ಕಾಂಗ್ರೆಸ್- RJD ನಡುವೆ ಕ್ಷೇತ್ರ ಹಂಚಿಕೆ ಗೊಂದಲ; ಹೊಸ ಸಮೀಕರಣ ಕೇಳಿ ತೇಜಸ್ವಿ ದೆಹಲಿಗೆ ದೌಡು!
Bihar politics seat sharing: ಬಿಹಾರದಲ್ಲಿ ಆರ್‌ಜೆಡಿ ಮತ್ತು ಕಾಂಗ್ರೆಸ್ ನಡುವೆ ಕ್ಷೇತ್ರ ಹಂಚಿಕೆ ಮಾತುಕತೆ ಬಿರುಸುಗೊಂಡಿದೆ. ಕಾಂಗ್ರೆಸ್‌ಗೆ 50ಕ್ಕಿಂತ ಹೆಚ್ಚು ಸ್ಥಾನಗಳನ್ನು ನೀಡಲು ಆರ್‌ಜೆಡಿ ಹಿಂದೇಟು ಹಾಕುತ್ತಿದೆ.

ಬಿಹಾರ ರಾಜಕಾರಣ
ಸದ್ಯ ಬಿಹಾರ ರಾಜಕಾರಣದಲ್ಲಿ ಕ್ಷೇತ್ರಗಳ ಹಂಚಿಕೆ ಬಗ್ಗೆ ಬಿಸಿ ಬಿಸಿ ಚರ್ಚೆ ನಡೆಯುತ್ತಿದೆ. ಈ ಬಾರಿಯೂ ಆರ್‌ಜೆಡಿ ಜೊತೆಯಲ್ಲಿಯೇ ಕಾಂಗ್ರೆಸ್ ಚುನಾವಣೆಯನ್ನು ಎದುರಿಸಲಿದೆ. ಪ್ರಾದೇಶಿಕವಾಗಿ ಪ್ರಬಲವಾಗಿರುವ ಆರ್‌ಜೆಡಿ ಅತ್ಯಧಿಕ ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡೋದು ಬಹುತೇಕ ಖಚಿತ. ಆದ್ರೆ ಕಾಂಗ್ರೆಸ್‌ಗೆ 50ಕ್ಕಿಂತ ಹೆಚ್ಚು ಕ್ಷೇತ್ರಗಳನ್ನು ನೀಡಲು ಆರ್‌ಜೆಡಿಯ ಮುಖ್ಯಸ್ಥ ಲಾಲು ಯಾದವ್ ಒಪ್ಪುತ್ತಿಲ್ಲ ಎಂದು ವರದಿಯಾಗಿದೆ.
ಆರ್‌ಜೆಡಿ ಜೊತೆ ಮಾತುಕತೆ
ಸಾಂಪ್ರದಾಯಿಕ ಮತಗಳನ್ನು ಹೊಂದಿರುವ ಕ್ಷೇತ್ರಗಳಲ್ಲಿ ಹಿಡಿತ ಸಾಧಿಸಲು ಮುಂದಾಗಿರುವ ಕಾಂಗ್ರೆಸ್, 80 ರಿಂದ 100ರ ಆಸುಪಾಸಿನಲ್ಲಿ ಕ್ಷೇತ್ರಗಳನ್ನು ಕೇಳಬಹುದು ಎನ್ನಲಾಗುತ್ತಿದೆ. ಹೀಗಾಗಿ ಮಾಜಿ ಕೇಂದ್ರ ಸಚಿವ, ರಾಜ್ಯಸಭಾ ಸಂಸದ ಅಖಿಲೇಶ್ ಪ್ರಸಾದ್ ಸಿಂಗ್ ಮುಖೇನ ಆರ್‌ಜೆಡಿ ಜೊತೆ ಮಾತುಕತೆ ನಡೆಸುವ ಪ್ರಯತ್ನವನ್ನು ಮಾಡುತ್ತಿದೆ.
ಅಖಿಲೇಶ್ ಪ್ರಸಾದ್ ಸಿಂಗ್
ವರದಿಗಳ ಪ್ರಕಾರ, ಶುಕ್ರವಾರ ಸಂಜೆ ಲಾಲು ಯಾದವ್ ಅವರನ್ನು ಭೇಟಿಯಾಗಿರುವ ಅಖಿಲೇಶ್ ಪ್ರಸಾದ್ ಸಿಂಗ್ ಕ್ಷೇತ್ರ ಹಂಚಿಕೆ ಮತ್ತು ಚುನಾವಣಾ ಸಿದ್ಧತೆ ಕುರಿತು ಸುದೀರ್ಘ ಚರ್ಚೆ ನಡೆಸಿದ್ದಾರೆ. ಈ ವೇಳೆ ಆರ್‌ಜೆಡಿ ಮುಂದೆ ಕ್ಷೇತ್ರ ಹಂಚಿಕೆ ಕುರಿತು ಹೊಸ ಸಮೀಕರಣ ಇರಿಸಿದ್ದಾರಂತೆ. ಈ ಚರ್ಚೆಯ ಬೆನ್ನಲ್ಲೇ ಆರ್‌ಜೆಡಿ ನಾಯಕ ತೇಜಸ್ವಿ ಯಾದವ್, ಇಂದು ಸಂಜೆ ಅಥವಾ ರಾತ್ರಿ ದೆಹಲಿಗೆ ತೆರಳಿ ರಾಹುಲ್ ಗಾಂಧಿ ಅವರನ್ನು ಭೇಟಿಯಾಗಲಿದ್ದಾರೆ ಎಂದು ವರದಿಯಾಗಿದೆ.
ಮತಗಳ ವಿಂಗಡನೆ ಆತಂಕ
ಮಹಾಘಟಬಂಧನ್ ಮಾಡಿಕೊಂಡಿರುವ ಹಿನ್ನೆಲೆ ಯಾವ ಪಕ್ಷ ಎಷ್ಟು ಕ್ಷೇತ್ರಗಳನ್ನು ಹಂಚಿಕೆ ಮಾಡಬೇಕು ಎಂಬುದರ ಕುರಿತು ರಾಹುಲ್ ಗಾಂಧಿ ಜೊತೆ ತೇಜಸ್ವಿ ಯಾದವ್ ಚರ್ಚೆ ನಡೆಸಲಿದ್ದಾರೆ. ಆದರೆ ಸಿಂಹಪಾಲು ಆರ್‌ಜೆಡಿ ಪಡೆದುಕೊಳ್ಳಲಿದೆ. ಈ ಬಾರಿ ಪ್ರಶಾಂತ್ ಕಿಶೋರ್ ತಮ್ಮ ಹೊಸ ಪಕ್ಷದ ಮೂಲಕ ಬಿಹಾರ ರಾಜಕಾರಣಕ್ಕೆ ಎಂಟ್ರಿ ನೀಡಿದ್ದು, ಮತಗಳ ವಿಂಗಡನೆ ಆತಂಕ ಎದುರಾಗಿದೆ.
ಇದನ್ನೂ ಓದಿ: ಪ್ರಿಯಾಂಕ್ ಸಾಹೇಬ್ರು ಈ ರಾಜ್ಯದ ಫ್ಯೂಚರ್ ಅದನ್ನು ಮರೀಬೇಡಿ ಎಂದ ಪ್ರದೀಪ್ ಈಶ್ವರ್!
2020ರ ಕ್ಷೇತ್ರ ಹಂಚಿಕೆ
ಆರ್‌ಜೆಡಿ, ಸಿಪಿಐ-ಎಂಎಲ್, ಭಾರತೀಯ ಕಮ್ಯುನಿಸ್ಟ್ ಪಾರ್ಟಿ ಮತ್ತು ಸಿಪಿಎಂ ಜೊತೆಯಾಗಿ 2020ರ ವಿಧಾನಸಭಾ ಚುನಾವಣೆಯನ್ನು ಎದರುಸಿದ್ದವು. ಈ ವೇಳೆ ಆರ್‌ಜೆಡಿ 144, ಕಾಂಗ್ರೆಸ್ 70, CPI-ML 19, CPI 6 ಮತ್ತು CPM 4 ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡಿದ್ದವು.
ಇದನ್ನೂ ಓದಿ: ಬಿಹಾರ ಚುನಾವಣೆ ರಣಕಣ: ಚಿರಾಗ್ ಪಾಸ್ವಾನ್ ಮುಂದಿಟ್ರು ಒಂದು ಬೇಡಿಕೆ!