ನಿಮ್ಮ Toothpaste ಸಸ್ಯಾಹಾರಿನಾ, ಮಾಂಸಾಹಾರಿನಾ? ಟ್ಯೂಬ್ ಮೇಲಿನ 'ಕಲರ್ ಕೋಡ್' ರಹಸ್ಯ ಇಲ್ಲಿದೆ
Paste Veg or Non Veg: ಪೇಸ್ಟ್ ಟ್ಯೂಬ್ ಕೆಳಗಡೆ ಇರುವ ಹಸಿರು, ಕೆಂಪು, ನೀಲಿ ಮತ್ತು ಕಪ್ಪು ಬಣ್ಣದ ಮಾರ್ಕ್‌ಗಳು ಏನನ್ನು ಸೂಚಿಸುತ್ತವೆ? ನಾವು ಬಳಸುವ ಪೇಸ್ಟ್ ಸಸ್ಯಾಹಾರಿನಾ ಅಥವಾ ಮಾಂಸಾಹಾರಿನಾ ಅಂತ ಕಂಡುಹಿಡಿಯುವುದು ಹೇಗೆ? ಇದರ ಸಂಪೂರ್ಣ ಮಾಹಿತಿ ಇಲ್ಲಿದೆ.

ಪೇಸ್ಟ್ ಸಸ್ಯಾಹಾರಿನಾ? ಮಾಂಸಾಹಾರಿನಾ?
ಬೆಳಗ್ಗೆ ಎದ್ದ ತಕ್ಷಣ ನಾವು ಮೊದಲು ಕೈಗೆತ್ತಿಕೊಳ್ಳುವುದು ಟೂತ್‌ಬ್ರಷ್. ಆದರೆ ನಾವು ಬಳಸುವ ಪೇಸ್ಟ್ ನಿಜಕ್ಕೂ ಸಸ್ಯಾಹಾರಿನಾ ಅಥವಾ ಮಾಂಸಾಹಾರಿನಾ ಎಂಬ ಪ್ರಶ್ನೆ ಹಲವರಲ್ಲಿದೆ. ಹಾಗೆಯೇ, ಪೇಸ್ಟ್ ಟ್ಯೂಬ್‌ನ ತಳಭಾಗದಲ್ಲಿರುವ ಹಸಿರು, ಕೆಂಪು, ನೀಲಿ ಅಥವಾ ಕಪ್ಪು ಬಣ್ಣದ ಚೌಕದ ಗುರುತುಗಳಿಗೆ ಅರ್ಥವೇನು?
ಹಸಿರು ಬಣ್ಣವಿದ್ದರೆ ನೈಸರ್ಗಿಕ ಪೇಸ್ಟ್, ಕೆಂಪು ಇದ್ದರೆ ಕೆಮಿಕಲ್ ಮಿಶ್ರಿತ, ಕಪ್ಪು ಇದ್ದರೆ ಸಂಪೂರ್ಣ ಕೆಮಿಕಲ್ ಅಂತ ಸೋಶಿಯಲ್ ಮೀಡಿಯಾದಲ್ಲಿ ಹಲವು ವರ್ಷಗಳಿಂದ ಸುಳ್ಳು ಸುದ್ದಿಗಳು ಹರಿದಾಡುತ್ತಿವೆ. ಆದರೆ, ನಿಜಕ್ಕೂ ಈ ಬಣ್ಣದ ಗುರುತುಗಳಿಗೂ ಪೇಸ್ಟ್ ತಯಾರಿಸಲು ಬಳಸುವ ವಸ್ತುಗಳಿಗೂ ಯಾವುದೇ ಸಂಬಂಧವಿಲ್ಲ.
ಹಸಿರು, ಕೆಂಪು ಬಣ್ಣದ ಮಾರ್ಕ್ ಇರುವುದು ಯಾಕೆ?
ಪೇಸ್ಟ್ ಟ್ಯೂಬ್‌ನ ಕೆಳಗೆ ಹಸಿರು, ಕೆಂಪು, ನೀಲಿ, ಕಪ್ಪು ಹೀಗೆ ಬೇರೆ ಬೇರೆ ಬಣ್ಣಗಳಲ್ಲಿರುವ ಸಣ್ಣ ಗೆರೆ ಅಥವಾ ಚೌಕವನ್ನು ನೋಡಿ ಇದೇನೋ ರಹಸ್ಯ ಕೋಡ್ ಅಂತ ಅಂದುಕೊಳ್ಳಬೇಡಿ. ಈ ಸಣ್ಣ ಗುರುತನ್ನು 'Eye Mark' (ಐ ಮಾರ್ಕ್) ಅಂತ ಕರೆಯುತ್ತಾರೆ.
ಪೇಸ್ಟ್ ಟ್ಯೂಬ್ ತಯಾರಿಸುವಾಗ, ಟ್ಯೂಬ್ ಅನ್ನು ಎಲ್ಲಿ ಕತ್ತರಿಸಬೇಕು, ಎಲ್ಲಿ ಮಡಚಬೇಕು ಮತ್ತು ಎಲ್ಲಿ ಸೀಲ್ ಮಾಡಬೇಕು ಎಂಬುದನ್ನು ಯಂತ್ರದಲ್ಲಿರುವ ಸೆನ್ಸಾರ್‌ಗಳು ಪತ್ತೆಹಚ್ಚಲು ಈ ಗುರುತನ್ನು ಬಳಸಲಾಗುತ್ತದೆ.
ಹಾಗಾಗಿ, ಹಸಿರು ಅಂದರೆ ನೈಸರ್ಗಿಕ, ಕೆಂಪು ಅಂದರೆ ರಾಸಾಯನಿಕ, ನೀಲಿ ಅಂದರೆ ಔಷಧಿ, ಕಪ್ಪು ಅಂದರೆ ಸಂಪೂರ್ಣ ರಾಸಾಯನಿಕ ಅಂತ ಆ ಬಣ್ಣಗಳನ್ನು ನೋಡಿ ಪೇಸ್ಟ್‌ನ ಗುಣಮಟ್ಟವನ್ನು ನಿರ್ಧರಿಸಲು ಸಾಧ್ಯವಿಲ್ಲ.
ಮುಂದಿನ ಬಾರಿ ಪೇಸ್ಟ್ ಟ್ಯೂಬ್ ಕೆಳಗಿರುವ ಆ ಸಣ್ಣ ಬಣ್ಣದ ಚೌಕವನ್ನು ನೋಡಿದಾಗ, ಅದು ಪೇಸ್ಟ್‌ನ ರಹಸ್ಯ ಹೇಳುವ ಕೋಡ್ ಅಲ್ಲ, ಬದಲಿಗೆ ಫ್ಯಾಕ್ಟರಿ ಯಂತ್ರಗಳಿಗೆ ದಾರಿ ತೋರಿಸುವ ಒಂದು ಸಣ್ಣ ಮಾರ್ಕ್ ಅಂತ ನೆನಪಿಸಿಕೊಳ್ಳಿ.
ಪೇಸ್ಟ್ ಸಸ್ಯಾಹಾರಿನಾ, ಮಾಂಸಾಹಾರಿನಾ ಅಂತ ತಿಳಿಯುವುದು ಹೇಗೆ?
ಪೇಸ್ಟ್ ಸಸ್ಯಾಹಾರಿನಾ ಅಥವಾ ಮಾಂಸಾಹಾರಿನಾ ಎಂಬುದನ್ನು ಟ್ಯೂಬ್‌ನ ಕೆಳಗಿರುವ ಹಸಿರು, ಕೆಂಪು, ನೀಲಿ, ಕಪ್ಪು ಬಣ್ಣದ ಗುರುತನ್ನು ನೋಡಿ ತಿಳಿದುಕೊಳ್ಳಲು ಸಾಧ್ಯವಿಲ್ಲ. ಬದಲಿಗೆ, ಪ್ಯಾಕೆಟ್ ಮೇಲೆ ನಮೂದಿಸಿರುವ ಸಸ್ಯಾಹಾರಿ ಅಥವಾ ಮಾಂಸಾಹಾರಿ (Vegetarian / Non-Vegetarian) ಲೋಗೋ ಮತ್ತು ತಯಾರಿಕಾ ವಿವರಗಳನ್ನು ನೀವು ನೋಡಬೇಕು.
2026ರ ಸೆಪ್ಟೆಂಬರ್ 21ರಂದು ಬಿಡುಗಡೆಯಾದ Legal Metrology (Packaged Commodities) Fourth Amendment Rules ಪ್ರಕಾರ, ಸೋಪು, ಶಾಂಪೂ, ಟೂತ್‌ಪೇಸ್ಟ್ ಸೇರಿದಂತೆ ನಿರ್ದಿಷ್ಟ ಸೌಂದರ್ಯವರ್ಧಕಗಳು (cosmetics) ಮತ್ತು ಶೌಚಾಲಯ ಉತ್ಪನ್ನಗಳ (toiletries) ಪ್ಯಾಕೆಟ್ ಮೇಲೆ, ಅವು ಸಸ್ಯಾಹಾರಿ ಮೂಲದವಾ (vegetarian origin) ಅಥವಾ ಮಾಂಸಾಹಾರಿ ಮೂಲದವಾ (non-vegetarian origin) ಎಂಬುದನ್ನು ಸೂಚಿಸುವ ಲೋಗೋ ಕಡ್ಡಾಯವಾಗಿ ಇರಬೇಕು.
ಸಸ್ಯಾಹಾರಿ ಮತ್ತು ಮಾಂಸಾಹಾರಿ ಲೋಗೋ ಹೇಗಿರುತ್ತೆ?
ಪ್ಯಾಕೆಟ್ ಮೇಲೆ ಹಸಿರು ಬಣ್ಣದ ಚುಕ್ಕೆ ಇದ್ದರೆ ಅದು ಸಸ್ಯಾಹಾರಿ ಮೂಲದ (vegetarian origin) ವಸ್ತುಗಳಿಂದ ಮಾಡಲ್ಪಟ್ಟಿದೆ ಎಂದರ್ಥ. ಅದೇ ರೀತಿ, ಕೆಂಪು ಅಥವಾ ಕಂದು ಬಣ್ಣದ ಚುಕ್ಕೆ ಇದ್ದರೆ ಅದರಲ್ಲಿ ಮಾಂಸಾಹಾರಿ ಮೂಲದ (Non-Vegetarian Origin) ವಸ್ತುಗಳನ್ನು ಬಳಸಲಾಗಿದೆ ಎಂಬುದನ್ನು ಸೂಚಿಸುತ್ತದೆ. ಈ ಗುರುತು ಪ್ಯಾಕೆಟ್‌ನ ಮುಂಭಾಗದಲ್ಲೇ ಇರಬೇಕು ಎಂದು ಹೊಸ ನಿಯಮಗಳಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ.
ಪೇಸ್ಟ್‌ನಲ್ಲಿ ಸಸ್ಯಾಹಾರಿ, ಮಾಂಸಾಹಾರಿ ವಸ್ತುಗಳು ಯಾಕಿರುತ್ತವೆ?
ಪೇಸ್ಟ್‌ನಲ್ಲಿ ಗ್ಲಿಸರಿನ್ ಅಥವಾ ಗ್ಲಿಸರಾಲ್ (glycerin/glycerol) ನಂತಹ ವಿವಿಧ ವಸ್ತುಗಳನ್ನು ಬಳಸುತ್ತಾರೆ. ಪೇಸ್ಟ್ ಒಣಗದಂತೆ ತಡೆಯಲು ಮತ್ತು ಅದರ ಟೆಕ್ಸ್ಚರ್ ಅನ್ನು ಸರಿಯಾಗಿ ಕಾಪಾಡಿಕೊಳ್ಳಲು ಇವುಗಳನ್ನು ಬಳಸಲಾಗುತ್ತದೆ.
ಗ್ಲಿಸರಿನ್ ಅನ್ನು ಸಸ್ಯಜನ್ಯ ಎಣ್ಣೆಗಳಿಂದ, ಕೃತಕ ವಿಧಾನಗಳಿಂದ ಮತ್ತು ಕೆಲವು ಸಂದರ್ಭಗಳಲ್ಲಿ ಪ್ರಾಣಿಗಳ ಕೊಬ್ಬಿನಿಂದಲೂ ತಯಾರಿಸಬಹುದು. ಹಾಗಾಗಿ, ಕೇವಲ ಒಂದು ವಸ್ತುವಿನ ಹೆಸರನ್ನು ನೋಡಿ ಪೇಸ್ಟ್ ಸಸ್ಯಾಹಾರಿನಾ, ಮಾಂಸಾಹಾರಿನಾ ಅಂತ ನಿರ್ಧರಿಸಲು ಸಾಧ್ಯವಿಲ್ಲ. ಆ ವಸ್ತುವಿನ ಮೂಲ (origin) ಮತ್ತು ತಯಾರಕರು ನೀಡಿರುವ ಮಾಹಿತಿಯನ್ನೇ ನಾವು ಗಮನಿಸಬೇಕು.
ಹಾಗಾಗಿ ಇನ್ಮುಂದೆ ಪೇಸ್ಟ್ ಖರೀದಿಸುವಾಗ, ಟ್ಯೂಬ್ ಕೆಳಗೆ ಯಾವ ಕಲರ್ ಇದೆ ಅಂತ ನೋಡುವ ಬದಲು, ಪ್ಯಾಕೆಟ್ ಮೇಲೆ ಯಾವ ಲೋಗೋ ಇದೆ ಅಂತ ನೋಡಿ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

