ಭಾರತಕ್ಕೆ ತಲುಪಿದ ಸಂಜಯ್ ಕಪೂರ್ ಪಾರ್ಥಿವ ಶರೀರ, ಸಂಜೆ ಅಂತ್ಯಕ್ರಿಯೆಯಲ್ಲಿ ಕರೀಷ್ಮಾ ಭಾಗಿ
ಲಂಡನ್‌ನಲ್ಲಿ ಹೃದಯಾಘಾತದಿಂದ ನಿಧನರಾದ ಉದ್ಯಮಿ ಸಂಜಯ್ ಕಪೂರ್ ಅವರ ಅಂತ್ಯಕ್ರಿಯೆ ದೆಹಲಿಯಲ್ಲಿ ನೆರವೇರಿತು. ಮಾಜಿ ಪತ್ನಿ ಕರಿಷ್ಮಾ ಕಪೂರ್, ಮಕ್ಕಳು ಮತ್ತು ಕುಟುಂಬಸ್ಥರು ಅಂತಿಮ ದರ್ಶನ ಪಡೆದರು. ಜೂನ್ 22 ರಂದು ಸ್ಮರಣಾರ್ಥ ಪ್ರಾರ್ಥನಾ ಸಭೆ ನಡೆಯಲಿದೆ.

ಜೂನ್ 12ರಂದು ಲಂಡನ್ ನಲ್ಲಿ ನಿಧನರಾದ ನಟಿ ಕರಿಷ್ಮಾ ಕಪೂರ್ ಅವರ ಮಾಜಿ ಪತಿ, ಕೈಗಾರಿಕೋದ್ಯಮಿ ಸಂಜಯ್ ಕಪೂರ್ ಅವರ ಅಂತ್ಯಕ್ರಿಯೆ ಇಂದು ನವದೆಹಲಿಯಲ್ಲಿ ನಡೆಯಲಿದೆ. ಸಂಜಯ್ ಪಾರ್ಥಿವ ಶರೀರ ದೆಹಲಿ ತಲುಪಿದ್ದು, ಸಂಜೆ 5 ಗಂಟೆಗೆ ಲೋಧಿ ರಸ್ತೆಯ ಸ್ಮಶಾನ ಮೈದಾನದಲ್ಲಿ ಅಂತ್ಯಕ್ರಿಯೆ ನಡೆಯಲಿದೆ ಎಂದು ವರದಿ ತಿಳಿಸಿದೆ. ಅಂತಿಮ ಕಾರ್ಯದಲ್ಲಿ ಭಾಗವಹಿಸುವ ಸಲುವಾಗಿ ಮಾಜಿ ಪತ್ನಿ ನಟಿ ಕರೀಷ್ಮಾ ತಮ್ಮ ಇಬ್ಬರು ಮಕ್ಕಳು ಮತ್ತು ಸಹೋದರಿ ಕರೀನಾ ಮತ್ತು ಭಾವ ಸೈಫ್ ಅಲಿ ಖಾನ್ ಜೊತೆಗೆ ಮುಂಬೈನಿಂದ ದೆಹಲಿಗೆ ಖಾಸಗಿ ವಿಮಾನದಲ್ಲಿ ಆಗಮಿಸಿದರು.
ಜೂನ್ 22 ರಂದು ಸಂಜಯ್ ಸ್ಮರಣಾರ್ಥ ಪ್ರಾರ್ಥನಾ ಸಭೆ ನಡೆಯಲಿದೆ. ಲಂಡನ್‌ನಲ್ಲಿ ಪೋಲೊ ಆಡುವಾಗ ಸಂಜಯ್ ಹೃದಯಾಘಾತದಿಂದ ನಿಧನರಾದರು. ಈ ವೇಳೆ ಜೇನು ನೊಣ ಕಡಿತಕ್ಕೆ ಒಳಗಾಗಿ ಈ ದುರಂತ ಸಂಭವಿಸಿದೆ ಎಂದು ವರದಿ ಇದೆ. ಬುಧವಾರ, ಸಂಜಯ್ ಅವರ ಕುಟುಂಬವು ಅವರ ಅಂತ್ಯಕ್ರಿಯೆಯ ವಿವರಗಳನ್ನು ನೀಡಿ ಪತ್ರಿಕಾ ಪ್ರಕಟಣೆಯನ್ನು ಬಿಡುಗಡೆ ಮಾಡಿದೆ ಅಂತ್ಯಕ್ರಿಯೆ ಗುರುವಾರ ಸಂಜೆ 5 ಗಂಟೆಗೆ ನವದೆಹಲಿಯ ಲೋಧಿ ರಸ್ತೆಯ ಸ್ಮಶಾನದಲ್ಲಿ ನಡೆಯಲಿದೆ ಎಂದು ತಿಳಿಸಿತ್ತು.
ಈ ಮಧ್ಯೆ ಸಾಮಾಜಿಕ ಜಾಲತಾಣದಲ್ಲಿ ಜೂನ್ 22 ರಂದು ಸಂಜೆ 4 ರಿಂದ 5 ರವರೆಗೆ ದೆಹಲಿಯ ತಾಜ್ ಪ್ಯಾಲೇಸ್ ಹೋಟೆಲ್‌ನಲ್ಲಿ ಪ್ರಾರ್ಥನಾ ಸಭೆ ನಡೆಯಲಿದೆ. ಈ ಟಿಪ್ಪಣಿಗೆ ಅವರ ತಾಯಿ ರಾಣಿ ಸುರಿಂದರ್ ಕಪೂರ್, ಅವರ ಈಗಿನ ಪತ್ನಿ ಪ್ರಿಯಾ ಸಚ್‌ದೇವ್, ಸಫೀರಾ, ಅಜಾರಿಯಾಸ್ ಹೆಸರಿದೆ. ಟಿಪ್ಪಣಿಯಲ್ಲಿ ಅವರ ಮಾಜಿ ಪತ್ನಿ ಕರಿಷ್ಮಾಳಿಂದ ಜನಿಸಿ ಮಕ್ಕಳಾದ ಸಮೈರಾ ಮತ್ತು ಕಿಯಾನ್ ಜೊತೆಗೆ ಅವರ ಮಕ್ಕಳ ಹೆಸರುಗಳನ್ನು ಸಹ ಉಲ್ಲೇಖಿಸಲಾಗಿದೆ.
ಸಂಜಯ್ ಅವರು ಅಮೆರಿಕ ಪೌರತ್ವ ಹೊಂದಿದ ಕಾರಣಕ್ಕೆ ಕಾನೂನು ಸಮಸ್ಯೆಗಳು ಇದ್ದ ಕಾರಣಗಳಿಂದಾಗಿ ಅವರ ಅಂತ್ಯಕ್ರಿಯೆ ವಿಳಂಬವಾಗಿತ್ತು. ಮುಖ್ಯವಾಗಿ ಅಮೆರಿಕ ಪೌರತ್ವ ಹೊಂದಿರುವ ಸಂಜಯ್ ಲಂಡನ್‌ನಲ್ಲಿ ನಿಧನರಾದರು ಆದರೆ ಅವರ ಮೂಲಕ ಭಾರತ ಆಗಿರುವುದಿಂದ ದೆಹಲಿಯಲ್ಲಿ ಅವರ ಅಂತ್ಯಕ್ರಿಯೆ ನಡೆಯುತ್ತಿದೆ. ಈ ಬಗ್ಗೆ ಸಂಜಯ್ ಅವರ ಮಾವ ಮತ್ತು ಅವರ ಮೂರನೇ ಪತ್ನಿ ಪ್ರಿಯಾ ಸಚ್‌ದೇವ್ ಅವರ ತಂದೆ ಅಶೋಕ್ ಸಚ್‌ದೇವ್ ಅವರು ಮಾಧ್ಯಮಕ್ಕೆ ತಿಳಿಸಿ ದೆಹಲಿಯಲ್ಲಿ ಅಂತ್ಯಕ್ರಿಯೆ ನಡೆಯಲಿದೆ ಮರಣೋತ್ತರ ಪರೀಕ್ಷೆ ನಡೆದ ಬಳಿಕ ದಾಖಲೆಗಳ ಕೆಲಸ ಪೂರ್ಣಗೊಂಡ ಬಳಿಕ ಅಂತಿಮ ವಿಧಿವಿಧಾನಗಳಿಗಾಗಿ ಪಾರ್ಥಿವ ಶರೀರವನ್ನು ಭಾರತಕ್ಕೆ ತರಲಾಗುವುದು ಎಂದು ಮಾಹಿತಿ ನೀಡಿದ್ದರು.
ಇಂಗ್ಲೆಂಡ್ ರಾಜಕುಮಾರ ಪ್ರಿನ್ಸ್ ವಿಲಿಯಂ ಅವರ ಆಪ್ತ ಸ್ನೇಹಿತನಾಗಿದ್ದ ಸಂಜಯ್ ಕಪೂರ್ ಜೂನ್ 12 ರಂದು ಇಂಗ್ಲೆಂಡ್‌ನಲ್ಲಿ ನಡೆದ ಪೋಲೋ ಪಂದ್ಯದ ಸಮಯದಲ್ಲಿ ನಿಧನರಾದರು. ಆರಂಭಿಕ ವರದಿಗಳು 53 ವರ್ಷದ ಸಂಜಯ್ ಅವರು ಪೋಲೋ ಆಡುವಾಗ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ ಎಂದು ಹೇಳಲಾಗಿತ್ತು. ಆದರೆ ನಂತರ ಹೃದಯಾಘಾತಕ್ಕೆ ಕಾರಣ ಜೇನುನೊಣ ಕುಟುಕಿರುವುದು ಎಂದು ತಿಳಿದುಬಂತು. ಆದರೂ ಅವರ ಸಾವಿಗೆ ನಿಖರ ಕಾರಣವೇನು ಎಂಬ ಅಧಿಕೃತ ಮಾಹಿತಿ ಇನ್ನೂ ಹೊರಬಂದಿಲ್ಲ.
ಸಂಜಯ್ ತಮ್ಮ ಜೀವನದಲ್ಲಿ ಮೂರು ಬಾರಿ ವಿವಾಹವಾದರು ಮತ್ತು ಮೂರು ಮಕ್ಕಳನ್ನು ಹೊಂದಿದ್ದರು. ಅವರ ಮೊದಲ ವಿವಾಹವು 1996 ರಲ್ಲಿ ಫ್ಯಾಷನ್ ಡಿಸೈನರ್ ನಂದಿತಾ ಮಹ್ತಾನಿ ಅವರೊಂದಿಗೆ ನಡೆಯಿತು. ನಾಲ್ಕು ವರ್ಷಗಳ ಬಳಿಕ ವಿಚ್ಚೇದನ ಪಡೆದು, 2003 ರಲ್ಲಿ ನಟಿ ಕರಿಷ್ಮಾ ಕಪೂರ್ ಅವರನ್ನು ವಿವಾಹವಾದರು. ಇದರಲ್ಲಿ ಇಬ್ಬರು ಮಕ್ಕಳು ಸಮೈರಾ (19) ಮತ್ತು ಕಿಯಾನ್ (13). 2014 ರಲ್ಲಿ ಕರಿಷ್ಮಾ ಮತ್ತು ಸಂಜಯ್ ಒಪ್ಪಿಗೆಯ ಮೂಲಕ ವಿಚ್ಛೇದನ ಅರ್ಜಿ ಸಲ್ಲಿಸಿ 2016 ರಲ್ಲಿ ಅಧಿಕೃತವಾಗಿ ಬೇರ್ಪಟ್ಟರು. ಇದಾದ ನಂತರ ಸಂಜಯ್ 2017 ರಲ್ಲಿ ಪ್ರಿಯಾ ಸಚ್‌ದೇವ್ ಅವರನ್ನು ವಿವಾಹವಾದರು. ದಂಪತಿಗೆ ಅಜಾರಿಯಾಸ್ ಎಂಬ ಒಬ್ಬ ಮಗನಿದ್ದಾನೆ. ಪ್ರಿಯಾಗೆ ಮೊದಲ ಮದುವೆಯಿಂದ ಒಂದು ಮಗುವಿದ್ದು, ಅದನ್ನು ಕೂಡ ಇವರೇ ನೋಡಿಕೊಂಡಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

