ಕಪ್ಪು ಕಲೆಗಳಿಲ್ಲದ ಹೊಳಪಿನ ತ್ವಚೆಗಾಗಿ ಬಾಳೆಹಣ್ಣಿನ ಸಿಪ್ಪೆಯನ್ನು ಹೀಗೆ ಬಳಸಿ
ಬಾಳೆಹಣ್ಣು ತಿಂದ ನಂತರ ದೂರ ಎಸೆಯುವ ಅದರ ಸಿಪ್ಪೆಯಿಂದ ನಿಮ್ಮ ಮುಖವನ್ನು ಫಳ ಫಳ ಹೊಳೆಯುವಂತೆ ಮಾಡಬಹುದು. ಹೊಳೆಯುವ ಚರ್ಮವನ್ನು ಪಡೆಯಲು ಬಾಳೆಹಣ್ಣಿನ ಸಿಪ್ಪೆಯನ್ನು ಮುಖಕ್ಕೆ ಹೇಗೆ ಬಳಸಬೇಕು ಎಂಬುದರ ಬಗ್ಗೆ ಇಲ್ಲಿದೆ ಮಾಹಿತಿ.

ಸಾಮಾನ್ಯವಾಗಿ ಪ್ರತಿಯೊಬ್ಬ ಮಹಿಳೆಯು ತನ್ನ ಮುಖವು ನೋಡಲು ಸುಂದರವಾಗಿರಬೇಕೆಂದು ಬಯಸುತ್ತಾಳೆ. ಇದಕ್ಕಾಗಿ ಅವರು ವಿವಿಧ ರೀತಿಯ ವಸ್ತುಗಳನ್ನು ಖರೀದಿಸಿ ಬಳಸುತ್ತಾರೆ. ಅಷ್ಟೇ ಅಲ್ಲದೆ ಕೆಲವು ಮಹಿಳೆಯರು ತಮ್ಮ ಮುಖಕ್ಕೆ ಹೊಳಪು ತರಲು ದುಬಾರಿ ವಸ್ತುಗಳನ್ನು ಖರೀದಿಸಿ ಬಳಸುತ್ತಾರೆ. ಆದರೆ ಅದರಿಂದ ಯಾವುದೇ ಪ್ರಯೋಜನವನ್ನು ಪಡೆಯುವುದಿಲ್ಲ. ಆದರೆ ಯಾವುದೇ ವಸ್ತುಗಳನ್ನು ಬಳಸದೆ, ಹಣವನ್ನು ವ್ಯರ್ಥ ಮಾಡದೆ ನೈಸರ್ಗಿಕವಾಗಿ ಮುಖಕ್ಕೆ ಹೊಳಪನ್ನು ತರಬಹುದು ಎಂಬುದು ನಿಮಗೆ ಗೊತ್ತಾ? ಹೌದು, ನಿಮ್ಮ ಮುಖದಲ್ಲಿ ಹೊಳಪನ್ನು ತರಲು ನೀವು ಬಾಳೆಹಣ್ಣಿನ ಸಿಪ್ಪೆಯನ್ನು ಬಳಸಬಹುದು.
ಕಲೆಗಳನ್ನು ಹೋಗಲಾಡಿಸುತ್ತದೆ: ಬಾಳೆಹಣ್ಣಿನ ಸಿಪ್ಪೆ ಚರ್ಮಕ್ಕೆ ತುಂಬಾ ಪ್ರಯೋಜನಕಾರಿ. ಅದನ್ನು ಬಳಸಿ ನಿಮ್ಮ ಮುಖವನ್ನು ಸುಂದರವಾಗಿಸಬಹುದು. ಇದಕ್ಕಾಗಿ ಬಾಳೆಹಣ್ಣಿನ ಸಿಪ್ಪೆಯ ಒಳಭಾಗವನ್ನು ನಿಮ್ಮ ಮುಖಕ್ಕೆ ಹಚ್ಚಿ ನಂತರ ಲಘುವಾಗಿ ಮಸಾಜ್ ಮಾಡಿ. ನಂತರ ಕನಿಷ್ಠ ಐದು ನಿಮಿಷಗಳ ನಂತರ ಹಾಗೆಯೇ ಬಿಟ್ಟು, ನಂತರ ತಣ್ಣೀರಿನಿಂದ ನಿಮ್ಮ ಮುಖವನ್ನು ಸ್ವಚ್ಛಗೊಳಿಸಿ. ಪ್ರತಿದಿನ ರಾತ್ರಿ ಮಲಗುವ ಮುನ್ನ ಈ ವಿಧಾನವನ್ನು ನೀವು ಮಾಡಿದರೆ ಮುಖದಲ್ಲಿರುವ ಸತ್ತ ಚರ್ಮವು ನಿವಾರಣೆಯಾಗುತ್ತದೆ.
ಮೊಡವೆಗಳನ್ನು ನಿವಾರಿಸುತ್ತದೆ:ನಿಮ್ಮ ಮುಖದಲ್ಲಿ ಮೊಡವೆಗಳು ಅಥವಾ ಕಪ್ಪು ಕಲೆಗಳು ಹೆಚ್ಚಾಗಿದ್ದರೆ ಅವುಗಳನ್ನು ಹೋಗಲಾಡಿಸಲು ಬಾಳೆಹಣ್ಣಿನ ಸಿಪ್ಪೆ ತುಂಬಾ ಸಹಾಯಕವಾಗಿದೆ. ಇದಕ್ಕಾಗಿ ಒಂದು ಬಾಳೆಹಣ್ಣಿನ ಸಿಪ್ಪೆಯನ್ನು ಚೆನ್ನಾಗಿ ರುಬ್ಬಿ ಅದಕ್ಕೆ ಮೊಸರು ಮತ್ತು ರೋಸ್ ವಾಟರ್ ಸೇರಿಸಿ. ನಂತರ ಆ ಪೇಸ್ಟ್ ಅನ್ನು ನಿಮ್ಮ ಮುಖಕ್ಕೆ ಹಚ್ಚಿ. ಇದು ನಿಮ್ಮ ಚರ್ಮದಲ್ಲಿರುವ ಕಪ್ಪು ಕಲೆಗಳು ಮತ್ತು ಮೊಡವೆಗಳನ್ನು ತೆಗೆದುಹಾಕುವುದಲ್ಲದೆ, ಮುಖವನ್ನು ಹೊಳೆಯುವಂತೆ ಮಾಡುತ್ತದೆ.
ನೆರಿಗೆಗಳನ್ನು ನಿವಾರಿಸುತ್ತದೆ: ಬಾಳೆಹಣ್ಣಿನ ಸಿಪ್ಪೆ ತೇವಾಂಶವನ್ನು ನೀಡುವ ಗುಣಗಳನ್ನು ಹೊಂದಿರುವುದರಿಂದ, ಇದು ನಿಮ್ಮ ಚರ್ಮವನ್ನು ತೇವಾಂಶವಿರುವಂತೆ ಮಾಡುತ್ತದೆ ಮತ್ತು ನೆರಿಗೆಗಳು ಉಂಟಾಗುವುದನ್ನು ತಡೆಯುತ್ತದೆ. ಬಾಳೆಹಣ್ಣಿನ ಸಿಪ್ಪೆ ಚರ್ಮದಲ್ಲಿ ಕೊಲಾಜನ್ ಅನ್ನು ಹೆಚ್ಚಿಸುವಲ್ಲಿ ಮತ್ತು ತೇವಾಂಶವನ್ನು ನೀಡುವಲ್ಲಿ ತುಂಬಾ ಸಹಾಯಕವಾಗಿದೆ. ಇದಕ್ಕೆ ಬಾಳೆಹಣ್ಣಿನ ಸಿಪ್ಪೆಯ ಫೇಸ್ ಪ್ಯಾಕ್ ಜೊತೆಗೆ ವಿಟಮಿನ್ ಇ ಕ್ಯಾಪ್ಸೂಲ್, ಮುಲ್ತಾನಿ ಮಿಟ್ಟಿ ಮತ್ತು ರೋಸ್ ವಾಟರ್ ಅನ್ನು ಬೆರೆಸಿ ಮುಖಕ್ಕೆ ಹಚ್ಚಬೇಕು.
ಬಾಳೆಹಣ್ಣಿನ ಸಿಪ್ಪೆಯ ಫೇಸ್ ಪ್ಯಾಕ್:: ಬಾಳೆಹಣ್ಣಿನ ಸಿಪ್ಪೆಯನ್ನು ಮಿಕ್ಸಿಯಲ್ಲಿ ರುಬ್ಬಿ ಅದನ್ನು ಒಂದು ಪಾತ್ರೆಯಲ್ಲಿ ತೆಗೆದುಕೊಳ್ಳಿ. ನಂತರ ಅದಕ್ಕೆ ಸ್ವಲ್ಪ ಜೇನುತುಪ್ಪವನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ ಆ ಪೇಸ್ಟ್ ಅನ್ನು ನಿಮ್ಮ ಮುಖಕ್ಕೆ ಹಚ್ಚಿ ಸುಮಾರು ಹತ್ತು ನಿಮಿಷಗಳ ಕಾಲ ಹಾಗೆಯೇ ಬಿಟ್ಟು ನಂತರ ತಣ್ಣೀರಿನಲ್ಲಿ ಮುಖವನ್ನು ತೊಳೆಯಬೇಕು. ಈ ಫೇಸ್ ಪ್ಯಾಕ್ ಹಾಕುವ ಮೊದಲು ನಿಮ್ಮ ಮುಖವನ್ನು ತೊಳೆದು ಸ್ವಚ್ಛಗೊಳಿಸಿ ನಂತರವೇ ಹಾಕಬೇಕು ಎಂಬುದನ್ನು ನೆನಪಿನಲ್ಲಿಡಿ.