ಟೆರಿಟೋರಿಯಲ್ ಸೈನ್ಯವನ್ನು ಡ್ಯೂಟಿಗೆ ಕರೆದ ಭಾರತೀಯ ಸೇನಾಪಡೆ, ಏನಿದು ಟಿಎ ಆರ್ಮಿ?
ಪಾಕಿಸ್ತಾನದೊಂದಿಗಿನ ಉದ್ವಿಗ್ನತೆಯ ಹಿನ್ನೆಲೆಯಲ್ಲಿ, ಭಾರತೀಯ ಸೇನೆಗೆ ಬೆಂಬಲವಾಗಿ ಪ್ರಾದೇಶಿಕ ಸೇನೆಯನ್ನು ನಿಯೋಜಿಸಲು ಸರ್ಕಾರ ತೀರ್ಮಾನಿಸಿದೆ. ಈ ಸ್ವಯಂಸೇವಕ ಪಡೆಯ ಸದಸ್ಯರು ನಾಗರಿಕ ವೃತ್ತಿಗಳಲ್ಲಿ ತೊಡಗಿಸಿಕೊಂಡಿದ್ದು, ತುರ್ತು ಸಂದರ್ಭಗಳಲ್ಲಿ ಸೇವೆ ಸಲ್ಲಿಸುತ್ತಾರೆ.

ಮೇ.7ರಂದು ಆಪರೇಷನ್ ಸಿಂದೂರ್ ಮೂಲಕ ಪಾಕಿಸ್ತಾನ ಮತ್ತು ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ 100ಕ್ಕಿಂತ ಹೆಚ್ಚು ಭಯೋತ್ಪಾದಕರ ತಾಣಗಳನ್ನು ಭಾರತ ನಿರ್ನಾಮ ಮಾಡಿತ್ತು. ಇದರ ಬೆನಲ್ಲೇ ನಿಯಮ ಮೀರಿದ ಪಾಕಿಸ್ತಾನ ಭಾರತದ ಸೇನಾ ನೆಲೆಗಳನ್ನು ಗುರಿಯಾಗಿಸಿ ದಾಳಿ ನಡೆಸಿತ್ತು. ಇದೀಗ ಪರಿಸ್ಥಿತಿ ಉಲ್ಭಣಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ತುರ್ತು ಸಂದರ್ಭಗಳಲ್ಲಿ ಭಾರತೀಯ ಸೇನೆಯನ್ನು ಬೆಂಬಲಿಸಲು ಟೆರಿಟೋರಿಯಲ್ ಆರ್ಮಿ (ಟಿಎ -ಪ್ರಾದೇಶಿಕ ಸೇನೆ) ಎಂಬ ಮೀಸಲು ಪಡೆಯನ್ನು ಕರೆಯಿರಿ ಎಂದು ಸೇನಾ ಮುಖ್ಯಸ್ಥರಿಗೆ ಕರೆ ಕೊಡಲಾಗಿದೆ.
ಪರಿಸ್ಥಿತಿ ಗಂಭೀರವಾಗುತ್ತಿರುವ ಕಾರಣ, ಸರ್ಕಾರವು ಈಗಿರುವ 32 ಪ್ರಾದೇಶಿಕ ಸೇನಾ ಘಟಕಗಳಲ್ಲಿ 14 ಘಟಕಗಳನ್ನು ದೇಶದ ವಿವಿಧ ಪ್ರಮುಖ ಸೇನಾ ವಲಯಗಳಲ್ಲಿ ನಿಯೋಜಿಸಲು ತೀರ್ಮಾನಿಸಿದೆ. ಈ ಮೂಲಕ ವಿವಿಧ ಮಿಟಲಿಟರಿ ಪ್ರದೇಶಗಳಲ್ಲಿ ಇದನ್ನು ನಿಯೋಜನೆ ಮಾಡಲಾಗುವುದು. ಅವೆಂದರೆ,
ದಕ್ಷಿಣ ಕಮಾಂಡ್
ಪೂರ್ವ ಕಮಾಂಡ್
ಪಶ್ಚಿಮ ಕಮಾಂಡ್
ಉತ್ತರ ಕಮಾಂಡ್
ಮಧ್ಯ ಭಾರತ ಕಮಾಂಡ್
ನೈಋತ್ಯ ಕಮಾಂಡ್
ಅಂಡಮಾನ್ ಮತ್ತು ನಿಕೋಬಾರ್ ಕಮಾಂಡ್
ಸೇನಾ ತರಬೇತಿ ಕಮಾಂಡ್ (ARTRAC)
ಟೆರಿಟೋರಿಯಲ್ ಆರ್ಮಿ ಎಂಬುದು ಒಂದು ಸ್ವಯಂಸೇವಕ ಪಡೆ. ಇದು ನಿಯಮಿತ ಭಾರತೀಯ ಸೇನೆಯ ನಂತರದ ಸ್ಥಾನದಲ್ಲಿದ್ದು ದ್ವಿತೀಯ ರಕ್ಷಣಾ ಶಕ್ತಿ ಎನಿಸಿಕೊಂಡಿದೆ. ಟಿಎ ಸದಸ್ಯರು ಸಾಮಾನ್ಯ ನಾಗರಿಕರಾಗಿದ್ದು, ವೈದ್ಯರು, ಎಂಜಿನಿಯರ್‌ಗಳು, ವ್ಯಾಪಾರಸ್ಥರು ಹಾಗು ಇತರ ವೃತ್ತಿಯಲ್ಲಿರುವವರಾಗಿರುತ್ತಾರೆ. ತುರ್ತು ಸಂದರ್ಭಗಳಲ್ಲಿ ದೇಶ ಸೇವೆಗೆ ಅವರನ್ನು ಕರೆಯಲಾಗುತ್ತದೆ.ಟಿಎ ಸದಸ್ಯರು ಪ್ರತಿವರ್ಷ ಎರಡು ತಿಂಗಳು ಮಿಲಿಟರಿ ತರಬೇತಿ ಪಡೆಯಬೇಕು. ಅವಶ್ಯಕತೆ ಇದ್ದರೆ, ಇವರನ್ನು ಪೂರ್ಣಕಾಲಿಕ ಸೇನಾ ಕರ್ತವ್ಯಕ್ಕೂ ಕರೆಯಬಹುದು. ತರಬೇತಿ ಅಥವಾ ಕರ್ತವ್ಯಕ್ಕಾಗಿ ಕರೆದಾಗ, ಅವರಿಗೆ ಸಾಮಾನ್ಯ ಸೇನಾ ಅಧಿಕಾರಿಗಳಂತೆ ವೇತನ, ಭತ್ಯೆಗಳು ಹಾಗೂ ಸೌಲಭ್ಯಗಳು ಎಲ್ಲವನ್ನೂ ನೀಡಲಾಗುತ್ತದೆ.
ಟಿಎಯಲ್ಲಿ ಲೆಫ್ಟಿನೆಂಟ್ ಕರ್ನಲ್ ಹುದ್ದೆವರೆಗೆ ಸೇವೆಯ ಅವಧಿ ಹಾಗೂ ನಿಗದಿತ ಅರ್ಹತೆಯ ಮೇಲೆ ಬಡ್ತಿ ನೀಡಲಾಗುತ್ತದೆ. ಆದರೆ ಕರ್ನಲ್ ಮತ್ತು ಬ್ರಿಗೇಡಿಯರ್ ಹುದ್ದೆಗಳಿಗೆ ಆಯ್ಕೆಯ ಪ್ರಕ್ರಿಯೆ ಮೂಲಕ ಬಡ್ತಿ ನೀಡಲಾಗುತ್ತದೆ.ಈ ಪಡೆ ಭಾರತದಲ್ಲಿ 65 ಘಟಕಗಳೊಂದಿಗೆ ಸುಮಾರು 50,000 ಸದಸ್ಯರನ್ನು ಹೊಂದಿದೆ. ಇದರಲ್ಲಿ ರೈಲ್ವೆ, ಒಎನ್‌ಜಿಸಿ, ಇಂಡಿಯನ್ ಆಯಿಲ್ ಮುಂತಾದ ಇಲಾಖಾ ಘಟಕಗಳ ಜೊತೆಗೆ ಕಾಲಾಳು ಪಡೆ, ಪರಿಸರ ಪಡೆ, ಎಂಜಿನಿಯರಿಂಗ್ ಘಟಕಗಳಂತಹ ಇಲಾಖಾತೀತ ಘಟಕಗಳೂ ಸೇರಿವೆ.
ಟಿಎ 1920ರಲ್ಲಿ ಪ್ರಾರಂಭವಾದರೂ, ಇದರ ಇತಿಹಾಸವು 1857ರ ಭಾರತದ ಮೊದಲ ಸ್ವಾತಂತ್ರ್ಯ ಹೋರಾಟದ ಕಾಲದಿಂದಲೇ ಆರಂಭವಾಗುತ್ತದೆ. ಭಾರತ ಸ್ವಾತಂತ್ರ್ಯ ಹೊಂದಿದ ನಂತರ 1948ರಲ್ಲಿ ಪ್ರಾದೇಶಿಕ ಸೇನಾ ಕಾಯ್ದೆ ಅಂಗೀಕರಿಸಲಾಯಿತು. ನಂತರ 1949ರಲ್ಲಿ ಭಾರತದ ಮೊದಲ ಗವರ್ನರ್-ಜನರಲ್ ಸಿ. ರಾಜಗೋಪಾಲಾಚಾರಿ ಈ ಪಡೆಯನ್ನು ಅಧಿಕೃತವಾಗಿ ಪ್ರಾರಂಭಿಸಿದರು.
ಈ ಪಡೆ 1962, 1965 ಮತ್ತು 1971ರ ಯುದ್ಧಗಳು, ಶ್ರೀಲಂಕಾದ ಆಪರೇಶನ್ ಪವನ್, ಪಂಜಾಬ್, ಜಮ್ಮು ಕಾಶ್ಮೀರ, ಈಶಾನ್ಯ ರಾಜ್ಯಗಳಲ್ಲಿನ ದಂಗೆ ನಿರ್ವಹಣೆ ಹಾಗೂ ನೈಸರ್ಗಿಕ ವಿಪತ್ತುಗಳ ಸಂದರ್ಭದಲ್ಲಿ ಮಹತ್ವದ ಪಾತ್ರ ವಹಿಸಿದೆ. ಪ್ರತಿ ವರ್ಷ ಅಕ್ಟೋಬರ್ 9 ಅನ್ನು ಪ್ರಾದೇಶಿಕ ಸೇನಾ ದಿನವನ್ನಾಗಿ ಆಚರಿಸಲಾಗುತ್ತದೆ. ಅನೇಕ ರಾಜಕಾರಣಿಗಳು, ಕ್ರೀಡಾಪಟುಗಳು ಮತ್ತು ಸೆಲೆಬ್ರಿಟಿಗಳು ಪ್ರಾದೇಶಿಕ ಸೇನೆಯ ಸದಸ್ಯರಾಗಿದ್ದಾರೆ. ಟೀಂ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅವರನ್ನು 2011 ರಲ್ಲಿ ಟಎ ಸೇನೆಗೆ ಸೇರಿಸಲಾಯಿತು ಮತ್ತು ಲೆಫ್ಟಿನೆಂಟ್ ಕರ್ನಲ್ (ಗೌರವ) ಹುದ್ದೆಯನ್ನು ನೀಡಲಾಯಿತು