ಆಹಾರ ನೋಡಿದ್ರೆ ವಾಂತಿ ಬರೋ ತರ ಆಗ್ತಿದ್ಯಾ? ಹೆಪಟೈಟಿಸ್ ಲಕ್ಷಣವಿರಬಹುದು ಜೋಕೆ
ತಪ್ಪು ಆಹಾರ ಪದ್ಧತಿಯು ಲಿವರ್ ಮೇಲೆ ನೇರ ಪರಿಣಾಮ ಬೀರುತ್ತೆ. ಸರಿಯಾದ ಸಮಯದಲ್ಲಿ ಈ ಬಗ್ಗೆ ಗಮನ ನೀಡದಿದ್ದರೆ, ಅದು ಹೆಪಟೈಟಿಸ್ ಸಮಸ್ಯೆಗಳಿಗೆ ಕಾರಣವಾಗಬಹುದು. ಇದನ್ನು ತಡೆಗಟ್ಟಲು ಯಾವ ವಿಷಯಗಳ ಬಗ್ಗೆ ಕಾಳಜಿ ವಹಿಸಬೇಕು ಎಂಬುದನ್ನು ತಿಳಿಯಲು ಮುಂದೆ ಓದಿ.
ನಮ್ಮ ದೇಹವನ್ನು ಆರೋಗ್ಯಕರವಾಗಿಡುವಲ್ಲಿ ಲಿವರ್(Liver) ದೊಡ್ಡ ಪಾತ್ರ ವಹಿಸುತ್ತೆ. ಇದು ಆಹಾರದಲ್ಲಿರುವ ಪೋಷಕಾಂಶಗಳನ್ನು ವಿಂಗಡಿಸುವ ಮೂಲಕ ಸುರಕ್ಷಿತವಾಗಿರಿಸುತ್ತೆ ಮತ್ತು ಅಗತ್ಯಕ್ಕೆ ತಕ್ಕಂತೆ ಅವುಗಳನ್ನು ದೇಹದ ವಿವಿಧ ಭಾಗಗಳಿಗೆ ಪೂರೈಸುತ್ತೆ. ಇದಲ್ಲದೆ, ಇದು ರಕ್ತದಲ್ಲಿರುವ ವಿಷಕಾರಿ ಅಂಶಗಳನ್ನು ಗುರುತಿಸುತ್ತೆ ಮತ್ತು ಅವುಗಳನ್ನು ದೇಹದಲ್ಲಿ ಹರಡದಂತೆ ತಡೆಯುತ್ತೆ. ದೇಹದ ಈ ಪ್ರಮುಖ ಭಾಗವು ಅನಾರೋಗ್ಯಕ್ಕೆ ಒಳಗಾದರೆ ವ್ಯಕ್ತಿಯು ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತೆ.
ಸಮಸ್ಯೆ ಏನು?
ಒಬ್ಬ ವ್ಯಕ್ತಿಯ ಲಿವರ್ ಉರಿಯೂತಕ್ಕೆ ಒಳಗಾದಾಗ, ಆ ದೈಹಿಕ ಸ್ಥಿತಿಯನ್ನು ಹೆಪಟೈಟಿಸ್ ಎಂದು ಕರೆಯಲಾಗುತ್ತೆ. ಅರಿವಿನ ಕೊರತೆಯಿಂದಾಗಿ, ಭಾರತೀಯ ಜನಸಂಖ್ಯೆಯ ಹೆಚ್ಚಿನ ಭಾಗ ಈ ಕಾಯಿಲೆಯೊಂದಿಗೆ ಹೋರಾಡುತ್ತಿದೆ. ವೈರಸ್ ಗಳು ಇದಕ್ಕೆ ಕಾರಣವೆಂದು ನಂಬಲಾಗಿದೆ. ಅನೇಕ ಬಾರಿ ಇದರ ರೋಗಲಕ್ಷಣ ದೇಹದಲ್ಲಿ ತಾವಾಗಿಯೇ ಕಾಣಿಸಿಕೊಳ್ಳಲು ಪ್ರಾರಂಭಿಸುತ್ತವೆ, ಈ ಕಾರಣದಿಂದಾಗಿ ಇದನ್ನು ಆಟೊ ಇಮ್ಮ್ಯೂನ್ ಡಿಸೀಸ್(Auto immune disease) ಎಂದೂ ಕರೆಯಲಾಗುತ್ತೆ.
ಆಲ್ಕೋಹಾಲ್ (Alcohol), ಹೆಚ್ಚಿನ ಪ್ರಮಾಣದ ತುಪ್ಪ-ಎಣ್ಣೆ ಮತ್ತು ಮೆಣಸಿನಕಾಯಿ-ಮಸಾಲೆಗಳನ್ನು ಹೊಂದಿರುವ ಆಹಾರ ಮತ್ತು ಕೆಲವು ಔಷಧಿಗಳ ಅಡ್ಡಪರಿಣಾಮಗಳು ಸಹ ಇದಕ್ಕೆ ಕಾರಣವೆಂದು ನಂಬಲಾಗಿದೆ. ಆಹಾರದ ಸಮಯದಲ್ಲಿ ಶುಚಿತ್ವದ ಬಗ್ಗೆ ಕಾಳಜಿ ವಹಿಸೋದು ಸಹ ಇದಕ್ಕೆ ಪ್ರಮುಖ ಕಾರಣವಾಗಿದೆ.
ವೈರಸ್ ಹೇಗೆ ಹರಡುತ್ತೆ?
ಹೆಪಟೈಟಿಸ್(Hepatitis) ಹರಡಲು ಎ, ಬಿ, ಸಿ, ಡಿ ಮತ್ತು ಇ ಎಂಬ ಐದು ರೀತಿಯ ವೈರಸ್ ಗಳು ಮುಖ್ಯವಾಗಿ ಕಾರಣವಾಗಿವೆ. ಹೆಪಟೈಟಿಸ್ ಬಿ ಮತ್ತು ಸಿ ರೋಗಿಗಳಿಗೆ ಪಿತ್ತಜನಕಾಂಗದ ಕ್ಯಾನ್ಸರ್ ಬರುವ ಸಾಧ್ಯತೆ ಹೆಚ್ಚು. ಹೆಪಟೈಟಿಸ್ ಎ ಮತ್ತು ಇ ಸೋಂಕುಗಳು ಕಲುಷಿತ ನೀರು ಮತ್ತು ಆಹಾರದಿಂದ ಹರಡುತ್ತವೆ.
ಹೆಪಟೈಟಿಸ್ ಬಿ ವೈರಸ್ ಸೋಂಕು, ಸೋಂಕಿತ ರಕ್ತದ ವರ್ಗಾವಣೆ ಅಥವಾ ಅಸುರಕ್ಷಿತ ಲೈಂಗಿಕತೆಯ(Unsafe sex) ಮೂಲಕ ಹರಡುತ್ತೆ . ಹೆಪಟೈಟಿಸ್ ಬಿ, ಸಿ ಮತ್ತು ಡಿ ಸೋಂಕಿತ ವ್ಯಕ್ತಿಯ ರಕ್ತ ಅಥವಾ ಇತರ ರೀತಿಯ ದ್ರವಗಳ ಸಂಪರ್ಕದಿಂದ ಹರಡುತ್ತೆ .
ಈ ಸಮಸ್ಯೆ ಉಂಟಾದ್ರೆ ಕಾಣಿಸಿಕೊಳ್ಳುವ ಪ್ರಮುಖ ರೋಗಲಕ್ಷಣಗಳು
ಜ್ವರ
ಆಹಾರದ ಬಗ್ಗೆ ಅಸಹ್ಯ
ಕಿಬ್ಬೊಟ್ಟೆ ನೋವು
ವಾಕರಿಕೆ
ಸ್ನಾಯು ನೋವು
ಕಣ್ಣು ಮತ್ತು ಚರ್ಮದ ಬಣ್ಣ ಹಳದಿಯಾಗೋದು(Yellow eye)
ಕಾಲುಗಳಲ್ಲಿ ಊತ ಮತ್ತು ಅನಗತ್ಯ ಆಯಾಸ ಇತ್ಯಾದಿ.
ಚಿಕಿತ್ಸೆ(Treatment)
ಹೆಪಟೈಟಿಸ್ ರಕ್ತ ಪರೀಕ್ಷೆಯಿಂದ ಗುರುತಿಸಬಹುದು. ಇದಲ್ಲದೆ, ಎಲ್ಲಾ ರೀತಿಯ ಹೆಪಟೈಟಿಸ್ ಲಿವರ್ ಫಂಕ್ಷನ್ ಟೆಸ್ಟ್ ಮತ್ತು ಅಲ್ಟ್ರಾಸೌಂಡ್ ಮೂಲಕ ಕಂಡು ಹಿಡೀಬಹುದು. ಟೆಸ್ಟ್ ರಿಸಲ್ಟ್ ಪಾಸಿಟಿವ್ ಬಂದ ನಂತರ, ವೈದ್ಯರ ಸಲಹೆ ಮೇರೆಗೆ ತಕ್ಷಣ ಚಿಕಿತ್ಸೆಯನ್ನು ಪ್ರಾರಂಭಿಸಬೇಕು. ಗರ್ಭಾವಸ್ಥೆಯಲ್ಲಿ ಇದನ್ನು ಪರೀಕ್ಷಿಸಬೇಕು. ಯಾವುದೇ ರೋಗಲಕ್ಷಣ ಕಾಣಿಸಿಕೊಂಡರೆ, ತಡಮಾಡದೆ ವೈದ್ಯರನ್ನು ಸಂಪರ್ಕಿಸಿ.