- Home
- Life
- Health
- 5 ಲೀಟರ್ ನೀರು ಕುಡಿದು ಆಸ್ಪತ್ರೆ ಸೇರಿದ ಯುವಕ, ಬೇಸಿಗೆಯಲ್ಲಿ ನಿಮ್ಮ ದೇಹವನ್ನು ಹೀಗೆ ಹೈಡ್ರೇಟ್ ಮಾಡಿ
5 ಲೀಟರ್ ನೀರು ಕುಡಿದು ಆಸ್ಪತ್ರೆ ಸೇರಿದ ಯುವಕ, ಬೇಸಿಗೆಯಲ್ಲಿ ನಿಮ್ಮ ದೇಹವನ್ನು ಹೀಗೆ ಹೈಡ್ರೇಟ್ ಮಾಡಿ
ಭಾರತದಲ್ಲಿ ಬಿಸಿಲಿನ ಅಬ್ಬರ ಜೋರಾಗಿದೆ. ಮನೆಯಿಂದ ಹೊರಗೆ ಕೆಲ್ಸ ಮಾಡುವವರು ಸಾಕಷ್ಟು ಸಮಸ್ಯೆ ಎದುರಿಸ್ತಿದ್ದಾರೆ. ಬೇಸಿಗೆ ಬರ್ತಿದ್ದಂತೆ ಹೆಚ್ಚು ನೀರು ಕುಡಿಬೇಕು ಅಂತ ಜನ ನಂಬ್ತಾರೆ. ಆದ್ರೆ ಇಲ್ಲೊಬ್ಬ ಯುವಕ ದಿನಕ್ಕೆ 5 ಲೀಟರ್ ನೀರು ಕುಡಿದ್ರೂ ಆಸ್ಪತ್ರೆ ಸೇರುವಂತಾಗಿದೆ.

ಒಂದೇ ದಿನಕ್ಕೆ ಐದು ಲೀಟರ್ ನೀರು
ಪ್ರತಿಯೊಬ್ಬ ವ್ಯಕ್ತಿ ಹೈಡ್ರೇಟ್ ಆಗಿರೋದು ಬಹಳ ಮುಖ್ಯ. ಬೇಸಿಗೆಯಲ್ಲಿ ಮೂರರಿಂದ ನಾಲ್ಕು ಲೀಟರ್ ನೀರು ಕುಡಿಯಬೇಕು ಅಂತ ಜನ ಹೇಳ್ತಾರೆ. ಇದನ್ನು ಚಾಚುತಪ್ಪದೆ ಅನೇಕರು ಪಾಲಿಸ್ತಾರೆ ಕೂಡ. ಆದ್ರೆ ಬೇಸಿಗೆಯಲ್ಲಿ ಬರೀ ನೀರು ಕುಡಿಯೋದು ಮಾತ್ರ ಹೈಡ್ರೇಟ್ ಆಗಿರಲು ಇರುವ ಮಾರ್ಗವಲ್ಲ. ದೆಹಲಿಯಲ್ಲಿ 25 ವರ್ಷದ ಯುವಕ ದಿನಕ್ಕೆ 5 ಲೀಟರ್ ನೀರು ಸೇವನೆ ಮಾಡಿದ್ದಾನೆ. ಆದ್ರೆ ಈಗ ಆಸ್ಪತ್ರೆ ಸೇರುವಂತಾಗಿದೆ. ಆತನ ಆರೋಗ್ಯ ಹದಗೆಟ್ಟಿದ್ದರಿಂದ ಐಸಿಯುವಿನಲ್ಲಿ ಚಿಕಿತ್ಸೆ ನಡೆಯುತ್ತಿದೆ.
ಆಗಿದ್ದೇನು?
ದೆಹಲಿಯ 25 ವರ್ಷದ ಯುವಕ ದಿನವಿಡಿ ಹೊರಗೆ ಬೈಕ್ ನಲ್ಲಿ ಕೆಲ್ಸ ಮಾಡ್ತಿದ್ದ. ಎಲ್ಲರಂತೆ ಈತ ಕೂಡ ಹೈಡ್ರೇಟ್ ಆಗಿರಲು ನೀರು ಸೇವಿಸಿದ್ದಾನೆ. ಬಾಟಲಿ ಖಾಲಿಯಾದಂತೆ ತುಂಬಿಸಿಕೊಳ್ತಾ ಒಂದು ದಿನಕ್ಕೆ 5 ಲೀಟರ್ ಸೇವನೆ ಮಾಡಿದ್ದಾನೆ. ಆದ್ರೆ ಯಾವುದೇ ಆಹಾರ ಸೇವನೆ ಮಾಡಿರಲಿಲ್ಲ. ಎಲೆಕ್ಟ್ರೋಲೈಟ್ ಪಾನೀಯಗಳು ಅಥವಾ ಯಾವುದೇ ಉಪ್ಪು ಆಧಾರಿತ ಪಾನೀಯಗಳನ್ನು ಅಥವಾ ಹಣ್ಣನ್ನು ತಿಂದಿರಲಿಲ್ಲ. ಸಂಜೆಯಾಗ್ತಿದ್ದಂತೆ ಆಯಾಸ ಕಾಣಿಸಿಕೊಂಡಿದೆ. ನಿಧಾನವಾಗಿ ತಲೆ ಸುತ್ತಲು ಶುರುವಾಗಿದೆ. ಮಾತು ಅಸ್ಪಷ್ಟವಾಯ್ತು. ಗೊಂದಲಕ್ಕೊಳಗಾಗ್ತಿದ್ದಂತೆ ಆತನನ್ನು ಆಸ್ಪತ್ರೆಗೆ ದಾಖಲಿಸಲಾಯ್ತು.
ನೀರು ಕುಡಿದಿದ್ದು ತಪ್ಪಾಯ್ತಾ?
ಯುವಕ ಬರೀ ನೀರು ಮಾತ್ರ ಕುಡಿದಿದ್ದು ಈ ಎಲ್ಲ ಸಮಸ್ಯೆಗೆ ಕಾರಣವಾಗಿದೆ. ಯುವಕನ ಸೋಡಿಯಂ ಮಟ್ಟ ಗಮನಾರ್ಹವಾಗಿ ಕುಸಿದಿದೆ ಎಂದು ವೈದ್ಯರು ಹೇಳಿದ್ದಾರೆ. ಸಾಮಾನ್ಯವಾಗಿ 135–145 mEq/L ಸೋಡಿಯಂ ಮಟ್ಟ ಇರಬೇಕು. ಆದ್ರೆ ಆತನಲ್ಲಿ ಅದು 124 ಕ್ಕೆ ಇಳಿದಿತ್ತು. ಇದನ್ನು ಹೈಪೋನಾಟ್ರೀಮಿಯಾ ಎಂದು ಕರೆಯಲಾಗುತ್ತದೆ. ದೇಹದಿಂದ ಉಪ್ಪು ಬೆವರಿನ ಮೂಲಕ ಹೊರಗೆ ಬಂದಾಗ ಈ ಸಮಸ್ಯೆ ಕಾಡುತ್ತದೆ.
ಸೋಡಿಯಂ ಕಡಿಮೆ ಆದ್ರೆ ಏನಾಗುತ್ತೆ?
ದೇಹ ತನ್ನನ್ನು ತಾನೇ ತಂಪಾಗಿಸಿಕೊಳ್ಳಲು ಬೆವರುತ್ತದೆ. ಚರ್ಮದಿಂದ ಬೆವರು ಆವಿಯಾದಾಗ, ದೇಹದ ಉಷ್ಣತೆ ಕಡಿಮೆಯಾಗುತ್ತದೆ. ಬೆವರು ಅಂದ್ರೆ ಅದು ಕೇವಲ ನೀರಲ್ಲ. ಉಪ್ಪು ಮತ್ತು ಸೋಡಿಯಂ, ಪೊಟ್ಯಾಸಿಯಮ್ ಮತ್ತು ಕ್ಲೋರೈಡ್ನಂತಹ ಅಗತ್ಯ ಖನಿಜಗಳನ್ನು ಸಹ ಹೊಂದಿರುತ್ತದೆ. ನೀರಿನ ಸಮತೋಲನ ಮತ್ತು ಸರಿಯಾದ ಮೆದುಳಿನ ಕಾರ್ಯನಿರ್ವಹಣೆಗೆ ಸೋಡಿಯಂ ಅತ್ಯಗತ್ಯ. ಸೋಡಿಯಂ ಮಟ್ಟ ಕಡಿಮೆಯಾದಾಗ, ನೀರು ದೇಹದ ಜೀವಕೋಶಗಳನ್ನು ಪ್ರವೇಶಿಸಲು ಪ್ರಾರಂಭಿಸುತ್ತದೆ. ಇದರಿಂದ ಮೆದುಳಿನ ಕೋಶಗಳು ಊದಿಕೊಳ್ಳುತ್ತವೆ. ಸೋಡಿಯಂ ಕಡಿಮೆ ಆದಾಗ ತಲೆನೋವು, ಆಯಾಸ, ತಲೆತಿರುಗುವಿಕೆ ಮತ್ತು ವಾಂತಿ ಕಾಣಿಸಿಕೊಳ್ಳುತ್ತದೆ. ಸ್ಥಿತಿ ಹದಗೆಟ್ಟರೆ, ಪ್ರಜ್ಞೆ ಕಳೆದುಕೊಳ್ಳುವ, ಕೋಮಾಕ್ಕೆ ಹೋಗುವ ಅಪಾಯವಿರುತ್ತದೆ.
ನಿಮ್ಮ ದೇಹವನ್ನು ಹೀಗೆ ಹೈಡ್ರೇಟ್ ಮಾಡಿ
ಬೇಸಿಗೆಯಲ್ಲಿ ಬರೀ ನೀರು ಕುಡಿಯುವುದು ಮುಖ್ಯವಲ್ಲ. ನೀರಿನ ಜೊತೆ ಎಳೆನೀರು, ನಿಂಬು ಪಾನೀಯ, ಹಣ್ಣಿನ ಜ್ಯೂಸ್, ಮಜ್ಜಿಗೆಯಂತ ಪಾನೀಯಗಳನ್ನು ನೀವು ಕುಡಿಯಬೇಕು. ಇವು ದೇಹದ ಅಗತ್ಯ ಉಪ್ಪು ಮತ್ತು ಎಲೆಕ್ಟ್ರೋಲೈಟ್ ಅಗತ್ಯಗಳನ್ನು ಪೂರೈಸುತ್ತದೆ. ಉತ್ತಮ ಆಹಾರ ಹಾಗೂ ಸೂರ್ಯನ ಕಿರಣಗಳಿಂದ ರಕ್ಷಣೆ ಕೂಡ ಮುಖ್ಯವಾಗುತ್ತದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.
