Diabetes Care: ಈ ಅಭ್ಯಾಸ ನಿಮ್ಮನ್ನು ಮಧುಮೇಹಿಗಳನ್ನಾಗಿ ಮಾಡ್ಬೋದು, ಎಚ್ಚರ
ಮಧುಮೇಹದ ಸಮಸ್ಯೆ ಗಂಭೀರವಾಗಿ ಏರಿಕೆಯಾಗುತ್ತಿದೆ. ಇಂದು ಗಮನವಹಿಸದಿದ್ದರೆ ನಾಳೆ ಭೀಕರವಾಗಬಹುದು. ಉತ್ತಮ ಜೀವನಶೈಲಿ, ಉತ್ತಮ ಆಹಾರ-ವಿಹಾರಗಳಿಂದ ಮಧುಮೇಹ, ಅಧಿಕ ಕೊಬ್ಬು, ಹೃದಯ ಸಮಸ್ಯೆಗಳನ್ನು ದೂರವಿಡಬಹುದು. ಈ ಸಮಸ್ಯೆಗಳಿಗೆ ಮೂಲ ಕಾರಣ ಏನೆಂಬುದನ್ನು ಅರಿತುಕೊಂಡು ತಿದ್ದಿಕೊಳ್ಳುವುದು ಅಗತ್ಯ.
ಚಿಕ್ಕಚಿಕ್ಕ ಮಕ್ಕಳೂ ಇಂದು ಮಧುಮೇಹಿಗಳಾಗುತ್ತಿದ್ದಾರೆ. ಕೆಟ್ಟ ಜೀವನಶೈಲಿ, ಆಹಾರದ ಬದಲಾವಣೆಯಿಂದಾಗಿ ಮಧುಮೇಹ ಎನ್ನುವುದು ವಯಸ್ಸಿನ ಹಂಗಿಲ್ಲದೆ ಎಲ್ಲರನ್ನೂ ತನ್ನ ಕಬಂಧ ಬಾಹುಗಳ ವಶಕ್ಕೆ ಪಡೆದುಕೊಂಡಿದೆ ಎಂದರೆ ತಪ್ಪಿಲ್ಲ. ಕೆಟ್ಟ ಜೀವನಶೈಲಿಯಿಂದಾಗಿ ಟೈಪ್ 2 ಮಧುಮೇಹ, ಅಧಿಕ ಕೊಬ್ಬು, ಅಧಿಕ ರಕ್ತದೊತ್ತಡದ ಸಮಸ್ಯೆಗಳು ಎಲ್ಲರಲ್ಲೂ ಹೆಚ್ಚುತ್ತಿವೆ. ಇದರಿಂದಾಗಿ ದೇಹದಲ್ಲಿ ಅನೇಕ ರೀತಿಯ ಬದಲಾವಣೆಗಳಾಗಿ ಅನಾರೋಗ್ಯಕ್ಕೆ ತುತ್ತಾಗುವ ಅಪಾಯವೂ ಹೆಚ್ಚುತ್ತಿದೆ. ಉತ್ತಮ ಆಹಾರ ಪದ್ಧತಿ ಮತ್ತು ದೈಹಿಕ ಚಟುವಟಿಕೆಗಳ ಮೂಲಕ ಈ ಎಲ್ಲ ಸಮಸ್ಯೆಗಳಿಗೆ ವಿದಾಯ ಹೇಳಬಹುದು. ಆದರೆ, ಎಲ್ಲರಿಗೂ ಇದು ಸಾಧ್ಯವಾಗುವುದಿಲ್ಲ. ಏಕೆಂದರೆ, ಆಹಾರದಲ್ಲಿ ಬದಲಾವಣೆ ಮಾಡಿಕೊಳ್ಳುವುದೆಂದರೆ ಕೆಲವರಿಗೆ ಭಾರೀ ಕಷ್ಟ. ನಾಲಿಗೆಗೆ ರುಚಿರುಚಿಯಾದ, ದೇಹಾರೋಗ್ಯಕ್ಕೆ ಹಾನಿಕರವಾದ ಆಹಾರಶೈಲಿಯನ್ನು ಅಭ್ಯಾಸ ಮಾಡಿಕೊಂಡವರು ಏಕಾಏಕಿ ಅದನ್ನು ಬಿಡುವುದು ಕಷ್ಟಕರವಾಗುತ್ತದೆ. ಅಧ್ಯಯನಗಳ ಪ್ರಕಾರ, ನಮ್ಮ ದೇಶದಲ್ಲಿ 7 ಕೋಟಿಗೂ ಅಧಿಕ ತೀವ್ರ ಮಧುಮೇಹ ರೋಗಿಗಳಿದ್ದಾರೆ. ಅಷ್ಟಕ್ಕೂ ಮಧುಮೇಹ ಏಕಾಏಕಿ ಬಂದುಬಿಡುವುದಿಲ್ಲ. ಅದಕ್ಕೂ ಒಂದಿಷ್ಟು ಕಾರಣಗಳಿವೆ. ಅವುಗಳನ್ನು ಅರಿತುಕೊಂಡರೆ ಸುಧಾರಣೆಯ ಪ್ರಯತ್ನಕ್ಕೆ ನಾಂದಿ ಹಾಡಬಹುದು.
• ಸೋಮಾರಿತನ (Laziness)
ಆಲಸ್ಯವೇ ದೇಹದ (Body) ಮಹಾನ್ ಶತ್ರು ಎಂದು ಹಿಂದಿನ ಜನ ಹೇಳಿರುವುದು ಸುಖಾಸುಮ್ಮನೆ ಅಲ್ಲ. ಆರಾಮದಿಂದ ಜೀವನ ಕಳೆಯುವುದು ಎಲ್ಲರಿಗೂ ಇಷ್ಟ. ಆದರೆ, ಆರಾಮವೆಂದರೆ ಸೋಫಾದ ಮೇಲೆ ಕುಳಿತು, ಮಲಗಿ ಇಡೀ ದಿನ ಟಿವಿ ಅಥವಾ ಮೊಬೈಲ್ ನೋಡುತ್ತ ಸಮಯ ಕಳೆಯುವುದಲ್ಲ. ದೀರ್ಘಕಾಲ (Long Time) ಸೋಮಾರಿತನದಿಂದ ಮಲಗಿ ಸಮಯ ಕಳೆಯುವವರಿಗೆ ಮಧುಮೇಹ, ಅಧಿಕ ಕೊಬ್ಬಿನ (High Cholesterol) ಸಮಸ್ಯೆ ಬಹುಬೇಗ ಕಾಡುತ್ತದೆ. ಇದರಿಂದಾಗಿ ಹೃದಯದ ಸಮಸ್ಯೆಯೂ (Heart Problem) ಆರಂಭವಾಗುತ್ತದೆ.
• ಅಧಿಕ ಕ್ಯಾಲರಿಯುಕ್ತ ಆಹಾರ (High Calorie Food)
ಮನೆಯ ಆಹಾರ ಆರೋಗ್ಯಕ್ಕೆ ಎಂದಿಗೂ ಪೂರಕ. ಆದರೆ, ಚಾಕೋಲೇಟ್, ಜಂಕ್ ಫುಡ್ (Junk Food), ಹೋಟೆಲ್ ತಿಂಡಿಗಳು, ಕರಿದ ಪದಾರ್ಥಗಳು (Fried Food), ಪ್ರತಿದಿನ ಏನಾದರೊಂದು ಕುರುಕಲು ತಿಂಡಿ ತಿನ್ನುವ ಅಭ್ಯಾಸದಿಂದ ಅಧಿಕ ಕ್ಯಾಲರಿಯುಕ್ತ ಆಹಾರ ದೇಹವನ್ನು ಸೇರುತ್ತದೆ. ದೈಹಿಕವಾಗಿ ಅಷ್ಟೊಂದು ಕ್ರಿಯಾಶೀಲರಾಗಿರಲು (Active) ಸಾಧ್ಯವಾಗದೆ ಇರುವ ಜನರು ಕಡಿಮೆ ಕ್ಯಾಲರಿಯುಕ್ತ ಆಹಾರವನ್ನು ಸೇವಿಸಬೇಕು.
• ಚಟುವಟಿಕೆರಹಿತ ದಿನಚರಿ (No Exercise)
ಪ್ರತಿಯೊಬ್ಬರೂ ತಮ್ಮ ಕೆಲಸಗಳನ್ನು ತಾವು ಮಾಡಿಕೊಳ್ಳಬೇಕು ಎನ್ನುವುದು ಹಿಂದಿನವರ ಅಲಿಖಿತ ನಿಯಮವಾಗಿತ್ತು. ಆದರೆ, ಇಂದು ಅದೆಲ್ಲ ಹಳೆಯ ಮಾತಾಗಿದೆ. ಬಟ್ಟೆ ತೊಳೆಯುವುದಕ್ಕೆ ಮಶಿನ್ ಇದೆ, ಮನೆ, ಪಾತ್ರೆಗಳ ಕ್ಲೀನಿಂಗ್ ಗೆ ಕೆಲಸದವರು ಬರುತ್ತಾರೆ. ಆರೋಗ್ಯದ (Health) ಬಗ್ಗೆ ಕಾಳಜಿ ಇರುವವರು ವ್ಯಾಯಾಮ ಮಾಡಿದರೆ, ಅದರ ಪರಿಕಲ್ಪನೆಯೇ ಇಲ್ಲದವರು ದೇಹವನ್ನು ಚೂರೂ ಬಗ್ಗಿಸುವುದಿಲ್ಲ. ಬೆವರು ಹರಿಸುವುದಿಲ್ಲ. ಇದರಿಂದ ರಕ್ತದಲ್ಲಿ ಸಕ್ಕರೆ ಮಟ್ಟ (Blood Sugar Level) ಹೆಚ್ಚಾಗುತ್ತದೆ. ಹತ್ತಿರದ ಸಂಬಂಧಿಗಳಲ್ಲಿ ಮಧುಮೇಹಿಗಳಿದ್ದರೆ ದಿನವೂ ಸ್ವಲ್ಪ ಸಮಯ ವ್ಯಾಯಾಮ ಮಾಡಲೇಬೇಕು.
ಇದನ್ನೂ ಓದಿ: ಎಣ್ಣೆ ಅಥವಾ ಬೆಣ್ಣೆ: ಹಾರ್ಟ್ ಪೇಷೆಂಟ್ಸ್‌ಗೆ ಯಾವುದು ಉತ್ತಮ?
• ಮದ್ಯಪಾನ (Alcohol) ಮತ್ತು ಧೂಮಪಾನ (Smoking)
ಇವುಗಳಿಂದಾಗಿ ದೇಹದಲ್ಲಿ ಕೊಬ್ಬಿನ (Fat) ಶೇಖರಣೆ ಹೆಚ್ಚಾಗುತ್ತದೆ. ರಕ್ತದೊತ್ತಡ (Blood Pressure), ಹೃದ್ರೋಗ, ಮಧುಮೇಹದ (Diabetes) ಅಪಾಯವೂ ಹೆಚ್ಚುತ್ತದೆ. ಧೂಮಪಾನದಿಂದ ರಕ್ತದ ನಾಳಗಳು ಸಂಕುಚಿತಗೊಂಡು ರಕ್ತದ ಹರಿಯುವಿಕೆಗೆ ತಡೆಯಾಗುತ್ತದೆ. ಮದ್ಯಪಾನದಿಂದ ಫ್ಯಾಟಿ ಲಿವರ್ (Fatty Liver) ಸಮಸ್ಯೆ ಉಂಟಾಗಿ ಮಧುಮೇಹಕ್ಕೆ ಆಹ್ವಾನ ನೀಡುತ್ತದೆ.
• ಪೋಷಕಾಂಶದ ಕೊರತೆ (Shortage of Nutrients)
ಅಗತ್ಯ ಪೋಷಕಾಂಶಗಳ ಕೊರತೆಯಿಂದ ಆರೋಗ್ಯದ ಮೇಲೆ ಭಾರೀ ಪರಿಣಾಮವುಂಟಾಗುತ್ತದೆ. ಹೀಗಾಗಿ, ಆಹಾರದಲ್ಲಿ ಹಸಿರು ಸೊಪ್ಪು, ತರಕಾರಿ, ಹಣ್ಣುಗಳು, ನಾರಿನಂಶ, ಪ್ರೊಟೀನ್ ಹೆಚ್ಚಾಗಿರಬೇಕು. ದೀರ್ಘ ಸಮಯದವರೆಗೆ ವಿಟಮಿನ್ ಡಿ (Vitamin D) ಕೊರತೆ ಉಂಟಾದರೆ ಮಧುಮೇಹ ಉಂಟಾಗುತ್ತದೆ. ಸ್ಥೂಲಕಾಯ (Obese) ಮಧುಮೇಹಕ್ಕೆ ಮತ್ತೊಂದು ಬಹುದೊಡ್ಡ ಕಾರಣವಾಗಿದೆ.
ಇದನ್ನೂ ಓದಿ: Health Problems: ಒಂದು ಪೆಗ್ ತೆಗೆದುಕೊಳ್ತಿದ್ದಂತೆ ಓವರ್ ಡ್ರಂಕ್ ಅನುಭವವಾಗ್ತಿದ್ಯಾ?
• ಚಿಂತೆ -ಒತ್ತಡ (Stress)
ಚಿಂತೆಯಿಂದ ಮಿದುಳಿನ (Brain) ರಾಸಾಯನಿಕ ಬಿಡುಗಡೆಯಲ್ಲಿ ವ್ಯತ್ಯಾಸವಾಗುತ್ತದೆ. ವ್ಯವಸ್ಥೆಯೇ ಏರುಪೇರಾದಾಗ ಸಹಜವಾಗಿ ದೇಹದ ಮೇಲೆ ಅದರ ಪರಿಣಾಮವಾಗುತ್ತದೆ. ರೋಗ ನಿರೋಧಕತೆ ಕುಗ್ಗುವ ಜತೆಗೆ ಮಧುಮೇಹ, ನಿದ್ರಾಹೀನತೆ, ಕೊಬ್ಬು ಸಮಸ್ಯೆ ಹೆಚ್ಚಾಗುತ್ತದೆ.