- Home
- Karnataka Districts
- ರೆಡ್ಡಿ ನಿವಾಸದಲ್ಲಿ ಮತ್ತೊಂದು ಬುಲೆಟ್ ಪತ್ತೆ, ಭರತ್ ತಂದೆ ಶ್ರೀರಾಮುಲು ಕೊಲೆಗೆ ಯತ್ನಿಸಿದ್ರು ಜನಾರ್ದನ ರೆಡ್ಡಿ ಗಂಭೀರ ಆರೋಪ!
ರೆಡ್ಡಿ ನಿವಾಸದಲ್ಲಿ ಮತ್ತೊಂದು ಬುಲೆಟ್ ಪತ್ತೆ, ಭರತ್ ತಂದೆ ಶ್ರೀರಾಮುಲು ಕೊಲೆಗೆ ಯತ್ನಿಸಿದ್ರು ಜನಾರ್ದನ ರೆಡ್ಡಿ ಗಂಭೀರ ಆರೋಪ!
ಬಳ್ಳಾರಿ ಫೈರಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ, ಮಾಜಿ ಸಚಿವ ಜನಾರ್ದನ ರೆಡ್ಡಿ ತಮ್ಮ ಮೇಲೆ ನಡೆದಿದ್ದು ಪೂರ್ವನಿಯೋಜಿತ ದಾಳಿ ಎಂದು ಆರೋಪಿಸಿದ್ದಾರೆ. ತಮ್ಮ ನಿವಾಸದ ಬಳಿ ಪತ್ತೆಯಾದ ಮತ್ತೊಂದು ಬುಲೆಟ್ ಪ್ರದರ್ಶಿಸಿ, ಶಾಸಕ ಭರತ್ ರೆಡ್ಡಿ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದಾರೆ.

ನಿವಾಸದ ಬಳಿ ಪತ್ತೆಯಾದ ಮತ್ತೊಂದು ಬುಲೆಟ್
ಬಳ್ಳಾರಿ: ಫ್ಲೆಕ್ಸ್ ಗಲಾಟೆ, ಫೈರಿಂಗ್ ಹಾಗೂ ಕಾಂಗ್ರೆಸ್ ಕಾರ್ಯಕರ್ತನ ಸಾವಿನ ಪ್ರಕರಣ ರಾಜಕೀಯ ವಲಯದಲ್ಲಿ ಭಾರೀ ಸಂಚಲನ ಮೂಡಿಸಿರುವ ನಡುವೆಯೇ, ಮಾಜಿ ಸಚಿವ ಜನಾರ್ದನ ರೆಡ್ಡಿ ಶಾಸಕ ಭರತ್ ರೆಡ್ಡಿ ಮೇಲೆ ಗಂಭೀರ ಆರೋಪಗಳನ್ನು ಹೊರಿಸಿದ್ದಾರೆ. ಬಳ್ಳಾರಿಯಲ್ಲಿರುವ ತಮ್ಮ ನಿವಾಸದ ಬಳಿ ಮಾಧ್ಯಮದೊಂದಿಗೆ ಮಾತನಾಡಿದ ಅವರು ಈ ಸಂಪೂರ್ಣ ಘಟನೆ ಪೂರ್ವನಿಯೋಜಿತ ದಾಳಿ ಆಗಿದ್ದು, ತಮ್ಮನ್ನೇ ಗುರಿಯಾಗಿಸಿಕೊಂಡು ಎಂಟು ಸುತ್ತು ಗುಂಡು ಹಾರಿಸಲಾಗಿದೆ ಎಂದು ಆರೋಪಿಸಿ ತಮ್ಮ ನಿವಾಸದ ಬಳಿ ಪತ್ತೆಯಾದ ಮತ್ತೊಂದು ಗುಂಡನ್ನ ಪ್ರದರ್ಶನ ಮಾಡಿದರು. ಇದಕ್ಕೂ ಮುನ್ನ ಬೆಳಗ್ಗೆ ತಮ್ಮ ಸ್ನೇಹಿತ ಬಿ ಶ್ರೀರಾಮುಲು ಜೊತೆಗೆ ಪ್ರೆಸ್ ಮೀಟ್ ಮಾಡಿ ಹಲವು ಆರೋಪ ಮತ್ತು ತನಿಖೆಗೆ ಒತ್ತಾಯಿಸಿದರು.
ಒಟ್ಟಾರೆ ಎಂಟು ಬಾರಿ ಶೂಟೌಟ್
ಜನಾರ್ದನ ರೆಡ್ಡಿ ಮಾತನಾಡುತ್ತಾ, ನಿನ್ನೆ ನನ್ನ ಮೇಲೆ ದಾಳಿ ನಡೆದ ಸಂದರ್ಭದಲ್ಲಿ ಒಂದು ಬುಲೆಟ್ ಪತ್ತೆಯಾಗಿತ್ತು. ಇಂದು ನಮ್ಮ ಹುಡುಗರಿಗೆ ಮತ್ತೊಂದು ಬುಲೆಟ್ ಸಿಕ್ಕಿದೆ. ಕಾರಿನಿಂದ ಇಳಿದ ತಕ್ಷಣ ಪೂರ್ವಯೋಜಿತವಾಗಿ ಫೈರಿಂಗ್ ಮಾಡಲಾಗಿದೆ. ಇನ್ನೂ ಉಳಿದ ಗುಂಡುಗಳಿಗಾಗಿ ಹುಡುಕಾಟ ನಡೆಯುತ್ತಿದೆ. ಒಟ್ಟಾರೆ ಎಂಟು ಬಾರಿ ಶೂಟೌಟ್ ನಡೆದಿದೆ ಎಂದು ಆರೋಪಿಸಿದರು. ಪತ್ತೆಯಾದ ಬುಲೆಟ್‌ನ್ನು ಅವರು ಮಾಧ್ಯಮಗಳ ಮುಂದೆ ಪ್ರದರ್ಶಿಸಿದರು.
ಭರತ್ ರೆಡ್ಡಿ ತಂದೆಯ ಬಳಿ ವೆಪನ್ ಪತ್ತೆಯಾಗಿತ್ತು
ಈ ವೇಳೆ ಶಾಸಕ ಭರತ್ ರೆಡ್ಡಿ ವಿರುದ್ಧ ಜನಾರ್ದನ ರೆಡ್ಡಿ ತೀವ್ರ ಆರೋಪಗಳನ್ನು ಮಾಡಿದರು. “ಈ ಹಿಂದೆ ಭರತ್ ರೆಡ್ಡಿ ತಂದೆಯ ಬಳಿ ಸುಮಾರು ಮೂರು ಕೋಟಿ ರೂಪಾಯಿ ಮೌಲ್ಯದ ಅಸ್ತ್ರಾಸ್ತ್ರಗಳು ಪತ್ತೆಯಾಗಿದ್ದವು. ಅದೇ ವ್ಯಕ್ತಿ ಶ್ರೀರಾಮುಲು ಅವರನ್ನು ಕೊಲೆ ಮಾಡಲು ಯತ್ನಿಸಿದ್ದರು. ಈಗ ಭರತ್ ರೆಡ್ಡಿ ವಾರ್ಡ್‌ವಾರ್ಡ್‌ಗಳಲ್ಲಿ ಮಟ್ಕಾ, ಡ್ರಗ್ಸ್, ಗಾಂಜಾ ಸೇರಿದಂತೆ ಅಕ್ರಮ ವ್ಯವಹಾರ ನಡೆಸುತ್ತಿದ್ದಾನೆ. ಪೊಲೀಸರಿಂದಲೂ ಹಫ್ತಾ ವಸೂಲಿ ಮಾಡುತ್ತಿದ್ದಾನೆ” ಎಂದು ಗಂಭೀರ ಆರೋಪ ಹೊರಿಸಿದರು. ವಾಲ್ಮೀಕಿ ಬ್ಯಾನರ್ ವಿಚಾರವನ್ನು ನೆಪವನ್ನಾಗಿ ಮಾಡಿಕೊಂಡು “ನಾನು ಹಿರೋ ಆಗಬಹುದು” ಎಂದುಕೊಂಡು ಈ ರೀತಿಯ ಗಲಾಟೆ ಹುಟ್ಟುಹಾಕಲಾಗಿದೆ. ರಾಜಕಾರಣಕ್ಕೆ ವಾಲ್ಮೀಕಿ ಹೆಸರನ್ನು ಎಳೆಯುವ ಪ್ರಯತ್ನ ನಡೆಯುತ್ತಿದೆ ಎಂದು ಆರೋಪಿಸಿದರು.
ಕಾರ್ಯಕರ್ತನ ಸಾವಿನ ಕುರಿತು ತನಿಖೆಗೆ ಒತ್ತಾಯ
ಬಳ್ಳಾರಿ ಫ್ಲೆಕ್ಸ್ ಗಲಾಟೆಯಲ್ಲಿ ಗುಂಡು ತಗುಲಿ ಕೈ ಕಾರ್ಯಕರ್ತನೊಬ್ಬ ಸಾವನ್ನಪ್ಪಿರುವ ಪ್ರಕರಣದ ಬಗ್ಗೆ ಮಾತನಾಡಿದ ಜನಾರ್ದನ ರೆಡ್ಡಿ, ಯಾವ ಗುಂಡು ತಗುಲಿ ಆ ಕಾರ್ಯಕರ್ತ ಸತ್ತಿದ್ದಾನೆ ಎಂಬುದನ್ನು ಪೊಲೀಸರು ಸ್ಪಷ್ಟವಾಗಿ ತನಿಖೆ ಮಾಡಬೇಕು” ಎಂದು ಒತ್ತಾಯಿಸಿದರು. ನಮ್ಮ ಬಳಿ ಇರುವವರು ಎಲ್ಲರೂ ಸರ್ಕಾರಿ ಗನ್‌ಮ್ಯಾನ್‌ಗಳೇ ಎಂದು ಅವರು ಸ್ಪಷ್ಟಪಡಿಸಿದರು. ನನ್ನ ಬಳಿ ನಾಲ್ಕು ಸರ್ಕಾರಿ ಗನ್‌ಮ್ಯಾನ್‌ಗಳಿದ್ದಾರೆ. ಸೋಮಶೇಖರ್ ರೆಡ್ಡಿ ಬಳಿ ಇಬ್ಬರು, ಶ್ರೀರಾಮುಲು ಬಳಿ ಇಬ್ಬರು ಗನ್‌ಮ್ಯಾನ್‌ಗಳಿದ್ದಾರೆ. ಅವರ ಬಳಿ ಇರುವ ಗನ್‌ಗಳು ಮತ್ತು ಬುಲೆಟ್‌ಗಳ ವಿಡಿಯೋ ದಾಖಲೆಗಳನ್ನು ಪೊಲೀಸರು ಈಗಾಗಲೇ ಪಡೆದುಕೊಂಡಿದ್ದಾರೆ ಎಂದು ಹೇಳಿದರು.
‘ನನ್ನನ್ನೇ ಟಾರ್ಗೆಟ್ ಮಾಡಿದ್ದಾರೆ’ ಆರೋಪ
ಜನಾರ್ದನ ರೆಡ್ಡಿ ಮುಂದುವರೆದು, ಜನಾರ್ದನ ರೆಡ್ಡಿಯನ್ನು ಟಾರ್ಗೆಟ್ ಮಾಡಿದರೆ ರಾಜ್ಯಾದ್ಯಂತ ಹೆಸರು ಮಾಡಬಹುದು ಎಂದುಕೊಂಡು ಈ ರೀತಿ ಮಾಡುತ್ತಿದ್ದಾರೆ. ಇವರ ತಂದೆ ಕಾಲದಲ್ಲಿ ಬಳ್ಳಾರಿ ಬಿಹಾರಿನಂತ ಸ್ಥಿತಿಯಲ್ಲಿ ಇತ್ತು. ನಾವು ಅದನ್ನು ಸರಿಪಡಿಸಿದ್ದೇವೆ. ಈಗ ಈ ವ್ಯಕ್ತಿ ಮತ್ತೆ ಅದೇ ಪರಿಸ್ಥಿತಿಯನ್ನು ಆರಂಭಿಸುತ್ತಿದ್ದಾನೆ. ಮಟ್ಕಾ, ಗಾಂಜಾ ಸೇರಿದಂತೆ ಅಕ್ರಮ ವ್ಯವಹಾರಗಳು ಮತ್ತೆ ಅವ್ಯಾಹತವಾಗಿ ನಡೆಯುತ್ತಿವೆ ಎಂದು ಆರೋಪಿಸಿದರು.
ನ್ಯಾಯಾಂಗ ತನಿಖೆಗೆ ಆಗ್ರಹ
ಈ ಸಂಪೂರ್ಣ ಪ್ರಕರಣದ ಕುರಿತು ನ್ಯಾಯಾಂಗ ತನಿಖೆ ನಡೆಯಬೇಕು ಎಂದು ಜನಾರ್ದನ ರೆಡ್ಡಿ ಒತ್ತಾಯಿಸಿದರು. ನಾನು ಕೂಡ ಕಾನೂನು ಸಲಹೆ ಪಡೆದು ಪ್ರತ್ಯೇಕವಾಗಿ ದೂರು ದಾಖಲಿಸುತ್ತೇನೆ. ಎಎಸ್‌ಪಿ ರವಿಕುಮಾರ್ ಇಲ್ಲಿಯೇ ಬಂದು ದೂರು ಸ್ವೀಕರಿಸುವುದಾಗಿ ಹೇಳಿದ್ದಾರೆ. ರಾಜ್ಯ ಬಿಜೆಪಿ ಅಧ್ಯಕ್ಷ ವಿಜಯೇಂದ್ರ ಅವರ ಸಮ್ಮುಖದಲ್ಲಿಯೇ ನಾನು ಅಧಿಕೃತ ದೂರು ನೀಡುತ್ತೇನೆ ಎಂದು ತಿಳಿಸಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನನ್ನ ವಿರುದ್ಧ ಎಂತಹ ರಾಜಕಾರಣ ಬೇಕಾದರೂ ಮಾಡಲಿ. ಆದರೆ ಈ ಪ್ರಕರಣದ ಕುರಿತು ನಿಷ್ಪಕ್ಷಪಾತ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಮುಂದಿನ ತನಿಖೆ ಯಾವ ದಿಕ್ಕಿನಲ್ಲಿ ಸಾಗುತ್ತದೆ ಎಂಬುದನ್ನು ಕಾದು ನೋಡಬೇಕಾಗಿದೆ.

