ಮಳೆಗಾಲದಲ್ಲಿ ಒದ್ದೆ ಬಟ್ಟೆ ಧರಿಸ್ತಿದ್ದೀರಾ? ದೊಡ್ಡ ಅಪಾಯ ಬರೋ ಮೊದ್ಲು ಎಚ್ಚೆತ್ತುಕೊಳ್ಳಿ
ಮಳೆ ನೋಡೋಕೆ, ನೆನೆಯೋಕೆ ಚೆನ್ನಾಗಿಯೇ ಕಾಣುತ್ತದೆ. ಆದರೆ ಮಳೆಯಲ್ಲಿ ಬಟ್ಟೆ ಒಣಗೋದೇ ಇಲ್ಲ. ಇದೇ ಒದ್ದೆ ಬಟ್ಟೆಗಳನ್ನು ಧರಿಸುವುದರಿಂದ ದೇಹದಲ್ಲಿ ಸೋಂಕು, ಚರ್ಮದ ದದ್ದುಗಳು ಮತ್ತು ನ್ಯುಮೋನಿಯಾ ಉಂಟಾಗಬಹುದು.
ಮಳೆಗಾಲ (Rainy season) ಅಂದ್ರೆ ಸಾಕು, ದಿನವಿಡೀ ಸುರಿಯೋ ಮಳೆ, ಸುತ್ತಲಿನ ವಾತಾವರಣ ಪೂರ್ತಿಯಾಗಿ ತೇವಾಂಶದಿಂದ ಕೂಡಿರುತ್ತೆ. ಮಳೆಯನ್ನು ಎಲ್ಲರೂ ಇಷ್ಟಪಡುವವರೇ, ಆದ್ರೆ ಈ ಕಾಲದ ಒಂದು ಸಮಸ್ಯೆ ಅಂದ್ರೆ ಬಟ್ಟೆಗಳದ್ದು. ಬಟ್ಟೆಗಳು ಸಂಪೂರ್ಣವಾಗಿ ಒಣಗೋದೇ, ಇಲ್ಲ, ಅಲ್ಲಲ್ಲಿ ತೇವಾಂಶವಿರುತ್ತೆ. ಕೆಲವೊಮ್ಮೆ ಸೂರ್ಯನ ಬಿಸಿಲು ವಾರಗಟ್ಟಲೇ ಇಲ್ಲದೇ ಇದ್ದರೆ, ಬಟ್ಟೆ ಒಣಗಲು ನಾಲ್ಕು - ಐದು ದಿನ ತೆಗೆದುಕೊಳ್ಳುತ್ತೆ. ಹೀಗಿರೋವಾಗ ನಾವು ಅರ್ಧಂಬರ್ಧ ಒಣಗಿದ ಬಟ್ಟೆಯನ್ನು ಅರ್ಜೆಂಟ್ ಅಲ್ಲಿ ಹಾಕೊಂಡು ಹೋಗ್ತೀವಿ. ದಿನವೀಡಿ ಅದೇ ಬಟ್ಟೆಯಲ್ಲಿ ಇರುವಂತಹ ಸಂದರ್ಭ ಕೂಡ ಬರುತ್ತೆ. ಆದರೆ ಇದರಿಂದ ಸಮಸ್ಯೆಗಳೆಷ್ಟು ಗೊತ್ತಾ?
ವಿಶೇಷವಾಗಿ ಒದ್ದೆಯಾದ ಬಟ್ಟೆ ಅಥವಾ ಒದ್ದೆಯಾದ ಒಳ ಉಡುಪುಗಳನ್ನು ಧರಿಸುವುದರಿಂದ ನಿಮ್ಮ ಖಾಸಗಿ ಭಾಗಗಳಿಗೆ ಹೆಚ್ಚಿನ ಹಾನಿಯಾಗುತ್ತದೆ. ಮಳೆಯಲ್ಲಿ ಒದ್ದೆ ಬಟ್ಟೆಗಳನ್ನು ಧರಿಸುವುದರಿಂದ ಆಗುವ ಅನಾನುಕೂಲಗಳನ್ನು ತಿಳಿದುಕೊಳ್ಳಿ.
ಖಾಸಗಿ ಭಾಗಗಳಲ್ಲಿ ಕಿರಿಕಿರಿ ಮತ್ತು ದದ್ದುಗಳು
ಒದ್ದೆಯಾದ ಒಳ ಉಡುಪುಗಳನ್ನ ಧರಿಸೋದ್ರಿಂದ ಯೋನಿ ಕಿರಿಕಿರಿ, ಕೆಂಪಾಗುವಿಕೆ ಅಥವಾ ದದ್ದುಗಳಿಗೆ ಕಾರಣವಾಗಬಹುದು. ಇದು ಯೋನಿ ಪ್ರದೇಶದಲ್ಲಿ (east infection in vaginal area) ಯೀಸ್ಟ್ ಸೋಂಕಿನಂತಹ ಸಮಸ್ಯೆಗಳನ್ನು ಉಂಟುಮಾಡಬಹುದು. ಒದ್ದೆಯಾದ ಒಳ ಉಡುಪುಗಳನ್ನು ನೀವು ಬದಲಾಯಿಸದಿದ್ದರೆ, ಯೋನಿ ಪ್ರದೇಶದಲ್ಲಿರುವ ತೇವಾಂಶವು ನಿಮ್ಮ ಪಿಎಚ್ ಸಮತೋಲನವನ್ನು ತೊಂದರೆಗೊಳಿಸುತ್ತದೆ. ಇದರಿಂದ ಇನ್ ಫೆಕ್ಷನ್ ಆಗುವ ಸಾಧ್ಯತೆ ಹೆಚ್ಚು. ಕೂಡಲೇ ಚಿಕಿತ್ಸೆ ಪಡೆಯದಿದ್ದರೆ, ಅಪಾಯ ಹೆಚ್ಚುವ ಸಾಧ್ಯತೆ ಇದೆ.
ರೋಗ ನಿರೋಧಕ ಶಕ್ತಿ ದುರ್ಬಲವಾಗುತ್ತೆ
ಮಳೆಗಾಲದಲ್ಲಿ ಒದ್ದೆಯಾದ ಬಟ್ಟೆಗಳನ್ನು ಧರಿಸುವುದರಿಂದ ರೋಗನಿರೋಧಕ ಶಕ್ತಿ (immunity power) ದುರ್ಬಲವಾಗುವ ಸಾಧ್ಯತೆ ಇದೆ, ಯಾಕಂದ್ರೆ ದೇಹವು ಬೆಚ್ಚಗಿರಲು ಮತ್ತು ಶಾಖವನ್ನು ಉಳಿಸಿಕೊಳ್ಳಲು ಹೆಚ್ಚು ಶ್ರಮಿಸಬೇಕಾಗುತ್ತದೆ. ಇದಲ್ಲದೆ, ದೇಹದ ಮೇಲೆ ತೇವಾಂಶ ಹಾಗೇ ಉಳಿಯೋದ್ರಿಂದ ಸೋಂಕು ಮತ್ತು ರೋಗದ ಅಪಾಯ ಹೆಚ್ಚುತ್ತದೆ, ಯಾಕಂದ್ರೆ ತೇವಾಂಶವು ಬ್ಯಾಕ್ಟೀರಿಯಾ ಮತ್ತು ಇತರ ರೋಗಗಳನ್ನು ಹೆಚ್ಚಿಸುತ್ತೆ.
ಕೆಮ್ಮು -ಶೀತ ಉಂಟಾಗುವ ಸಾಧ್ಯತೆ
ಒದ್ದೆಯಾದ ಬಟ್ಟೆ ಧರಿಸೋದ್ರಿಂದ ಶೀತ, ನೆಗಡಿ ಹೆಚ್ಚಾಗುವ ಸಾಧ್ಯತೆ ಇದೆ. ಏಕೆಂದರೆ ಒದ್ದೆ ಬಟ್ಟೆಯಿಂದಾಗಿ ದೇಹವು ತನ್ನ ನೈಸರ್ಗಿಕ ತಾಪಮಾನವನ್ನು ಕಳೆದುಕೊಳ್ಳುತ್ತದೆ, ಇದರಿಂದಾಗಿ ರೋಗಗಳಿಗೆ ಹೆಚ್ಚು ಒಳಗಾಗುವ ಸಾಧ್ಯತೆ ಇದೆ. ವಿಶೇಷವಾಗಿ ಈ ಬದಲಾಗುತ್ತಿರುವ ಸೀಸನ್ ನಲ್ಲಿ, ಶೀತ ಕೆಮ್ಮಿನಂತಹ ಸೋಂಕುಗಳು ನಿಮ್ಮನ್ನು ಸುಲಭವಾಗಿ ಕಾಡಬಹುದು.
ಚೆಸ್ಟ್ ಇನ್ಫೆಕ್ಷನ್
ತೇವಾಂಶವು ಚೆಸ್ಟ್ ಇನ್’ಫೆಕ್ಷನ್ (chest infection) ಹೆಚ್ಚಿಸುವ ಸಾಧ್ಯತೆ ಇದೆ. ಇದು ಉಸಿರಾಟದ ಸಮಸ್ಯೆಗಳನ್ನು ಉಂಟುಮಾಡುತ್ತದೆ ಮತ್ತು ನಿಮ್ಮ ನಿಯಮಿತ ದಿನಚರಿಯ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ.
ಚರ್ಮದ ಸೋಂಕುಗಳು ಉಂಟಾಗಬಹುದು
ಒದ್ದೆಯಾದ ಬಟ್ಟೆಗಳನ್ನು ದೀರ್ಘಕಾಲದವರೆಗೆ ಧರಿಸುವುದರಿಂದ ರಾಶಸ್, ದದ್ದುಗಳು, ಕಿರಿಕಿರಿ, ತುರಿಕೆ, ಉಬ್ಬುಗಳು ಮುಂತಾದ ಚರ್ಮದ ಸೋಂಕುಗಳು (skin infection) ಕಾಡಬಹುದು. ಈ ರೀತಿಯ ಸೋಂಕನ್ನು ತಪ್ಪಿಸಲು, ನೀವು ನಿಮ್ಮ ಬಟ್ಟೆಗಳನ್ನು ಸಂಪೂರ್ಣವಾಗಿ ಒಣಗಿಸಬೇಕು.
ಮಕ್ಕಳನ್ನು ನ್ಯುಮೋನಿಯಾ ಕಾಡಬಹುದು
ಮಕ್ಕಳು ಮಳೆಯಲ್ಲಿ ಆಡಲು ಇಷ್ಟಪಡ್ತಾರೆ., ಆದರೆ ಕೆಲವೊಮ್ಮೆ ಮಕ್ಕಳು ಒದ್ದೆ ಬಟ್ಟೆಗಳನ್ನು ದೀರ್ಘಕಾಲ ಧರಿಸುತ್ತಾರೆ, ಇದರಿಂದಾಗಿ ಅವರು ನ್ಯುಮೋನಿಯಾಕ್ಕೆ ಒಳಗಾಗುವ ಸಾಧ್ಯತೆ ಇದೆ. ಒದ್ದೆಯಾದ ಬಟ್ಟೆಗಳು ಮತ್ತು ದೇಹಗಳು ರೋಗಾಣುಗಳನ್ನು ತಮ್ಮತ್ತ ಆಕರ್ಷಿಸುತ್ತವೆ, ಮತ್ತು ಈ ರೋಗಾಣುಗಳು ಅವರನ್ನು ಅನಾರೋಗ್ಯಕ್ಕೆ ದೂಡಬಹುದು.
ಆರೋಗ್ಯ ಸಮಸ್ಯೆಗಳು ಬಾರದಂತೆ ತಡೆಯೋದು ಹೇಗೆ?
ಮಳೆಯಲ್ಲಿ ಒದ್ದೆಯಾದ ಬಟ್ಟೆಗಳನ್ನು ಕೂಡಲೇ ಬದಲಿಸಿ,
ದೇಹದ ತಾಪಮಾನ ಹೆಚ್ಚಿಸುವ ಮತ್ತು ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಬಿಸಿಬಿಸಿ ಲಿಕ್ವಿಡ್, ಸೂಪ್ ಕುಡಿಯಿರಿ.
ಮಳೆಯಿಂದ ನಿಮ್ಮನ್ನು ಕಾಪಾಡುವ ಬೆಚ್ಚಗಿನ ಬಟ್ಟೆ ಧರಿಸಿ.
ಆರೋಗ್ಯಕರ ಆಹಾರ ಸೇವಿಸಿ. ಇದರಿಂದ ನಿಮ್ಮ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ.
ಅಗತ್ಯವಿಲ್ಲದಿದ್ದರೆ ಮಳೆಯಲ್ಲಿ ಹೊರಗೆ ಹೋಗೋದೆ ಬೇಡ, ಹೋಗೋದಾದರೆ ರೇನ್ ಕೋಟ್ ಧರಿಸಿ. ಅಲರ್ಜಿ ಕಂಡು ಬಂದರೆ ಕೂಡಲೇ ವೈದ್ಯರನ್ನು ಸಂಪರ್ಕಿಸಿ.
ಮನೆಯನ್ನು ಗಾಳಿಯಾಡುವಂತೆ ಇಡುವುದು ಆರೋಗ್ಯಕರ ಒಳಾಂಗಣ ವಾತಾವರಣವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ.