ಒಂದೇ ಕೈಯಲ್ಲಿ ಚಪ್ಪಾಳೆ ಸಾಧ್ಯವಿಲ್ಲ, ಅತ್ಯಾ*ಚಾರ ಆರೋಪಿಗೆ ಮಧ್ಯಂತರ ಜಾಮೀನು ನೀಡಿದ ಸುಪ್ರೀಂ
40 ವರ್ಷದ ಮಹಿಳೆಯ ಮೇಲಿನ ಅತ್ಯಾ*ಚಾರ ಆರೋಪದಲ್ಲಿ ಬಂಧಿತನಾಗಿದ್ದ 23 ವರ್ಷದ ಯುವಕನಿಗೆ ಸುಪ್ರೀಂ ಕೋರ್ಟ್ ಮಧ್ಯಂತರ ಜಾಮೀನು ಮಂಜೂರು ಮಾಡಿದೆ. 9 ತಿಂಗಳ ಜೈಲುವಾಸದ ನಂತರವೂ ಚಾರ್ಜ್‌ಶೀಟ್ ಸಲ್ಲಿಸದ ಪೊಲೀಸರ ವಿರುದ್ಧ ಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದೆ.

ಅತ್ಯಾ*ಚಾರ ಪ್ರಕರಣದಲ್ಲಿ ಆರೋಪಿಗೆ ಮಧ್ಯಂತರ ಜಾಮೀನು ನೀಡಿ ಎರಡು ಕೈ ಸೇರದೆ ಚಪ್ಪಾಳೆ ಆಗಲಾರದು ಎನ್ನುವ ಮೂಲಕ ಸುಪ್ರೀಂ ಕೋರ್ಟ್ ಮಹತ್ವದ ಅಭಿಪ್ರಾಯಪಟ್ಟಿದೆ. ಜೊತೆಗೆ ಪೊಲೀಸರ ನಡೆಯನ್ನು ಪ್ರಶ್ನೆ ಮಾಡಿದೆ. 40 ವರ್ಷದ ಮಹಿಳೆಯ ಮೇಲೆ ಅತ್ಯಾ*ಚಾರ ಎಸಗಿದ ಆರೋಪದ ಮೇಲೆ ಬಂಧಿತನಾಗಿದ್ದ 23 ವರ್ಷದ ಯುವಕನಿಗೆ ಸುಪ್ರೀಂ ಕೋರ್ಟ್ ಬುಧವಾರ ಮಧ್ಯಂತರ ಜಾಮೀನು ಮಂಜೂರು ಮಾಡಿದೆ. ನ್ಯಾಯಾಲಯವು, ಆರೋಪಿಗೆ ಈಗವರೆಗೆ 9 ತಿಂಗಳಿನಿಂದ ಜೈಲಿನಲ್ಲಿ ಇರಿಸಿದ್ದರೂ ಚಾರ್ಜ್ ಶೀಟ್ ಸಿದ್ಧಪಡಿಸದೇ ಇರುವುದನ್ನು ಗಂಭೀರವಾಗಿ ಗಮನಿಸಿದ್ದು, ಪೊಲೀಸರನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದೆ.
ಸಾಮಾಜಿಕ ಮಾಧ್ಯಮ ಪ್ರಭಾವಿಯಾಗಿರುವ ಈ ಯುವಕನೊಂದಿಗೆ ಮಹಿಳೆ ಸ್ವಯಂಪ್ರೇರಣೆಯಿಂದ ಸಂಪರ್ಕ ಹೊಂದಿದ್ದದನ್ನು ಅರಿತುಕೊಂಡ ನ್ಯಾಯಪೀಠ, ದೆಹಲಿ ಪೊಲೀಸರು ಈ ರೀತಿಯ ಪ್ರಕರಣದಲ್ಲಿ ಅತ್ಯಾ*ಚಾರದ ದೂರು ದಾಖಲಿಸುವುದು ಇದೆಂತಹಾ ನ್ಯಾಯಸಮ್ಮತ? ಎಂದು ಪ್ರಶ್ನಿಸಿದೆ. ಈ ಕುರಿತು ನ್ಯಾಯಮೂರ್ತಿಗಳಾದ ಬಿ.ವಿ. ನಾಗರತ್ನ ಮತ್ತು ಸತೀಶ್ ಚಂದ್ರ ಶರ್ಮಾ ಅವರನ್ನೊಳಗೊಂಡ ಪೀಠ ಕಠಿಣ ಟೀಕೆಗಳನ್ನು ವ್ಯಕ್ತಪಡಿಸಿತು. “ಒಂದೇ ಕೈಯಿಂದ ಚಪ್ಪಾಳೆ ತಟ್ಟಲಾಗದು” ಎಂದು ನ್ಯಾಯಪೀಠವು ಖಾರವಾಗಿ ನುಡಿದಿದೆ.
"ಅವಳು ಶಿಶುವಲ್ಲ. 40 ವರ್ಷದ ಮಹಿಳೆ. ಇಬ್ಬರೂ ಸೇರಿ ಜಮ್ಮುವಿಗೆ ಹೋಗಿದ್ದಾರೆ. ಏಳು ಬಾರಿ ಜಮ್ಮು ಪ್ರವಾಸ ಮಾಡಿಕೊಂಡಿದ್ದಾರೆ. ಗಂಡನಿಗೆ ಇದರಲ್ಲಿ ಯಾವುದೇ ತೊಂದರೆ ಇಲ್ಲ. ಇಂತಹ ಸಂದರ್ಭದಲ್ಲಿ ನೀವು ಹೇಗೆ ಐಪಿಸಿ ಸೆಕ್ಷನ್ 376 ಅಡಿಯಲ್ಲಿ ಅತ್ಯಾ*ಚಾರ ಪ್ರಕರಣ ದಾಖಲಿಸುತ್ತೀರಿ?" ಎಂದು ನ್ಯಾಯಪೀಠ ಪ್ರಶ್ನಿಸಿತು. ಅದರೊಂದಿಗೆ, ಆರೋಪಿಯನ್ನು ವಿಚಾರಣಾ ನ್ಯಾಯಾಲಯದ ಮುಂದೆ ಹಾಜರುಪಡಿಸಿ, ಕಾನೂನುಬದ್ಧ ಷರತ್ತುಗಳಿಗೆ ಒಳಪಟ್ಟಂತೆ ಮಧ್ಯಂತರ ಜಾಮೀನು ನೀಡುವಂತೆ ಸುಪ್ರೀಂ ಕೋರ್ಟ್ ಸೂಚಿಸಿದೆ. ಜೊತೆಗೆ ಆರೋಪಿಯು ತನ್ನ ಸ್ವಾತಂತ್ರ್ಯವನ್ನು ದುರುಪಯೋಗಪಡಿಸಿಕೊಳ್ಳಬಾರದು ಮತ್ತು ಮಹಿಳೆಯನ್ನು ಸಂಪರ್ಕಿಸಲು ಪ್ರಯತ್ನಿಸಬಾರದು ಎಂದು ಎಚ್ಚರಿಕೆ ಕೂಡ ನೀಡಿದೆ.
ಪೊಲೀಸರ ಪ್ರಕಾರ, 2021ರಲ್ಲಿ ಮಹಿಳೆ ತನ್ನ ಬಟ್ಟೆಗಳ ಬ್ರ್ಯಾಂಡ್ ಪ್ರಚಾರಕ್ಕಾಗಿ ಒಬ್ಬ ಸಾಮಾಜಿಕ ಮಾಧ್ಯಮ ಪ್ರಭಾವಿಯನ್ನು ಹುಡುಕುತ್ತಿದ್ದ ವೇಳೆ, ಈ ಯುವಕನೊಂದಿಗೆ ಸಂಪರ್ಕಕ್ಕೆ ಬಂದಳು. ಆರಂಭಿಕ ಸ್ನೇಹದ ಭಾಗವಾಗಿ, ಜಮ್ಮುವಿನ ಆಪಲ್ ಸ್ಟೋರ್ ಮುಖಾಂತರ ಯುವತಿ ಆತನಿಗೆ ಐಫೋನ್ ಗಿಫ್ಟ್ ನೀಡಿದಳು. ಆದರೆ, ಆತ ಅದನ್ನು ಮರು ಮಾರಾಟ ಮಾಡಲು ಯತ್ನಿಸಿದ್ದರಿಂದ ಅವರ ಸಂಬಂಧದಲ್ಲಿ ಬಿರುಕು ಮೂಡಿಬಂತು. ಅದರ ಬಳಿಕ, ಡಿಸೆಂಬರ್ 2021ರಲ್ಲಿ, ಯುವಕನು ನೋಯ್ಡಾದಲ್ಲಿರುವ ಮಹಿಳೆಯ ಮನೆಗೆ ಬಂದು ₹20,000 ಹಿಂತಿರುಗಿಸುವುದಾಗಿ ಹೇಳಿದ. ನಂತರ, ಕನ್ನಾಟ್ ಪ್ಲೇಸ್‌ನಲ್ಲಿ ನಡೆಯಲಿದ್ದ ಶೂಟ್‌ಗೆ ಜೊತೆಗೆ ಹೋಗುವಂತೆ ಮನವೊಲಿಸಿದ. ಆ ಪ್ರಯಾಣದ ವೇಳೆ, ಯುವಕನು ಮಾದಕವಸ್ತುಗಳಿಂದ ಕೂಡಿದ ಸಿಹಿತಿಂಡಿಗಳನ್ನು ನೀಡಿದ ಪರಿಣಾಮ ಮಹಿಳೆ ಪ್ರಜ್ಞೆ ಕಳೆದುಕೊಂಡಳು ಎಂದು ದೂರಿನಲ್ಲಿ ಹೇಳಲಾಗಿದೆ.
ಪ್ರಜ್ಞೆ ಇಲ್ಲದ ಸ್ಥಿತಿಯಲ್ಲಿ ಆತನಿಂದ ಲೈಂಗಿಕ ದೌರ್ಜನ್ಯ ನಡೆದಿದೆ, ಪರ್ಸ್‌ನ ಹಣ ಕದಿಯಲಾಗಿದೆ ಮತ್ತು ನಗ್ನ ಚಿತ್ರಗಳನ್ನು ತೆಗೆದಿರುವ ಆರೋಪ ಇದೆ. ಇದರ ನಂತರ, ಆಕೆಯ ಮೇಲೆ ಜಮ್ಮುವಿಗೆ ತೆರಳಲು ಒತ್ತಾಯ ಮಾಡಿ, ಅನಂತರ ಎರಡು ವರ್ಷಗಳಿಂದ ನಿರಂತರ ಲೈಂಗಿಕ ದೌರ್ಜನ್ಯ, ಹಣದ ಸುಲಿಗೆ ಹಾಗೂ ಬೆದರಿಕೆಗಳನ್ನು ಹಾಕಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಈ ಪ್ರಕರಣವು ಲೈಂಗಿಕ ಅಪರಾಧ, ಮಹಿಳೆಯ ಸ್ವತಂತ್ರ ಮತ್ತು ಸಾಮಾಜಿಕ ಮಾಧ್ಯಮದ ಬಳಕೆಯ ನಡುವಿನ ಸಂವೇದನಾಶೀಲ ವಿಚಾರಗಳಿಗೆ ಸಂಬಂಧಿಸಿದೆ. ಸುಪ್ರೀಂ ಕೋರ್ಟ್ ನೀಡಿರುವ ತೀರ್ಪು, ಕಾನೂನು ತತ್ವಗಳ ಮೇಲೆ ಹೊಸ ಚರ್ಚೆಗೆ ನಾಂದಿ ಹಾಡಿದೆ.