ಪಾಕಿಸ್ತಾನದ ಮೇಲೆ ಪೂರ್ಣ ಪ್ರಮಾಣದ ಯುದ್ಧ ನಡೆಸುವುದಿದ್ದರೆ ಮೇ 25ರ ನಂತರ ನಡೆಸಿ ಎಂದು ಆರ್‌ಸಿಬಿ ಅಭಿಮಾನಿಯೊಬ್ಬ ಮನವಿ ಮಾಡಿದ್ದಾನೆ. ಈ ಮನವಿಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಭಾರತೀಯ ಸೇನೆ ಪಾಕಿಸ್ತಾನದ ಒಳಗೆ ನುಸುಳಿ ಉಗ್ರರನ್ನು ಹೊಡೆದುರುಳಿಸಿದೆ.

ಬೆಂಗಳೂರು: ಪಹಲ್ಗಾಮ್ ದುರಂತಕ್ಕೆ ಪ್ರತಿಕಾರ ತೀರಿಸಿಕೊಳ್ಳುವ ನಿಟ್ಟಿನಲ್ಲಿ ಭಾರತೀಯ ಸೇನೆ ದಿಟ್ಟ ಹೆಜ್ಜೆಯಿಟ್ಟಿದೆ. ಇಂದು ಮುಂಜಾನೆಯೇ 'ಆಪರೇಷನ್ ಸಿಂಧೂರ್' ಹೆಸರಿನಲ್ಲಿ ಭಾರತೀಯ ವಾಯುಸೇನೆ ಪಾಕಿಸ್ತಾನದೊಳಗೆ ಹಾಗೂ ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ಅಡಗಿ ಕುಳಿತಿದ್ದ ಉಗ್ರಗಾಮಿಗಳ ಹೆಣ ಉರುಳಿಸಿದ್ದಾರೆ. ಇದೆಲ್ಲದರ ನಡುವೆ ಆರ್‌ಸಿಬಿ ಅಭಿಮಾನಿಯೊಬ್ಬ, ಒಂದು ವೇಳೆ ಪಾಕಿಸ್ತಾನ ಮೇಲೆ ಪೂರ್ಣ ಪ್ರಮಾಣದ ಯುದ್ದ ನಡೆಯಬೇಕು ಎಂದಾದರೇ ದಯವಿಟ್ಟು ಮೇ 25ರ ನಂತ್ರ ನಡೆಸಿ ಎಂದು ಕೈ ಮುಗಿದು ಮನವಿ ಮಾಡಿಕೊಂಡಿದ್ದಾನೆ. ಈ ವಿಡಿಯೋವೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಯಶ್ ಬದ್ಲಾನಿ ಎನ್ನುವ ನೆಟ್ಟಿಗನೊಬ್ಬ, 'ಮೋದಿ ಸೇರಿದಂತೆ ಇಡೀ ಸರ್ಕಾರಕ್ಕೆ ನನ್ನದೊಂದು ಮನವಿಯಿದೆ. ನೀವು ನಿಜವಾಗಿ ಪಾಕಿಸ್ತಾನದ ಮೇಲೆ ಪೂರ್ಣ ಪ್ರಮಾಣದ ಯುದ್ದ ಮಾಡಬೇಕು ಅಂತಿದ್ದರೆ ಮೇ 25ರ ನಂತರ ಮಾಡಿ. ಸಾಕಷ್ಟು ಸಮಯದ ಬಳಿಕ ಬಳಿಕ ಆರ್‌ಸಿಬಿ ಕಪ್ ಗೆಲ್ಲುವ ಭರವಸೆ ಕಾಣುತ್ತಿದೆ. ಆರ್‌ಸಿಬಿ ತಂಡದ ಈಗಿನ ಪ್ರದರ್ಶನ ನೋಡುತ್ತಿದ್ದರೇ ಫೈನಲ್‌ಗೇರಿ, ಪ್ರಶಸ್ತಿ ಗೆಲ್ಲುವ ಸಾಧ್ಯತೆಯಿದೆ. ಹೀಗಾಗಿ ಮೇ 25ರ ವರೆಗೆ ಕಾಯಿರಿ, ಆಮೇಲೆ ಏನು ಬೇಕಿದ್ದರೂ ಮಾಡಿ ಎಂದು ನೆಟ್ಟಿಗನೊಬ್ಬ ಕೈಮುಗಿದು ಮನವಿ ಮಾಡಿಕೊಂಡಿದ್ದಾನೆ. ಈ ವಿಡಿಯೋವೀಗ ವೈರಲ್ ಆಗುತ್ತಿದೆ.

View post on Instagram

ಕೇಂದ್ರ ಸರ್ಕಾರ ಮೇ 7 ರಂದು ಯುದ್ದದ ಕುರಿತಂತೆ ಜಾಗೃತಿ ಮೂಡಿಸೋ ಸಲುವಾಗಿ ದೇಶಾದ್ಯಂತ ಮಾಕ್ ಡ್ರಿಲ್ ಮಾಡಲು ಸೂಚನೆ ನೀಡಿತ್ತು. ಸೈರನ್ ಮೊಳಗಿಸಿ ನಾಗರೀಕರು ಯುದ್ಧದ ತುರ್ತು ಪರಿಸ್ಥಿತಿ ಕುರಿತು ಜಾಗೃತಿ ಮಾಡಲು ಸೂಚಿಸಿತ್ತು. ಆದರೆ ಭಾರತದಲ್ಲಿ ಪ್ರಾಕ್ಟೀಸ್ ಸೈರನ್ ಮೊಳಗುವ ಮೊದಲೇ ಪಾಕಿಸ್ತಾನದಲ್ಲಿ ಅಸಲಿ ಸೈರನ್ ಮೊಳಗಿತ್ತು. ಕಾರಣ ಮಧ್ಯ ರಾತ್ರಿ 1.05ಕ್ಕೆ ಭಾರತ ಕ್ಷಿಪಣಿ ದಾಳಿ ನಡೆಸಿತ್ತು. ಉಗ್ರರ ಕ್ಯಾಂಪ್ ಗುರಿಯಾಗಿಸಿಕೊಂಡು ಭಾರತ ದಾಳಿ ನಡೆಸಿತ್ತು. ಉಗ್ರರ 9 ಕ್ಯಾಂಪ್ ಟಾರ್ಗೆಟ್ ಮಾಡಿದ್ದ ಭಾರತೀಯ ಸೇನೆ, ನಿಖರವಾಗಿ ಗುರಿಯಿಟ್ಟು ದಾಳಿ ಮಾಡಿತ್ತು. 25 ನಿಮಿಷಗಳ ಕಾಲ ನಡೆದ ಈ ದಾಳಿ ಮಧ್ಯರಾತ್ರಿ 1.05 ರಿಂದ 1.30ರ ವರೆಗೆ 9 ಟಾರ್ಗೆಟ್ ಉಗ್ರರ ನೆಲೆಯನ್ನು ಧ್ವಂಸಗೊಳಿಸಲಾಗಿದೆ. 1.30ಕ್ಕೆ ಭಾರತೀಯ ಸೇನೆಯ ಕಾರ್ಯಾಚರಣೆ ಅಂತ್ಯಗೊಂಡಿದೆ.

ಇನ್ನು ಐಪಿಎಲ್ ವಿಚಾರಕ್ಕೆ ಬರುವುದಾದರೇ, 18ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ನಿರ್ಣಾಯಕ ಘಟ್ಟದತ್ತ ಸಾಗುತ್ತಿದೆ. ಲೀಗ್ ಹಂತದಲ್ಲಿ ಈಗಾಗಲೇ 56 ಪಂದ್ಯಗಳು ಮುಕ್ತಾಯವಾಗಿದ್ದು, ಇನ್ನು ಫೈನಲ್ ಸೇರಿದಂತೆ ಕೇವಲ 18 ಪಂದ್ಯಗಳು ನಡೆಯುವುದು ಮಾತ್ರ ಬಾಕಿ ಉಳಿದಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಸದ್ಯ 11 ಪಂದ್ಯಗಳನ್ನಾಡಿ 8 ಗೆಲುವು ಹಾಗೂ ಮೂರು ಸೋಲು ಸಹಿತ 16 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ. ಆರ್‌ಸಿಬಿ ಇನ್ನೂ ಮೂರು ಪಂದ್ಯಗಳನ್ನಾಡುವುದು ಬಾಕಿ ಉಳಿದಿದ್ದು. ಈ ಪೈಕಿ ಎರಡು ಪಂದ್ಯಗಳನ್ನು ಜಯಿಸಿದರೆ, ಮೊದಲ ಕ್ವಾಲಿಫೈಯರ್ ಪಂದ್ಯವನ್ನಾಡಲು ಅವಕಾಶ ಪಡೆಯುವ ಸಾಧ್ಯತೆ ದಟ್ಟವಾಗಿದೆ.

ಆರ್‌ಸಿಬಿ ತಂಡವು ಈ ಬಾರಿ ಹಿಂದೆಂದಿಗಿಂತಲೂ ಸಾಕಷ್ಟು ಬಲಿಷ್ಠ ಹಾಗೂ ಸಮತೋಲಿತ ತಂಡವಾಗಿ ಗುರುತಿಸಿಕೊಂಡಿದೆ. ಬ್ಯಾಟಿಂಗ್, ಬೌಲಿಂಗ್ ಹಾಗೂ ಫೀಲ್ಡಿಂಗ್‌ನಲ್ಲಿ ಆರ್‌ಸಿಬಿ ಸಂಘಟಿತ ಪ್ರದರ್ಶನ ತೋರುತ್ತಿದ್ದು, ಈ ಬಾರಿ ಚೊಚ್ಚಲ ಐಪಿಎಲ್ ಟ್ರೋಫಿ ಜಯಿಸುವ ವಿಶ್ವಾಸದಲ್ಲಿದೆ. ವಿರಾಟ್ ಕೊಹ್ಲಿ, ಜೆಕೊಬ್ ಬೆಥೆಲ್, ಜೋಶ್ ಹೇಜಲ್‌ವುಡ್, ಟಿಮ್ ಡೇವಿಡ್, ರೊಮ್ಯಾರಿಯೋ ಶೆಫರ್ಡ್. ಭುವನೇಶ್ವರ್ ಕುಮಾರ್ ಹಾಗೂ ಯಶ್ ದಯಾಳ್ ಆರ್‌ಸಿಬಿ ಪರ ಸ್ಥಿರ ಪ್ರದರ್ಶನ ನೀಡುತ್ತಿರುವುದು ತಂಡದ ಆತ್ಮವಿಶ್ವಾಸ ಹೆಚ್ಚುವಂತೆ ಮಾಡಿದೆ.