂಡಿಸಿವೆ.
ಪಾದಯಾತ್ರೆ ಹಾಗೂ ದ್ವಿಚಕ್ರ ವಾಹನ ಸಂಚಾರಕ್ಕೆ ನಿರ್ಬಂಧ
ಚಿರತೆ ದಾಳಿ ಪ್ರಕರಣದ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಮುನ್ನೆಚ್ಚರಿಕೆ ಕ್ರಮವಾಗಿ ಮಲೆ ಮಹದೇಶ್ವರ ಬೆಟ್ಟಕ್ಕೆ ಪಾದಯಾತ್ರೆ ಹಾಗೂ ದ್ವಿಚಕ್ರ ವಾಹನ ಸಂಚಾರವನ್ನು ತಾತ್ಕಾಲಿಕವಾಗಿ ನಿಷೇಧಿಸಿದೆ. ಮುಂದಿನ ಮೂರು ದಿನಗಳವರೆಗೆ ಈ ನಿರ್ಬಂಧ ಜಾರಿಯಲ್ಲಿರಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಬೆಟ್ಟಕ್ಕೆ ತೆರಳುವ ಎಲ್ಲಾ ಬೈಕ್‌ಗಳನ್ನು ಪೊಲೀಸರು ಹಾಗೂ ಅರಣ್ಯ ಸಿಬ್ಬಂದಿ ತಡೆದು, ಭಕ್ತರನ್ನು ಬಸ್‌ಗಳ ಮೂಲಕವೇ ಮಹದೇಶ್ವರ ಬೆಟ್ಟಕ್ಕೆ ಕಳುಹಿಸಲಾಗುತ್ತಿದೆ. ಯಾರೂ ಕೂಡ ಕಣ್ತಪ್ಪಿಸಿ ಪಾದಯಾತ್ರೆಗೆ ತೆರಳದಂತೆ ಪ್ರಮುಖ ಮಾರ್ಗಗಳಲ್ಲಿ ಕಟ್ಟುನಿಟ್ಟಿನ ನಿಗಾ ವಹಿಸಲಾಗಿದೆ. ಪೊಲೀಸರು ಹಾಗೂ ಅರಣ್ಯ ಇಲಾಖೆ ಸಿಬ್ಬಂದಿ ಸಂಯುಕ್ತವಾಗಿ ಕಾರ್ಯಾಚರಣೆ ನಡೆಸುತ್ತಿದ್ದು, ಭಕ್ತರ ಸುರಕ್ಷತೆಗೆ ಹೆಚ್ಚಿನ ಒತ್ತು ನೀಡಲಾಗಿದೆ.
ಮತ್ತೊಮ್ಮೆ ಪ್ರತ್ಯಕ್ಷವಾದ ಚಿರತೆ – ಭಕ್ತರಲ್ಲಿ ಭೀತಿ
ಈ ನಡುವೆ ನಿನ್ನೆ ರಾತ್ರಿ ಕೂಡ ತಾಳುಬೆಟ್ಟ ಪ್ರದೇಶದಲ್ಲಿ ಚಿರತೆ ಪ್ರತ್ಯಕ್ಷವಾಗಿದ್ದು, ಅರಣ್ಯ ಇಲಾಖೆ ಸಿಬ್ಬಂದಿಗೆ ಮಾಹಿತಿ ಲಭ್ಯವಾಗಿದೆ. ಮರುಮರು ಚಿರತೆ ಕಾಣಿಸಿಕೊಳ್ಳುತ್ತಿರುವ ಹಿನ್ನಲೆಯಲ್ಲಿ ಭಕ್ತರಲ್ಲಿ ಭಯ ಮನೆ ಮಾಡಿದ್ದು, ಶೀಘ್ರವಾಗಿ ಚಿರತೆಯನ್ನು ಸೆರೆಹಿಡಿಯಬೇಕೆಂಬ ಒತ್ತಡ ಅರಣ್ಯ ಇಲಾಖೆಯ ಮೇಲೆ ಹೆಚ್ಚಾಗಿದೆ. ಚಿರತೆ ಸೆರೆಹಿಡಿಯಲು ಅರಣ್ಯ ಇಲಾಖೆ ಈಗಾಗಲೇ ಬೋನುಗಳನ್ನು ಅಳವಡಿಸಿದ್ದು, ನಿರಂತರವಾಗಿ ಪತ್ತೆ ಕಾರ್ಯಾಚರಣೆ ನಡೆಸುತ್ತಿದೆ. ಆದರೆ, ಇನ್ನೂ ಚಿರತೆ ಸೆರೆಗೆ ಸಿಕ್ಕಿಲ್ಲ ಎಂಬುದು ಆತಂಕ ಹೆಚ್ಚಿಸುವಂತೆ ಮಾಡಿದೆ.
ಉಸ್ತುವಾರಿ ಸಚಿವರಿಂದ ತುರ್ತು ಸಭೆ
ಘಟನೆಯ ಗಂಭೀರತೆಯನ್ನು ಗಮನಿಸಿದ ಚಾಮರಾಜನಗರ ಜಿಲ್ಲಾ ಉಸ್ತುವಾರಿ ಸಚಿವ ವೆಂಕಟೇಶ್ ಅವರು ತುರ್ತು ಸಭೆ ಕರೆದಿದ್ದಾರೆ. ಅರಣ್ಯ ಇಲಾಖೆ ಹಾಗೂ ಜಿಲ್ಲಾಡಳಿತದ ಅಧಿಕಾರಿಗಳೊಂದಿಗೆ ಸಂಜೆಯ ವೇಳೆಗೆ ಸಭೆ ನಡೆಸಲಿದ್ದು, ಭಕ್ತರು ಹಾಗೂ ಪಾದಯಾತ್ರಿಕರ ಸುರಕ್ಷತೆ ಬಗ್ಗೆ ಮಹತ್ವದ ಚರ್ಚೆ ನಡೆಯಲಿದೆ. ನಗರದ ಡಿಸಿ ಕಚೇರಿ ಸಭಾಂಗಣದಲ್ಲಿ ನಡೆಯಲಿರುವ ಈ ಸಭೆಯಲ್ಲಿ, ಮುಂದಿನ ಮುನ್ನೆಚ್ಚರಿಕೆ ಕ್ರಮಗಳು, ಚಿರತೆ ಸೆರೆ ಕಾರ್ಯಾಚರಣೆಯ ಪ್ರಗತಿ ಹಾಗೂ ಭಕ್ತರ ಸಂಚಾರ ವ್ಯವಸ್ಥೆ ಕುರಿತು ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ.
ಒಟ್ಟಿನಲ್ಲಿ, ಮಲೆ ಮಹದೇಶ್ವರ ಬೆಟ್ಟದ ತಾಳುಬೆಟ್ಟ ಪ್ರದೇಶದಲ್ಲಿ ಚಿರತೆ ಆತಂಕ ತೀವ್ರಗೊಂಡಿದ್ದು, ಭಕ್ತರ ಸುರಕ್ಷತೆಗಾಗಿ ಜಿಲ್ಲಾಡಳಿತ ಹಾಗೂ ಅರಣ್ಯ ಇಲಾಖೆ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡಿದೆ. ಚಿರತೆ ಸೆರೆಗೆ ಸಿಗುವವರೆಗೆ ಮುನ್ನೆಚ್ಚರಿಕೆ ಕ್ರಮಗಳು ಮುಂದುವರಿಯಲಿದ್ದು, ಭಕ್ತರು ಸಹಕಾರ ನೀಡಬೇಕು ಎಂದು ಅಧಿಕಾರಿಗಳು ಮನವಿ ಮಾಡಿದ್ದಾರೆ.

