- Home
- News
- India News
- ಮಣಿಪುರದಲ್ಲಿ ಮತ್ತೆ ಹಿಂಸಾಚಾರ: ಕರ್ಫ್ಯೂ, ಇಂಟರ್‌ನೆಟ್ ಬಂದ್, ಪಿಎಂ ವಿರುದ್ಧ ಪ್ರಿಯಾಂಕ ಕಿಡಿ
ಮಣಿಪುರದಲ್ಲಿ ಮತ್ತೆ ಹಿಂಸಾಚಾರ: ಕರ್ಫ್ಯೂ, ಇಂಟರ್‌ನೆಟ್ ಬಂದ್, ಪಿಎಂ ವಿರುದ್ಧ ಪ್ರಿಯಾಂಕ ಕಿಡಿ
ಮಣಿಪುರದಲ್ಲಿ ಅರಾಂಬಾಯಿ ತೆಂಗೋಲ್ ಸಂಘಟನೆಯ ಪ್ರಮುಖ ನಾಯಕನ ಬಂಧನದ ನಂತರ ಹಿಂಸಾಚಾರ ಭುಗಿಲೆದ್ದಿದೆ. ಕರ್ಫ್ಯೂ ಜಾರಿ ಮತ್ತು ಇಂಟರ್ನೆಟ್ ಸ್ಥಗಿತಗೊಂಡಿದ್ದು, ಪ್ರತಿಭಟನೆಗಳು ಹಿಂಸಾತ್ಮಕವಾಗಿ ತಿರುಗಿವೆ. ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ಕಿಡಿಕಾರಿದೆ.

ಮಣಿಪುರದಲ್ಲಿ ಅರಾಂಬಾಯಿ ತೆಂಗೋಲ್ ಸಂಘಟನೆಯ ಪ್ರಮುಖ, ಮೈತೇಯಿ ಸಮುದಾಯದ ಪ್ರಮುಖ ನಾಯಕ ಕಾನನ್ ಸಿಂಗ್ ಅವರನ್ನು ಭದ್ರತಾ ಪಡೆಗಳು ಬಂಧಿಸಿದೆ. ಬಂಧನದ ನಂತರ ಮತ್ತೆ ಹಿಂಸಾಚಾರ ಭುಗಿಲೆದ್ದಿದೆ. ಶನಿವಾರ ರಾತ್ರಿಯಿಂದ ರಾಜ್ಯದ ಹಲವೆಡೆ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ. ಇಂಫಾಲ್ ಕಣಿವೆಯ ಐದು ಜಿಲ್ಲೆಗಳಲ್ಲಿ ಕರ್ಫ್ಯೂ ಜಾರಿಯಾಗಿದೆ ಮತ್ತು ಇಂಟರ್ನೆಟ್ ಸೇವೆಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಮಣಿಪುರದಲ್ಲಿ ಸಂಘರ್ಷಕ್ಕೆ ಪ್ರಮುಖ ಕಾರಣ ಕಾನನ್ ಸಿಂಗ್ ಮಾತ್ರವಲ್ಲ 2024ರ ಫೆಬ್ರವರಿಯಲ್ಲಿ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಮೊಯಿರಾಂಗ್ಥೆಮ್ ಅಮಿತ್ ನಿವಾಸದ ಮೇಲಿನ ದಾಳಿ ಮತ್ತು ಅಪಹರಣ ಪ್ರಕರಣದಲ್ಲಿ ಈತ ಪ್ರಮುಖ ಆರೋಪಿ ಎನ್ನಲಾಗಿದೆ.
ನಾಯಕನ ಬಂಧನದ ನಂತರ, ಮೈತೇಯಿ ಸಮುದಾಯ ಜನ ಸೇರಿ ಬಿಡುಗಡೆಗಾಗಿ ಪ್ರತಿಭಟನೆ ನಡೆಸಿದರು. ಈ ವೇಳೆ ಪ್ರದೇಶದಲ್ಲಿ ಉದ್ವಿಗ್ನತೆ ಹೆಚ್ಚಾಗಿದೆ, ಬೆಳಗ್ಗಿನವರೆಗೂ ಹಿಂಸಾತ್ಮಕ ಪ್ರತಿಭಟನೆ ನಡೆದಿದೆ. ಸುಮಾರು 50 ಸುತ್ತು ಗುಂಡಿನ ಚಕಮಕಿ ನಡೆದಿದೆ ಎಂದು ವರದಿಯಾಗಿದೆ. ಪರಿಸ್ಥಿತಿಯನ್ನು ನಿಯಂತ್ರಿಸಲು ಭದ್ರತಾ ಪಡೆ ನಿಯೋಜನೆ ಮಾಡಲಾಯ್ತು. ಈ ವೇಳೆ ಅವರ ವಾಹನಗಳಿಗೆ ಬೆಂಕಿ ಹಚ್ಚಿ ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಂಧಿತ ನಾಯಕನನ್ನು ಹೊರ ರಾಜ್ಯಕ್ಕೆ ಕರೆದುಕೊಂಡು ಹೋಗಬಾರದು ಎಂದು ಇಂಪಾಲದಲ್ಲೊರುವ ವಿಮಾನ ನಿಲ್ದಾಣಕ್ಕೆ ತೆರಳಿದ ಉದ್ರಿಕ್ತರ ಗುಂಪು ವಿಮಾನ ನಿಲ್ದಾಣದ ರಸ್ತೆಯಲ್ಲೇ ಮಲಗಿದ್ದಾರೆ. ಹಲವೆಡೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾರೆ.
ಸದ್ಯಕ್ಕೆ ಇಂಫಾಲ ಪಶ್ಚಿಮ, ಇಂಫಾಲ ಪೂರ್ವ, ತೌಬಲ್ , ಬಿಷ್ಣುಪುರ ಮತ್ತು ಕಕ್ಚಿಂಗ್ ಜಿಲ್ಲೆಗಳಲ್ಲಿ ಇಂಟರ್‌ನೆಟ್ ಸೇವೆಯನ್ನು ಮುಂದಿನ 5 ದಿನಗಳವರೆಗೆ ಸ್ಥಗಿತಗೊಳಿಸಲಾಗಿದೆ. ಕಾನೂನು ಮತ್ತು ಸುವ್ಯವಸ್ಥೆಯ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಇಂಟರ್‌ನೆಟ್ ಸೇವೆಯನ್ನು ಸ್ಥಗಿತಗೊಳಿಸಲಾಗಿದೆ ಎಂದು ಆಯುಕ್ತ ಎನ್. ಅಶೋಕ್ ಕುಮಾರ್ ಆದೇಶದಲ್ಲಿ ತಿಳಿಸಿದ್ದಾರೆ. ಆದೇಶದಲ್ಲಿ ಉಲ್ಲಂಘಿಸಿದರೆ ಕಾನೂನು ಕ್ರಮದ ಎಚ್ಚರಿಕೆಯನ್ನು ಕೂಡ ನೀಡಲಾಗಿದೆ.
ಈ ಹಿಂಸಾಚಾರದ ಬಳಿಕ ಭಾನುವಾರ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಸೇರಿದಂತೆ ಪ್ರಮುಖ ವಿರೋಧ ಪಕ್ಷದ ಮುಖಂಡರು ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಕೇಂದ್ರ ಸರ್ಕಾರದ ವಿರುದ್ಧ ತೀವ್ರ ಟೀಕೆಗಳ ಮಳೆ ಹರಿಸಿದ್ದಾರೆ. ಮಣಿಪುರ ಮತ್ತೆ ಹಿಂಸಾಚಾರದ ಸುಳಿಯಲ್ಲಿ ಸಿಲುಕಿದೆ. ಕಳೆದ ಎರಡು ವರ್ಷಗಳಿಂದ ಮಣಿಪುರದ ಜನರು ಹಿಂಸಾಚಾರ, ಕೊಲೆ, ಅತ್ಯಾಚಾರಗಳನ್ನು ಎದುರಿಸುತ್ತಿದ್ದಾರೆ. ನೂರಾರು ಜನರು ಸಾವನ್ನಪ್ಪಿದ್ದಾರೆ, ಸಾವಿರಾರು ಜನರು ತಮ್ಮ ಮನೆ ಮನೆ ತೊರೆದು ನಿರಾಶ್ರಿತರಾಗಿದ್ದಾರೆ," ಎಂದು ಪ್ರಿಯಾಂಕಾ ಗಾಂಧಿ ಭಾವುಕ ಪ್ರತಿಕ್ರಿಯೆ ನೀಡಿದ್ದಾರೆ. ಮೇ 2023 ರಲ್ಲಿ ಜನಾಂಗೀಯ ಸಂಘರ್ಷಗಳು ಆರಂಭವಾದಾಗಿನಿಂದ ಪ್ರಧಾನಿ ಮಣಿಪುರಕ್ಕೆ ಕಾಲಿಟ್ಟಿಲ್ಲ. ಶಾಂತಿಗಾಗಿ ಮನವಿ ಮಾಡಿಲ್ಲ. ಈ ಬೇಜವಾಬ್ದಾರಿ ವರ್ತನೆ ಪ್ರಜಾಪ್ರಭುತ್ವಕ್ಕೆ ದುಃಖದ ಸಂಗತಿ" ಎಂದು ಅವರು ತಮ್ಮ ಟ್ವಿಟರ್ ಖಾತೆಯಲ್ಲಿ (ಈಗ X) ಬರೆದಿದ್ದಾರೆ.
ಜೈರಾಮ್ ರಮೇಶ್ ಅವರ ಆರೋಪಗಳು
ಈ ಹಿಂದೆ ಮಣಿಪುರ ವಿಷಯದ ಕುರಿತು ಪ್ರಧಾನಿಯನ್ನು ಟೀಕಿಸುತ್ತ ಬಂದಿರುವ ಜೈರಾಮ್ ರಮೇಶ್ ಅವರು ಈ ಬಾರಿ ಇನ್ನೂ ಗಂಭೀರವಾಗಿ ಪ್ರಧಾನಿ ಮತ್ತು ಕೇಂದ್ರ ಗೃಹ ಸಚಿವರ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಕಳೆದ 24 ಗಂಟೆಗಳಲ್ಲಿ ಐದು ಜಿಲ್ಲೆಗಳಲ್ಲಿ ಹಿಂಸಾಚಾರ ನಡೆದಿದ್ದು ಜನರಲ್ಲಿ ಭಯ ಮತ್ತು ಸಂಕಟ ಹೆಚ್ಚಿಸಿದೆ. ಫೆಬ್ರವರಿ 2022 ರಲ್ಲಿ ಬಿಜೆಪಿ ಬಹುಮತದೊಂದಿಗೆ ಅಧಿಕಾರಕ್ಕೆ ಬಂದರೂ, ಕೇವಲ 15 ತಿಂಗಳಲ್ಲಿ ರಾಜ್ಯ ಹಿಂಸಾಚಾರದ ಸುಳಿಯಲ್ಲಿ ಸಿಲುಕಿದೆ. ನೂರಾರು ಪುರುಷರು, ಮಹಿಳೆಯರು ಮತ್ತು ಮಕ್ಕಳು ತಮ್ಮ ಪ್ರಾಣವನ್ನೇ ಕಳೆದುಕೊಂಡಿದ್ದಾರೆ ಎಂದು ತಿಳಿಸಿದ್ದಾರೆ.
ಕೇಂದ್ರ ಗೃಹ ಸಚಿವರು ಸಾಂಕೇತಿಕ ಭೇಟಿ ನೀಡಿದರೆ, ಪ್ರಧಾನಿ ಅವರ ಮಾತು ಬಿಟ್ಟರೆ ಮಣಿಪುರದ ನೋವಿಗೆ ಇನ್ನೂ ಸ್ಪಂದಿಸಿಲ್ಲ. ರಾಜ್ಯಪಾಲರು ಸಹ ಸಾರ್ವಜನಿಕವಾಗಿ ಓಡಾಡಲು ಹೆಲಿಕಾಪ್ಟರ್ ಅವಲಂಬಿಸಿದ್ದಾರೆ. ಇದು ಇತ್ತಿಚೆಗೆ ಭಾರತದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟ ವಾತಾವರಣವಾಗಿದೆ ಎಂದು ತೀವ್ರವಾಗಿ ಖಂಡಿಸಿದ್ದಾರೆ.
ಶನಿವಾರ ರಾತ್ರಿ ನಡೆದ ಹಿಂಸಾಚಾರದ ನಂತರ ಇಂಫಾಲ್ ಪಶ್ಚಿಮ, ಇಂಫಾಲ್ ಪೂರ್ವ, ತೌಬಲ್, ಬಿಷ್ಣುಪುರ ಮತ್ತು ಕಾಕ್ಚಿಂಗ್ ಜಿಲ್ಲೆಗಳಲ್ಲಿ ಕರ್ಫ್ಯೂ ಜಾರಿಗೊಳಿಸಲಾಗಿದೆ. ಅಲ್ಲದೆ, ಇಂಟರ್ನೆಟ್ ಹಾಗೂ ಮೊಬೈಲ್ ಡೇಟಾ ಸೇವೆಗಳನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗಿದೆ. ಸಾರ್ವಜನಿಕರಿಗೆ ಅನಾವಶ್ಯಕವಾಗಿ ಮನೆಬಿಟ್ಟು ಹೊರಬರಬೇಡಿ ಎಂಬಂತೆ ತೀವ್ರ ಸೂಚನೆ ನೀಡಲಾಗಿದೆ. ಮಣಿಪುರದ ಜನಾಂಗೀಯ ಸಂಘರ್ಷಗಳು ಮುಂದುವರಿದಿರುವ ಬೆನ್ನಲ್ಲೇ ಮತ್ತೆ ಪ್ರಜ್ಞೆ ಕಳೆದುಕೊಳ್ಳುವಂತಹ ಪರಿಸ್ಥಿತಿ ಮೂಡಿದೆ. ಇಂತಹ ಸಂದರ್ಭದಲ್ಲೂ ಪ್ರಧಾನ ಮಂತ್ರಿಯ ನಿರ್ಲಕ್ಷ್ಯ ವಿರೋಧ ಪಕ್ಷಗಳ ಆಕ್ರೋಶಕ್ಕೆ ಕಾರಣವಾಗಿದೆ. ರಾಜ್ಯದಲ್ಲಿ ಶಾಂತಿ ನೆಲೆಸಬೇಕೆಂದು ಜನ ಭಯಸುತ್ತಿದ್ದಾರೆ.