- Home
- Karnataka Districts
- ಕೇಂದ್ರದಿಂದ ರಾಜ್ಯಕ್ಕೆ ಕೊಟ್ಟ ಯೂರಿಯಾ ಗೊಬ್ಬರ ಕೇರಳಕ್ಕೆ ಕಳಿಸಿದ ಸರ್ಕಾರಿ ಗೋದಾಮು; ರಾಜ್ಯ ರೈತರಿಗೆ ಪಂಗನಾಮ!
ಕೇಂದ್ರದಿಂದ ರಾಜ್ಯಕ್ಕೆ ಕೊಟ್ಟ ಯೂರಿಯಾ ಗೊಬ್ಬರ ಕೇರಳಕ್ಕೆ ಕಳಿಸಿದ ಸರ್ಕಾರಿ ಗೋದಾಮು; ರಾಜ್ಯ ರೈತರಿಗೆ ಪಂಗನಾಮ!
ನಂಜನಗೂಡಿನ ಗೋದಾಮಿನಿಂದ ಕೇರಳಕ್ಕೆ ಯೂರಿಯಾ ಗೊಬ್ಬರ ಕಳ್ಳಸಾಗಣೆ ಪ್ರಕರಣ ಬೆಳಕಿಗೆ. ಚೆಕ್ ಪೋಸ್ಟ್‌ನಲ್ಲಿ 15 ಟನ್ ಗೊಬ್ಬರ ವಶ. ಅಂತರರಾಜ್ಯ ಸಾಗಾಟ ನಿಷೇಧದ ನಡುವೆಯೂ ಅಕ್ರಮ ಸಾಗಾಟ ನಡೆದಿರುವುದು ತೀವ್ರ ಚರ್ಚೆಗೆ ಗ್ರಾಸ.

ರಾಜ್ಯದಲ್ಲಿ ಗೊಬ್ಬರಕ್ಕಾಗಿ ರೈತರು ಸಾಲು ಸಾಲು ನಿಂತು ಪರದಾಡುತ್ತಿರುವ ಸಂದರ್ಭದಲ್ಲಿ, ನಂಜನಗೂಡಿನ ಗೋದಾಮಿನಿಂದ ಕೇರಳಕ್ಕೆ ಕಳ್ಳಸಾಗಣೆ ಮಾಡಲಾಗುತ್ತಿದ್ದ ಪ್ರಕರಣವೊಂದು ಬೆಳಕಿಗೆ ಬಂದಿದೆ. ಕೃಷಿ ಇಲಾಖೆ ಮತ್ತು ಪೊಲೀಸರ ಜಂಟಿ ದಾಳಿಯಲ್ಲಿ ಸುಮಾರು 15 ಟನ್ ಯೂರಿಯಾ ಗೊಬ್ಬರವನ್ನು ವಶಪಡಿಸಿಕೊಳ್ಳಲಾಗಿದೆ.
ಈ ಘಟನೆ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಬಂಡೀಪುರದ ಮೂಲೆಹೊಳೆ ಚೆಕ್ ಪೋಸ್ಟ್‌ನಲ್ಲಿ ನಡೆದಿದೆ. ಖಚಿತ ಮಾಹಿತಿಯ ಮೇರೆಗೆ ದಾಳಿ ನಡೆಸಿದ ಅಧಿಕಾರಿಗಳು, ಸುಮಾರು 330 ಚೀಲ ಯೂರಿಯಾ ಹೊತ್ತೊಯ್ಯುತ್ತಿದ್ದ ಲಾರಿಯೊಂದನ್ನು ವಶಪಡಿಸಿ, ಲಾರಿ ಚಾಲಕನನ್ನು ವಿಚಾರಣೆಗಾಗಿ ವಶಕ್ಕೆ ತೆಗೆದುಕೊಂಡಿದ್ದಾರೆ.
ಅಂತರಾಜ್ಯ ಸಾಗಾಟಕ್ಕೆ ಅನುಮತಿ ಇಲ್ಲ!
ರಾಜ್ಯದಲ್ಲಿ ಗೊಬ್ಬರದ ಕೊರತೆ ಇದ್ದು, ಸರ್ಕಾರದ ನಿಯಮಾನುಸಾರ ಅಂತರರಾಜ್ಯ ಸಾಗಾಟವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಇದನ್ನು ಉಲ್ಲಂಘಿಸಿ ಕೇರಳಕ್ಕೆ ಸಾಗಿಸುತ್ತಿದ್ದ ಪ್ರಕರಣವು ಗಂಭೀರ ಚರ್ಚೆಗೆ ಕಾರಣವಾಗಿದೆ.
ನಂಜನಗೂಡಿನ ಗೋದಾಮು ಮೂಲ!
ತದನಂತರದ ತನಿಖೆಯಲ್ಲಿ, ಈ ಗೊಬ್ಬರವನ್ನು ನಂಜನಗೂಡಿನ ಸರ್ಕಾರಿ ಗೋದಾಮಿನಿಂದ ಸಾಗಿಸಲಾಗುತ್ತಿತ್ತು ಎಂಬ ಮಾಹಿತಿ ಲಭಿಸಿದೆ. ಘಟನೆಯ ಸಂಬಂಧಪಟ್ಟಂತೆ ಗುಂಡ್ಲುಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ, ಮುಂದಿನ ತನಿಖೆ ಆರಂಭಿಸಲಾಗಿದೆ.
ಕಾನೂನು ಕ್ರಮಕ್ಕೆ ಕೋರಿಕೆ
ಈ ಮಧ್ಯೆ ರೈತ ಸಂಘಗಳ ಪ್ರತಿಕ್ರಿಯೆಯೂ ಹೊರಬಿದ್ದಿದ್ದು, 'ರಾಜ್ಯಕ್ಕೆ ಗೊಬ್ಬರ ಸಾಕಾಗದ ವೇಳೆ ಇಂತಹ ಅಕ್ರಮ ಸಾಗಾಟಗಳು ರೈತರ ಹಕ್ಕಿಗೆ ಧಕ್ಕೆ ಉಂಟುಮಾಡುತ್ತವೆ. ಗೋದಾಮಿನಲ್ಲಿ ಯಾವುದೇ ಅಧಿಕಾರಿಗಳ ಕೈವಾಡವಿದೆಯೇ ಎಂಬುದರ ಮೇಲೆ ಹೆಚ್ಚಿನ ತನಿಖೆ ನಡೆಯಬೇಕು' ಎಂಬ ಒತ್ತಾಯ ಕೇಳಿಬಂದಿದೆ.