ನಾಲ್ಕು ಕಪ್ ಚಹಾ ಕುಡಿಯೋದ್ರಿಂದ ಡಯಾಬಿಟೀಸ್ ಬರೋದಿಲ್ವಾ?
ಮಧುಮೇಹ ಇಡೀ ಜಗತ್ತಿನಲ್ಲೇ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಆರೋಗ್ಯ ಸಮಸ್ಯೆಗಳಲ್ಲಿ ಒಂದಾಗಿದೆ. ಕಳೆದ ಕೆಲವು ದಶಕಗಳಲ್ಲಿ, ಭಾರತ ಸೇರಿದಂತೆ ವಿಶ್ವದ ಅನೇಕ ದೇಶಗಳಲ್ಲಿ ಈ ಆರೋಗ್ಯ ಸಮಸ್ಯೆ ವೇಗವಾಗಿ ಹೆಚ್ಚುತ್ತಿದೆ. ಆದರೆ ಮಧುಮೇಹವನ್ನು ಬೇರಿನಿಂದ ಗುಣಪಡಿಸಲು ಸಾಧ್ಯವಿಲ್ಲ, ಅದನ್ನು ನಿಯಂತ್ರಣದಲ್ಲಿಡಲು ಚಿಕಿತ್ಸಾ ವಿಧಾನಗಳನ್ನು ಬಳಸಲಾಗಿದೆ ಎಂದು ವೈದ್ಯರು ಹೇಳುತ್ತಾರೆ. ಆದರೆ ಕೆಲವೊಂದು ಸಂಶೋಧನೆಗಳು ಚಹಾ ಕುಡಿಯೋ ಮೂಲಕ ತೂಕ ಇಳಿಕೆ ಮಾಡಬಹುದು ಅಂತಾರೆ, ಹೌದಾ? ಇದು ನಿಜಾನಾ? ತಿಳಿದುಕೊಳ್ಳಲು ಮುಂದೆ ಓದಿ…
ಮಧುಮೇಹ ಇತ್ತಿಚೀನ ದಿನಗಳಲ್ಲಿ ಮಕ್ಕಳಿಂದ ಹಿಡಿದು ಹಿರಿಯರವರೆಗೆ ಕಾಣಿಸಿಕೊಳ್ಳುತ್ತಿರುವಂತಹ ರೋಗವಾಗಿದೆ. ಮಧುಮೇಹವನ್ನು ಹೇಗೆ ನಿಯಂತ್ರಣದಲ್ಲಿಡಬಹುದು ಎಂಬುದನ್ನು ಇನ್ನೂ ಸಹ ವೈದ್ಯರು ಅಧ್ಯಯನ, ಸಂಶೋಧನೆ ಮಾಡುತ್ತಿದ್ದಾರೆ. ಎಂಟು ದೇಶಗಳಲ್ಲಿ 10 ಲಕ್ಷಕ್ಕೂ ಹೆಚ್ಚು ಜನರ ಮೇಲೆ ನಡೆಸಿದ ಸಂಶೋಧನೆಯು ಚಹಾ ಕುಡಿಯುವುದು ಮಧುಮೇಹವನ್ನು ನಿಯಂತ್ರಣದಲ್ಲಿಡಲು ಎಫೆಕ್ಟಿವ್ ಮಾರ್ಗವಾಗಿದೆ ಎಂದು ತೋರಿಸಿದೆ. ವಿಶೇಷವಾಗಿ ಟೈಪ್ -2 ಮಧುಮೇಹ (type 2 diabetes)ಹೊಂದಿರುವ ಜನರಿಗೆ ಇದು ಉತ್ತಮ ಆಯ್ಕೆಯಾಗಿದೆ ಎಂದು ತಿಳಿದು ಬಂದಿದೆ. ಇದು ನಿಜಾನಾ?
ಈ ವರ್ಷ (ಸೆಪ್ಟೆಂಬರ್ 19-23) ಸ್ವೀಡನ್ನಲ್ಲಿ ನಡೆದ ಯುರೋಪಿಯನ್ ಅಸೋಸಿಯೇಷನ್ ಫಾರ್ ದಿ ಸ್ಟಡಿ ಆಫ್ ಡಯಾಬಿಟಿಸ್ (ಇಎಎಸ್ಡಿ) ವಾರ್ಷಿಕ ಸಭೆಯಲ್ಲಿ ಪ್ರಸ್ತುತಪಡಿಸಿದ ವರದಿಯಲ್ಲಿ, ಚಹಾ ಕುಡಿಯುವುದರಿಂದ ಡಯಾಬಿಟೀಸ್ ನಿಯಂತ್ರಿಸಬಹುದು ಎಂದು ಸಂಶೋಧಕರು ಹೇಳಿದ್ದಾರೆ. ಆದರೆ ಇದು ನೀವು ಕುಡಿಯೋವಂತಹ ಹಾಲಿನ ಚಹಾ ಅಲ್ಲ, ಬದಲಾಗಿ ಬ್ಲ್ಯಾಕ್ ಟೀ, ಗ್ರೀನ್ ಟೀ ಅಥವಾ ಊಲಾಂಗ್ ಚಹಾದ (oolong tea)ನಿರ್ಬಂಧಿತ ಸೇವನೆಯು ಮಧುಮೇಹಿಗಳಿಗೆ ಪ್ರಯೋಜನಕಾರಿಯಾಗಿದೆ ಎಂದು ವಿಜ್ಞಾನಿಗಳು ವರದಿ ಮಾಡಿದ್ದಾರೆ.
ಸರಾಸರಿ 10 ವರ್ಷಗಳ ಅವಧಿಯಲ್ಲಿ ದಿನಕ್ಕೆ ಮೂರರಿಂದ ನಾಲ್ಕು ಕಪ್ ಚಹಾ ಸೇವಿಸುವುದರಿಂದ ಟೈಪ್ -2 ಮಧುಮೇಹದ ಅಪಾಯವನ್ನು ಶೇಕಡಾ 17 ರಷ್ಟು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಎಂದು ಅಧ್ಯಯನವು ಕಂಡುಕೊಂಡಿದೆ. ಚಹಾವನ್ನು ಸರಿಯಾದ ರೀತಿಯಲ್ಲಿ ಕುಡಿಯುವ ಅಭ್ಯಾಸವನ್ನು ಮಾಡಿಕೊಳ್ಳುವುದು ನಿಮಗೆ ತುಂಬಾನೆ ಪ್ರಯೋಜನ ನೀಡಲಿದೆ. ಈ ಅಧ್ಯಯನದ ಬಗ್ಗೆ ವಿವರವಾಗಿ ತಿಳಿದುಕೊಳ್ಳೋಣ.
ಚಹಾವು ಮಧುಮೇಹದ ಅಪಾಯವನ್ನು ಕಡಿಮೆ ಮಾಡುತ್ತದೆ
ವಾರ್ಷಿಕ ಸಭೆಯಲ್ಲಿ, ಸಂಶೋಧಕರ ತಂಡವು ಚಹಾವು ವಿವಿಧ ಆಂಟಿ ಆಕ್ಸಿಡೆಂಟ್ (antioxidant), ಉರಿಯೂತ ಶಮನಕಾರಿ ಮತ್ತು ಕ್ಯಾನ್ಸರ್ ನಿರೋಧಕ ಸಂಯುಕ್ತಗಳನ್ನು ಹೊಂದಿದ್ದು, ಇದು ದೇಹಕ್ಕೆ ಅನೇಕ ರೀತಿಯಲ್ಲಿ ಪ್ರಯೋಜನಕಾರಿಯಾಗಿದೆ ಎಂದು ಹೇಳಿದೆ. ಅಧ್ಯಯನಗಳು ಮತ್ತು ಮೆಟಾ-ವಿಶ್ಲೇಷಣೆಗಳು ಚಹಾ ಕುಡಿಯುವುದು ಮತ್ತು ಟೈಪ್ -2 ಮಧುಮೇಹದ ಕಡಿಮೆ ಅಪಾಯದ ನಡುವಿನ ಸಂಬಂಧವನ್ನು ಕಂಡುಕೊಂಡಿವೆ. ಆದ್ರೆ ಚಹಾ ಸೇವಿಸೋ ಮೊದಲು ಮಧುಮೇಹಿಗಳು ವೈದ್ಯರ ಬಳಿ ಸರಿಯಾದ ಮಾಹಿತಿ ತಿಳಿದ್ರೆ ಉತ್ತಮ.
ಅಧ್ಯಯನವು ಏನನ್ನು ಹೇಳಿದೆ?
ಈ ಅಧ್ಯಯನದ ಮೊದಲ ಹಂತದಲ್ಲಿ, ಟೈಪ್ -2 ಮಧುಮೇಹದ (ಸರಾಸರಿ ವಯಸ್ಸು 42) ಅಪಾಯದಲ್ಲಿರುವ 5,199 ವಯಸ್ಕರಿಂದ (2583 ಪುರುಷರು, 2616 ಮಹಿಳೆಯರು) ಡೇಟಾವನ್ನು ಅಧ್ಯಯನ ಮಾಡಲಾಯಿತು. ಈ ಜನರನ್ನು ೧೯೯೭ ರಿಂದ ೨೦೦೯ ರವರೆಗೆ ಸರ್ವೇ ಮಾಡಲಾಯಿತು. ಆಹಾರ ಮತ್ತು ಪಾನೀಯಗಳ ವಿವರ, ನಿಯಮಿತ ವ್ಯಾಯಾಮ, ಧೂಮಪಾನ ಮತ್ತು ಆಲ್ಕೋಹಾಲ್ ಸೇವನೆಯಂತಹ ಜೀವನಶೈಲಿ ಅಂಶಗಳ ಬಗ್ಗೆ ಸ್ಪರ್ಧಿಗಳು ಮಾಹಿತಿ ನೀಡಿದರು. ಈ ಪೈಕಿ, ಒಟ್ಟು 2,379 (46%) ಸ್ಪರ್ಧಿಗಳು ತಾವು ನಿಯಮಿತವಾಗಿ ಚಹಾ ಕುಡಿಯೋದಾಗಿ ತಿಳಿಸಿದ್ದರು ಎಂದು ವರದಿ ಮಾಡಿದ್ದಾರೆ. ಈ ಸಂಶೋಧನೆಯ ಕೊನೆಯಲ್ಲಿ, ತಜ್ಞರು 5,199 ಸ್ಪರ್ಧಿಗಳಲ್ಲಿ 522 (10%) ಜನರು ಟೈಪ್ -2 ಮಧುಮೇಹವನ್ನು ಹೊಂದಿದ್ದರು ಎಂದು ಕಂಡುಹಿಡಿದರು.
ಎರಡನೇ ಹಂತದ ಅಧ್ಯಯನ
ಅಧ್ಯಯನದ ವಿಶ್ಲೇಷಣೆಯಲ್ಲಿ, ಸಂಶೋಧಕರು ವಯಸ್ಸು, ಲಿಂಗ ಮತ್ತು ದೈಹಿಕ ನಿಷ್ಕ್ರಿಯತೆಯಂತಹ ಹೆಚ್ಚುತ್ತಿರುವ ಅಪಾಯದ ಅಂಶಗಳಿಗೆ ಹೋಲಿಕೆ ಮಾಡುತ್ತಾ, ಚಹಾ ಕುಡಿಯುವವರು ಕಾಲಾನಂತರದಲ್ಲಿ ಮಧುಮೇಹವನ್ನು ಅಭಿವೃದ್ಧಿಪಡಿಸುವ ಕಡಿಮೆ ಅಪಾಯವನ್ನು ಹೊಂದಿರುವುದು ಕಂಡುಬಂದಿದೆ. ಅಧ್ಯಯನದ ಮುಂದಿನ ಹಂತದಲ್ಲಿ, ಸಂಶೋಧಕರು ಸೆಪ್ಟೆಂಬರ್ 2021 ರವರೆಗೆ ಎಂಟು ದೇಶಗಳ 10,76,311 ಸ್ಪರ್ಧಿಗಳ ಡೇಟಾವನ್ನು ಅಧ್ಯಯನ ಮಾಡಿದ್ದಾರೆ. ಇದರ ಆಧಾರದ ಮೇಲೆ, ವಿಜ್ಞಾನಿಗಳ ತಂಡವು ವಿವಿಧ ರೀತಿಯ ಚಹಾ (ಗ್ರೀನ್ ಟೀ, ಊಲಾಂಗ್ ಚಹಾ ಮತ್ತು ಕಪ್ಪು ಚಹಾ) ಮಧುಮೇಹದ ಅಪಾಯವನ್ನು (lower risk of diabetes)ಕಡಿಮೆ ಮಾಡುತ್ತದೆ ಎಂದು ಹೇಳಿದೆ.
ಸಂಶೋಧಕರು ಏನು ಹೇಳುತ್ತಾರೆ?
ಸಂಶೋಧಕರು ಹೇಳೋವಂತೆ ದಿನಕ್ಕೆ ಮೂರರಿಂದ ನಾಲ್ಕು ಕಪ್ ಚಹಾ ಕುಡಿಯುವುದರಿಂದ ಟೈಪ್ -2 ಮಧುಮೇಹ ಉಂಟಾಗುವ ಅಪಾಯ ಕಡಿಮೆ ಮಾಡಬಹುದು ಅನ್ನೋ ಅಚ್ಚರಿ ವಿಚಾರ ತಿಳಿದು ಬಂದಿರೋದಾಗಿ ಚೀನಾದ ವುಹಾನ್ ವಿಜ್ಞಾನ ಮತ್ತು ತಂತ್ರಜ್ಞಾನ ವಿಶ್ವವಿದ್ಯಾಲಯದ ಮುಖ್ಯಸ್ಥ, ಅಧ್ಯಯನ ಲೇಖಕ ಕ್ಸಿಯಾವೊಯಿಂಗ್ ಲಿ ಹೇಳಿದ್ದಾರೆ.
ಚಹಾದಲ್ಲಿನ ವಿಶೇಷ ಘಟಕಗಳು, ಪಾಲಿಫಿನಾಲ್ ಗಳು, ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ, ಆದರೆ ದೇಹಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಈ ಜೈವಿಕ ಸಕ್ರಿಯ ಸಂಯುಕ್ತಗಳು ಬೇಕಾಗಬಹುದು. ಇದರರ್ಥ ಮಧುಮೇಹವನ್ನು ತಡೆಗಟ್ಟಲು ನೀವು ದಿನಕ್ಕೆ ಮೂರರಿಂದ ನಾಲ್ಕು ಕಪ್ ಚಹಾವನ್ನು ಕುಡಿಯಬೇಕಾಗಬಹುದು ಎಂದು ತಿಳಿಸಿದ್ದಾರೆ.
ಸಾಂಪ್ರದಾಯಿಕ ಔಷಧಿಗಳಲ್ಲಿಯೂ ಸಹ ಚಹಾದ ಪ್ರಯೋಜನ
ಚೀನಾದ ಸಾಂಪ್ರದಾಯಿಕ ಊಲಾಂಗ್ ಚಹಾ ಅಥವಾ ವಿಶ್ವದಾದ್ಯಂತ ಬಳಸಲಾಗುವ ಗ್ರೀನ್ ಟೀ ಅನೇಕ ರೀತಿಯ ಉತ್ಕರ್ಷಣ ನಿರೋಧಕಗಳ ಮೂಲವಾಗಿದೆ. ಅವು ಮಧುಮೇಹಕ್ಕೂ ಪ್ರಯೋಜನಕಾರಿಯಾಗಬಹುದು. ಆದರೆ ನೀವು ಇದನ್ನು ಸಕ್ಕರೆ ಬೆರೆಸದೆ ಸೇವಿಸೋದು ಉತ್ತಮ. ಇನ್ನು ಕಪ್ಪು ಚಹಾವನ್ನು (black tea) ಸಕ್ಕರೆ ಇಲ್ಲದೆ ಸೇವಿಸಿದರೆ, ಅದು ಸಹ ಪ್ರಯೋಜನ ನೀಡುತ್ತೆ.
ವಿಶೇಷ ಸೂಚನೆ :ಆದರೆ ವಿಶೇಷ ಸೂಚನೆ ಏನೆಂದರೆ ಯಾವುದೇ ಅಧ್ಯಯನವೂ ಚಹಾ ಕುಡಿಯೋದರಿಂದ ಮಧುಮೇಹ ಸಂಪೂರ್ಣವಾಗಿ ಕಡಿಮೆಯಾಗುತ್ತೆ ಅನ್ನೋದಕ್ಕೆ ಯಾವುದೇ ಪುರಾವೆಗಳನ್ನು ಇಲ್ಲಿವರೆಗೆ ನೀಡಿಲ್ಲ. ಅವರು ಸಂಶೋಧನೆಯಲ್ಲಿ ಅವರು ಕಂಡುಕೊಂಡ ವಿಷಯಗಳನ್ನು ಹೇಳಿದ್ದಷ್ಟೇ…. ಆದುದರಿಂದ ವೈದ್ಯಕೀಯ ಸಲಹೆಯಿಲ್ಲದೆ ಹೆಚ್ಚು ಚಹಾ ಕುಡಿಯೋದನ್ನು ಮಾತ್ರ ರೂಢಿಸಿಕೊಳ್ಳಬೇಡಿ.