ಮುಟ್ಟು ನಿಂತ ಮೇಲೂ ರಕ್ತಸ್ರಾವವಾದರೆ ನಿರ್ಲಕ್ಷ್ಯ ಬೇಡ: ಅದು ಈ ಕಾಯಿಲೆಯ ಲಕ್ಷಣವಿರಬಹುದು!
ಮಹಿಳೆಯರಲ್ಲಿ ಮುಟ್ಟು ನಿಲ್ಲುವ ಅವಧಿ ಹಲವು ಆರೋಗ್ಯ ಸಮಸ್ಯೆಗಳಿಂದ ಕೂಡಿರುತ್ತದೆ. ಮುಟ್ಟು ನಿಂತ ನಂತರವೂ ಕೆಲವೊಮ್ಮೆ ರಕ್ತಸ್ರಾವ ಆಗುತ್ತದೆ ಇದಕ್ಕೆ ಕಾರಣಗಳೇನು ಎಂಬುದನ್ನು ಈ ಲೇಖನದಲ್ಲಿ ತಿಳಿಯೋಣ.

ಮುಟ್ಟು ನಿಂತ ಮೇಲೂ ರಕ್ತಸ್ರಾವ: ಕಾರಣವೇನು?
ಮುಟ್ಟು ನಿಂತಾಗ ಮಹಿಳೆಯರಿಗೆ ಬಹಳ ತೊಂದರೆಯಾಗುತ್ತದೆ. ಮುಟ್ಟು ನಿಲ್ಲುವುದನ್ನೇ ಮೆನೋಪಾಸ್ ಎನ್ನುತ್ತಾರೆ. ಹೆರಿಗೆ ಸಮಯದಲ್ಲಿ ಆಗುವಂತಹ ದೈಹಿಕ ಮತ್ತು ಮಾನಸಿಕ ತೊಂದರೆಗಳು ಈ ಸಮಯದಲ್ಲಿಯೂ ಆಗಬಹುದು. ಮಾನಸಿಕವಾಗಿ ಕೆಲವು ಗೊಂದಲಗಳು, ಸುಸ್ತು ಕಾಣಿಸಿಕೊಳ್ಳಬಹುದು. ಸಾಮಾನ್ಯವಾಗಿ ಮೆನೋಪಾಸ್ ಸಮಯದಲ್ಲಿ ಕಾಣಿಸಿಕೊಳ್ಳುವ ಲಕ್ಷಣಗಳು ಆ ಸಮಯ ಮುಗಿದ ನಂತರ ಕಡಿಮೆಯಾಗುತ್ತವೆ. ಒಂದು ವೇಳೆ ತೀವ್ರವಾಗಿದ್ದರೆ ನಿರ್ಲಕ್ಷಿಸದೆ ವೈದ್ಯರನ್ನು ಭೇಟಿ ಮಾಡಿ. ಮುಟ್ಟು ನಿಂತ ನಂತರ ರಕ್ತಸ್ರಾವವಾದರೆ ಏಕೆ ಗಮನಹರಿಸಬೇಕು? ಅದು ಯಾವುದರ ಸಂಕೇತ ಎಂಬುದನ್ನು ಈಗ ನೋಡೋಣ.
ಮೆನೋಪಾಸ್ ಅಂದ್ರೇನು? ಮಹಿಳೆಯರಿಗೆ 41 ರಿಂದ 50 ವರ್ಷ ವಯಸ್ಸಿನಲ್ಲಿ ಮೆನೋಪಾಸ್ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಕೆಲವರಿಗೆ ಬೇಗ, ಕೆಲವರಿಗೆ ತಡವಾಗಿ ಬರಬಹುದು. ಎಲ್ಲರಿಗೂ ಒಂದೇ ರೀತಿಯ ಲಕ್ಷಣಗಳು ಇರುವುದಿಲ್ಲ. ಕೆಲವರ ಮುಟ್ಟು ನಿಲ್ಲುವುದು 10 ವರ್ಷಗಳವರೆಗೂ ಇರಬಹುದು. ಇದು ವ್ಯಕ್ತಿಯ ದೇಹದ ಸ್ಥಿತಿಯನ್ನು ಅವಲಂಬಿಸಿರುತ್ತದೆ. ಮುಟ್ಟು ಸಂಪೂರ್ಣವಾಗಿ ನಿಂತ ನಂತರ ಮಹಿಳೆಯರ ದೇಹದಲ್ಲಿ ಈಸ್ಟ್ರೋಜನ್ ಉತ್ಪತ್ತಿಯಾಗುವುದಿಲ್ಲ.
ಈಸ್ಟ್ರೋಜನ್ ಉತ್ಪತ್ತಿಯಾಗದಿದ್ದರೆ ಏನಾಗುತ್ತದೆ?
ಈಸ್ಟ್ರೋಜನ್ ಎಂಬ ಹಾರ್ಮೋನ್ ಮೂಳೆಗಳು, ಚರ್ಮ, ಹೃದಯಕ್ಕೆ ಅವಶ್ಯಕ. ಈ ಹಾರ್ಮೋನ್‌ಗಳಲ್ಲಿ ಏರುಪೇರಾದರೆ ಮುಟ್ಟಿನ ಸಮಯದಲ್ಲಿ ಕೀಲು ನೋವು, ಬೆನ್ನು ನೋವು ಕಾಣಿಸಿಕೊಳ್ಳುತ್ತದೆ. ಈ ಹಾರ್ಮೋನ್ ಉತ್ಪತ್ತಿ ಕಡಿಮೆಯಾದರೆ ಮಹಿಳೆಯರ ಜನನಾಂಗದ ಚರ್ಮ ಒಣಗುತ್ತದೆ. ಇದರಿಂದ ತುರಿಕೆ, ಉರಿ ಉಂಟಾಗಬಹುದು. ಇದನ್ನು ನಿರ್ಲಕ್ಷಿಸಿದರೆ ಸೋಂಕು ತಗಲುವ ಸಾಧ್ಯತೆ ಇದೆ. ಜನನಾಂಗದ ಚರ್ಮ ಮೃದುವಾಗಿರುತ್ತದೆ. ಅಲ್ಲಿ ತುರಿಕೆ ಉಂಟಾದರೆ ಚರ್ಮ ಗಾಯವಾಗಿ ರಕ್ತಸ್ರಾವವಾಗಬಹುದು.
ರಕ್ತಸ್ರಾವವನ್ನು ನಿರ್ಲಕ್ಷಿಸಬೇಡಿ!
41 ರಿಂದ 50 ವರ್ಷ ವಯಸ್ಸಿನ ಮಹಿಳೆಯರಿಗೆ ಮೆನೋಪಾಸ್ ಲಕ್ಷಣಗಳು ಕಾಣಿಸಿಕೊಂಡರೆ ನಿರ್ಲಕ್ಷಿಸಬಾರದು. ಆಗಾಗ ವೈದ್ಯರನ್ನು ಭೇಟಿ ಮಾಡಿ ಸಲಹೆ ಪಡೆಯುವುದು ಅವಶ್ಯಕ. ಮುಟ್ಟು ಸಂಪೂರ್ಣವಾಗಿ ನಿಂತ ನಂತರ ಗರ್ಭಕೋಶ ಪರೀಕ್ಷೆ, ಗರ್ಭಕೋಶದ ಬಾಯಿ ಪರೀಕ್ಷೆ ಮಾಡಿಸಿಕೊಳ್ಳಬೇಕು. ಈ ಪರೀಕ್ಷೆಗಳು ಸುಲಭವಾಗಿದ್ದು, ನೋವೇನೂ ಇರುವುದಿಲ್ಲ. ಕ್ಯಾನ್ಸರ್ ಸಾಧ್ಯತೆ ಅಥವಾ ಲಕ್ಷಣಗಳಿದ್ದರೆ ಈ ಪರೀಕ್ಷೆಯಿಂದ ತಿಳಿಯಬಹುದು. ಮುಟ್ಟು ಸಂಪೂರ್ಣವಾಗಿ ನಿಂತ ನಂತರ ಸ್ವಲ್ಪ ರಕ್ತಸ್ರಾವವಾದರೂ ವೈದ್ಯರನ್ನು ಸಂಪರ್ಕಿಸಿ ಸಲಹೆ ಪಡೆಯುವುದು ಅವಶ್ಯಕ. ಪರೀಕ್ಷೆಯಲ್ಲಿ ಕ್ಯಾನ್ಸರ್ ಲಕ್ಷಣಗಳಿದ್ದರೂ ಆರಂಭದಲ್ಲಿ ಚಿಕಿತ್ಸೆ ನೀಡಿದರೆ ಗುಣಪಡಿಸಬಹುದು.
ಗರ್ಭಕೋಶ ತೆಗೆಯುವುದು:
ಕೆಲವು ಮಹಿಳೆಯರಿಗೆ ಗರ್ಭಕೋಶ ತೆಗೆಯುವ ಪರಿಸ್ಥಿತಿ ಬರಬಹುದು. ಮಗು ಹುಟ್ಟಿದ ನಂತರ ಅಥವಾ ಮಗು ಹುಟ್ಟುವ ಮುನ್ನ ಕೆಲವು ವೈದ್ಯಕೀಯ ಕಾರಣಗಳಿಂದ ಗರ್ಭಕೋಶವನ್ನು ತೆಗೆಯುತ್ತಾರೆ. ಈ ಸಮಯದಲ್ಲಿ ಗರ್ಭಕೋಶದ ಬಾಯಿಯನ್ನು ತೆಗೆಯದಿದ್ದರೆ ಅಲ್ಲಿ ಹುಣ್ಣುಗಳು ಬರುವ ಸಾಧ್ಯತೆ ಇದೆ. ಗರ್ಭಕೋಶ ಒಳಭಾಗದಲ್ಲಿರುವುದರಿಂದ ಇದರ ಲಕ್ಷಣಗಳು ಹೊರಗೆ ಕಾಣಿಸುವುದಿಲ್ಲ. ಆದರೆ ಅಲ್ಲಿ ರಕ್ತಸ್ರಾವವಾಗಬಹುದು.
ಗರ್ಭಕೋಶ ಕ್ಯಾನ್ಸರ್ ಲಕ್ಷಣ:
ಯೋನಿಯಲ್ಲಿ ಹುಣ್ಣುಗಳು ಬಂದು ರಕ್ತಸ್ರಾವವಾಗುವುದು ಗರ್ಭಕೋಶ ಕ್ಯಾನ್ಸರ್‌ನ ಲಕ್ಷಣವಾಗಿರಬಹುದು. ಹೀಗೆ ಜನನಾಂಗದಲ್ಲಿ ಹುಣ್ಣುಗಳಾದರೆ ತಕ್ಷಣ ವೈದ್ಯರನ್ನು ಸಂಪರ್ಕಿಸಿ ಸಲಹೆ ಪಡೆಯಬೇಕು.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.