ಹ್ಯಾಂಡ್ ಸ್ಯಾನಿಟೈಸರ್ ಕೂಡ ಆರೋಗ್ಯಕ್ಕೆ ಹಾನಿಕಾರಕ
ಇಡೀ ದೇಶ ಪ್ರಸ್ತುತ ಕರೋನಾ ಸಾಂಕ್ರಾಮಿಕ ರೋಗವನ್ನು ಎದುರಿಸುತ್ತಿದೆ. ಕೊರೋನಾ ವೈರಸ್ ದೇಶದಲ್ಲಿ ಕಾಣಿಸಿಕೊಂಡ ದಿನದಿಂದ ಸ್ಯಾನಿಟೈಸರ್ ಹೆಚ್ಚು ಖ್ಯಾತಿ ಪಡೆದುಕೊಂಡಿದೆ. ಇದಕ್ಕೂ ಮುನ್ನ ಸಾಕಷ್ಟು ಜನರಿಗೆ ಸ್ಯಾನಿಟೈಸರ್ ಎಂದರೇನು ಎಂಬುದೇ ತಿಳಿದಿರಲಿಲ್ಲ. ಆದರೆ, ಇಂದು ಬಹಳಷ್ಟು ಮನೆಗಳಲ್ಲಿ ಅಗತ್ಯ ವಸ್ತುಗಳಲ್ಲಿ ಒಂದಾಗಿ ಹೋಗಿದೆ.
ಕೊರೋನಾ ಬಂದಾಗಿನಿಂದಲೂ ಕಚೇರಿ, ಆಸ್ಪತ್ರೆ, ಶಾಪಿಂಗ್ ಮಾಲ್'ಗಳಲ್ಲಿ ಸ್ಯಾನಿಟೈಸ್ ಹಾಕಿಕೊಂಡು ಹೋಗಲೇಬೇಕಿದೆ. ಚಿಕ್ಕಮಕ್ಕಳಿಂದ ವಯೋವೃದ್ಧರವರೆಗೂ ಸ್ಯಾನಿಟೈಸರ್ ಹಾಕಿಕೊಳ್ಳುತ್ತಿದ್ದಾರೆ. ವೈರಸ್ ನ್ನು ದೂರ ಮಾಡುವ ಸಲುವಾಗಿ ಸ್ಯಾನಿಟೈಸರ್ ಬಳಕೆ ಮಾಡುವುದು ಇದೀಗ ಅನಿವಾರ್ಯವಾಗಿದೆ.
ಕೊರೋನಾ ಬಂದ ಬಳಿಕ ಹೆಚ್ಚೆಚ್ಚು ಜನರು ಸ್ಯಾನಿಟೈಸರ್ ಬಳಕೆಯನ್ನೇನೋ ಮಾಡುತ್ತಿದ್ದಾರೆ. ಆದರೆ, ಆ ಸ್ಯಾನಿಟೈಸರ್ ಕೂಡ ಜೀವನಕ್ಕೆ ಹಾನಿಯುಂಟು ಮಾಡಲಿದೆ ಎಂಬ ವಿಚಾರ ಸಾಕಷ್ಟು ಜನರಿಗೆ ತಿಳಿದಿಲ್ಲ. ಅತಿಯಾದರೆ ಅಮೃತ ಕೂಡ ವಿಷವಾಗುತ್ತದೆ ಎಂಬ ಮಾತನ್ನು ಕೇಳಿರಬಹುದು. ಹಾಗೆಯೇ ಸ್ಯಾನಿಟೈಸರ್ ಕೂಡ ಅಗತ್ಯವಿಲ್ಲದೆ, ಸುಖಾ ಸುಮ್ಮನೆ ಜಾಗ್ರತೆಗಳಿಲ್ಲದೆ ಅರಿವಿಲ್ಲದೆ ಬಳಕೆ ಮಾಡಿದರೆ ಮುಂದೆ ಅಪಾಯಗಳು ಎದುರಾಗಲಿದೆ. ಹಾಗಾದರೆ, ಸ್ಯಾನಿಟೈಸರ್‌ಗಳಿಂದ ಏನೆಲ್ಲಾ ಸಮಸ್ಯೆ ಎದುರಾಗುತ್ತವೆ? ಅದರಿಂದ ಸುರಕ್ಷಿತರಾಗಿರುವುದು ಹೇಗೆ..? ಆ ಬಗೆಗಿನ ಮಾಹಿತಿ ಇಲ್ಲಿದೆ...
ಸ್ಯಾನಿಟೈಸರ್ ಹೆಚ್ಚಾಗಿ ಬಳಕೆ ಮಾಡಿದರೆ ಉಂಟಾಗುವ ಸಮಸ್ಯೆಗಳಾವುವು...?: ಹೆಚ್ಚೆಚ್ಚು ಸ್ಯಾನಿಟೈಸರ್ ಬಳಕೆಯಿಂದ ಚರ್ಮ ತೇವಾಂಶವನ್ನು ಕಳೆದುಕೊಳ್ಳುತ್ತದೆ. ಸಾಮಾನ್ಯವಾಗಿ ಶೇ.60ರಿಂದ ಶೇ.70ರಷ್ಟು ಆಲ್ಕೋಹಾಲ್ ಅಂಶವಿರುವ ಸ್ಯಾನಿಟೈಸರ್ ಗಳನ್ನೇ ಬಳಕೆ ಮಾಡುವಂತೆ ಸಲಹೆ ನೀಡಲಾಗುತ್ತದೆ. ಇತ್ತೀಚಿನ ದಿನಗಳಲ್ಲಿ ಹ್ಯಾಂಡ್ ಸ್ಯಾನಿಟೈಸರ್ ಬಳಕೆ ಅತ್ಯಗತ್ಯವಾದರೂ, ಅತಿಯಾದ ಬಳಕೆ ಅದರಲ್ಲಿರುವ ಆಲ್ಕೋಹಾಲ್ ಅಂಶ ಚರ್ಮದಲ್ಲಿರುವ ನೈಸರ್ಗಿತ ತೇವಾಂಶವನ್ನು ನಾಶಪಡಿಸುತ್ತದೆ. ಚರ್ಮ ಒಳಗುವುದರಿಂದ ಸಾಕಷ್ಟು ಸಮಸ್ಯೆಗಳು ಎದುರಾಗುತ್ತವೆ.
ಎಸ್ಜಿಮಾ (ಇಸುಬು) ಸಮಸ್ಯೆ: ಸ್ಯಾನಿಟೈಸರ್ ಗಳನ್ನು ಅತಿಯಾಗಿ ಬಳಕೆ ಮಾಡುವುದರಿಂದ ಅಲರ್ಜಿಯಂತಹ ಸಮಸ್ಯೆಗಳನ್ನು ಸೃಷ್ಟಿ ಮಾಡುತ್ತದೆ. ಈ ವೇಳೆ ಇಸುಬು ಸಮಸ್ಯೆ ಕೂಡ ಎದುರಾಗುವ ಸಾಧ್ಯತೆಗಳಿರುತ್ತವೆ. ಚರ್ಮದಲ್ಲಿ ಕೆಂಪು ಗುಳ್ಳೆಗಳು ಕಾಣಿಸಿಕೊಳ್ಳುವುದು, ಶುಷ್ಕತೆ, ಚರ್ಮದಲ್ಲಿ ಬಿರುಕುಗಳು ಮೂಡುತ್ತವೆ. ತುರಿಕೆಗಳಿಗೂ ಕಾರಣವಾಗುತ್ತವೆ. ಈಗಾಗಲೇ ಸಾಕಷ್ಟು ಜನರಲ್ಲಿ ಇಂತಹ ಸಮಸ್ಯೆಗಳು ಕಾಣಿಸಿರುವ ಸಾಧ್ಯತೆಗಳಿವೆ.
ಅಲರ್ಜಿ ಸಮಸ್ಯೆ: ಕೆಲ ಸ್ಯಾನಿಟೈಸರ್'ಗಳಲ್ಲಿ ಆ್ಯಂಟಿ ಬ್ಯಾಕ್ಟಿರಿಯಲ್ ಮತ್ತು ಆ್ಯಂಟಿಫಂಗಲ್ ಅಂಶವಿರುತ್ತದೆ. ಇಂತಹ ಸ್ಯಾನಿಟೈಸರ್ ಗಳನ್ನು ಹೆಚ್ಚಾಗಿ ಬಳಕೆ ಮಾಡಿದರೆ, ಆರೋಗ್ಯಕ್ಕೆ ಅಪಾಯವನ್ನು ತಂದೊಡ್ಡುತ್ತವೆ. ಅಲರ್ಜಿ ಸಮಸ್ಯೆಗಳಿಗೆ ಈ ಸ್ಯಾನಿಟೈಸರ್ ಗಳು ಕಾರಣವಾಗುತ್ತವೆ. ಪ್ರಸ್ತುತ ಶೀತದ ವಾತಾವರಣವಿದ್ದು, ಸಮಸ್ಯೆಗಳು ಮತ್ತಷ್ಟು
ಸುರಕ್ಷಿತರಾಗಿ ಇರುವುದು ಹೇಗೆ...? : ಶೇ.60ರಿಂದ ಶೇ.70ರಷ್ಟು ಆಲ್ಕೋಹಾಲ್ ಅಂಶವಿರುವ ಸ್ಯಾನಿಟೈಸರ್ ಗಳಲ್ಲಿ ಬ್ಯಾಕ್ಟೀರಿಯಾ ಅಥವಾ ವೈರಸ್ ಗಳನ್ನು ನಾಶ ಮಾಡುವ ಶಕ್ತಿಯನ್ನು ಹೊಂದಿರುತ್ತದೆ. ಕೈತೊಳೆಯಲು ಸೋಪು ಅಥವಾ ನೀರು ಇಲ್ಲದಿದ್ದಾಗ ಇದನ್ನು ಬಳಕೆ ಮಾಡಬಹುದಾಗಿದೆ. ಸ್ಯಾನಿಟೈಸರ್ ಗಳನ್ನು ಹಾಕಿಕೊಂಡ ಬಳಿಕ ಕನಿಷ್ಟ 15-30 ಸೆಕೆಂಡ್ ಕೈಗಳನ್ನು ಉಜ್ಜಬೇಕು. ಇದರಿಂದ ವೈರಸ್ ಗಳು ಸಾಯುತ್ತವೆ. ಸ್ಯಾನಿಟೈಸರ್ ಹಚ್ಚಿ ಸರಿಯಾಗಿ ಕೈಗಳನ್ನು ಉಜ್ಜಿಕೊಳ್ಳದೇ 15 ನಿಮಿಷಗಳಿಗೂ ಮುನ್ನವೈ ಕೈತೊಳೆಯದೇ ಊಟ ಮಾಡುವುದು ಆರೋಗ್ಯಕ್ಕೆ ಅಪಾಯಕಾರಿ.
hand wash
ಸಾಧ್ಯವಾದರೆ, ಅನುಕೂಲಗಳಿದ್ದರೆ ಊಟಕ್ಕೂ ಮೊದಲು ಸ್ಯಾನಿಟೈಸರ್ ಹಚ್ಚಿಕೊಳ್ಳದೆ ಸೋಪು ನೀರಿನಿಂದ ಕೈಗಳನ್ನು ತೊಳೆದುಕೊಳ್ಳಿ.
ಮಕ್ಕಳಿಗೆ ಸಾಧ್ಯವಾದಷ್ಟು ಸ್ಯಾನಿಟೈಸರ್ ಕಡಿಮೆ ಬಳಕೆ ಮಾಡಿ. ಮಕ್ಕಳು ಆಗಾಗ ತಮ್ಮ ಬೆರಳು ಹಾಗೂ ಕೈಗಳನ್ನು ಬಾಯಿಗೆ ಹಾಕಿಕೊಳ್ಳುವುದು, ಕೈಯಲ್ಲಿಯೇ ಏನಾದರೂ ತಿನ್ನುವ ಸಾಧ್ಯತೆಗಳಿರುತ್ತವೆ. ಇದು ಆರೋಗ್ಯಕ್ಕೆ ಹಾನಿಕಾರಕ.
ಮಕ್ಕಳು ಅಥವಾ ದೊಡ್ಡವರ ಹೊಟ್ಟೆಗೆ ಹೆಚ್ಚಿನ ಪ್ರಮಾಣದ ಸ್ಯಾನಿಟೈಸರ್ ಹೋದರೆ, ವಾಂತಿ, ಹೊಟ್ಟೆನೋವು ಕಾಣಿಸಿಕೊಳ್ಳುತ್ತದೆ. ಆಲ್ಕೋಹಾಲ್ ವಿಷಕಾರಕವಾಗಿದ್ದು, ಮಕ್ಕಳು ಇದರಿಂದ ಪ್ರಜ್ಞಾಹೀನ ಸ್ಥಿತಿಗೆ ತಲುಪುವ ಸಾಧ್ಯತೆಗಳಿರುತ್ತವೆ. ಆದುದರಿಂದ ಸಾಧ್ಯವಾದಷ್ಟು ಸ್ಯಾನಿಟೈಸರ್ ನ್ನು ಮಕ್ಕಳಿಂದ ದೂರವೇ ಇರಿಸಿ.
ಮಕ್ಕಳೇನಾದರೂ ಸ್ಯಾನಿಟೈಸರ್ ಗಳನ್ನು ಕುಡಿದು ಬಿಟ್ಟಿದ್ದರೆ, ನಿರ್ಲಕ್ಷ್ಯ ವಹಿಸಿದೆ ಕೂಡಲೇ ವೈದ್ಯರ ಬಳಿಗೆ ಮಗು ಕುಡಿದ ಸ್ಯಾನಿಟೈಸರ್ ಬಾಲಟಿ ಜೊತೆಗೆ ತೆಗೆದುಕೊಂಡು ಹೋಗಿ ತಪಾಸಣೆ ಮಾಡಿಸಿ, ಚಿಕಿತ್ಸೆ ಕೊಡಿಸಿ. 6 ವರ್ಷಕ್ಕಿಂತಲೂ ಕಡಿಮೆ ಇರುವ ಮಕ್ಕಳಿಗೆ ಸ್ಯಾನಿಟೈಸರ್ ಬಳಕೆ ಮಾಡದಿರುವುದು ಉತ್ತಮ. ಸಾಧ್ಯವಾದಷ್ಟು ಸ್ಯಾನಿಟೈಸರ್ ಗಳನ್ನು ಮಕ್ಕಳಿಂದ ದೂರ ಇಡುವುದು ಒಳಿತು.
ಎಸ್ಜಿಮಾದಂತಹ ಚರ್ಮರೋಗ ಸಮಸ್ಯೆಗಳಿಂದ ಬಳಲುತ್ತಿರುವವರಿಗೆ ಸ್ಯಾನಿಟೈಸರ್ ಹಾನಿಕಾರಕವಾಗಿದೆ. ಚರ್ಮ ಸಮಸ್ಯೆಗಳಿಂದ ಬಳಲುತ್ತಿರುವವರು ಸ್ಯಾನಿಟೈಸರ್ ಬದಲಿಗೆ ಸೋಪು ಮತ್ತು ನೀರಿನಿಂದ ಕೈಗಳನ್ನು ಸ್ವಚ್ಛಗೊಳಿಸಿಕೊಳ್ಳುವುದು ಉತ್ತಮ. ಒಂದು ಬಳಕೆ ಮಾಡಲೇಬೇಕಾದ ಪರಿಸ್ಥಿತಿ ಇದ್ದರೆ, ಸ್ಯಾನಿಟೈಸರ್ ಹಾಕಿಕೊಂಡ ಬಳಿಕ ಕೈಗಳು ಒಣಗಿದ ನಂತರ ಮಾಯಿಶ್ಚರೈಸರ್ ಕ್ರೀಮ್ ಹಚ್ಚಿಕೊಳ್ಳಿ. ಎಸೆನ್ಶಿಯರ್ ಆಯಿಲ್ ಜೊತೆಗೆ ಸ್ಯಾನಿಟೈಸರ್ ಗಳ ಬಳಕೆ ನಿಯಂತ್ರಿಸಿ.
ಸ್ಯಾನಿಟೈಸರ್ ಹಾಕಿಕೊಂಡ ಬಳಿಕ ಕೈಗಳು ಒಣಗುವವರೆಗೂ ಉಜ್ಜಿಕೊಳ್ಳಿ. ಕೈಗಳು ಬೇಗ ಒಣಗಲಿ ಎಂದು ಗಾಳಿಗೆ ಬಿಡಬೇಡಿ. ಈ ವೇಳೆ ಗಾಳಿಯಲ್ಲಿರುವ ಸೂಕ್ಷ್ಮಜೀವಿಗಳು ಮತ್ತೆ ಕೈಗಳಿಗೆ ಅಂಟಿಕೊಳ್ಳುವ ಸಾಧ್ಯತೆಗಳಿರುತ್ತವೆ. ಇದರಿಂದ ಮತ್ತಷ್ಟು ಸಮಸ್ಯೆ ಉಂಟಾಗುವ ಸಾಧ್ಯತೆ ಇದೆ. ಜಾಗರೂಕರಾಗಿರಿ/
ಸ್ಯಾನಿಟೈಸರ್ ಗಳನ್ನು ಹೆಚ್ಚು ಬಳಕೆ ಮಾಡುವವವರು ಮಾಯಿಶ್ಚರೈಸರ್ ಗಳನ್ನು ಬಳಕೆ ಮಾಡಿ. ಚರ್ಮ ತೇವಾಂಶದಿಂದ ಕೂಡಿರುವಂತೆ ನೋಡಿಕೊಳ್ಳಿ. ಕಾಟನ್ ಕೈಗವಸುಗಳನ್ನು ಬಳಕೆ ಮಾಡಿ. ಮಾಯಿಶ್ಚರೈಸರ್ ಗಳನ್ನು ಬಳಕೆ ಮಾಡಲು ಇಷ್ಟವಿಲ್ಲದವರು ಎಣ್ಣೆ ಮತ್ತು ತುಪ್ಪವನ್ನೂ ಬಳಕೆ ಮಾಡಬಹುದಾಗಿದೆ. ಇದು ಕೂಡ ಉತ್ತಮ ಆಯ್ಕೆಯಾಗಿದೆ.