ರಫೇಲ್ ಸ್ಕ್ವಾಡ್ರನ್‌ನ ಮೊದಲ ಮಹಿಳಾ ಪೈಲಟ್ ಶಿವಾಂಗಿ ಸಿಂಗ್ ಬಗ್ಗೆ ನಿಮಗೇನು ಗೊತ್ತು?
ಬೆಂಗಳೂರು: ಪಹಲ್ಗಾಮ್ ಹತ್ಯಾಕಾಂಡಕ್ಕೆ ಪ್ರತಿಕಾರ ನೀಡುವ ನಿಟ್ಟಿನಲ್ಲಿ ಭಾರತೀಯ ಸೇನೆ ಆಪರೇಷನ್ ಸಿಂಧೂರ್ ಹೆಸರಿನಲ್ಲಿ ಉಗ್ರರನ್ನು ಬಗ್ಗುಬಡಿಯುವ ನಿಟ್ಟಿನಲ್ಲಿ ದಿಟ್ಟ ಹೆಜ್ಜೆಯಿಟ್ಟಿದೆ. ಇದರ ಬೆನ್ನಲ್ಲೇ ದೇಶದ ಮೊದಲ ಮಹಿಳಾ ಫ್ಲೈಟ್ ಲೆಫ್ಟಿನೆಂಟ್ ಶಿವಾಂಗಿ ಸಿಂಗ್ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಅಷ್ಟಕ್ಕೂ ಯಾರಿವರು ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ.

ಐದು ವರ್ಷಗಳ ಹಿಂದೆ ವಾರಣಾಸಿ ಮೂಲದ ಶಿವಾಂಗಿ ಸಿಂಗ್, ಯುದ್ಧ ವಿಮಾನ ರಫೆಲ್ ಸ್ಕ್ವಾಡ್ರನ್ ಗೋಲ್ಡನ್ ಆ್ಯರೋದ ಮೊದಲ ಮಹಿಳಾ ಫ್ಲೈಟ್ ಲೆಫ್ಟಿನೆಂಟ್ ಆಗಿ ನೇಮಕಗೊಳ್ಳುವ ಮೂಲಕ ಎಲ್ಲರ ಹುಬ್ಬೇರಿಸುವಂತೆ ಮಾಡಿದ್ದರು.
ಈ ಹಿಂದೆ ಯುದ್ದ ವಿಮಾನವಾದ ಮಿಗ್-21 ಹಾರಿಸಿದ ಅನುಭವ ಹೊಂದಿದ್ದ ಶಿವಾಂಗಿ ಸಿಂಗ್, 2020ರಲ್ಲಿ ರಫೇಲ್ 17 ಗೋಲ್ಡನ್ ಆ್ಯರೋ ಸ್ಕ್ವಾಡ್ರನ್ ತಂಡವನ್ನು ಸೇರಿದ್ದರು. ಶಿವಾಂಗಿ ಅಂಬಾಲಾ ವಾಯುನೆಲೆಯಲ್ಲಿ ತರಬೇತಿ ಪಡೆದುಕೊಂಡಿದ್ದರು.
2017ರಲ್ಲಿ ಭಾರತೀಯ ವಾಯುಸೇನೆ ಸೇರುವ ಮೂಲಕ ತಮ್ಮ ತಾಯಿ ಸೀಮಾ ಸಿಂಗ್ ಅವರ ಕನಸು ನನಸು ಮಾಡುವಲ್ಲಿ ಯಶಸ್ವಿಯಾಗಿದ್ದರು. ಇದೀಗ ಶಿವಾಂಗಿ ಸಿಂಗ್ ಅವರ ಕುರಿತಂತೆ ಆಸಕ್ತಿದಾಯಕ ಮಾಹಿತಿಗಳು ಬೆಳಕಿಗೆ ಬರಲಾರಂಭಿಸಿವೆ.
ಶಾಲಾದಿನಗಳಲ್ಲಿಯೇ ಭಾರತೀಯ ವಾಯು ಸೇನೆ ಸೇರಬೇಕು ಎಂದು ಕನಸು ಕಂಡಿದ್ದ ಶಿವಾಂಗಿ ಸಿಂಗ್, ತನ್ನ ಪ್ರತಿಭೆಯನ್ನು ತಮ್ಮ ಕನಸನ್ನು ನನಸು ಮಾಡಿಕೊಳ್ಳುವುದಕ್ಕಾಗಿಯೇ ಮೀಸಲಿಟ್ಟಿದ್ದರು. ಶಾಲಾ ದಿನಗಳಲ್ಲಿಯೇ ಶಿವಾಂಗಿ ಸಾಕಷ್ಟು ಪ್ರತಿಭಾವಂತೆಯಾಗಿದ್ದರು.
ಆರಂಭಿಕ ಶಾಲಾ ಶಿಕ್ಷಣದ ನಂತರ ಉನ್ನತ ಶಿಕ್ಷಣಕ್ಕಾಗಿ ಬನಾರಸ್ ಹಿಂದೂ ವಿಶ್ವವಿದ್ಯಾಲಯ ಸೇರಿದರು. ಒಂದು ತಿಂಗಳ ತಾಂತ್ರಿಕ ತರಬೇತಿಗೆ ಅರ್ಹತೆ ಪಡೆದ ನಂತರ, ಈಗ ರಫೇಲ್ ತಂಡದ ಭಾಗವಾಗಿದ್ದಾರೆ. ಪ್ರಸ್ತುತ ರಾಜಸ್ಥಾನದಲ್ಲಿ ಪೋಸ್ಟಿಂಗ್‌ನಲ್ಲಿದ್ದಾರೆ.
ಶಿವಾಂಗಿಯ ತಂದೆ ಕಾಮೇಶ್ವರ ಸಿಂಗ್ ಟ್ರಾವೆಲ್ಸ್ ಕಂಪನಿಯಲ್ಲಿ ಕೆಲಸ ಮಾಡುತ್ತಾರೆ. 2016 ರ ಜುಲೈನಲ್ಲಿ ಮೈಸೂರಿನಲ್ಲಿ ನಡೆದ ಕಾಮನ್ ಆಪ್ಟಿಟ್ಯೂಡ್ ಟೆಸ್ಟ್‌ಗೆ ಅರ್ಹತೆ ಪಡೆದರು ಶಿವಾಂಗಿ. ಇಲ್ಲಿಂದಲೇ ಅವರು ವಾಯುಪಡೆಯ ತರಬೇತಿಯನ್ನೂ ಪ್ರಾರಂಭಿಸಿದರು.
ಬೆಳಿಗ್ಗೆ 6 ಗಂಟೆಮನೆ ಬಿಟ್ಟರೆ ರಾತ್ರಿ 8 ಗಂಟೆಗೆ ಮನೆಗೆ ಬರುತ್ತಿದ್ದರು. ಜನರು ಸಾಕಷ್ಟು ಮಾತನಾಡುತ್ತಿದ್ದರು. ಅವಳು ಅಲೆಯುತ್ತಾಳೆ ಎಂದು ತಪ್ಪು ತಿಳಿದಿದ್ದರು. ಇಂದು ಅದೇ ಜನರು ಅಭಿನಂದನೆಗಳನ್ನು ನೀಡುತ್ತಿದ್ದಾರೆ ಎಂದು ಕಸಿನ್ ಸುಧೀರ್ ಸಿಂಗ್ ಸಂದರ್ಶನವೊಂದರಲ್ಲಿ ಹೇಳಿದ್ದರು.
ಅವರ ಅಜ್ಜ ಸಹ ಸೈನಿಕರಾಗಿದ್ದರು. ಅವಳು 9ನೇ ತರಗತಿಯಲ್ಲಿದ್ದಾಗ ದೆಹಲಿಯಲ್ಲಿದ್ದರು. ಅಜ್ಜ ನಂತರ ಏರ್ ಬೇಸ್ ಮತ್ತು ಮ್ಯೂಸಿಯಂಗೆ ಶಿಫ್ಟ್ ಆದಾಗ ವಿಮಾನವನ್ನು ನೋಡಿ ನಾನು ಕೂಡ ಅದನ್ನು ಹಾರಿಸಲು ಬಯಸುತ್ತೇನೆ ಎಂದಿದ್ದಳು. ಅವಳಿಗೆ ಏನು ಬೇಕೋ ಅದನ್ನು ನಾವೆಲ್ಲರೂ ಪೂರೈಸಿದ್ದೇವೆ, ಎನ್ನುತ್ತಾರೆ ತಂದೆ ಕಾಮೇಶ್ವರ ಸಿಂಗ್.