ಮಹದೇಶ್ವರ ಬೆಟ್ಟಕ್ಕೆ ಪಾದಯಾತ್ರೆ ಹೊರಟಿದ್ದ ಭಕ್ತರ ಗುಂಪಿನ ಮೇಲೆ ಚಿರತೆ ದಾಳಿ ನಡೆಸಿದ್ದು, ಪ್ರವೀಣ್ ಎಂಬ ಯಾತ್ರಿಕ ಸಾವನ್ನಪ್ಪಿದ್ದಾನೆ. ಈ ಘಟನೆಯ ಹಿನ್ನೆಲೆಯಲ್ಲಿ, ಅರಣ್ಯ ಇಲಾಖೆಯು ತಾತ್ಕಾಲಿಕವಾಗಿ ಪಾದಯಾತ್ರೆ ಮಾರ್ಗವನ್ನು ನಿರ್ಬಂಧಿಸಿ, ಚಿರತೆಯನ್ನು ಸೆರೆಹಿಡಿಯಲು ಕ್ರಮ ಕೈಗೊಂಡಿದೆ.

ವರದಿ - ಪುಟ್ಟರಾಜು. ಆರ್. ಸಿ ಏಷಿಯಾನೆಟ್ ಸುವರ್ಣ ನ್ಯೂಸ್ , ಚಾಮರಾಜನಗರ.

ಚಾಮರಾಜನಗರ(ಜ.21) : ಅವರೆಲ್ಲಾ ಮಹದೇಶ್ವರನ ದರ್ಶನಕ್ಕೆ ಪಾದಯಾತ್ರೆ ಹೊರಟಿದ್ದರು. ಮಾದಪ್ಪನ ಸನ್ನಿಧಿಗೆ ಇನ್ನೇನು ಕೆಲವೇ ಕಿಲೋಮೀಟರ್ ದೂರ ಇರುವಂತೆಯೇ ಏಕಾಏಕಿ ದಾಳಿ ನಡೆಸಿದ ಚಿರತೆ ಯಾತ್ರಿಕನೊಬ್ಬನನ್ನು ಕೊಂದು ಕಾಡಿನೊಳಗೆ ಎಳೆದೊಯ್ದಿದೆ. ಮಾದಪ್ಪನ ದರ್ಶನ ಮಾಡುವ ಮೊದಲೇ ಚಿರತೆ ದಾಳಿಗೆ ಆತ ಬಲಿಯಾಗಿದ್ದಾನೆ..

ಚಾಮರಾಜನಗರ ಜಿಲ್ಲೆಯಲ್ಲಿ ಇತ್ತೀಚೆಗೆ ಮಾನವ ವನ್ಯಜೀವಿ ಸಂಘರ್ಷ ಹೆಚ್ಚಾಗುತ್ತಿದೆ. ನಿತ್ಯ ಒಂದಲ್ಲ ಒಂದು ಕಡೆ ಹುಲಿ, ಚಿರತೆ ಆನೆ ದಾಳಿ ಪ್ರಕರಣಗಳು ನಡೆಯುತ್ತಲೇ. ಇದೀಗ ಮಹದೇಶ್ವರ ಬೆಟ್ಟಕ್ಕೆ ಪಾದಯಾತ್ರೆ ಹೊರಟಿದ್ದ ಭಕ್ತನೊಬ್ಬ ಚಿರತೆ ದಾಳಿಗೆ ಬಲಿಯಾಗಿದ್ದಾನೆ. ಮಂಡ್ಯ ತಾಲೂಕಿನ ಚೀರನಹಳ್ಳಿ ಗ್ರಾಮದ ಸುಮಾರು ಐವತ್ತಕ್ಕು ಹೆಚ್ಚು ಮಂದಿ ಮಾದಪ್ಪನ ದರ್ಶನಕ್ಕೆ ಪಾದಯಾತ್ರೆ ಮೂಲಕ ತೆರಳುತ್ತಿದ್ದರು. ತಾಳ ಬೆಟ್ಟದಿಂದ ಮಹದೇಶ್ವರ ಬೆಟ್ಟಕ್ಕೆ ಇರುವ ಮೆಟ್ಟಿಲುಗಳ ಮಾರ್ಗದಲ್ಲಿ ಬೆಳಗಿನ ಜಾವ ತೆರಳುತ್ತಿದ್ದಾಗ ಚಿರತೆ ಪಾದಯಾತ್ರಿಗಳ ಮೇಲೆ ಎರಗಿ ಬಂದಿದೆ. ಚಿರತೆ ನೋಡಿ ಪಾದಯಾತ್ರಿಗಳು ಗಾಬರಿಗೊಂಡು ಚಲ್ಲಾಪಿಲ್ಲಿಯಾಗಿದ್ದಾರೆ. ಈ ವೇಳೆ ಪ್ರವೀಣ್ ಎಂಬಾತನನ್ನು ಕಾಡಿಗೆ ಎಳೆದೊಯ್ದ ಕೊಂದು ಹಾಕಿದೆ..

ಪ್ರವೀಣ್ ಮೇಲೆ ದಾಳಿ ನಡೆಸಿದ ಚಿರತೆ ಆತನನ್ನು ಸುಮಾರು 75 ಮೀಟರ್ ದೂರ ಕಂದಕದೊಳಗೆ ಎಳೆದೊಯ್ದಿತ್ತು. ತಾನು ಕೊಂದು ಹಾಕಿದ ಪ್ರವೀಣ್ ಶವದ ಮುಂದೆಯೇ ಗಂಟೆಗಟ್ಟಲೆ ಕಾದು ಕುಳಿತಿತ್ತು. ವಿಷಯ ತಿಳಿದ ಅರಣ್ಯ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಚಿರತೆಯನ್ನು ಓಡಿಸಿ ಬಳಿಕ ಪ್ರವೀಣ್ ಶವವನ್ನು ಕಾಡಿನಿಂದ ಹೊರ ತಂದಿದ್ದಾರೆ. ಚಿರತೆ ದಾಳಿ ಹಿನ್ನಲೆಯಲ್ಲಿ ತಾಳ ಬೆಟ್ಟದಿಂದ ಮಹದೇಶ್ವರಬೆಟ್ಟದವರೆಗೆ ತಾತ್ಕಾಲಿಕವಾಗಿ ಪಾದಯಾತ್ರೆ ನಿರ್ಬಂಧಿಸಲಾಗಿದ್ದು ಈ ಮಾರ್ಗದಲ್ಲಿ ದ್ವಿಚಕ್ರ ವಾಹನ ಸವಾರರು ಎಚ್ಚರಿಕೆಯಿಂದ ಸಂಚರಿಸುವಂತೆ ಅರಣ್ಯ ಸಿಬ್ಬಂದಿ ಎಚ್ಚರಿಕೆ ನೀಡುತ್ತಿದ್ದಾರೆ.

ತಾಳಬೆಟ್ಟದಿಂದ ಮಹದೇಶ್ವರ ಬೆಟ್ಟಕ್ಕೆ ಪಾದಯಾತ್ರೆಗೆ ಸಮಯ ನಿಗದಿಗೊಳಿಸಿ ಕಟ್ಟುನಿಟ್ಟಾಗಿ ಜಾರಿ ಗೊಳಿಸಲು ಅರಣ್ಯ ಇಲಾಖೆ ಮುಂದಾಗಿದೆ. ಅಲ್ಲದೆ ಭಕ್ತರ ಹಿತದೃಷ್ಟಿಯಿಂದ ಈ ಚಿರತೆಯನ್ನು ಸೆರೆ ಹಿಡಿಯಲು ಬೋನು ಅಳವಡಿಸಲು ಕ್ರಮ ವಹಿಸಲಾಗಿದೆ..

ಚಿರತೆ ದಾಳಿ ಪ್ರಕರಣದಿಂದ ಮಾದಪ್ಪನ ಭಕ್ತರು ಬೆಚ್ಚಿಬಿದ್ದಿದ್ದಾರೆ. ಬೆಟ್ಟಕ್ಕೆ ಪಾದಯಾತ್ರೆ ಮಾಡುವವರಿಗೆ ಸೂಕ್ತ ರಕ್ಷಣೆ ನೀಡಬೇಕು ಎಂದು ಅವರು ಆಗ್ರಹಿಸಿದ್ದಾರೆ. ಜಿಲ್ಲೆಯ ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟದ ಅರಣ್ಯ ವ್ಯಾಪ್ತಿಯಲ್ಲಿ ಚಿರತೆ ಸೆರೆ ಹಿಡಿಯುವ ಕಾರ್ಯಾಚರಣೆಗೆ ತೊಂದರೆಯಾಗದಂತೆ ಮಹದೇಶ್ವರ ಬೆಟ್ಟಕ್ಕೆ ಭಕ್ತಾಧಿಗಳು, ಸಾರ್ವಜನಿಕರು ಪಾದಯಾತ್ರೆ ಅಥವಾ ಕಾಲ್ನಡಿಗೆಯಲ್ಲಿ ತೆರಳುವುದನ್ನು ಹಾಗೂ ದ್ವಿಚಕ್ರ ವಾಹನಗಳಲ್ಲಿ ಸಂಚರಿಸುವುದನ್ನು ಜನವರಿ 21 ರಿಂದ 24ರ ಮಧ್ಯರಾತ್ರಿ ವರೆಗೆ ತಾತ್ಕಾಲಿಕವಾಗಿ ನಿರ್ಬಂಧಿಸಿ, ನಿಷೇಧಾಜ್ಞೆ ಹೊರಡಿಸಿ ಜಿಲ್ಲಾಧಿಕಾರಿಯವರು ಆದೇಶಿಸಿದ್ದಾರೆ...