- Home
- News
- India News
- ಹೇರ್ ಕಟ್ ವೇಳೆ ಸಲೂನ್ ಎಡವಟ್ಟು: ಮಾಡೆಲ್‌ಗೆ 25 ಲಕ್ಷ ರೂ. ಪರಿಹಾರ ನೀಡಲು ಸುಪ್ರೀಂಕೋರ್ಟ್ ಆದೇಶ
ಹೇರ್ ಕಟ್ ವೇಳೆ ಸಲೂನ್ ಎಡವಟ್ಟು: ಮಾಡೆಲ್‌ಗೆ 25 ಲಕ್ಷ ರೂ. ಪರಿಹಾರ ನೀಡಲು ಸುಪ್ರೀಂಕೋರ್ಟ್ ಆದೇಶ
ತಾನು ಹೇಳಿದ್ದಕ್ಕಿಂತ ಹೆಚ್ಚು ಕೂದಲು ಕತ್ತರಿಸಿದ ದೆಹಲಿಯ ಐಟಿಸಿ ಮೌರ್ಯ ಸಲೂನ್ ವಿರುದ್ಧ ಮಾಡೆಲ್ ಆಶ್ನಾ ರಾಯ್ ದೂರು ದಾಖಲಿಸಿದ್ದರು. ಹಲವು ವರ್ಷಗಳ ಕಾಲ ನಡೆದ ಕಾನೂನು ಹೋರಾಟದ ನಂತರ ಅಂತಿಮವಾಗಿ 25 ಲಕ್ಷ ರೂಪಾಯಿ ಪರಿಹಾರ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

ಹೇಳಿದ್ದಕ್ಕಿಂತ ಹೆಚ್ಚು ಕೂದಲು ಕತ್ತರಿಸಿದ ಸೆಲೂನ್ ವಿರುದ್ಧ ಮಹಿಳೆ ಕೇಸ್
ನೀವು ಬ್ಯೂಟಿ ಪಾರ್ಲರ್‌ಗಳಲ್ಲಿ ತಲೆ ಕೂದಲು ಕತ್ತರಿಸಿದರೆ ನಿಮಗೂ ಈ ರೀತಿ ಅನುಭವ ಆಗಿರಬಹುದು. ನೀವು ಒಂದು ಇಂಚು ಕೂದಲು ಕತ್ತರಿಸಿ ಎಂದು ಹೇಳಿದ್ದರೆ ಅವರು ನಾವು ಹೇಳಿದ್ದಕ್ಕಿಂತಲೂ ತುಸು ಹೆಚ್ಚೇ ಕೂದಲು ಕತ್ತರಿಸಿ ಬಳಿಕ ಇಲ್ಲ ನೀವು ಹೇಳಿದಷ್ಟೇ ಕೂದಲು ಕತ್ತರಿಸಲಾಗಿದೆ ಎಂದು ಹೇಳುತ್ತಾರೆ. ಅಥವಾ ತಲೆಕೂದಲು ಕವಲೊಡೆದಿತ್ತು. ಫುಲ್ ತೆಳ್ಳಗೆ ಕಾಣಿಸುತ್ತಿತ್ತು ಎಂದು ಹಲವು ಕಾರಣಗಳನ್ನು ನೀಡಿ ನಿಮ್ಮನ್ನು ಸಮಾಧಾನಿಸಲು ಯತ್ನಿಸುತ್ತಾರೆ. ಹಾಗೆಯೇ ಇಲ್ಲೊಂದು ಕಡೆ ತಾನು ಹೇಳಿದ್ದಕ್ಕಿಂತ ಹೆಚ್ಚು ಉದ್ದ ಕೂದಲು ಕತ್ತರಿಸಿದ ಸಲೂನ್ ವಿರುದ್ಧ ಕೋರ್ಟ್ ಮೆಟ್ಟಿಲೇರಿದ ಮಹಿಳೆ 2 ಕೋಟಿ ಪರಿಹಾರಕ್ಕೆ ಮನವಿ ಮಾಡಿದ್ದು, ಕಡೆಗೂ ಆಕೆ ಅದರಲ್ಲಿ 25 ಲಕ್ಷ ರೂಪಾಯಿ ಪರಿಹಾರ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಮಾಡೆಲ್ ಆಶ್ನಾ ರಾಯ್ ಎಂಬುವವರೇ ಹೀಗೆ ಕೇಸ್ ಹಾಕಿ 25 ಲಕ್ಷ ರೂಪಾಯಿ ಪರಿಹಾರ ಪಡೆದವರು.
ಘಟನೆಯ ಹಿನ್ನೆಲೆ ಹೀಗಿದೆ
2018ರ ಪ್ರಕರಣ ಇದಾಗಿದ್ದು, 2018ರ ಏಪ್ರಿಲ್‌ನಲ್ಲಿ ಐಐಎಂ ಕಲ್ಕತ್ತಾ ಸ್ನಾತಕೋತ್ತರ ಪದವೀಧರೆಯಾದ ಮಾಡೆಲ್ ಆಶ್ನಾ ರಾಯ್ ಎಂಬುವವರು, ತಮ್ಮ ಕೆಲಸದ ಸಂದರ್ಶನಕ್ಕೆ ಮುಂಚಿತವಾಗಿ ದೆಹಲಿಯ ಐಟಿಸಿ ಮೌರ್ಯದಲ್ಲಿ ಇರುವ ಸಲೂನ್‌ಗೆ ಹೇರ್ ಕಟ್ ಮಾಡಲು ಹೋಗಿದ್ದರು. ಅವರು ತಮ್ಮ ಕೂದಲನ್ನು 4 ಇಂಚಿನಷ್ಟು ಟ್ರಿಮ್ ಮಾಡುವಂತೆ ಅಲ್ಲಿನ ಸಲೂನ್ ಸಿಬ್ಬಂದಿಗೆ ಹೇಳಿದ್ದರು. ಆದರೆ ಸಲೂನ್ ಸಿಬ್ಬಂದಿ ಅವರು ನಿರೀಕ್ಷಿಸಿದಕ್ಕಿಂತ ಹೆಚ್ಚು ಉದ್ದ ಕೂದಲನ್ನು ಕತ್ತರಿಸಿದ್ದರು.
ಇದಕ್ಕೆ ಪೂರಕವಾಗಿ ಸಲೂನ್ ಸಿಬ್ಬಂದಿ ಅವರಿಗೆ ಉಚಿತ ಹೇರ್‌ಕೇರ್ ಆಫರ್ ಮಾಡಿತ್ತು. ಆದರೆ ಈ ಉಚಿತ ಹೇರ್ ಕೇರ್ ತನ್ನ ನೆತ್ತಿ ಹಾಗೂ ಕೂದಲಿನ ಸ್ಥಿತಿಯನ್ನು ಮತ್ತಷ್ಟು ಹದಗೆಡಿಸಿತು ಎಂದು ಅವರು ಆರೋಪಿಸಿದ್ದಾರೆ. ಹೀಗಾಗಿ ಜುಲೈ 2018ರಲ್ಲಿ ಮಾಡೆಲ್ ರಾಯ್ ಅವರು ರಾಷ್ಟ್ರೀಯ ಗ್ರಾಹಕ ವಿವಾದ ಪರಿಹಾರ ಆಯೋಗಕ್ಕೆ (NCDRC) ದೂರು ಸಲ್ಲಿಸಿದ್ದಾರೆ.
3 ಕೋಟಿ ಪರಿಹಾರಕ್ಕೆ ಅರ್ಜಿ ಸಲ್ಲಿಸಿದ್ದ ಮಾಡೆಲ್
ಉದ್ಯೋಗ ಸಂದರ್ಶನಗಳು ಮತ್ತು ಮಾಡೆಲಿಂಗ್ ಅವಕಾಶಗಳಿಗೆ ತಯಾರಿ ನಡೆಸುತ್ತಿರುವ ಸಂದರ್ಭದಲ್ಲಿ ಐಟಿಸಿ ಮೌರ್ಯದ ಸಲೂನ್‌ನವರು ನಡೆಸಿದ ಕೆಟ್ಟ ಕ್ಷೌರವು ನನ್ನ ಆತ್ಮವಿಶ್ವಾಸ ಮತ್ತು ವೃತ್ತಿಪರ ಇಮೇಜ್ ಮೇಲೆ ತೀವ್ರ ಪರಿಣಾಮ ಬೀರಿದೆ ಎಂದು ಅವರು ದೂರಿನದಲ್ಲಿ ತಿಳಿಸಿದ್ದರು. ಈ ಘಟನೆಯಿಂದ ತಾನು ಗಂಭೀರ ಮಾನಸಿಕ ಒತ್ತಡಕ್ಕೆ ಒಳಗಾಗಿದ್ದು, ರೂ. 3 ಕೋಟಿ ಪರಿಹಾರ ಸಿಗಬೇಕು ಎಂದು ಅವರು ಅರ್ಜಿ ಸಲ್ಲಿಸಿದ್ದರು.
ಇದನ್ನೂ ಓದಿ: ನಟನೆಯ ಜೊತೆಗೆ MBBS ಕೋರ್ಸ್ ಮುಗಿಸಿ ವೈದ್ಯೆಯಾದ ಶ್ರೀಲೀಲಾ: ನೆಟ್ಟಿಗರು ಅನುಮಾನ ವ್ಯಕ್ತಪಡಿಸಿದ್ದೇಕೆ?
2 ಕೋಟಿ ಮೊತ್ತದ ಪರಿಹಾರಕ್ಕೆ ಆದೇಶಿಸಿದ್ದ ಎನ್‌ಸಿಡಿಆರ್‌ಸಿ
ಈ ಪ್ರಕರಣದ ವಿಚಾರಣೆ ನಡೆಸಿದ ಎನ್‌ಸಿಡಿಆರ್‌ಸಿ ಸೆಪ್ಟೆಂಬರ್ 2021ರಲ್ಲಿ ಐಟಿಸಿ ಮೌರ್ಯದ ಸಲೂನ್‌ನ ಸೇವೆಯಲ್ಲಿ ಕೊರತೆಯಿದೆ ಎಂದು ತೀರ್ಪು ನೀಡಿ ವರ್ಷಕ್ಕೆ 9% ಬಡ್ಡಿಯೊಂದಿಗೆ ರೂ. 2 ಕೋಟಿ ಪರಿಹಾರವನ್ನು ಮಾಡೆಲ್ ಆಶ್ನಾ ರಾಯ್‌ಗೆ ಪಾವತಿಸುವಂತೆ ಆದೇಶಿಸಿತು. ಆದರೆ ಇಷ್ಟೊಂದು ಭಾರಿ ಮೊತ್ತದ ಪರಿಹಾರ ತೀರ್ಪಿನಿಂದ ದಂಗಾದ ಐಟಿಸಿ ಮೌರ್ಯ ಈ ಪ್ರಕರಣದ ವಿರುದ್ಧ ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿತು.
ನಂತರ ಫೆಬ್ರವರಿ 2023ರಲ್ಲಿ ಈ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯವು ಐಟಿಸಿ ಮೌರ್ಯದ ಸೇವೆಯಲ್ಲಿ ಕೊರತೆ ಇರುವುದು ನಿಜ ಎಂಬ ಎನ್‌ಸಿಡಿಆರ್‌ಸಿ ತೀರ್ಪನ್ನು ಎತ್ತಿ ಹಿಡಿಯಿತು. ಆದರೆ ಎನ್‌ಸಿಡಿಆರ್‌ಸಿ ದಾಖಲಿಸಿದ ದೊಡ್ಡ ಮೊತ್ತದ ಪರಿಹಾರದ ತೀರ್ಪನ್ನು ಒಪ್ಪಿಕೊಳ್ಳದೇ ಪಕ್ಕಕ್ಕೆ ಇರಿಸಿ. ಪ್ರಕರಣದ ಮರು ಮೌಲ್ಯಮಾಪನಕ್ಕಾಗಿ ಪ್ರಕರಣವನ್ನು ಮತ್ತೆ ಎನ್‌ಸಿಡಿಆರ್‌ಸಿಗೆ ಕಳುಹಿಸಿತು. ಗ್ರಾಹಕಿಗೆ ಆದ ನಷ್ಟಕ್ಕೆ ಸಾಕ್ಷ್ಯಗಳನ್ನು ನೀಡಲು ಹಾಗೂ ಅದನ್ನು ನಿರಾಕರಿಸಲು ಐಟಿಸಿ ಮೌರ್ಯಗೆ ನಿರ್ದೇಶಿಸಿತ್ತು.
ಇದನ್ನೂ ಓದಿ: ಕಿಸ್ ಮಾಡಿ ವಿವಾದಕ್ಕೀಡಾಗಿದ್ದ ಗಾಯಕನಿಗೆ ಮತ್ತೆ ಸಂಕಷ್ಟ: ಕೋರ್ಟ್ ಮೆಟ್ಟಿಲೇರಿದ ಉದಿತ್ ನಾರಾಯಣ್ ಮೊದಲ ಪತ್ನಿ
ಸುಪ್ರೀಂಕೋರ್ಟ್‌ನಲ್ಲಿ ತೀರ್ಪು ಪ್ರಶ್ನಿಸಿದ ಐಟಿಸಿ ಮೌರ್ಯ ಸಲೂನ್
ಆ ಸಮಯದಲ್ಲಿ ಐಟಿಸಿ ನ್ಯಾಯಾಲಯದಲ್ಲಿ ರೂ. 25 ಲಕ್ಷ ಠೇವಣಿ ಇಟ್ಟಿತು, ಅದನ್ನು ನಂತರ ಎನ್‌ಸಿಡಿಆರ್‌ಸಿಗೆ ರವಾನಿಸಲಾಯಿತು. ನಂತರ 2023ರ ಏಪ್ರಿಲ್‌ನಲ್ಲಿ ಸುಪ್ರೀಂಕೋರ್ಟ್ ನಿರ್ದೇಶನದಂತೆ ಐಟಿಸಿ ಸಲೂನ್‌ನಿಂದ ತಮಗಾದ ಹಾನಿಯ ಬಗ್ಗೆ ಸಾಕ್ಷಿ ನೀಡಲು ಅಫಿಡವಿಟ್ ಮತ್ತು ಇಮೇಲ್‌ಗಳ ಕಾಪಿಗಳು, ಅವರಿಗೆ ಆಫರ್ ಮಾಡಲಾಗಿದ್ದ ಉದ್ಯೋಗಗಳು, ಮಾಡೆಲಿಂಗ್ ಪ್ರಮಾಣಪತ್ರಗಳು, ವೇತನದ ಸ್ಲಿಪ್‌ಗಳು ಮತ್ತು ವೈದ್ಯಕೀಯ ವರದಿ ಸೇರಿದಂತೆ ಹೆಚ್ಚುವರಿ ಸಾಕ್ಷಿಗಳನ್ನು ನ್ಯಾಯಾಲಯದ ಮುಂದಿಟ್ಟಿದ್ದರು. ಎನ್‌ಸಿಡಿಆರ್‌ಸಿ ಮುಂದೆ ಇರಿಸಲಾದ ವಸ್ತುಗಳ ಭಾಗವಾಗಿ ಅವರು ತಮಗೆ ನೀಡಬೇಕಾದ ಪರಿಹಾರದ ಮೊತ್ತವನ್ನು ರೂ. 5.2 ಕೋಟಿಗೆ ಹೆಚ್ಚಿಸಿದರು.
ಇದನ್ನೂ ಓದಿ: ಕಷ್ಟಪಡುತ್ತಿದ್ದ ನಟರಿಗೆ ಧರ್ಮಛತ್ರದಂತಿತ್ತು ರಾಜ್‌ಪಾಲ್ ಮನೆ: ಹಾಸ್ಯನಟನ ಉದಾರತೆ ತೆರೆದಿಟ್ಟ ಗೆಳೆಯ ನವಾಜುದ್ದೀನ್ ಸಿದ್ಧಿಕಿ
25 ಲಕ್ಷ ರೂಪಾಯಿ ಪರಿಹಾರ ಪಾವತಿಗೆ ಸುಪ್ರೀಂಕೋರ್ಟ್ ಆದೇಶ
ನಂತರ ಏಪ್ರಿಲ್ 2023 NCDRC ಮತ್ತೊಮ್ಮೆ ವಿಷಯವನ್ನು ಪರಿಶೀಲಿಸಿತು ಮತ್ತು ರಾಯ್ ಪರವಾಗಿ ರೂ. 2 ಕೋಟಿ ಪರಿಹಾರ ಹಾಗೂ ಅದರ ಬಡ್ಡಿ ಪಾವತಿಸುವಂತೆ ಆದೇಶಿಸಿತ್ತು. ಹೀಗಾಗಿ ಐಟಿಸಿ ಮತ್ತೆ ಸುಪ್ರೀಂಕೋರ್ಟ್ ಮೆಟ್ಟಿಲೇರಿತು. ಈ ಪ್ರಕರಣವನ್ನು ಫೆಬ್ರವರಿ 2026ರಲ್ಲಿ ಅಂದರೆ ಈ ತಿಂಗಳು ವಿಚಾರಣೆಗೆ ಕೈಗೆತ್ತಿಕೊಂಡ ಸುಪ್ರೀಂಕೋರ್ಟ್‌ನ ನ್ಯಾಯಮೂರ್ತಿ ರಾಜೇಶ್ ಬಿಂದಾಲ್ ಮತ್ತು ನ್ಯಾಯಮೂರ್ತಿ ಮನಮೋಹನ್ ಅವರನ್ನೊಳಗೊಂಡ ಪೀಠವು, ದೊಡ್ಡ ಪರಿಹಾರದ ಹಕ್ಕುಗಳನ್ನು ನಿಜವಾದ ನಷ್ಟದ ವಿಶ್ವಾಸಾರ್ಹ ಸಾಕ್ಷಿಗಳಿಂದ ಬೆಂಬಲಿಸಬೇಕು, ಕೇವಲ ಊಹೆಗಳು ಅಥವಾ ಪರಿಶೀಲಿಸದ ದಾಖಲೆಗಳಿಂದಲ್ಲ ಎಂದು ತೀರ್ಪು ನೀಡಿತು. ಅಲ್ಲದೇ ಎನ್‌ಸಿಡಿಆರ್‌ಸಿ ನೀಡಿದ 2 ಕೋಟಿ ಪರಿಹಾರವನ್ನು ರದ್ದುಪಡಿಸಿ 25 ಲಕ್ಷ ರೂಗಳಿಗೆ ಸೀಮಿತಗೊಳಿಸಿತು.
ಇದನ್ನೂ ಓದಿ: ಕೆನರಾ ಬ್ಯಾಂಕ್ ಅವಾಂತರ: 90 ವರ್ಷದ ವೃದ್ಧರಿಗೆ 100 ವರ್ಷಗಳ ನಂತರ ಮೆಚುರ್ ಆಗುವ ಇನ್ಶುರೆನ್ಸ್ ಮಾರಾಟ ಮಾಡಿ ಮೋಸ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

