- Home
- News
- India News
- ಮಗಳಿಗಾಗಿ ಆಟೋದಲ್ಲೇ 'ಅಮ್ಮನ ಮಡಿಲು' ಸೃಷ್ಟಿಸಿದ ಅಪ್ಪ; ಆಟೋ ಡ್ರೈವರ್ ನಗುಮುಖದ ಹಿಂದಿದೆ ಕಣ್ಣೀರ ಕಥೆ!
ಮಗಳಿಗಾಗಿ ಆಟೋದಲ್ಲೇ 'ಅಮ್ಮನ ಮಡಿಲು' ಸೃಷ್ಟಿಸಿದ ಅಪ್ಪ; ಆಟೋ ಡ್ರೈವರ್ ನಗುಮುಖದ ಹಿಂದಿದೆ ಕಣ್ಣೀರ ಕಥೆ!
ಆಟೋ ಚಾಲಕನೊಬ್ಬ, ತನ್ನ ಪುಟ್ಟ ಮಗಳನ್ನು ಆಟೋದಲ್ಲೇ ಮಲಗಿಸಿಕೊಂಡು ಆಟೋ ಓಡಿಸುತ್ತಿದ್ದಾನೆ. ಪ್ರಯಾಣಿಕ ಇದನ್ನು ವಿಡಿಯೋ ಮಾಡಿದ್ದು, ಆಗ ಡ್ರೈವರ್‌ನ ಕಣ್ಣೀರಿನ ಕಥೆಯೊಂದು ತೆರೆದುಕೊಂಡಿದೆ. ಈ ಮನಕಲಕುವ ದೃಶ್ಯದ ವಿಡಿಯೋ ವೈರಲ್ ಆಗಿದ್ದು, ಅಂತರ್ಜಾಲದಲ್ಲಿ ಚರ್ಚೆಗೆ ಕಾರಣವಾಗಿದೆ.

ಬೆಂಗಳೂರು: ಸಾಮಾಜಿಕ ಜಾಲತಾಣಗಳು ಕೇವಲ ಮನರಂಜನೆಯ ತಾಣವಲ್ಲ, ಅವು ಕೆಲವೊಮ್ಮೆ ಬದುಕಿನ ಕಠಿಣ ವಾಸ್ತವದ ದರ್ಶನವನ್ನೂ ಮಾಡಿಸುತ್ತವೆ. ತಂದೆಯಾದವನು ತನ್ನ ಕುಟುಂಬಕ್ಕಾಗಿ ಮತ್ತು ಮಕ್ಕಳ ಭವಿಷ್ಯಕ್ಕಾಗಿ ಎಂತಹ ತ್ಯಾಗಕ್ಕೂ ಸಿದ್ಧನಾಗುತ್ತಾನೆ ಎಂಬುದಕ್ಕೆ ಸದ್ಯ ವೈರಲ್ ಆಗುತ್ತಿರುವ ಈ ವಿಡಿಯೋ ಒಂದು ಜ್ವಲಂತ ಸಾಕ್ಷಿಯಾಗಿದೆ. ತನ್ನ ಪುಟ್ಟ ಮಗುವನ್ನು ಆಟೋದ ಹಿಂದಿನ ಸೀಟಿನ ಹಿಂಬದಿ ಇರುವ ಸಣ್ಣ ಜಾಗದಲ್ಲೇ ಮಲಗಿಸಿಕೊಂಡು, ಅನಿವಾರ್ಯತೆಯ ನಡುವೆಯೂ ಮುಗುಳ್ನಗುತ್ತಾ ಪ್ರಯಾಣಿಕರಿಗೆ ಸೇವೆ ನೀಡುತ್ತಿರುವ ಈ ಆಟೋ ಚಾಲಕನ ಕಥೆ ಈಗ ಇಡೀ ಅಂತರ್ಜಾಲವನ್ನು ಕಣ್ಣೀರಿಸುತ್ತಿದೆ.
ವೈರಲ್ ಆಗಿರುವ ವಿಡಿಯೋದಲ್ಲಿ, ಆಟೋ ಚಾಲಕನೊಬ್ಬ ತನ್ನ ಪುಟ್ಟ ಮಗಳನ್ನು ಆಟೋದ ಸಣ್ಣ ಜಾಗದಲ್ಲಿ ಮಲಗಿಸಿರುವುದು ಕಂಡುಬರುತ್ತದೆ. ಇದನ್ನು ಗಮನಿಸಿದ ಪ್ರಯಾಣಿಕರೊಬ್ಬರು ಆತಂಕದಿಂದ, 'ಆಟೋದಲ್ಲಿ ಮಗುವನ್ನು ಏಕೆ ಮಲಗಿಸಿದ್ದೀರಿ? ಯಾರಿದು ಮಗು?' ಎಂದು ಪ್ರಶ್ನಿಸುತ್ತಾರೆ. ಅದಕ್ಕೆ ಆ ಚಾಲಕ ನೀಡಿದ ಉತ್ತರ ಎಂತಹವರ ಕಣ್ಣಾಲಿಗಳನ್ನೂ ಒದ್ದೆ ಮಾಡುವಂತಿದೆ.
ಇವಳು ನನ್ನ ಮಗಳು. ಇತ್ತೀಚೆಗಷ್ಟೇ ಈಕೆಯ ತಾಯಿ, ಅಂದರೆ ನನ್ನ ಹೆಂಡತಿ ತೀರಿಕೊಂಡರು. ಮಗಳನ್ನು ಮನೆಯಲ್ಲಿ ಒಬ್ಬಳೇ ಬಿಟ್ಟು ಆಟೋ ಓಡಿಸಲು ಬರಲು ನನಗೆ ಸಾಧ್ಯವಿಲ್ಲ. ಹಾಗಂತ ನಾನು ಮಗುವನ್ನು ನೋಡಿಕೊಂಡು ಕೆಲಸಕ್ಕೆ ಹೋಗದಿದ್ದರೆ ನಮ್ಮ ಜೀವನ ನಡೆಯುವುದು ಕಷ್ಟವಾಗುತ್ತದೆ. ನಾನು ಈಗ ಸಿಂಗಲ್ ಪೇರೆಂಟ್ ಆಗಿರುವ ಕಾರಣ, ಮಗಳನ್ನು ಆಟೋದಲ್ಲೇ ಮಲಗಿಸಿಕೊಂಡು ಕೆಲಸಕ್ಕೆ ಕರೆತರುತ್ತೇನೆ' ಎಂದು ತನ್ನ ಅಸಹಾಯಕತೆಯನ್ನು ಬಿಚ್ಚಿಟ್ಟಿದ್ದಾನೆ. ಆತನ ಮಾತನ್ನು ಕೇಳಿದ ಪ್ರಯಾಣಿಕ, ಮಗು ಎಚ್ಚರಗೊಂಡಾಗ ಜ್ಯೂಸ್ ಕೊಡಿಸಿ ಎಂದು ಹಣ ನೀಡಿ, 'ನಿಮಗೆ ಒಳ್ಳೆಯದಾಗಲಿ' ಎಂದು ಹಾರೈಸಿದ್ದಾರೆ.
ಈ ಮನಕಲಕುವ ವಿಡಿಯೋವನ್ನು 'Saffron Chargers' (@SaffronChargers) ಎಂಬ ಎಕ್ಸ್ (ಟ್ವಿಟರ್) ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಈ ಪೋಸ್ಟ್‌ಗೆ, 'ಈ ಆಟೋ ಚಾಲಕನನ್ನು ಭೇಟಿ ಮಾಡಿ, ಈತ ಒಬ್ಬ ಸಿಂಗಲ್ ಪೇರೆಂಟ್. ಹೆಂಡತಿ ತೀರಿಹೋದ ನಂತರ ಈತ ತನ್ನ ಪುಟ್ಟ ಮಗಳನ್ನು ಎಲ್ಲೆಡೆ ಕರೆದೊಯ್ಯುತ್ತಾ, ಜೀವನೋಪಾಯಕ್ಕಾಗಿ ದುಡಿಯುತ್ತಾ ಆಕೆಯನ್ನು ಏಕಾಂಗಿಯಾಗಿ ಸಾಕುತ್ತಿದ್ದಾನೆ. ಪುರುಷನಾಗಿರುವುದು ಅಷ್ಟು ಸುಲಭವಲ್ಲ ' ಎಂಬ ಅಡಿಬರಹ ನೀಡಲಾಗಿದೆ.
ನೆಟ್ಟಿಗರ ಮಿಶ್ರ ಪ್ರತಿಕ್ರಿಯೆ:
ಈ ವಿಡಿಯೋ ವೈರಲ್ ಆಗುತ್ತಿದ್ದಂತೆಯೇ ಸಾವಿರಾರು ಜನರು ಕಮೆಂಟ್ ಮಾಡುವ ಮೂಲಕ ತಮ್ಮ ಭಾವನೆಗಳನ್ನು ಹಂಚಿಕೊಂಡಿದ್ದಾರೆ. ಕೆಲವರು ಆತನನ್ನು 'ಹೀರೋ' ಎಂದು ಕರೆದರೆ, ಇನ್ನು ಕೆಲವರು ಮಗುವಿನ ಸುರಕ್ಷತೆಯ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ:
ಫರ್ಮನ್ ಸೈಫಿ ಎನ್ನುವವರು 'ಈ ಕಥೆ ಹೃದಯಸ್ಪರ್ಶಿಯಾಗಿದೆ. ದುಡಿಯುತ್ತಾ ಮಗಳನ್ನು ಏಕಾಂಗಿಯಾಗಿ ಸಾಕುವುದು ಯಾರಿಗೂ ಸುಲಭವಲ್ಲ. ಇವರೇ ನಿಜವಾದ ಹೀರೋಗಳು' ಎಂದಿದ್ದಾರೆ.
Meet this auto driver, a single parent. His wife passed away and since then he carries his little daughter everywhere, earning a living and raising her alone.
Being a man is not easy 💔 pic.twitter.com/JKVlNmtlg0— Saffron Chargers (@SaffronChargers) February 9, 2026
ಬುಲೆಟ್ ರೈಡರ್ ಎನ್ನುವವರು 'ಇದನ್ನು ತಪ್ಪಾಗಿ ಭಾವಿಸಬೇಡಿ, ಆದರೆ ಅಜ್ಜ-ಅಜ್ಜಿ, ಸಂಬಂಧಿಕರು ಅಥವಾ ಅಂಗನವಾಡಿಗಳಂತಹ ಬೇರೆ ಆಯ್ಕೆಗಳೂ ಇರುತ್ತವೆ. ಸಾಧ್ಯವಾದರೆ ಅವರು ಅಂತಹ ದಾರಿಗಳನ್ನು ಹುಡುಕಬೇಕು' ಎಂದು ಸಲಹೆ ನೀಡಿದ್ದಾರೆ.
ಮನುಶ್ರೀ ಎನ್ನುವವರು 'ಪುರುಷರು ಈಗಲಾದರೂ ಅರಿತುಕೊಳ್ಳಬೇಕು, ಆತ ತನ್ನ ಮಗುವನ್ನು ಮನೆಯಲ್ಲಿ ಸುರಕ್ಷಿತವಾಗಿಡಲು ಸಾಧ್ಯವಿಲ್ಲ ಏಕೆಂದರೆ ಅಲ್ಲಿಯೂ ಒಬ್ಬ ಪುರುಷನೇ ಇರುತ್ತಾನೆ. ಅಪಘಾತದ ಭಯಕ್ಕಿಂತ 'ಒಬ್ಬ ಪುರುಷನ' ಬಗ್ಗೆ ಇರುವ ಭಯವೇ ದೊಡ್ಡದು' ಎಂದು ಮಹಿಳಾ ಪರವಾಗಿ ಮಾತನಾಡಿದ್ದಾರೆ.
ಸ್ಯಾಮಿಮ್ಯಾಕ್ಸ್ ಎನ್ನುವವರು, 'ಒಬ್ಬ ತಂದೆಯಾಗಿ ಆತ ಒಳ್ಳೆಯವನೇ ಇರಬಹುದು. ಆದರೆ ಭಾರತೀಯ ರಸ್ತೆಗಳಲ್ಲಿ ಆ ಮಗು ಅಲ್ಲಿ ಮಲಗಿರುವುದು ಅಪಾಯಕಾರಿ. ದೇವರು ಅವರಿಗೆ ಪ್ರೀತಿ ಮತ್ತು ಸುಖವನ್ನು ನೀಡಲಿ' ಎಂದು ಹಾರೈಸಿದ್ದಾರೆ.
ದಕ್ಷ್ ಎನ್ನುವ ಮತ್ತೊಬ್ಬ ನೆಟ್ಟಿಗರು 'ಪುರುಷನಾಗಿರುವುದು ಸುಲಭವಲ್ಲ, ಕುಟುಂಬಕ್ಕಾಗಿ ಆತ ತನ್ನೆಲ್ಲವನ್ನೂ ತ್ಯಾಗ ಮಾಡುತ್ತಾನೆ. ಈ ಆಟೋ ಚಾಲಕನಿಗೆ ನನ್ನದೊಂದು ಸಲ್ಯೂಟ್' ಎಂದು ಕಾಮೆಂಟ್ ಮಾಡಿದ್ದಾರೆ.
ಒಟ್ಟಾರೆಯಾಗಿ, ಈ ಆಟೋ ಚಾಲಕನ ಹೋರಾಟ ಬದುಕಿನ ಹಾದಿಯಲ್ಲಿ ಎದುರಾಗುವ ಸವಾಲುಗಳನ್ನು ಎದುರಿಸಲು ಪ್ರೇರಣೆಯಂತಿದೆ. ಅಪ್ಪನ ಪ್ರೀತಿ ಮತ್ತು ಜವಾಬ್ದಾರಿಗೆ ಬೆಲೆ ಕಟ್ಟಲು ಅಸಾಧ್ಯ ಎಂಬುದು ಈ ವಿಡಿಯೋ ಮೂಲಕ ಮತ್ತೊಮ್ಮೆ ಸಾಬೀತಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

